Chandapura Lake | ಕೆರೆ ಮಾಲಿನ್ಯ: 54 ಕೈಗಾರಿಕೆಗಳಿಗೆ 140 ಕೋಟಿ ರೂ. ದಂಡ
ಎನ್‌ಜಿಟಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ‘ಚಂದಾಪುರ ಸರೋವರದ ಸ್ಥಿತಿಗತಿ, ಆ ಸ್ಥಳದಲ್ಲಿ ನಡೆಯುತ್ತಿರುವ ಘನತ್ಯಾಜ್ಯ ನಿರ್ವಹಣೆ, ಕೆರೆ ರಕ್ಷಣೆ ಸಂಬಂಧಪಟ್ಟಂತೆ ಎಲ್ಲ ಮಾರ್ಗಸೂಚಿಗಳೂ ಪಾಲನೆಯಾಗುತ್ತಿವೆಯಾ ಎಂಬುದನ್ನು ಪರಿಶೀಲನೆ ನಡೆಸಲು ಏಳು ಜನ ತಜ್ಞರ ಸಮಿತಿಯನ್ನು ರಚಿಸಿತ್ತು.
ಬೆಂಗಳೂರಿನ ಚಂದಾಪುರ ಕೆರೆಗೆ ಕೊಳಚೆ ನೀರು ಬಿಟ್ಟು ಮಾಲಿನ್ಯ ಮಾಡಿದ 54 ಕೈಗಾರಿಕೆಗಳಿಗೆ ಕರ್ನಾಟಕ ಸರ್ಕಾರವು ಪರಿಸರ ಪರಿಹಾರದ ರೂಪದಲ್ಲಿ 140 ಕೋಟಿ ರೂ. ದಂಡ ವಿಧಿಸಿದೆ.
ಚಂದಾಪುರ ಕೆರೆ ಮಲಿನಗೊಂಡು ಅವಸಾನದ ಅಂಚಿಗೆ ತಲುಪಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ವರದಿಯನ್ನು ಗಮನಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ‘ಚಂದಾಪುರ ಸರೋವರದ ಸ್ಥಿತಿಗತಿ, ಆ ಸ್ಥಳದಲ್ಲಿ ನಡೆಯುತ್ತಿರುವ ಘನತ್ಯಾಜ್ಯ ನಿರ್ವಹಣೆ, ಕೆರೆ ರಕ್ಷಣೆ ಸಂಬಂಧಪಟ್ಟಂತೆ ಎಲ್ಲ ಮಾರ್ಗಸೂಚಿಗಳೂ ಪಾಲನೆಯಾಗುತ್ತಿವೆಯಾ ಎಂಬುದನ್ನು ಪರಿಶೀಲನೆ ನಡೆಸಲು ಏಳು ಜನ ತಜ್ಞರ ಸಮಿತಿಯನ್ನು ರಚಿಸಿತ್ತು.
ಸಮಿತಿ ನೀಡಿದ ವರದಿ ಪರಿಶೀಲಿಸಿ, ಸಂಪೂರ್ಣ ಮಲಿನಗೊಂಡಿರುವ ಸರೋವರದ ಸ್ಥಿತಿಗತಿ ನೋಡಿ ಅಕ್ಟೋಬರ್ 10ರಂದು ಆದೇಶ ಹೊರಡಿಸಿದ ಎನ್‌ಜಿಟಿ, ‘ಪರಿಸರ ರಕ್ಷಣೆ ಮಾಡಿ, ನಾಗರಿಕರಿಗೆ ಸ್ವಚ್ಛ ವಾತಾವರಣ ಸಿಗುವಂತೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರೋವರ ಮತ್ತು ಅದರ ಸುತ್ತಲಿನ ಪರಿಸರಕ್ಕೆ ಭಾರಿ ಹಾನಿಯಾಗಿದೆ. ಇಲ್ಲಿನ ಪರಿಸರ ಹಾನಿಗೆ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ’ ಎಂದು ಹೇಳಿತ್ತು. ಈ ಸಂಬಂಧ ಎನ್‌ಜಿಟಿ ಪ್ರಧಾನ ಪೀಠವು ಕರ್ನಾಟಕ ಸರ್ಕಾರಕ್ಕೆ 500 ಕೋಟಿ ರೂ ದಂಡ ವಿಧಿಸಿತ್ತು. ಕೆರೆಗೆ ಸುತ್ತಮುತ್ತಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಕೊಳಚೆ ನೀರು ಸೇರಿ ಅಪಾರ ಹಾನಿ ಉಂಟಾಗಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪೀಠ ಹೇಳಿತ್ತು. ದಂಡ ಮೊತ್ತವನ್ನು ಕೆರೆಯ ಪುನರುಜ್ಜಿವನಕ್ಕೆ ಬಳಸುವಂತೆ ತಾಕೀತು ಮಾಡಿತ್ತು.
'ಈ ಕೆರೆ 24.27 ಎಕರೆ ಪ್ರದೇಶದಲ್ಲಿದೆ. ಹೀಲಳಿಗೆ ಗ್ರಾಮದಲ್ಲಿ 7.2 ಎಕರೆ ಹಾಗೂ ಚಂದಾಪುರ ಪಟ್ಟಣದಲ್ಲಿ 17.25 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ನಿರ್ಮಾಣ ಚಟುವಟಿಕೆಗಳಿಗಾಗಿ ಕೆರೆಯ ಎರಡು ಎಕರೆಯನ್ನು ಒತ್ತುವರಿ ಮಾಡಲಾಗಿದೆ. ಕೆರೆಯ ಮೀಸಲು ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಅಂಗಡಿಗಳು ನಿರ್ಮಾಣವಾಗಿವೆ. ಕೆರೆಯ ಸುತ್ತ ಹಾಕಿರುವ ಬೇಲಿ ಕಿತ್ತು ಹೋಗಿದೆ. ಕೆರೆಯ ಪಕ್ಕದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇಲ್ಲ. ಹೀಗಾಗಿ, ಕೊಳಚೆ ನೀರು ನೇರವಾಗಿ ಕೆರೆ ಸೇರುತ್ತಿದೆ. ಜಿಗಣಿ-ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕೈಗಾರಿಕಾ ತ್ಯಾಜ್ಯವು ಕೆರೆಯನ್ನು ಸೇರುತ್ತಿದೆ. ಇದು ಸರ್ಕಾರ ರೂಪಿಸಿರುವ ನಿಯಮಕ್ಕೆ ವಿರುದ್ಧ. ಕೈಗಾರಿಕೆಗಳು ತ್ಯಾಜ್ಯ ನೀರನ್ನು ಕೆರೆಗೆ ಬಿಡುವಂತಿಲ್ಲ' ಎಂದು ಪೀಠ ಹೇಳಿತ್ತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಾಲ್ಕು ಕೈಗಾರಿಕೆಗಳಿಂದ ಈ ವರೆಗೆ ₹1.39 ಕೋಟಿ ದಂಡ ವಸೂಲಿ ಮಾಡಿದೆ. ಉಳಿದ ₹138 ಕೋಟಿ ಮೊತ್ತ ವಸೂಲಿ ಆಗಿಲ್ಲ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ 17 ಕೈಗಾರಿಕೆಗಳು ಎನ್‌ಜಿಟಿಗೆ ಮೇಲ್ಮನವಿ ಸಲ್ಲಿಸಿವೆ ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿವೆ. ದಂಡ ವಸೂಲಿಗಾಗಿ ಕೈಗಾರಿಕೆಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.