ಸ್ವಾತಂತ್ರ್ಯ ಸಂಗ್ರಾಮದಲ್ಲಿ ʼನಮ್ಮʼ ಗ್ರಾಮ ಮತ್ತು ಗ್ರಾಮಸ್ತರು

Update: 2024-08-15 00:30 GMT

ಪರಕೀಯರ ದಾಳಿ-ದಬ್ಬಾಳಿಕೆಯಿಂದ ನಲುಗಿದ್ದ ಭಾರತ 1947ರ ಆಗಸ್ಟ್‌ 15 ರಂದು ವಿದೇಶಿಯರ ಆಡಳಿತದಿಂದ ಬಂಧ ಮುಕ್ತವಾಯಿತು. ನಾಡು ಈಗ 77ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಹೊಸ್ತಿಲಿನಲ್ಲಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಮಂದಿ ಹುತಾತ್ಮರಾಗಿದ್ದಾರೆ. ಕೆಲವು ಪ್ರಮುಖ ಹೋರಾಟಗಾರರನ್ನು, ಕೆಲವು ಪ್ರಮುಖ ಪ್ರದೇಶಗಳನ್ನು ಹೊರತು ಪಡಿಸಿದರೆ, ಇನ್ನುಳಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾವಿರಾರು ಹಳ್ಳಿಗಳು ಅಜ್ಞಾತವಾಗಿಯೇ ಉಳಿದಿವೆ. ಅವರುಗಳು ಮತ್ತು ಅವುಗಳು ಒಂದು ಕಾಲಕ್ಕೆ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದ ನದಿಯ ತೊರೆಗಳಾಗಿದ್ದವು ಎಂಬುದು ಬಹಳ ಜನರಿಗೆ, ವಿಶೇಷವಾಗಿ ಇಂದಿನ ತಲೆಮಾರಿಗೆ ಅರಿವಿಲ್ಲ. ಆ ರೀತಿ ಹೋರಾಡಿ ತೆರೆಮರೆಗೆ ಸರಿದ ʼನಮ್ಮೂರಿನ ಸ್ವಾತಂತ್ರ್ಯ ಸಂಗ್ರಾಮದ ನೋಟವಿದು.

ಹಲಗಲಿ ಬೇಡರ ದಂಗೆ

1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ಕೆಲವು ಸ್ವಾತಂತ್ರ್ಯ ಸಮರಗಳತ್ತ ಕಣ್ಣು ಹಾಯಿಸಿದರೆ ಮೊದಲು ಕಾಣುವ ಚಿತ್ರ; ಇಂದಿನ ಬಾಗಲಕೋಟೆ ಜಿಲ್ಲೆಯ ಹಲಗಲಿ ಎಂಬ ಹಳ್ಳಿಯದು. ಆ ಕಾಲಕ್ಕೆ ಅದು ಮುಧೋಳ ಅರಸ ಪ್ರಾಂತ್ಯಕ್ಕೆ ಸೇರಿತ್ತು. ಬ್ರಿಟೀಷ್‌ ಸರ್ಕಾರದ ನಿಶಸ್ತ್ರೀಕರಣ ನೀತಿಯನ್ನು ವಿರೋಧಿಸಿ ಹೋರಾಡಿದ ಪರಂಪರೆ ಹಲಗಲಿ ಬೇಡರದ್ದು ಎನ್ನುವುದು ಅತಿಮುಖ್ಯ. ಈ ಹಲಗಲಿ ಬೇಡರು ಮೂಲತಃ ಬೇಟೆಯಾಡುವ ಪರಂಪರೆಯವರು. ಹಾಗೂ ಸೈನಿಕರು. ಬ್ರಿಟೀಷರು ಸಿಪಾಯಿ ದಂಗೆ ಎಂದೆ ಕರೆಯುವ ಸ್ವಾತಂತ್ರ್ಯ ಸಂಗ್ರಾಮದ ನಂತರ ಜಾರಿಗೆ ತಂದ ಈ ಕಾನೂನಿನ ವಿರುದ್ಧ ನಿಂತ ಬೇಡರ ಪುಟ್ಟ ಗ್ರಾಮ ಹಲಗಲಿ ಬ್ರಿಟೀಷ್‌ ಸರ್ಕಾರದ ನಿದ್ದೆ ಗೆಡಿಸಿತ್ತು. ಸ್ವಾತಂತ್ರ್ಯ ಸ್ವಾಭಿಮಾನಕ್ಕಾಗಿ ಕಂಪನಿ ಸರ್ಕಾರದ ವಿರುದ್ಧ ಹಲಗಲಿ ಗ್ರಾಮದ ಬೇಡ ವೀರರು ಸೆಡ್ಡು ಹೊಡೆದು ನಿಂತಿದ್ದರು.

ಹಲಗಲಿಯಲ್ಲಿ ಬ್ರಿಟೀಷರ ಕುತಂತ್ರ ಬ್ರಿಟಿಷರು ಜಾರಿಗೆ ತಂದಿದ್ದ ನಿಶಸ್ತ್ರೀಕರಣದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿ ಬೇಡರು ಆಂಗ್ಲರ ವಿರುದ್ಧ ನೇರ ಯುದ್ಧಕ್ಕೆ ಇಳಿದಿದ್ದರು. ಹುಟ್ಟು ವೀರರಾಗಿದ್ದ ಹಲಗಲಿ ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಮಾಡಿದ ತಂತ್ರ, ಕುತಂತ್ರಗಳು ವಿಫಲ ಆಗುತ್ತಲೇ ಬಂದಿದ್ದವು. ಹೀಗಾಗಿ ಮಧ್ಯರಾತ್ರಿ ಭಾರೀ ಸೈನಿಕರ ಜೊತೆಗೆ ನುಗ್ಗಿದ್ದ ಬ್ರಿಟಿಷರ ಸೈನಿಕರು ಊರಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ ಅನೇಕರು ಪ್ರಾಣ ಕಳೆದುಕೊಂಡರು. ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ್ದ ಹಲಗಲಿಯ ಜಡಗಾ, ಬಾಲ ಸೇರಿದಂತೆ ಅನೇಕರನ್ನು ಗಲ್ಲಿಗೇರಿಸಿದ್ದರು. ಅಂದು ಆ ವೀರರು ಹಚ್ಚಿದ್ದ ಸ್ವಾತಂತ್ರ್ಯ ಕಿಡಿ ಪ್ರಜ್ವಲಿಸಿದ್ದು, ಇಂದಿಗೂ ಇತಿಹಾಸವಾಗಿ ಉಳಿದಿದೆ.

ದೇಶಕ್ಕಾಗಿ ಪ್ರಾಣ ತೆತ್ತ ವೀರಕಲಿಗಳು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಹೋರಾಡಿದ ಈ ವೀರರ ಸಾಹಸಗಾಥೆ ಇವತ್ತಿಗೂ ಅಚ್ಚಳಿಯದೇ ಉಳಿದಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನು ಕಳೆದುಕೊಂಡು ಹುತಾತ್ಮರಾಗಿರುವ ಹಲಗಲಿ ಬೇಡರ ಇತಿಹಾಸ ರೋಚಕವಾಗಿದೆ. ಅದರಲ್ಲಿ ಜಡಗಾ ಮತ್ತು ಬಾಲ ಅವರ ಪ್ರತಿಮೆಗಳು ಇದೀಗ ಹಲಗಲಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ.

ಮುಧೋಳದ ಬದನೇಕಾಯಿ ಮತ್ತು ಪಡವಲಕಾಯಿ!

ಇದೇ ಸಂದರ್ಭದಲ್ಲಿ ಮುಧೋಳ ಒಂದು ವಿಚಿತ್ರ ರೀತಿಯಲ್ಲಿ ಸಶಸ್ತ್ರ ಹೋರಾಟಕ್ಕೆ ಬೆಂಬಲ ನೀಡಿದ್ದು, ಇನ್ನೊಂದು ರೋಚಕ ಕಥನ. ಸ್ವಾತಂತ್ರ್ಯಕ್ಕಾಗಿ ನಡೆದ ಸಶಸ್ತ್ರ ಹೋರಾಟದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಧೋಳ ಪ್ರಮುಖ ಪಾತ್ರ ವಹಿಸಿತ್ತು. ಈ ಗ್ರಾಮದ ಜನರು ಸಶಸ್ತ್ರ ಹೋರಾಟಗಾರರಿಗೆ ಕೈ ಬಾಂಬು ಮತ್ತು ಮಚ್ಚು (ಹರಿತವಾದ ಕಬ್ಬಿಣದ ಕತ್ತಿ ಎನ್ನಬಹುದು) ಸರಬರಾಜು ಮಾಡುತ್ತಿದ್ದುದು ತರಕಾರಿ ಹೆಸರಲ್ಲಿ. ಕೈ ಬಾಂಬುಗಳಿಗೆ ಬದನೇಕಾಯಿ, ಮಚ್ಚುಗಳಿಗೆ ಪಡವಲಕಾಯಿ ಎಂಬ ಕೋಡ್‌ ವರ್ಡ್‌ ಬಳಸಿ ಅವರು ನೀಡುತ್ತಿದ್ದರೆಂದು ಇಂದಿಗೂ ಮುಧೋಳದ ಹಿರಿಯರು ತಮಗೆ ತಮ್ಮ ಹಿರಿಯರು ಹೇಳಿರುವ ಕಥೆಗಳನ್ನು ಹೇಳಿ ನೆನಪಿಸುತ್ತಾರೆ.

ಮುಧೋಳದ ಗ್ರಾಮಸ್ಥರು, ಕೈ ಬಾಂಬ್‌ ಗಳನ್ನು ಮಚ್ಚುಗಳನ್ನು ತರಕಾರಿ ಬುಟ್ಟಿಯಲ್ಲಿಟ್ಟು ತಲೆಮೇಲೆ ಹೊತ್ತು, ನಿಗದಿತ ಸ್ಥಳದಲ್ಲಿಟ್ಟು ಬರುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡುತ್ತಿದ್ದರು. ಆ ಊರಿನ ಹಿರಿಯರ ಪ್ರಕಾರ ಆ ಕಾಲಕ್ಕೆ ತೆಲಂಗಾಣ ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಈ ಗ್ರಾಮದಲ್ಲಿ ಎಂಟು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸಕ್ರೀಯರಾಗಿದ್ದರು. ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದ ಮುಧೋಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚೆಂಬುದನ್ನು ಗಮನಿಸಿದ ಬ್ರಿಟೀಷ್‌ ಸರ್ಕಾರ ಪಕ್ಕದ ನಿಜಾಮರ ಸರ್ಕಾರದ ಬೆಂಬಲದೊಂದಿಗೆ ಈ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ದಾಳಿ ನಡೆಸುತ್ತಿದ್ದರು. ನಿಜಾಮರ ಸರ್ಕಾರ ಬ್ರಿಟೀಷ್‌ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡುತ್ತಿತ್ತು. ಹಾಗಾಗಿ ಇಲ್ಲೊಂದು ಪ್ರವಾಸಿ ಮಂದಿರವನ್ನು ಕೂಡ ನಿರ್ಮಾಣ ಮಾಡಿತ್ತು. ಮುಧೋಳ ಮತ್ತಿತರ 20 ಹಳ್ಳಿಗಳಲ್ಲಿ ಕೈ ಬಾಂಬು ಮಚ್ಚುಗಳನ್ನು ತಯಾರಿಸಿ, ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಅಕ್ಕಲಕೋಟೆ, ತೆಲಂಗಾಣದ ವಿಕಾರಾಬಾದ್‌ಗಳಲ್ಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ತಲುಪಿಸುತ್ತಿತ್ತು. “ಅವರ ಒಕ್ಕಣಿಕೆ ಹೇಗಿರುತ್ತಿತ್ತೆಂದರೆ; ʼಮೂರು ಬುಟ್ಟಿ ಬದನೇಕಾಯಿ, ಎರಡು ಸೂಡು (ಡಜನ್)‌ ಪಡವಲಕಾಯಿ ಕಳುಹಿಸುತ್ತಿದ್ದೇವೆʼ ಎಂದು ಹೋರಾಟಗಾರರಿಗೆ ಗುಪ್ತ ಸಂದೇಶ ಕಳುಹಿಸುತ್ತಿದ್ದರು. ಈ ಹೋರಾಟಕಕ್ಕೆ ಇಂದಿಗೂ ಮುಧೋಳದ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ ಎಂದು ಸ್ಥಳೀಯರು ದುಃಸ್ಥಿತಿಯಲ್ಲಿರುವ ಆ ಕಟ್ಟಡದತ್ತ ಬೆರಳು ಮಾಡಿ ತೋರಿಸುತ್ತಾರೆ.

ಏಸೂರು ಕೊಟ್ಟರೂ, ಈಸೂರು ಬಿಡೆವು

ದೇಶದ ಮೊಟ್ಟಮೊದಲ ಸ್ವಾತಂತ್ರ್ಯ ಘೋಷಿಸಿಕೊಂಡ ಕೀರ್ತಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮಕ್ಕೆ ಸಲ್ಲುತ್ತದೆ. ಈ ಈಸೂರಿನ ಬಗ್ಗೆ ಸಾಕಷ್ಟು ಲೇಖನಗಳು ಈಗಾಗಲೇ ಪ್ರಕಟವಾಗಿವೆ. 1942ರ ಆಗಸ್ಟ್‌ 8 ರಂದು ಗಾಂಧೀಜಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (Quit India Movement) ಚಳವಳಿ ಆರಂಭಿಸಿದರು. ಈ ಸಂದರ್ಭದಲ್ಲಿಯೇ ಈಸೂರಿನಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾಯಿತು. ಬ್ರಿಟೀಷ್‌ ಅಧೀನದಲ್ಲಿ ಕೆಲಸಮಾಡುತ್ತಿದ್ದ ಭಾರತೀಯ ಅಧಿಕಾರಿಗಳು ಹಳ್ಳಿಗರಿಗೆ ಕಂದಾಯ ಕಟ್ಟುವಂತೆ ಹೇಳಿದಾಗ, ಗ್ರಾಮಸ್ಥರು, ಅವರ ಕಂದಾಯದ ಪುಸ್ತಕ ಕಸಿದು ಅವರ ಅಧಿಕಾರಿ ಹೆಗ್ಗುರುತಾದ ಟೋಪಿಗಳನ್ನು ಕಿತ್ತೆಸೆದರು. ಗಾಂಧಿ ಟೋಪಿ ಧರಿಸುವಂತೆ ತಾಕೀತು ಮಾಡಿದರು. ಸರ್ಕಾರಿ ಅಧಿಕಾರಿಗಳಿಗೆ ಸ್ವತಂತ್ರ ಈಸೂರಿಗೆ ಪ್ರವೇಶವಿಲ್ಲ ʼಸ್ವತಂತ್ರ ಗ್ರಾಮ ಈಸೂರುʼ ಎಂಬ ಫಲಕ ತಗಲುಹಾಕಿದರು. ಊರಿನ ಮಕ್ಕಳೇ ಅಮಲ್ದಾರರು ಪೊಲೀಸ್‌ ಅಧಿಕಾರಿ ಎಂದು ಘೋಷಿಸಿಕೊಂಡರು.

ಬ್ರಿಟೀಷ್‌ ಅಧೀನದ ಅಧಿಕಾರಿಗಳು ಈ ಫಲಕ ಕಿತ್ತೊಗೆದರು. ಅಡ್ಡಬಂದ ಗ್ರಾಮಸ್ತರ ಮೇಲೆ ಲಾಟಿ ಪ್ರಹಾರ ನಡೆಸಿದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ತರು ದಂಗೆ ಎದ್ದು ಅಧಿಕಾರಿಗಳ ಮೇಲೆ ಪ್ರಹಾರ ಆರಂಭಿಸಿದರು. ಈ ಗಲಭೆಯಲ್ಲಿ ಪೊಲೀಸ್‌ ಅಧಿಕಾರಿ ಕೆಂಚೇಗೌಡ, ಹಾಗೂ ಅಮಲ್ದಾರ್‌ ಚೆನ್ನ ಕೃಷ್ಣಪ್ಪ ಸತ್ತುಹೋದರು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಈಸೂರಿಗೆ ಮಿಲಿಟರಿ ಪಡೆ ದಾಳಿ ಇಟ್ಟಿತು. ಜನರು ಊರಿಗೇ ಬೀಗ ಹಾಕಿಕೊಂಡು ಕಾಲಿ ಮಾಡಿ ಕಾಡಿನೊಳಗೆ ಅಡಗಿ ಕುಳಿತರು. ಪೊಲೀಸರು, ಊರಿನ ಮನೆಗಳ ಮೇಲೆ ದಾಳಿ ನಡೆಸಿದರು. ಕೆಲವು ಮನೆಗಳಿಗೆ ಹಾನಿ ಮಾಡಿ ಅಳಿದುಳಿದಿದ್ದ ಮುದುಕರು ಮಕ್ಕಳನ್ನೂ ಬಿಡದೆ ಹಿಂಸಿಸಿದರು. ಎಲ್ಲರ ಮೇಲೆ ದಂಗೆ ಪ್ರಕರಣ ದಾಖಲೆಯಾಯಿತು. 11 ಜನರಿಗೆ ಮರಣದಂಡನೆ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮಾರ್ಚಿ 8, 1943ರಲ್ಲಿ 8 ಮಂದಿಯನ್ನು ಗಲ್ಲಿಗೇರಿಸಲಾಯಿತು. ಇವರೆಲ್ಲರ ಇದೆಲ್ಲದರ ನೆನಪಿಗೆ ಈ ಈಸೂರಿನಲ್ಲಿ ಈಗ ಒಂದು ಸ್ಮಾರಕವಿದೆ.

ಕೊರಡೂರ: ಸ್ವಾತಂತ್ರ್ಯ ಹೋರಾಟಗಾರರ ಗರಡಿಮನೆ

ಇದೇ ರೀತಿ ಹಾವೇರಿ ತಾಲ್ಲೂಕಿನ ಕೊರಡೂರ ಗ್ರಾಮ ಸ್ವಾತಂತ್ರ್ಯ ಹೋರಾಟಗಾರರ ಪಾಲಿನ ಗರಡಿಮನೆಯಾಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಲೆಂದೇ ಮೈಲಾರ ಮಹದೇವಪ್ಪನವರ ನೇತೃತ್ವದಲ್ಲಿ ಹಲವು ಹೋರಾಟಗಾರರು ಗಾಂಧಿ ಸೇವಾಶ್ರಮವನ್ನು ಸ್ಥಾಪಿಸಿ, ಚಳುವಳಿಗಾರರಿಗೆ ತರಬೇತಿ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಪೊಲೀಸರ ಗುಂಡಿಗೆ ಬಲಿಯಾದ ಮೈಲಾರ ಮಹದೇವ, ತಿರುಕಪ್ಪ ಮಡಿವಾಳರ, ಶರಣಯ್ಯ ಹಿರೇಮಠ ಇದ್ದದ್ದು ಈ ಊರಲ್ಲೇ. ಈ ಸೇವಾಶ್ರಮಕ್ಕೆ ಗಾಂಧೀಜಿ, ಮತ್ತು ವಿನೋಭಾ ಭಾವೆ ಭೇಟಿ ನೀಡಿದ್ದರೆಂದರೆ, ಕೋರಡೂರಿನ ಮಹತ್ವವನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಸ್ವಾತಂತ್ರ್ಯ ಹೋರಾಟಗಾರರ ಮಸಬಿನಾಳ: 167 ಹೋರಾಟದ ಸೇನಾನಿಗಳು

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮಸಬಿನಾಳ ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟಕ್ಕೆ ಗ್ರಾಮದ ವಿರಕ್ತ ಮಠದ ಶಿವಾನಂದ ಶಿವಯೋಗಿ ಹಾಗೂ 167 ಸೇನಾನಿಗಳ ಹೋರಾಟದ ಕೊಡುಗೆ ಅವಿಸ್ಮರಣೀಯ. ಮಹಾತ್ಮ ಶಿವಾನಂದ ಶಿವಯೋಗಿಗಳು ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಗಡಿನಾಡ ಗಾಂಧಿ ಹರ್ಡೇಕರ್‌ ಮಂಜಪ್ಪ, ಬಂಧನಾಳ ಶಿವಯೋಗಿ, ಕೌಜಲಗಿ ಹನುಮಂತರಾಯ, ಸೇರಿ ಮುಂಚೂಣಿಯಲ್ಲಿದ್ದ ಹೋರಾಟಗಾರರನ್ನು ಮಠಕ್ಕೆ ಕರೆಸಿ, ದೇಶಭಕ್ತಿ ಉಪನ್ಯಾಸ ನೀಡುತ್ತಿದ್ದರು. ಇದರಲ್ಲಿ ಕೌಜಲಗಿ ಹನುಮಂತರಾಯರು ಗಾಂಧಿ ಟೋಪಿ ಧರಿಸಿ ಪಾಲ್ಗೊಂಡ ಸುದ್ದಿ ʼಯಂಗ್‌ ಇಂಡಿಯಾʼ ಪತ್ರಿಕೆಯಲಿ ಪ್ರಕಟವಾಯಿತು. ಈ ಕಾರಣಕ್ಕಾಗಿ ಕೌಜಲಗಿ ಹನುಮಂತರಾಯರನ್ನು ಬಂಧಿಸಿ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಂಡರ್ಸನ್‌ ವಿಚಾರಣೆ ನಡೆಸಿದರು. ಇದರಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ತರು ಹೋರಾಟಕ್ಕೆ ಇಳಿದರು. ಎಂದಿನಂತೆ ಬ್ರಿಟೀಷ್‌ ಸರ್ಕಾರ ಹೋರಾಟವನ್ನು ತನ್ನ ಶಕ್ತಿ ಮತ್ತು ಅಧಿಕಾರದಿಂದ ಮಣಿಸಿತು.

ಸ್ವಾತಂತ್ರ್ಯ ಹೋರಾಟದ ನದಿಗೆ ಸಾವಿರಾರು ತೊರೆಗಳು….

ಈ ಹಾದಿಯಲ್ಲಿಯೇ ತನ್ನ ಕೈಲಾದ ಮಟ್ಟಿಗೆ ಸ್ವಾತಂತ್ರ್ಯ ಹೋರಾಟದ ಸಾಗರಕ್ಕೆ ಸೇರಿದ ಹಲವಾರು ತೊರೆಗಳೆಂದರೆ, ಗಾಂಧಿ ಸೇವಾ ಸಮ್ಮೇಳನಕ್ಕೆ ನೆಲೆ ಒದಗಿಸಿದ್ದ ಬೆಳಗಾವಿಯ ಹುದಲಿ ಗ್ರಾಮ, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುಂಡರಗಿ ಗ್ರಾಮಗಳು ಇನ್ನೂ ಸ್ಥಳೀಯರ ನೆನಪಿನಲ್ಲಿ ಹಚ್ಚಹಸುರಾಗಿದೆ. ಬಾಲಗಂಗಾಧರ ತಿಲಕ್‌ ಅವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಗಂಗಾಧರರಾವ್‌ ದೇಶಪಾಂಡೆ ಅವರ ಪ್ರಯತ್ನದ ಫಲವಾಗಿ 1937ರ ಏಪ್ರಿಲ್‌ 16ರಿಂದ 22ರವರೆಗೆ ಹುದಲಿಯಲ್ಲಿ ಗಾಂಧಿ ಸೇವಾ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನದಲ್ಲಿ ಗಾಂಧೀಜಿ, ವಲ್ಲಬಾಯಿ ಪಟೇಲ್‌, ಬಾಬು ರಾಜೇಂದ್ರ ಪ್ರಸಾದ್‌, ಆಚಾರ್ಯ ಕೃಪಲಾನಿ, ಗಡಿನಾಡ ಗಾಂಧಿ, ಖಾನ್‌ ಆಬ್ದುಲ್‌ ಗಫಾರ್‌ ಖಾನ್‌ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಸುಲಧಾಳ ರೈಲು ನಿಲ್ದಾಣದಲ್ಲಿ ಇಳಿದ ಬಾಪು ಗಾಂಧಿ, ಕಾಲ್ನಡಿಗೆಯಲ್ಲಿ ಗ್ರಾಮ ಪ್ರವೇಶ ಮಾಡಿದ್ದು ಒಂದು ಇತಿಹಾಸ. ಇದೇ ರೀತಿ ಮುಂಡರಗಿಯ ಭೀಮರಾಯರ ಕೊಡುಗೆ ಕೂಡ ಅಪೂರ್ವವಾದದ್ದು. ಅವರನ್ನು ಜನರು ಕರೆಯುತ್ತಿದ್ದುದು, ʼಮುಂಡರಗಿಯ ಬಂಡಾಯದ ಭೀಮರಾಯರುʼ ಎಂದೇ.

ಕರ್ನಾಟಕದ ಬಾರ್ದೋಲಿ, ಜಲಿಯನ್‌ವಾಲಾಭಾಗ್‌

ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಇನ್ನಿತರೆ ಗ್ರಾಮಗಳೆಂದರೆ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿವಪುರ. ಇಲ್ಲಿ ನಡೆದ ಶಿವಪುರ ಸತ್ಯಾಗ್ರಹದ ಬಗ್ಗೆ ಹೊರಜಗತ್ತಿಗೆ ಸಾಕಷ್ಟು ಗೊತ್ತಿದೆ. ಕಾರಣ ಅದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದೆ. ಅದೇ ರೀತಿ ಗಾಂಧೀಜಿ ಅವರ ಉಪ್ಪಿನ ಸತ್ಯಾಗ್ರಹದ ಒಂದು ಭಾಗವಾಗಿ ಉತ್ತರ ಕರ್ನಾಟಕದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ. ಇಂದಿಗೂ, ಈ ಸತ್ಯಾಗ್ರಹ ನಡೆದ ಅಂಕೋಲವನ್ನು ಕರ್ನಾಟಕದ ಬಾರ್ದೋಲಿ ಎಂದೇ ಗುರುತಿಸಲಾಗುತ್ತದೆ. ಇದೇ ರೀತಿ ಶಿವಪುರದ ಧ್ವಜ ಸತ್ಯಾಗ್ರಹದಿಂದ ಪ್ರೇರೇಪಣೆಗೊಂಡು ನಡೆದ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ, ಈ ಸತ್ಯಾಗ್ರಹವನ್ನು ಕರ್ನಾಟಕದ ಜಲಿಯನ್‌ವಾಲಾಭಾಗ್‌ ಎಂದೇ ಗುರುತಿಸಲಾಗುತ್ತಿದೆ. ಏಕೆಂದರೆ, ಇಲ್ಲಿನ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವತ್ತಕ್ಕೂ ಹೆಚ್ಚ ಮಂದಿ ಪ್ರಾಣತೆತ್ತರು.

ಇವೆಲ್ಲ ಮರೆತು ಹೋದ ನಮ್ಮವರ, ನಮ್ಮೂರಿನ ಸ್ವಾತಂತ್ರ್ಯ ಹೋರಾಟದ ಕಥೆಗಳು.. ಹುಡುಕಿದರೆ ಸಿಗುವುದು ಇನ್ನೆಷ್ಟೋ ಕಥೆಗಳು ಇತಿಹಾಸದ ಮಣ್ಣಲ್ಲಿ ಮಣ್ಣಾಗಿ ಹೋಗಿರುವುದು ಕಾಲದ ದುರಂತ.

ವಿದುರಾಶ್ವತ್ಥ ದುರಂತ

 

ಅಂಕೋಲ ಉಪ್ಪಿನ ಸತ್ಯಾಗ್ರಹ

ಶಿವಪುರ ಸತ್ಯಾಗ್ರಹ ಸೌಧ

 

Tags:    

Similar News