ಅಂಕೋಲಾ, ವಯನಾಡು ಭೂ ಕುಸಿತದಿಂದ ಕರ್ನಾಟಕ ಕಲಿತಿದ್ದೇನು?
ಇತ್ತೀಚಿನ ಶಿರೂರು, ಚಿಕ್ಕಮಗಳೂರು, ಶಿರಾಡಿ ಘಟ್ಟ ಪ್ರದೇಶದ ಭೂ ಕುಸಿತ ಹಾಗೂ, ವಯನಾಡಿನ ಭೀಕರ ಪ್ರಾಕೃತಿಕ ದುರಂತಗಳಿಂದ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಪಾಠ ಕಲಿತಂತೆ ಕಾಣುತ್ತಿಲ್ಲ. ಅವು ಮತ್ತೆ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿ, ಪಶ್ಚಿಮ ಘಟ್ಟಕ್ಕೆ ಹಾನಿ ಮಾಡುವಂಥ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿವೆ.;
ದೇವರ ಸ್ವಂತ ನಾಡು ಎಂದೇ ತನ್ನನ್ನು ಗುರುತಿಸಿಕೊಳ್ಳುವ ನಮ್ಮ ಪಕ್ಕದ ಕೇರಳ ರಾಜ್ಯ, ಇತ್ತೀಚೆಗೆ ವಯಾನಾಡಿನಲ್ಲಿ ಕಂಡ ಪ್ರಾಕೃತಿಕ ದುರಂತ, ಅದು ತಂದಿಟ್ಟ ಸಾವು, ನೋವಿನ ಅಕ್ರಂದನ, ಪ್ರಕೃತಿ ಮುನಿದಾಗ ಕಾಣಬಹುದಾದ ಸ್ಪಷ್ಟ ಚಿತ್ರಣ ಕಂಡ ಮೇಲೂ, ಏನನ್ನೂ ಕಲಿತಂತೆ ಕಾಣಿಸುತ್ತಿಲ್ಲ. ಹಾಗೆಯೇ ಅಂಕೋಲಾದ ಶಿರೂರು ಸೇರಿದಂತೆ ಪಶ್ಚಿಮ ಘಟ್ಟದ ಹಲವು ಭಾಗಗಳಲ್ಲಿ ಧರೆ ಕುಸಿದು ತಂದಿಟ್ಟ ಸಂಕಟಗಳನ್ನು ಕಂಡ ಕರ್ನಾಟಕ ಸರ್ಕಾರ ಕೂಡ ಆಗಿದ್ದೆಲ್ಲವನ್ನೂ ಮರೆತು, ತನ್ನ ಎಂದಿನ ರಾಜಕೀಯ ಮೇಲಾಟದಲ್ಲಿ ನಿರತವಾಗಿದೆ. ಇದು “ಸಾರ್ವಜನಿಕರ ನೆನಪು ಆ ಕ್ಷಣವಷ್ಟೇ ಆದರೆ ಸತ್ಯ ಮತ್ತು ಇತಿಹಾಸ ಆ ರೀತಿಯದಲ್ಲ (Public memory is short lived but truth and history are forever) ಎಂಬ ಮಾತನ್ನು ನೆನಪಿಸುತ್ತದೆ.
ಪಶ್ಚಿಮ ಘಟ್ಟದ ಇಡೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಹೊರಡಿಸಿರುವು ಕರಡು ಅಧಿಸೂಚನೆಗೆ ಸಂಬಂಧಪಟ್ಟ ರಾಜ್ಯಗಳು ಒಪ್ಪಿಗೆ ಸೂಚಿಸದಿದ್ದಲ್ಲಿ, ರಾಜ್ಯವಾರು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಮೂಲಗಳು ಹೇಳುತ್ತಿವೆ.
ಕರ್ನಾಟಕ ಸರ್ಕಾರ
ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಚದರ ಕಿಮೀ ಪ್ರದೇಶವೂ ಸೇರಿ ಪಶ್ಚಿಮ ಘಟ್ಟದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ 6ನೇ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರಲ್ಲಿ ಕೇರಳದ ವಯನಾಡು ಭಾಗವೂ ಸೇರಿಕೊಂಡಿದ್ದು, ಇತ್ತೀಚಿನ ಭೂಕುಸಿತದ ಕಾರಣ ಪಶ್ಚಿಮ ಘಟ್ಟ ಸಂರಕ್ಷಣೆ ವಿಚಾರದ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿರುವ ಹೊತ್ತಿನಲ್ಲಿಯೇ, ಈ ಆರನೇ ಕರಡು ಅಧಿಸೂಚನೆಯಲ್ಲಿ ಬದಲಾವಣೆ ಕೇಳಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಸಂಪುಟ ಉಪಸಮಿತಿಯ ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು, ಅವರಿಂದ ಅನುಮತಿ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಸ್ವತಃ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹೇಳಿದ್ದಾರೆ.
ಈಗ ಕರ್ನಾಟಕ ಸರ್ಕಾರ ಕೇಳಲು ಹೊರಟಿರುವು ರಿಯಾಯತಿಯಾದರೂ ಏನು? ಎಂಬ ಬಗ್ಗೆ ಯೋಚಿಸಿದರೆ, ಕಾಣುವುದು- ಕೇಂದ್ರ ಅರಣ್ಯ ಹಾಗೂ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಹೊರಡಿಸಿದರುವ ಆರನೇ ಕರಡಿನಲ್ಲಿ ಸೂಚಿಸಿರುವ 20,668 ಚದುರ ಕಿಮೀ ಪ್ರದೇಶದಲ್ಲಿ 4,036 ಚ.ಕಿ.ಮೀ ಪ್ರದೇಶವನ್ನು ಕಡಿತಗೊಳಿಸಬೇಕೆಂದು ಕರ್ನಾಟಕ ಸರ್ಕಾರ ಕೇಳುತ್ತಿದೆ. ಏಕೆಂದರೆ ಉಳಿಯುವ 16,632 ಚ.ಕಿ.ಮೀ ಪ್ರದೇಶವನ್ನು ನಾನಾ ಕಾರಣಗಳಿಗಾಗಿ ಸುರಕ್ಷಿತ ಪ್ರದೇಶವೆಂದು ತಾನು ಘೋಷಿಸಿಕೊಂಡಿರುವುದಾಗಿ ಕರ್ನಾಟಕ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
ವಯನಾಡಿನಲ್ಲಿ ಕೇರಳದ ದ್ವಿ-ಸುರಂಗ ಯೋಜನೆ
ಇದು ಕರ್ನಾಟಕದ ಪರಿಸ್ಥಿತಿಯಾದರೆ, ಕೇರಳ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಯನಾಡು ಮತ್ತು ಕೋಳಿಕೋಡಿನ ನಡುವೆ ದ್ವಿ-ನೆಲಸುರಂಗ ಕೊರೆಯಲು ಮುಂದಾಗಿದೆ. ಕೇರಳ ಹಿಂದಿನ ಪ್ರಾಕೃತಿಕ ದುರಂತಗಳಿಂದ ಪಾಠ ಕಲಿತೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಹಾಗೆ ನೋಡಿದರೆ, ಕೇರಳ ಕಂಡ ವಯನಾಡು ದುರಂತ ಕೇವಲ ಒಂದು ಸ್ಪಷ್ಟ ಸೂಚನೆ. ಈ ಹಿಂದೆ ಕೂಡ ಇಂಥ ಸೂಚನೆಗಳನ್ನು ಕೇರಳ ಸರ್ಕಾರ ನಿರ್ಲಕ್ಷಿಸಿದ ಕಾರಣ ಘಟಿಸಿದ ಚಾರಿತ್ರಿಕ ದುರಂತ. 2019ರ ಆಗಸ್ಟ್ರ 8 ರಂದು ಇದೇ ವಯನಾಡಿನ ಮೆಪ್ಪಾಡಿ ಸಮೀಪದ ಪುತ್ತುಮಲ ಗ್ರಾಮದ ಸುತ್ತಮುತ್ತ 24 ಗಂಟೆಗಳಲ್ಲಿ 50 ಸೆಂ.ಮೀ ಮಳೆ ಸುರಿದ ಪರಿಣಾಮವಾಗಿ ಗ್ರಾಮದಲ್ಲಿ ಹಿಂದೆಂದೂ ಕಾಣದ ರೀತಿಯ ಭೂ ಕುಸಿತ ಉಂಟಾಗಿತ್ತು. ಆ ಭೂ ಕುಸಿತದ ತೀವ್ರತೆಗೆ 20 ಹೆಕ್ಟೇರ್ ನಷ್ಟು ಭೂಮಿ 2 ಕಿ.ಮೀ ನಷ್ಟು ದೂರಕ್ಕೆ ಸರಿದಿತ್ತು. ನೂರಾರು ಎಕರೆ ಚಹ ತೋಟ ಕೊಚ್ಚಿಕೊಂಡು ಹೋಗಿತ್ತು. ಆಗ 17 ಮಂದಿ ಬಲಿಯಾಗಿದ್ದರು. ಪೂತ್ತುಮಲ ದುರಂತ ಇನ್ನೂ ಹಸಿರಾಗಿರುವಾಗಲೇ ಮತ್ತೆ ಇತ್ತೀಚೆಗೆ ವಯನಾಡಿನಲ್ಲಿ ಮತ್ತೊಂದು ದುರಂತ ಸಂಭವಿಸಿತ. ನೂರಾರು ಜನರ ಜೀವವನ್ನು ಬಲಿತೆಗೆದುಕೊಂಡದ್ದೇ ಅಲ್ಲದೇ, ಭೂ ಚಿತ್ರದ ಸ್ವರೂಪವನ್ನೇ ಬದಲಿಸಿತು. ಮಾನಸಿಕವಾಗಿ ದೈಹಿಕವಾಗಿ ಗಾಯಗೊಂಡು ಜೀವಂತವಾಗಿರುವ ಮಂದಿಗೆ ತಮ್ಮ ನೆಲದ ಗುರುತೇ ಸಿಗದಂತೆ ಮಾಡಿತು.
ದ್ವಿ ಸುರಂಗ ಯೋಜನೆಗೆ ತೆರೆದ ಟೆಂಡರ್
ಆದರೂ ಕೇರಳ ಸರ್ಕಾರ ಈ ದ್ವಿ ಸುರಂಗ ಯೋಜನೆಯನ್ನು ಕೈ ಬಿಡುವ ಬದಲು, ಯೋಜನೆಯ ಕಾರ್ಯವನ್ನು ಮುಂದುವರಿಸುತ್ತಿದೆ. ವಯನಾಡಿನ ಮೆಪ್ಪಾಡಿಯಿಂದ ಕೋಳಿಕೋಡಿನ ಅಕ್ಕಪ್ಪಂಪೋಯಿಲ್ ವರೆಗಿನ 8.7 ಕಿ.ಮೀನಷ್ಟು ದೂರದ ದ್ವಿ ಸುರಂಗ ಯೋಜನೆಗೆ ಕರೆದ ಟೆಂಡರ್ ನ್ನು ತೆರೆದಿದೆ. ಅಲ್ಲಿಂದ ಬಂದಿರುವ ವರದಿಗಳ ಪ್ರಕಾರ ಮಧ್ಯಪ್ರದೇಶದ ಭೂಪಾಲಿನ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆ ರೂ. 1,341 ಕೋಟಿ ಕನಿಷ್ಠ ದರ ಸೂಚಿಸಿದೆಯಂತೆ. ಈ ವಿವರವನ್ನು ಕೋಳಿಕೋಡಿನ ತಿರುವಂಬಾಡಿ ಪ್ರದೇಶವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಸಿಪಿಎಂ ಶಾಸಕ ಲಿಂಟೋಜೋಸೆಫ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಕೇರಳದ ರಾಜ್ಯಮಟ್ಟದ ತಜ್ಞರ ಪರಿಸರ ಸಮಿತಿಯ ಮುಂದಿದ್ದು, ಅನುಮತಿಗಾಗಿ ಕಾಯುತ್ತಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ ಮತ್ತಷ್ಟು ಭೂ ಕುಸಿತ ಉಂಟಾಗುವ ಸಾಧ್ಯತೆಗಳ ಬಗ್ಗೆ ಈ ತಜ್ಞರ ಸಮಿತಿ ಆತಂಕ ವ್ಯಕ್ತಪಡಿಸಿದೆ. 2019ರಲ್ಲಿ ಭಾರಿ ಭೂ ಕುಸಿತ ಅನುಭವಿಸಿದ ಪೂತ್ತುಮಲ ಪ್ರದೇಶದಿಂದ ಈ ಯೋಜನೆ ಕೇವಲ 0.85 ಕಿ.ಮೀನಷ್ಟೇ ದೂರದಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಈ ಪ್ರದೇಶ ಕೇಂದ್ರ ಪರಿಸರ ಖಾತೆ ಪ್ರಕಟಿಸಿರುವ ಕರಡಿನ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುವುದು ಮುಖ್ಯವಾದ ಸಂಗತಿ. ದುರಂತವೆಂದರೆ, ಕೇರಳ ಸರ್ಕಾರ ಈ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು. ಸರ್ಕಾರಗಳ ನೆನಪೂ ಕೂಡ ಅಲ್ಪಕಾಲೆದ್ದೆಂದು ರುಜುವಾತಾಗುತ್ತಿದೆ.
ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಕೇಂದ್ರ ಸಜ್ಜು
ಈ ನಡುವೆ ಪಶ್ಚಿಮ ಘಟ್ಟದ ಇಡೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಹೊರಡಿಸಿರುವು ಕರಡು ಅಧಿಸೂಚನೆಗೆ ಸಂಬಂಧಪಟ್ಟ ರಾಜ್ಯಗಳು ಒಪ್ಪಿಗೆ ಸೂಚಿಸದಿದ್ದಲ್ಲಿ, ರಾಜ್ಯವಾರು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಮೂಲಗಳು ಹೇಳುತ್ತಿವೆ. ರಾಜ್ಯವಾರು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದರಿಂದ 2014 ರಿಂದಲೂ ಬಾಕಿ ಪಶ್ಚಿಮ ಘಟ್ಟ ಪ್ರದೇಶ ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವುದುದು ಕೇಂದ್ರ ಪರಿಸರ ಇಲಾಖೆಯ ಕಾಳಜಿಯಂತೆ ತೋರುತ್ತಿದೆ. ಆದರೆ, ಕರಡು ಅಧಿಸೂಚನೆಯಲ್ಲಿ ಗುರುತಿಸಲಾದ ಪ್ರದೇಶಗಳನ್ನು ಅತೀ ಪರಿಸರ ಸೂಕ್ಷ್ಮ ಪ್ರದೇಶವೆಂದು ಒಪ್ಪಿಕೊಳ್ಳಲು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳು ಸಿದ್ಧವಿಲ್ಲ. ಹಾಗಾಗಿ ಪರಿಸರ ಸೂಕ್ಷ್ಮ ಪ್ರದೇಶಗಳ ರಾಜ್ಯವಾರು ಗುರುತಿಸುವಿಕೆ ಹಂತ-ಹಂತವಾಗಿ ಅಥವಾ ಒಂದೇ ಅಧಿಸೂಚನೆಯ ಮೂಲಕ ನಡೆಯುವ ಸಾಧ್ಯತೆ ಇರುವುದಾಗಿ ಕೇಂದ್ರ ಪರಿಸರ ಇಲಾಖೆಯ ಮೂಲಗಳು ಹೇಳುತ್ತಿವೆ.
ಕರ್ನಾಟಕ ಸರ್ಕಾರವಂತೂ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಲು ನೇಮಿಸಿದ ಗಾಡ್ಗೀಳ್ ವರದಿ ಮತ್ತು ಕಸ್ತೂರಿರಂಗನ್ ಸಮಿತಿಯ ವರದಿಯನ್ನು ತಿರಸ್ಕರಿಸಿಕೊಂಡೇ ಬಂದಿದೆ. “ಕಸ್ತೂರಿರಂಗನ್ ಸಮಿತಿ ವರದಿಯನ್ನು ತಿರಸ್ಕರಿಸಲು ಈಗಾಗಲೇ ಸಂಪುಟ ಉಪಸಮಿತಿ ತೀರ್ಮಾನ ತೆಗೆದುಕೊಂಡಿದೆ. ಹಾಗಾಗಿಯೇ, ಆ ವರದಿಯನ್ನು ಆಧರಿಸಿದ ಆರನೇ ಕರಡಿನಲ್ಲಿ ಕೆಲವು ತಿದ್ದುಪಡಿಯನ್ನು ಕೇಳಲು ನಿರ್ಧರಿಸಲಾಗಿದೆ” ಎಂದು ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ದ ಫೆಡರಲ್-ಕರ್ನಾಟಕಕ್ಕೆ ತಿಳಿಸಿದ್ದಾರೆ.