ಅತ್ಯಾಧುನಿಕ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ| ಏನಿದರ ವಿಶೇಷತೆ ? ಹೇಗಿದೆ ಹಳೆಯ ಪಾರ್ಕಿಂಗ್‌ ಕಟ್ಟಡ?

ಬೆಂಗಳೂರಿನ ಹೃದಯಭಾಗವಾದ ಫ್ರೀಡಂಪಾರ್ಕ್‌ನ ಸಮೀಪದಲ್ಲಿ ಅತ್ಯಾಧುನಿಕ ಹಾಗೂ ಬಹುಮಹಡಿ ಪಾರ್ಕಿಂಗ್‌ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡವು ಹಲವು ವಿಶೇಷತೆಗಳನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಹಳೆಯ ಬಹುಮಹಡಿ ಪಾರ್ಕಿಂಗ್‌ ಕಟ್ಟಡಗಳು ಸುಧಾರಣೆಯ ನಿರೀಕ್ಷೆಯಲ್ಲಿವೆ. ಜೆ.ಸಿ ರಸ್ತೆಯ ಮತ್ತೊಂದು ಪ್ರಮುಖ ಬಹುಮಹಡಿ ಕಟ್ಟಡ ಅವ್ಯವಸ್ಥೆಯ ತಾಣವಾಗಿದೆ.

By :  Hitesh Y
Update: 2024-06-27 01:30 GMT
ಬಹುಮಹಡಿ ಕಟ್ಟಡ

ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಫ್ರೀಡಂಪಾರ್ಕ್ ಸಮೀಪದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈಗಾಗಲೇ ನಿರ್ಮಾಣ ಮಾಡಲಾಗಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡಗಳ ನಿರ್ವಹಣೆಯನ್ನು ಬಿಬಿಎಂಪಿ ಸಮರ್ಪಕವಾಗಿ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.  

ನಗರದ ವಾಹನ ಸವಾರರಿಗೆ ಅನುಕೂಲವಾಗಲಿ ಎಂದು ನಗರದ ಪ್ರಮುಖ ರಸ್ತೆಯಾದ ಜೆ.ಸಿ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಹುಮಹಡಿ ಕಟ್ಟಡ ಅವ್ಯವಸ್ಥೆಯ ತಾಣವಾಗಿದೆ. ಒಂದು ಭಾಗದಲ್ಲಿ ಸುಸಜ್ಜಿತ ಪಾರ್ಕಿಂಗ್ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇನ್ನೊಂದು ಕಡೆ ಈಗಾಗಲೇ ಅಭಿವೃದ್ಧಿಪಡಿಸಿರುವ ಪಾರ್ಕಿಂಗ್ ಕಟ್ಟಡದ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಎರಡೂ ಪಾರ್ಕಿಂಗ್ ಕಟ್ಟಡಗಳು ಹೇಗಿದೆ ಎನ್ನುವ ವಿವರ ಈ ಲೇಖನದಲ್ಲಿದೆ.  

ಬೆಂಗಳೂರಿನಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುವುದೇ ಸವಾಲಿನ ಕೆಲಸ. ಮೆಜೆಸ್ಟಿಕ್‌, ಸಿವಿಲ್‌ ಕೋರ್ಟ್‌, ಗಾಂಧಿನಗರ ಹಾಗೂ ಕೆ.ಆರ್‌ ಸರ್ಕಲ್‌ ಸೇರಿದಂತೆ ವಿವಿಧ ಭಾಗದಲ್ಲಿ ಪಾರ್ಕಿಂಗ್‌ ಮಾಡುವುದಕ್ಕೆ ಜಾಗ ಸಿಗದೆ ವಾಹನ ಸವಾರರು ಪರದಾಡುತ್ತಾರೆ. ಇದೀಗ ಇದಕ್ಕೆ ಪರಿಹಾರ ಸಿಕ್ಕಿದೆ. ನಗರದ ಹೃದಯಭಾಗವಾದ ಸ್ವಾತಂತ್ರ್ಯ ಉದ್ಯಾನದ ಸಮೀಪದಲ್ಲಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬಹುಮಹಡಿ ವಾಹನ ಪಾರ್ಕಿಂಗ್ ಸಂಕೀರ್ಣವನ್ನು ನಿರ್ಮಿಸಲಾಗಿದ್ದು, ಹಲವು ವಿಶೇಷತೆಗಳನ್ನು ಈ ಪಾರ್ಕಿಂಗ್ ಕಟ್ಟಡ ಒಳಗೊಂಡಿದೆ.

ಸ್ವಾತಂತ್ರ್ಯ ಉದ್ಯಾನದ ಸಮೀಪದ ಕಾಳಿದಾಸ ರಸ್ತೆಯಲ್ಲಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪಾರ್ಕಿಂಗ್ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಪಾರ್ಕಿಂಗ್ ಕಟ್ಟಡದಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗಿದ್ದು, ಸೆನ್ಸಾರ್ ವ್ಯವಸ್ಥೆ ಇದೆ. ಇಲ್ಲಿ ಏಕಕಾಲಕ್ಕೆ 600 ಕಾರುಗಳು ಮತ್ತು 750 ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ. ಪಾರ್ಕಿಂಗ್ ಶುಲ್ಕ ಪಾವತಿ ಮಾಡುವುದಕ್ಕೆ ಅವಶ್ಯವಿರುವ ಎಲ್ಲ ಮಾದರಿಯ ಡಿಜಿಟಲ್ ಪಾವತಿ ವ್ಯವಸ್ಥೆ ಇದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಆಗಮನ ಹಾಗೂ ನಿರ್ಗಮನ ಸ್ಥಳಗಳಲ್ಲಿ ಚಾಲಕರ ಮುಖವನ್ನು ಇದು ಸೆರೆಹಿಡಿಯುತ್ತದೆ.


 ಪಾರ್ಕಿಂಗ್ ಲಭ್ಯತೆಯನ್ನು ವಾಹನ ಸವಾರರಿಗೆ ಪರಿಚಯಿಸುವ ಉದ್ದೇಶದಿಂದ ಕಟ್ಟಡದ ಒಳಗೆ ಮತ್ತು ಕಟ್ಟಡದ ಪ್ರವೇಶದ್ವಾರದಲ್ಲಿ ಡಿಜಿಟಲ್ ಸ್ಕ್ರೀನ್ ಅಳವಡಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ಲಭ್ಯವಿರುವ ಪಾರ್ಕಿಂಗ್ ಮಾಹಿತಿ ಸಿಗಲಿದೆ. ಇನ್ನು ಹಸಿರು ಬಣ್ಣದ ಲೈಟ್ ಇದ್ದರೆ ಪಾರ್ಕಿಂಗ್‌ಗೆ ಅವಕಾಶವಿದೆ ಹಾಗೂ ಕೆಂಪು ಬಣ್ಣವಿದ್ದರೆ ಪಾರ್ಕಿಂಗ್ ಮಾಡಲಾಗಿದೆ ಎಂದು ತೋರಿಸುತ್ತದೆ. ಪಾರ್ಕಿಂಗ್ ಮೊಬೈಲ್ ಅಪ್ಲಿಕೇಶನ್ ಸೇವೆ ಸಹ ಕಲ್ಪಿಸಲಾಗಿದ್ದು, ಎಲ್ಲ ಮಾದರಿಯ ಡಿಜಿಟಲ್ ಪಾವತಿ ವ್ಯವಸ್ಥೆ ಇಲ್ಲಿ ಲಭ್ಯವಿದೆ.

ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ; ಸುರಕ್ಷತೆಗೆ ಆದ್ಯತೆ

ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಕಟ್ಟಡದಲ್ಲಿ ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ಚೇತನರಿಗೆ ವೀಲ್ ಚೇರ್‌ಗಳು, ವಾಕರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಪಾರ್ಕಿಂಗ್ ಕಟ್ಟಡದಲ್ಲಿ ಪ್ರತಿ ಮಹಡಿಯಲ್ಲೂ ನಾಲ್ಕು ತುರ್ತು ಸೇವೆಯ ಅಲಾರಂಗಳನ್ನು ಅಳವಡಿಸಲಾಗಿದೆ. ಅಪಾಯ ಎದುರಾದರೆ, ಮಹಿಳೆಯರು ಈ ತುರ್ತು ಅಲಾರಂ ಬಟನ್‌ಗಳನ್ನು ಒತ್ತಬಹುದಾಗಿದ್ದು, ಭದ್ರತಾ ಸಿಬ್ಬಂದಿ ಆ ಸ್ಥಳಕ್ಕೆ ಹಾಜರಾಗಲಿದ್ದಾರೆ.

ಈ ಭಾಗದ ವಾಹನ ಸವಾರರಿಗೆ ಅನುಕೂಲ

ನೂತನ ಬಹುಮಹಡಿ ಪಾರ್ಕಿಂಗ್ ಕಟ್ಟಡದಿಂದ ನಗರದ ಸಿಟಿ ಸಿವಿಲ್ ನ್ಯಾಯಾಲಯ, ಕೆ.ಆರ್.ವೃತ್ತ, ವಿಧಾನಸೌಧ, ಎಂ.ಎಸ್.ಬಿಲ್ಡಿಂಗ್ ಮತ್ತು ಹೈಕೋರ್ಟ್ ಪೋತೀಸ್ ಸರ್ಕಲ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಬಿ.ವಿ.ಕೆ. ಐಯ್ಯಂಗಾರ್ ರಸ್ತೆ, ಟಿಸಿಎಂ ರಾಯನ್ ಸರ್ಕಲ್, ಉಪ್ಪಾರಪೇಟೆ ಪೊಲೀಸ್ ಸ್ಟೇಷನ್, ಮೆಜೆಸ್ಟಿಕ್ ಬಸ್ ಸ್ಟೇಷನ್ ಮತ್ತು ಕೆ.ಎಸ್.ಆರ್ ಬೆಂಗಳೂರು ರೈಲ್ವೆ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ಚಲಾಯಿಸುವವರಿಗೆ ಅನುಕೂಲವಾಗಲಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್

ಪಾರ್ಕಿಂಗ್ ಕಟ್ಟದ ಆವರಣದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ಸೇವೆಯನ್ನು ಕಲ್ಪಿಸಲಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರ್‌ಗಳನ್ನು ಇಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ.


ಪಿಕ್ಅಪ್ ಮತ್ತು ಡ್ರಾಫ್ ವ್ಯವಸ್ಥೆ

ಪಾರ್ಕಿಂಗ್ ಕಟ್ಟಡದ ಮತ್ತೊಂದು ವಿಶೇಷವೆಂದರೆ, ಮೂರು ಹಂತಗಳಲ್ಲಿ ಪ್ರತಿ 15 ನಿಮಿಷಗಳಿಗೆ ಇಲ್ಲಿ ವಾಹನ ನಿಲ್ಲಿಸುವವರಿಗೆ ಉಚಿತ ಪಿಕ್ಅಪ್ ಮತ್ತು ಡ್ರಾಫ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾರ್ಕಿಂಗ್ ಕಟ್ಟಡದ ಮತ್ತಷ್ಟು ವಿಶೇಷತೆಗಳು

* ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಹಾಗೂ ಉಚಿತ ವೈಫೈ ಸೌಲಭ್ಯ ಇದೆ.

* ಪಾರ್ಕಿಂಗ್ ಮೇಲ್ವಿಚಾರಣೆಗೆ ಪಾರ್ಕಿಂಗ್ ಕಮಾಂಡ್ ಕೇಂದ್ರ ಸ್ಥಾಪಿಸಲಾಗಿದೆ.

* ಸೋಲಾರ್ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ 500 ಕೆ.ವಿ ಸಾಮರ್ಥ್ಯದ ಸೋಲಾರ್ ಉತ್ಪತ್ತಿಯಾಗುತ್ತಿದ್ದು, ಸುತ್ತಮುತ್ತಲಿನ ಬೀದಿ ದೀಪಗಳಿಗೆ ಬಳಸಿಕೊಳ್ಳಲಾಗುತ್ತದೆ.

* ತುರ್ತು ನಿರ್ಗಮನ ವ್ಯವಸ್ಥೆ, ಅಗ್ನಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ.

* ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಪಾರ್ಕಿಂಗ್ ಕಟ್ಟಡದಲ್ಲಿ ವಾಹನ ನಿಲುಗಡೆಗೆ ನಿಗದಿ ಬೆಲೆ ಈ ರೀತಿ ಇದೆ 


ಪ್ರಮುಖ ಬೀದಿಗಳಲ್ಲಿ ವಾಹನ ನಿಲುಗಡೆ ನಿಷೇಧ ಬಾಕಿ

ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಹೇಳಿದ್ದರು. ಈ ಭಾಗದ ರಸ್ತೆಗಳು ವಿಶಾಲವಾಗಿರಬೇಕು. ಎಲ್ಲ ವ್ಯಾಪಾರಿಗಳಿಗೆ ಲಾಭವಾಗಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದರು. ಆದರೆ, ವಾಹನ ನಿಲುಗಡೆ ನಿರ್ಬಂಧ ಇನ್ನಷ್ಟೇ ಜಾರಿಯಾಗಬೇಕಿದೆ.


ಜೆ.ಸಿ ರಸ್ತೆ ಪಾರ್ಕಿಂಗ್ ಕಟ್ಟಡದಲ್ಲಿ ಅವ್ಯವಸ್ಥೆ

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಜೆ.ಸಿ ರಸ್ತೆಯಲ್ಲಿರುವ ಬಿಬಿಎಂಪಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡದ ವ್ಯವಸ್ಥೆ ಸುಧಾರಿಸಬೇಕಿದೆ. ಜೆ.ಸಿ ರಸ್ತೆಯ ಪಾರ್ಕಿಂಗ್ ಕಟ್ಟಡದಲ್ಲಿ ಇದೀಗ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಪಾರ್ಕಿಂಗ್ಗೆ ಸುಸಜ್ಜಿತ ವ್ಯವಸ್ಥೆ ಇಲ್ಲ. ಪಾರ್ಕಿಂಗ್ ಶುಲ್ಕ ಪಾವತಿಗೆ ಎಲ್ಲ ಮಾದರಿಯ ಆನ್‌ಲೈನ್‌ ಸೇವೆ ಲಭ್ಯವಿಲ್ಲ. ಇನ್ನು ನೆಲ ಮಹಡಿಯಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸಲಾಗಿದೆ. ಪಾರ್ಕಿಂಗ್ ಕಟ್ಟಡದ ಕೆಲವು ಭಾಗದಲ್ಲಿ ಕತ್ತಲು ಆವರಿಸಿದ್ದು, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ಅಗ್ನಿ ಅವಘಡ ತಪ್ಪಿಸುವ ಸಾಧನಗಳು ಕಾಣಸಿಗುವುದಿಲ್ಲ. ಮುಖ್ಯವಾಗಿ ಕಟ್ಟಡದ ಹೊರಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಮುಂಭಾಗದ ಚಾವಣಿಯು ಹಾನಿಯಾಗಿದೆ.  

Tags:    

Similar News