
ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ಮಾತ್ರ ʼಕೋಮುವಾದ ನಿಗ್ರಹ ಪಡೆʼ ಇರಲ್ಲ- ಪರಮೇಶ್ವರ್
ವಿಶೇಷ ಪಡೆ ಯಾರ ಮನೆಗೂ ನುಗ್ಗಿಲ್ಲ. ಕೇವಲ ದ್ವೇಷ ಭಾಷಣ, ಉದ್ರೇಕ ಹೇಳಿಕೆ, ಕೋಮು ಸಂಘರ್ಷ ಸಂಭವಿಸುವ ಸಾಧ್ಯತೆ ಸಂದರ್ಭಗಳಲ್ಲಿ ಮಾತ್ರ ಕಣ್ಣಿಟ್ಟಿರುತ್ತದೆ ಎಂದು ಪರಮೇಶ್ವರ್ ಹೇಳಿದರು.
ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ ಮತ್ತು ಗುಂಪು ಘರ್ಷಣೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕೋಮುವಾದ ನಿಗ್ರಹ ಪಡೆ ತರಲಾಗಿದೆ. ಆದರೆ, ಇದು ಶಾಶ್ವತವಲ್ಲ, ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ನೆಲೆಸಿದರೆ ಕೋಮಿವಾದ ನಿಗ್‌ರಹ ಪಡೆಯನ್ನು ಹಿಂಪಡೆಯಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ವಿಧಾನಸಭೆ ಕಲಾಪದಲ್ಲಿ ಮಂಗಳವಾರ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ‘ಕೋಮುವಾದ ನಿಗ್ರಹ ಪಡೆ ರಚನೆಗೆ ಎತ್ತಿದ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದರು.
ಕೋಮು ನಿಗ್ರಹ ಪಡೆ ಮನೆಗಳಿಗೆ ನುಗ್ಗಿ ತೊಂದರೆ ಕೊಡುತ್ತಿದೆ ಎಂಬ ಆರೋಪ ತಳ್ಳಿಹಾಕಿದ ಅವರು, ವಿಶೇಷ ಪಡೆ ಯಾರ ಮನೆಗೂ ನುಗ್ಗಿಲ್ಲ. ಕೇವಲ ದ್ವೇಷ ಭಾಷಣ, ಉದ್ರೇಕ ಹೇಳಿಕೆ, ಕೋಮು ಸಂಘರ್ಷ ಸಂಭವಿಸುವ ಸಾಧ್ಯತೆ ಸಂದರ್ಭಗಳಲ್ಲಿ ಮಾತ್ರ ಕಣ್ಣಿಟ್ಟಿರುತ್ತದೆ. ಶಾಂತಿ ಸಭೆಗಳ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ ಎಂದರು.
ಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಪರಿಸ್ಥಿತಿಯನ್ನು ನಾನೇ ಖುದ್ದು ಅವಲೋಕಿಸುತ್ತಿದ್ದೇನೆ. ಜನಪ್ರತಿನಿಧಿಗಳ ಸಹಕಾರದಿಂದ ಮಾತ್ರ ಶಾಂತಿ ಸಾಧಿಸಬಹುದು. ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಹಾಗೂ ಬಂಡವಾಳ ಹೂಡಿಕೆ ಅಭಿವೃದ್ಧಿ ಮಾಡಬೇಕು. ಮುಂದಿನ ದಿನಗಳಲ್ಲಿ ಶಾಂತಿ ನೆಲೆಸಿದರೆ ವಿಶೇಷ ಪಡೆಯನ್ನು ಹಿಂಪಡೆಯಲಾಗುವುದು ಎಂದು ಹೇಳಿದರು.
ಕರಾವಳಿ ಪ್ರದೇಶವು ಕೇರಳಕ್ಕೆ ಸಮೀಪ ಇರುವುದರಿಂದ ಡ್ರಗ್ಸ್ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಗೋವು ಕಳ್ಳತನ, ಲವ್ ಜೆಹಾದ್ ಪ್ರಕರಣಗಳೂ ನಡೆಯುತ್ತಿವೆ. ವಿಶೇಷ ಕಾರ್ಯಪಡೆಯು ನನ್ನ ಮೇಲೂ ಮೂರು ಎಫ್‌ಐಆರ್ ದಾಖಲಿಸಿದೆ. ಗೋಹತ್ಯೆಯನ್ನೂ ಆ ವಿಶೇಷ ಪಡೆ ಕಾರ್ಯವ್ಯಾಪ್ತಿಗೆ ಸೇರಿಸಬೇಕು ಎಂದು ವೇದ ವ್ಯಾಸ್ ಕಾಮತ್ ಒತ್ತಾಯಿಸಿದರು.