ಭಾರತ-ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ
ಪ್ರಸ್ತುತ (2025ರ ಆರ್ಥಿಕ ವರ್ಷ) ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸುಮಾರು 1.3 ಶತಕೋಟಿ ಡಾಲರ್‌ನಷ್ಟಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಾಣಿಜ್ಯ ಸಂಬಂಧಕ್ಕೆ ಹೊಸ ಚೈತನ್ಯ ನೀಡುವ ಐತಿಹಾಸಿಕ 'ಮುಕ್ತ ವ್ಯಾಪಾರ ಒಪ್ಪಂದ'ದ (ಎಫ್‌ಟಿಎ) ಮಾತುಕತೆಗಳು ಯಶಸ್ವಿಯಾಗಿ ಅಂತ್ಯಗೊಂಡಿವೆ. ಇದರೊಂದಿಗೆ, ಭಾರತದ 140 ಕೋಟಿ ಗ್ರಾಹಕರ ಬೃಹತ್ ಮಾರುಕಟ್ಟೆಯ ಹೆಬ್ಬಾಗಿಲು ನ್ಯೂಜಿಲೆಂಡ್ ಪಾಲಿಗೆ ತೆರೆದಂತಾಗಿದೆ.
ಸೋಮವಾರ (ಡಿ.22) ಈ ಮಹತ್ವದ ಘೋಷಣೆ ಹೊರಬಿದ್ದಿದ್ದು, ಈ ಒಪ್ಪಂದದಿಂದಾಗಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ರಫ್ತಾಗುವ ಶೇಕಡಾ 95ರಷ್ಟು ಸರಕುಗಳ ಮೇಲಿನ ಆಮದು ಸುಂಕ ರದ್ದುಗೊಳ್ಳಲಿದೆ ಅಥವಾ ಗಣನೀಯವಾಗಿ ಕಡಿತವಾಗಲಿದೆ. ಕಳೆದ ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಈ ಮಾತುಕತೆಗಳು ಇದೀಗ ಫಲಪ್ರದವಾಗಿವೆ.
ಸುವರ್ಣಾವಕಾಶ ಎಂದ ಕಿವೀಸ್ ಪ್ರಧಾನಿ
ಒಪ್ಪಂದದ ಕುರಿತು ಹರ್ಷ ವ್ಯಕ್ತಪಡಿಸಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್, "ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಇದು ನಮ್ಮ ಉದ್ಯಮಗಳಿಗೆ ಸಿಕ್ಕಿರುವ ಸುವರ್ಣಾವಕಾಶ," ಎಂದು ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು, "ಈ ಒಪ್ಪಂದದಿಂದಾಗಿ ಮುಂದಿನ ಎರಡು ದಶಕಗಳಲ್ಲಿ ನಮ್ಮ ರಫ್ತು ವಹಿವಾಟು ವಾರ್ಷಿಕ 1.3 ಶತಕೋಟಿ ಡಾಲರ್‌ಗೆ (ಅಂದಾಜು 10,800 ಕೋಟಿ ರೂ.) ಏರಿಕೆಯಾಗಲಿದೆ," ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವ್ಯಾಪಾರದ ಲೆಕ್ಕಾಚಾರವೇನು?
ಪ್ರಸ್ತುತ (2025ರ ಆರ್ಥಿಕ ವರ್ಷ) ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸುಮಾರು 1.3 ಶತಕೋಟಿ ಡಾಲರ್‌ನಷ್ಟಿದೆ. ಭಾರತದ ರಫ್ತು 711.1 ದಶಲಕ್ಷ ಡಾಲರ್ನಷ್ಟಿದ್ದರೆ, ನ್ಯೂಜಿಲೆಂಡ್‌ನಿಂದ ಬರುವ ರಫ್ತು 587.1 ದಶಲಕ್ಷ ಡಾಲರ್ ಮೊತ್ತದಷ್ಟಿದೆ.
ಇದನ್ನೂ ಓದಿ: ಭಾರತೀಯ ಮೂಲದ ಆನಂದ್ ವರದರಾಜನ್‌ಗೆ ಸ್ಟಾರ್‌ಬಕ್ಸ್‌ನ ಸಿಟಿಒ ಹುದ್ದೆ
ನ್ಯೂಜಿಲೆಂಡ್‌ನಲ್ಲಿ ಆಮದು ಸುಂಕ ಕೇವಲ ಶೇ. 2.3ರಷ್ಟಿದ್ದರೆ, ಭಾರತದಲ್ಲಿ ಅದು ಶೇ. 17.8ರಷ್ಟಿದೆ. ಹೊಸ ಒಪ್ಪಂದವು ಈ ಅಂತರವನ್ನು ತಗ್ಗಿಸಿ, ವ್ಯಾಪಾರಕ್ಕೆ ವೇಗ ನೀಡಲಿದೆ.
ಯಾರು, ಏನನ್ನು ಕಳುಹಿಸುತ್ತಾರೆ?
ಭಾರತದಿಂದ ರಫ್ತು: ವಿಮಾನ ಇಂಧನ (ಎಟಿಎಫ್) ಭಾರತದ ಪ್ರಮುಖ ರಫ್ತು ಸರಕಾಗಿದ್ದು, ಇದರ ಮೌಲ್ಯ 110.8 ದಶಲಕ್ಷ ಡಾಲರ್. ಇದರೊಂದಿಗೆ ಸಿದ್ಧ ಉಡುಪು, ಜವಳಿ, ಔಷಧಗಳು, ಟರ್ಬೋಜೆಟ್ ಯಂತ್ರಗಳು, ಡೀಸೆಲ್-ಪೆಟ್ರೋಲ್, ವಾಹನ ಬಿಡಿಭಾಗಗಳು, ಎಲೆಕ್ಟ್ರಾನಿಕ್ಸ್, ಸೀಗಡಿ ಮತ್ತು ಬಾಸುಮತಿ ಅಕ್ಕಿ ಪ್ರಮುಖವಾಗಿವೆ.
ನ್ಯೂಜಿಲೆಂಡ್‌ನಿಂದ ಆಮದು: ಮರ ಮತ್ತು ಮರದ ತಿರುಳು (Wood pulp), ಉಕ್ಕು ಹಾಗೂ ಅಲ್ಯೂಮಿನಿಯಂ ಸ್ಕ್ರ್ಯಾಪ್‌ಗಳು, ಕಲ್ಲಿದ್ದಲು ಪ್ರಮುಖವಾಗಿ ಆಮದಾಗುತ್ತವೆ. ಕೃಷಿ ವಲಯದಲ್ಲಿ ಕುರಿ ಉಣ್ಣೆ, ಹಾಲಿನ ಉತ್ಪನ್ನಗಳು ಮತ್ತು ಪ್ರಸಿದ್ಧ 'ಕಿವಿ' ಹಣ್ಣು ಹಾಗೂ ಸೇಬು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಶಿಕ್ಷಣ ಕ್ಷೇತ್ರವೇ ಪ್ರಮುಖ ಕೊಂಡಿ
ಸರಕುಗಳಿಗಿಂತಲೂ ಹೆಚ್ಚಾಗಿ ಸೇವಾ ವಲಯದಲ್ಲಿ ಎರಡೂ ದೇಶಗಳ ಬಾಂಧವ್ಯ ಗಟ್ಟಿಯಾಗಿದೆ. 2024ರಲ್ಲಿ ನ್ಯೂಜಿಲೆಂಡ್ ಭಾರತಕ್ಕೆ ಬರೋಬ್ಬರಿ 456.5 ದಶಲಕ್ಷ ಡಾಲರ್ ಮೌಲ್ಯದ ಸೇವೆಗಳನ್ನು ರಫ್ತು ಮಾಡಿದೆ. ಇದರಲ್ಲಿ ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣವೇ ಸಿಂಹಪಾಲು! ಇತ್ತ ಭಾರತವು 214.1 ದಶಲಕ್ಷ ಡಾಲರ್ ಮೌಲ್ಯದ ಐಟಿ, ತಂತ್ರಾಂಶ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.