Karnatakas institutions triumph in educational excellence: NIRF 2025 rankings announced
x

ಭಾರತೀಯ ವಿಜ್ಞಾನ ಸಂಸ್ಥೆ

ಶಿಕ್ಷಣ ಶ್ರೇಷ್ಠತೆಯಲ್ಲಿ ಕರ್ನಾಟಕದ ಸಂಸ್ಥೆಗಳ ಜಯಭೇರಿ: NIRF 2025 ರ‍್ಯಾಂಕಿಂಗ್ ಪ್ರಕಟ

ಕಾನೂನು ಶಿಕ್ಷಣ ಕ್ಷೇತ್ರದಲ್ಲಿಯೂ ಬೆಂಗಳೂರು ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ದೇಶದ ಅತ್ಯುತ್ತಮ ಕಾನೂನು ಕಾಲೇಜು ಎಂಬ ಗೌರವಕ್ಕೆ ಪಾತ್ರವಾಗಿದೆ.


Click the Play button to hear this message in audio format

ಕೇಂದ್ರ ಶಿಕ್ಷಣ ಸಚಿವಾಲಯವು 2025ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) ವರದಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತೊಮ್ಮೆ ದೇಶದ ಗಮನ ಸೆಳೆದಿವೆ. ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (IISc) ಸತತ 10ನೇ ವರ್ಷವೂ ದೇಶದ ನಂಬರ್ 1 ವಿಶ್ವವಿದ್ಯಾಲಯ ಎಂಬ ತನ್ನ ಹಿರಿಮೆಯನ್ನು ಉಳಿಸಿಕೊಂಡಿದೆ.

ಐಐಎಸ್ಸಿ ಕೇವಲ ವಿವಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರದೆ, ಸಂಶೋಧನಾ ಸಂಸ್ಥೆಗಳ ವಿಭಾಗದಲ್ಲೂ ದೇಶಕ್ಕೆ ಮೊದಲ ಸ್ಥಾನ ಪಡೆದಿದೆ. ಜೊತೆಗೆ, ಸಮಗ್ರ ಶಿಕ್ಷಣ ಸಂಸ್ಥೆಗಳ (Overall Category) ಪಟ್ಟಿಯಲ್ಲಿ ದೇಶದ ಎರಡನೇ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ವಿಭಾಗದಲ್ಲಿ ಐಐಟಿ ಮದ್ರಾಸ್ ಮೊದಲ ಸ್ಥಾನದಲ್ಲಿದೆ.

ಕಾನೂನು ಶಿಕ್ಷಣ ಕ್ಷೇತ್ರದಲ್ಲಿಯೂ ಬೆಂಗಳೂರು ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ದೇಶದ ಅತ್ಯುತ್ತಮ ಕಾನೂನು ಕಾಲೇಜು ಎಂಬ ಗೌರವಕ್ಕೆ ಪಾತ್ರವಾಗಿದೆ.

ನಿರ್ವಹಣಾ ಶಿಕ್ಷಣ (Management) ವಿಭಾಗದಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ದೇಶದ ಎರಡನೇ ಅತ್ಯುತ್ತಮ ಸಂಸ್ಥೆಯಾಗಿ ಸ್ಥಾನ ಪಡೆದಿದೆ. ಇದೇ ವೇಳೆ, ಮಣಿಪಾಲದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಮುಕ್ತ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ದೇಶದ ಎರಡನೇ ಪ್ರಮುಖ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಫಲಿತಾಂಶಗಳು ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಕರ್ನಾಟಕದ ಸಂಸ್ಥೆಗಳು ಹೊಂದಿರುವ ಅಚಲವಾದ ಗುಣಮಟ್ಟವನ್ನು ಮತ್ತೊಮ್ಮೆ ದೃಢಪಡಿಸಿವೆ

Read More
Next Story