ʻಕೊನೆಯ ಹೀರೋಗಳು-ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರುʼ; ನಾಳಿನ ಹೋರಾಟಕ್ಕೆ ಕೀಲೆಣ್ಣೆ

ಈ ಕಥೆಗಳು ನಾವು ತಿಳಿದಿರಬೇಕಾದಂಥವು. ಇದರಲ್ಲಿರುವ ಕೆಲವು ವ್ಯಕ್ತಿಗಳು ಇನ್ನೂ ಬದುಕಿದ್ದಾರೆ. ಇಲ್ಲಿರುವ ವ್ಯಕ್ತಿಗಳ ಸಂಖ್ಯೆ ಚಿಕ್ಕದು. ಆದರೆ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಅಜ್ಞಾತ, ಅನಾಮಿಕರ ಪ್ರತಿನಿಧಿಗಳ ಸ್ವಾತಂತ್ರ್ಯ ಹೋರಾಟಗಾರರ ಕಥನ ಇದು. ಹೊಸತೇ ಸ್ವಾತಂತ್ರ್ಯ ಪಡೆಯುವಲ್ಲಿ ಈ ಕೃತಿ ನಿನ್ನೆಯ ಪಾಠ. ಹಾಗೂ ನಾಳಿನ ಹೋರಾಟಕ್ಕೆ ಕೀಲೆಣ್ಣೆ,;

Update: 2024-08-11 06:30 GMT

ಪ್ರತಿ ವರ್ಷ ಆಗಸ್ಟ್‌ 15 ರಂದು ಈ ರೀತಿಯ ಒಂದು ಜಿಜ್ಞಾಸೆ ಉಂಟಾಗುತ್ತದೆ. ಈ ವರ್ಷ ಆಗಸ್ಟ್‌ 15 ರಂದು ನಾವು ಆಚರಿಸುತ್ತಿರುವುದು 77ನೇ ಸ್ವಾತಂತ್ರ್ಯ ದಿನಾಚರಣೆಯೇ? ಅಥವಾ 78ನೇ ಸ್ವಾತಂತ್ರ್ಯ ದಿನಾಚರಣೆಯೇ? ದೇಶಕ್ಕೆ ಸ್ವಾತಂತ್ರ್ಯ ದಕ್ಕಿದ ದಿನವನ್ನು (ಆಗಸ್ಟ್‌ 15. 1947) ಲೆಕ್ಕಕ್ಕೆ ತೆಗೆದುಕೊಂಡರೆ, ಈ ಆಗಸ್ಟ್‌ 15 (2024) ರಂದು ನಾವು ಆಚರಿಸುವುದು 77 ನೇ ಸ್ವತಂತ್ರ್ಯ ದಿನಾಚರಣೆ. ಆದರೆ ಆಗಸ್ಟ್‌ 15 1948 ರಂದು ಆಚರಿಸಿದ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಈ ಬಾರಿ ಆಚರಿಸುತ್ತಿರುವುದು 78 ನೇ ಸ್ವಾತಂತ್ರ್ಯ ದಿನಾಚರಣೆ.

ಆದರೆ, ಸ್ವಾತಂತ್ರ್ಯ ದಕ್ಕಿದ ದಿನವನ್ನೇ ಲೆಕ್ಕಕ್ಕೆ ತೆಗೆದುಕೊಂಡು, ಈ ವರ್ಷದ ಆಚರಣೆಯನ್ನು ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯೆಂದೇ ಭಾವಿಸೊಣ. ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ʻಕೊನೆಯ ಹೀರೋಗಳು-ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರುʼ ಎಂಬ ಪುಸ್ತಕ ಬಿಡುಗಡೆಯಾಯಿತು. ಬಹುರೂಪಿ ಪ್ರಕಾಶನ ಸಂಸ್ಥೆ ಹೊರತಂದ ಈ ಪುಸ್ತಕ –ʻಪೀಪಲ್ಸ್‌ ಆರ್ಖೈವ್ಸ್‌ ಆಫ್‌ ರೂರಲ್‌ ಇಂಡಿಯಾ (Peoples Archives of Rural India PARI) ಯ ಸಂಸ್ಥಾಪಕ ಸಂಪಾದಕರಾದ ಪಾಲಗುಮ್ಮಿ ಸಾಯಿನಾಥ್‌ ಅವರ The Last Heroes — Foot Soldiers of Indian Freedom ಪುಸ್ತಕದ ಕನ್ನಡ ಅನುವಾದ. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಪತ್ರಕರ್ತ, ಈಗ ಪ್ರಕಾಶಕರೂ ಆಗಿರುವ ಜಿ. ಎನ್‌ ಮೋಹನ್.‌ ಸಾಯಿನಾಥ್‌ ಅವರ The Last Heroes — Foot Soldiers of Indian Freedom ಪುಸ್ತಕ ಪ್ರಕಟವಾಗಿದ್ದು, ನವೆಂಬರ್‌ 2022ರಲ್ಲಿ. ದೇಶ ಎಷ್ಟು ಸ್ವಾತಂತ್ರ್ಯ ದಿನಾಚರಣೆಗಳನ್ನು ಆಚರಿಸಿದರೂ, ಅಂದು ನೆನಪಿಸಿಕೊಳ್ಳಲೇಬೇಕಾದ ಪುಸ್ತಕ; ಇಂಗ್ಲಿಷ್‌ ನ The Last Heroes — Foot Soldiers of Indian Freedom ಹಾಗೂ ಕನ್ನಡದ ʻಕೊನೆಯ ಹೀರೋಗಳು-ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರುʼ.

ಯಾರೀ ಸಾಯಿನಾಥ್?

ಈ ಪುಸ್ತಕದ ಬಗ್ಗೆ ಬರೆಯುವ ಮೊದಲು, ಪಾಲಗುಮ್ಮಿ ಸಾಯಿನಾಥ್‌ ಅವರ ಬಗ್ಗೆ ಕೆಲವು ಸಾಲುಗಳನ್ನು ದಾಖಲಿಸಲೇ ಬೇಕು. ಸಾಯಿನಾಥ್‌ ಕಳೆದ ನಾಲ್ಕು ದಶಕಗಳಿಂದ ಮಾಧ್ಯಮ ರಂಗದಲ್ಲಿ ಸಕ್ರೀಯರು. ತಮ್ಮ ಈ ವೃತ್ತಿ ಬದುಕಿನ ಕಾಲಾವಧಿಯಲ್ಲಿ ಸಾಯಿನಾಥ್‌ ಅವರು ಗ್ರಾಮೀಣ ಭಾರತವನ್ನು ಪೂರ್ಣಾವಧಿಯಾಗಿ ಸುತ್ತಿ ಅಲ್ಲಿಯ ನೈಜ ಸ್ಥಿತಿಯನ್ನು ವರದಿ/ಲೇಖನಗಳ ರೂಪದಲ್ಲಿ ನಾಗರಿಕ ಜಗತ್ತಿನ ಮುಂದಿಟ್ಟು ಗ್ರಾಮೀಣ ಭಾರತದ ಸ್ಥಿತಿಯನ್ನು ಇನ್ನಾರೂ ಮಾಡದ ಕ್ರಮದಲ್ಲಿ ಮನದಟ್ಟು ಮಾಡಿಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಸಾಯಿನಾಥ್‌ ಅವರು ಬರೆದಿರುವುದು ಎರಡೇ ಕೃತಿ. Everybody Loves a Good Drought’ ಮತ್ತುThe Last Heroes — Foot Soldiers of Indian Freedom. ಕೃಷಿ ವಲಯ ಎದುರಿಸುತ್ತಿರುವ ದಾರುಣ ಸಮಸ್ಯೆಗಳು, ಕೃಷಿ ಜಗತ್ತಿನ ಇಂದಿನ ಸ್ಥಿತಿಗೆ ಕಾರಣವನ್ನು ಅವಲೋಕಿಸಿ 1996 ರಲ್ಲಿ ಸಾಯಿನಾಥ್‌ ಅವರು ಬರೆದ Everybody Loves a Good Drought’ ಇಂದಿಗೂ ಎಂದೆಂದಿಗೂ ಪ್ರಸ್ತುತ. ಈ ಪುಸ್ತಕನ್ನು ಕೂಡ  ಮೋಹನ್‌  ʻಬರ ಅಂದ್ರೆ ಎಲ್ಲರಿಗೂ ಇಷ್ಟʼ ಎಂದು ಅನುವಾದಿಸಿ ಪ್ರಕಟಿಸಿದ್ದಾರೆ. “ಈ ಪುಸ್ತಕ ಬರೆಯಲು ಸಾಯಿನಾಥ್‌ ದೇಶದ ಕಡು ಬಡ ಜಿಲ್ಲೆಗಳನ್ನು ಸುತ್ತಿದ್ದಾರೆ ಯಾವುದೇ ಭೂಪಟಗಳಲ್ಲಿ ಕಾಣಿಸಿಕೊಳ್ಳದೇ ಹೋಗುವಂಥ ಕುಗ್ರಾಮಗಳಲ್ಲಿ ವರ್ಷದ 300 ದಿನ ಕಳೆಯುವ ಸಾಯಿನಾಥ್‌, ಆ ಹಳ್ಳಿಗಳಿಗೆ, ಹಳ್ಳಿಯ ಜನತೆಗೆ ಘನತೆ ತಂದವರು. ಸಾಯಿನಾಥ್ ಅವರ ಸುತ್ತಾಟ ದೇಶದ ನೀತಿ ನಿರೂಪಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ದೇಶದ ಹಲವು ಪ್ರಧಾನಿಗಳು ಇವರು ಪ್ರಸ್ತಾಪಿಸಿದ ಹಳ್ಳಿಗಳತ್ತ ಧಾವಿಸುವಂತೆ ಮಾಡುತ್ತದೆ. ಇವರ Everybody Loves a Good Drought’ ದೇಶದ ಪ್ರಜ್ಞೆಯನ್ನು ಕಲುಕಿದೆ” ಎಂದಿರುವ ಲೇಖಕ, ವಿಮರ್ಶಕ ಪ್ರೊ. ಸಿ.ಎನ್‌. ರಾಮಚಂದ್ರನ್‌ ಅವರ ಮಾತುಗಳು ಇಲ್ಲಿ ಅರ್ಥಪೂರ್ಣ. ‌

ʻಪರಿʼ ಹುಟ್ಟಿದ ಪರಿ

ಸುಮಾರು ಹತ್ತು ವರ್ಷಗಳ ಕಾಲ; ಅಂದರೆ 2004 ರಿಂದ 2014ರ ವರೆಗೆ ಅವರು ʻದ ಹಿಂದೂʼ ಪತ್ರಿಕೆಯ ಗ್ರಾಮೀಣ ವ್ಯವಹಾರಗಳಿಗೆ ಸಂಪಾದಕರಾಗಿದ್ದವರು. ಅವರಿಗೆ ಅವರ ಗ್ರಾಮೀಣ ಭಾರತದ ಕುರಿತ ವರದಿಗಾಗಿ ಹುಡುಕಿಕೊಂಡು ಬಂದ ಫೆಲೋಷಿಪ್ ಗಳು ಹಾಗೂ ಪ್ರಶಸ್ತಿಗಳು ಹಲವು. ಸಾಯಿನಾಥ್‌ ಅವರಿಂದ ಆ ಫೆಲೋಷಿಪ್‌ಗಳಿಗೆ, ಪ್ರಶಸ್ತಿಗೆ ಗೌರವ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರತಿಷ್ಠಿತ ರಾಮೋನ್‌ ಮ್ಯಾಗ್ಸೆಸೆ ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಸಾಯಿನಾಥ್‌ 2014ರ ಡಿಸೆಂಬರ್‌ನಲ್ಲಿ PARI ಯನ್ನು ಹುಟ್ಟುಹಾಕಿದರು. ದೇಶದ 14 ಭಾಷೆಗಳಲ್ಲಿ PARI ಪ್ರಕಟವಾಗುತ್ತಿದೆ. PARI ಸ್ವತಂತ್ರ್ಯವಾದ ಬಹುಮಾಧ್ಯಮ ಡಿಜಿಟಲ್‌ ವೇದಿಕೆ. ದೇಶದ ಗ್ರಾಮೀಣ ಜಗತ್ತಿನ ಆಳ-ಅಗಲ, ಆ ಪ್ರದೇಶಗಳು ನವನಾಗರಿಕ ಜಗತ್ತಿನ ಬೇಡಿಕೆಗಳಿಂದ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಜಗತ್ತಿನ ಮುಂದಿಡುವುದು PARI ಯ ಮುಖ್ಯ ಉದ್ದೇಶ. ಗ್ರಾಮೀಣ ಬದುಕಿನ ಅಂತರಂಗವನ್ನು ಹೊಕ್ಕು, ಅದರ ಭಾವಗಳಿಗೆ ಅಕ್ಷರ ರೂಪ ನೀಡಿರುವ ಸಾಯಿನಾಥ್‌ ಅವರ ಪುಸ್ತ The Last Heroes — Foot Soldiers of Indian Freedom.

ದೇಶದ ಸ್ವಾತಂತ್ರ್ಯಕ್ಕಾಗಿ ಸೆಣೆಸಿದ ನಾಯಕರೆಲ್ಲರ ಬಗ್ಗೆ ಕೊಟ್ಯಾಂತರ ಪುಟಗಳಷ್ಟು ಬರಹಗಳಿವೆ. ಆದರೆ, ಯಾರ ಗಮನಕ್ಕೂ ಬಾರದ, ಆದರೆ ಅವರ ತ್ಯಾಗದಿಂದ ದೇಶ ಸ್ವತಂತ್ರವಾಗಲು ಕಾರಣರಾದ ಭಾರತ ಸ್ವಾತಂತ್ರ್ಯದ ಕಾಲಾಳುಗಳ ಬಗ್ಗೆ ಮೊದಲ ಬಾರಿಗೆ ಸಾಯಿನಾಥ್‌ ದೇಶದ ಜನರಿಗೆ ತಿಳಿಸಿದ್ದಾರೆ. ಅವರು ದೇಶ ಸ್ವತಂತ್ರವಾಗಲು ನಡೆಸಿದ ಹೋರಾಟ, ಅದಕ್ಕಾಗಿ ಅವರು ತೆತ್ತಿರುವ ಬೆಲೆಯನ್ನು ಕುರಿತು ಹೇಳುವ ಈ ಕೃತಿಯನ್ನು ʻಅಜ್ಞಾತ ಸ್ವಾತಂತ್ರ್ಯದ ಕಾಲಾಳುಗಳ ಸ್ವಗತʼ ವೆಂದು ಹೇಳಿದರೂ, ತಪ್ಪಾಗಲಾರದು. ಅವರ ಭಾವಗಳಿಗೆ ಸಾಯಿನಾಥ್‌ ಅಕ್ಷರ ರೂಪ ನೀಡಿದ್ದಾರೆ. ಸ್ವಾತಂತ್ರ್ಯದ ಬೆಲೆಯನ್ನು ಅರಿತ ಎಲ್ಲರೂ ಓದಲೇಬೇಕಾದ ಪುಸ್ತಕ ಇದೆಂಬುದು ಖಂಡಿತ. ದೇಶ ʻಅಜಾದಿ ಕಾ ಅಮೃತ ಮಹೊತ್ಸವʼ ಆಚರಿಸಿದ ಸಂದರ್ಭಕ್ಕೆ ಸಲ್ಲುವಂತೆ ಈ ಪುಸ್ತಕ ಪ್ರಕಟವಾಗಿದ್ದು ಭಾರತೀಯರ ಸೌಭಾಗ್ಯ.

ಈ ಪುಸ್ತಕ ಹೊರಬಂದಿದ್ದು ಹೀಗೆ

ಈ ಪುಸ್ತಕದ ಕೊನೆಯ ಭಾಗದಲ್ಲಿ “ಈ ಪುಸ್ತಕ ಹೊರಬಂದಿದ್ದು ಹೀಗೆ….” ಎಂದು ಸಾಯಿನಾಥ್‌ ಅವರು ಬರೆದುಕೊಂಡಿದ್ದನ್ನು ಹೀಗೆ ಸಂಕ್ಷೇಪಿಸಬಹುದು.

“ನನ್ನ ನೆನಪಿದೆಯಾ?” ಅಂತ ನನ್ನ ತಾತನ ಮುಂದೆ ನಿಂತಿದ್ದ ಆ ಅಪರಿಚಿತ ವ್ಯಕ್ತಿ ಕೇಳಿದ, ಎಂದು ಆರಂಭಿಸುವ ಸಾಯಿನಾಥ್‌, ಆ ವ್ಯಕ್ತಿಯನ್ನು ಅವರ ತಾತನನ್ನು ಜೈಲಿಗೆ ಹಾಕಿದ ಜೈಲಿನ ವಾರ್ಡನ್‌ ಎಂದು ಪರಿಚಯಿಸುತ್ತಾರೆ. ತಾತನನ್ನು ಭೇಟಿ ಮಾಡಿದಾಗ, ಇಷ್ಟು ಕಾಲದ ನಂತರ ಅವರ ನೆನಪಿನ ಕಾಣಿಕೆಯಾಗಿ ನೀಡಲು ತಮ್ಮೊಂದಿಗೆ ಜೋಪಾನವಾಗಿ ಇಟ್ಟುಕೊಂಡಿದ್ದ ಕೈದಿಯ ಸಂಖ್ಯೆಯನ್ನು ಹೊತ್ತ ವಸ್ತ್ರವನ್ನು ನೀಡಲು ಬಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಸಾಯಿನಾಥ್‌ ಅವರ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವಿನ ಪಯಣ ಆರಂಭವಾಗುವುದು ಹೀಗೆ….ಅವರ ತಾತ ಬ್ರಿಟೀಷರ ಜೈಲುಗಳಲ್ಲಿ ಹಲವು ವರ್ಷ ಕಳೆದಿದ್ದರು. ಬ್ರಿಟೀಷರ ಆಡಳಿತದ ವಿರುದ್ಧ ಪ್ರಚಾರಾಂಧೋಲನ ನಡೆಸುತ್ತಿದ್ದವರಲ್ಲಿ ಸಕ್ರೀಯರಾಗಿದ್ದರು.

“ನನ್ನ ತಾತ ಯಾವಾಗಲೂ ಹೇಳುತ್ತಿದ್ದ ʻತನ್ನತಹ ಅನುಕೂಲಸ್ಥರಲ್ಲದೆ, ಈ ಸ್ವಾತಂತ್ರ್ಯದ ಕನಸು ನನಸು ಮಾಡುವಂತೆ ಮಾಡಿದ ಆ ಲಕ್ಷಗಟ್ಟಲೆ ಜನ ಸಾಮಾನ್ಯರ ಬಗ್ಗೆ” ನನಗೆ ತೀವ್ರ ಕುತೂಹಲವಿತ್ತು. ನಾನು ಬೆಳೆದಂತೆಲ್ಲ ಅಂಥಹವರಲ್ಲಿ ಕೆಲವರು ಆಗೀಗ ನನ್ನ ತಾತನನ್ನು ನೋಡಲು ಬಂದು ಹೋಗುತ್ತಿದ್ದರು ಎಂದು ಗೊತ್ತಾಯಿತು. ಅವರ ಕಥೆಗಳನ್ನು ಕೇಳಲು, ಅವರ ಬದುಕಿನ ಬಗ್ಗೆ ತಿಳಿಯಲು ನನಗೆ ಎಂದೂ ಸುಸ್ತಾಗಲಿಲ್ಲ. ಅವರು ಹಾಗೂ ಅವರಂಥ ಲಕ್ಷಾಂತರ ಮಂದಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಲ್ಪ ಅಥವಾ ಯಾವುದೇ ಪ್ರತಿಫಲವಿಲ್ಲದೆ ಹೋರಾಡಿದರು, ಹುತಾತ್ಮರಾದರು” ಎಂದು ಸಾಯಿನಾಥ್‌ ನೆನಪಿಸಿಕೊಳ್ಳುತ್ತಾರೆ.

“ನಾನು ಕಾಲೇಜಿಗೆ ಹೋಗಲು ಶುರು ಮಾಡಿದ ನಂತರ ನಾನು ಅಂತಹ ಹಲವರನ್ನು ಭೇಟಿ ಮಾಡಿದೆ. ನಾನು ವಿಶ್ವವಿದ್ಯಾಲಯದಲ್ಲಿ ಚರಿತ್ರೆ ಅಧ್ಯಯನ ಮಾಡುವಾಗ ಬ್ರಿಟೀಷರ ವಿರುದ್ಧ ನಡೆದ ಅನೇಕ ಸಮರಗಳು ಆರಂಭವಾಗಿದ್ದು, ನಗರಗಳಲ್ಲಿ ಅಲ್ಲ. ಅವು ಆರಂಭವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಎಂಬುದು ಮನವರಿಕೆಯಾಯಿತು” ಎಂದು ಹೇಳುತ್ತಾರೆ.

“1997ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 50 ವರ್ಷ ತುಂಬಿದಾಗ ನಾನು ಜಗತ್ತಿನ ಪ್ರಬಲ ಸಾಮ್ರಾಜ್ಯಗಳ ವಿರುದ್ದ ವೀರೋಚಿತ ಹೋರಾಟಕ್ಕೆ ನಾಂದಿ ಹಾಡಿದ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದೆ. ಛತ್ತೀಸ್ಘಡದ ಸೋನಾ ಖಾನ್‌, ಆಂಧ್ರದ ರಂಪಾ ಚೋಡಾವರಂ, ಕೇರಳದ ಕಳ್ಳಿಯಸ್ಸೇರಿ, ಹಾಗೂ ಇನ್ನಷ್ಟು ಅಂತಹ ಹಳ್ಳಿಗಳು. ಭಾರತ ಸ್ವಾತಂತ್ರ್ಯದ 50ನೇ ವರ್ಷದ ಸಂದರ್ಭದಲ್ಲಿ ಟೈಮ್ಸ್‌ ಆಫ್‌ ಇಂಡಿಯಾಗಾಗಿ ʻಮರೆತುಹೋದ ಸ್ವಾತಂತ್ರ್ಯʼ ಎನ್ನುವ ಸರಣಿಯನ್ನು ಬರೆದೆ. ನನ್ನ ಈ ಪುಸ್ತಕ ಓದುಗರಿಗಾಗಿ ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಪ್ರಯತ್ನ. ಈತ ಸ್ವಾತಂತ್ರ್ಯದ 75ನೇ ವರ್ಷದಲ್ಲಿ..” ಎಂದು ಸಾಯಿನಾಥ್‌ ಬರೆದಿದ್ದಾರೆ. ಈ ಕೃತಿಯನ್ನು ಸಾಯಿನಾಥ್‌ ಅವರು ತಮ್ಮ ತಾಯಿಗೆ ಅರ್ಪಿಸಿ; “ಅವರು ಹೇಳಿದ ಸ್ವಾತಂತ್ರ್ಯ ಯೋಧರ ಕಥೆಗಳನ್ನು ಕೇಳಿ ನಾನು ಬೆಳೆದೆ. ಅದರಲ್ಲಿ ಅವರ ತಂದೆ ಬ್ರಿಟೀಷ್‌ ಜೈಲಿನಲ್ಲಿ ಕಳೆದ ವರ್ಷಗಳ ಕಥೆಯೂ ಇತ್ತು” ಎಂದಿದ್ದಾರೆ.

ಈ ಕಥೆಗಳು ನಾವು ತಿಳಿದಿರಬೇಕಾದಂಥವು. ಇದರಲ್ಲಿರುವ ಕೆಲವು ವ್ಯಕ್ತಿಗಳು ಇನ್ನೂ ಬದುಕಿದ್ದಾರೆ. ಇಲ್ಲಿರುವ ವ್ಯಕ್ತಿಗಳ ಸಂಖ್ಯೆ ಚಿಕ್ಕದು. ಆದರೆ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಅನಾಮಿಕರ ಪ್ರತಿನಿಧಿಗಳು…” ಎಂದು ಸಾಯಿನಾಥ್‌ ಷರಾ ಬರೆಯುತ್ತಾರೆ.

ಕಾಲಾಳು ಯೋಧರ ಕಥೆಗಳು

ʻಕೊನೆಯ ಹೀರೋಗಳು-ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರುʼ ಎಂಬ ಈ ಪುಸ್ತಕದಲ್ಲಿ ಬಂಡಾಯಗಾರ್ತಿ, ನಟಿ, ಯೋಧೆ, ಬೇಹುಗಾರಿಕೆ, ದೆಮಾತಿ ಡೆ ʻಸಾಲಿಹಾನ್‌ʼ ಬ್ರಿಟೀಷರನ್ನು ಎದುರಿಸಿದಾಗ, ನಮ್ಮ ಸ್ವಾತಂತ್ರ್ಯಕ್ಕಾಗಿ ಭಗತ್‌ ಸಿಂಗ್‌ , ಜುಗ್ಗೀಯ ನಡೆಸಿದ ಹೋರಾಟ, ಗಾಂಧಿ ಮತ್ತು ಅಂಬೇಡ್ಕರ್‌ ನಡುವೆ ನಾನು ಆಯ್ಕೆ ಮಾಡಿಕೊಳ್ಳಬೇಕೆ? ತೆಲಂಗಾಣದಲ್ಲಿ, ಸ್ವರಾಜ್ಯಂ ಹುಡುಕಾಟದಲ್ಲಿ, ʻಕ್ಯಾಪ್ಟನ್‌ ಅಣ್ಣʼ ಹಾಗೂ ತೂಫಾನ್‌ ಸೇನೆ, 9 ದಶಕಗಳ ಕ್ರಾಂತಿಕಾರಿ, 9 ದಶಕಗಳ ಅಹಿಂಸಾವಾದ, ಲಕ್ಷ್ಮಿ ಪಾಂಡಾಳ ಕೊನೆಯ ಹೋರಾಟ, ಬ್ರಿಟೀಷ್‌ ರಾಜ್‌ ಮತ್ತು ಬದ್ಮಾಷ್‌ ಗಾಂವ್‌, ಬದ್ಮಾಷ್‌ ಗಾಂವ್‌ ನ ಮುಂದುವರೆದ ಹೋರಾಟಗಳು, ಗಣಪತಿ ಯಾದವ್‌ ಅವರ ಮನಸೆಳೆಯುವ ಬದುಕಿನ ಯಾತ್ರೆ, ಪುರುಲಿಯಾದಲ್ಲಿ ಕ್ರಾಂತಿಗೆ ಆಹಾರ ಒದಗಿಸಿದಾಕೆ, ಒಂದು ಪತ್ರಿಕೆ, ಹಲವು ಹೆಸರು, ಬಾಪು ಮತ್ತು ದರೋಡೆಕೋರರ ನಡುವೆ ಹಾಗೂ ಮರೆತು ಹೋದ ಹಲವು ಸ್ವಾತಂತ್ರ್ಯಕ್ಕಾಗಿ ಆರ್‌, ನಲ್ಲಕುಣ್ಣು ನಡೆಸಿದ ಹೋರಾಟ… ಹೀಗೆ ಕಾಲಾಳು ಯೋಧರ 16 ಕಥೆಗಳಿವೆ. ಈ ಕಥೆಗಳ ವಿವರಗಳನ್ನು ಬಿಟ್ಟುಕೊಟ್ಟು ಬಿಟ್ಟರೆ ಓದುಗರ ಕುತೂಹಲ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುತ್ತದೆ.

ಇಲ್ಲೊಂದು ಪ್ರಶ್ನೆ

ಇಲ್ಲೊಂದು ಪ್ರಶ್ನೆ? ಹಾಗಾದರೆ ನಿಜಕ್ಕೂ ಭಾರತದ ಸ್ವಾತಂತ್ರ್ಯದ ಚಳವಳಿಯನ್ನು ಮನ್ನೆಡೆಸಿದ್ದು ಯಾರು? ಲಕ್ಷಾಂತರ ಮಂದಿ ಸಾಮಾನ್ಯ ಜನರು.-ರೈತರು, ಕಾರ್ಮಿಕರು, ಗೃಹಿಣಿಯರು, ಅರಣ್ಯ ಉತ್ಪನ್ನಗಳನ್ನು ಹೆಕ್ಕುವವರು, ಕರಕುಶಲಿಗಳು, ಹಾಗೂ ಇನ್ನೂ ಇಂಥ ಹಲವಾರು ಮಂದಿ ಬ್ರಿಟೀಷರ ವಿರುದ್ಧ ಸೆಟೆದು ನಿಂತವರು. ಎಂದಿಗೂ, ಸಚಿವರು, ರಾಜ್ಯಪಾಲರು, ರಾಷ್ಟ್ರಪತಿಗಳು ಅಥವಾ ಇನ್ನಾವುದೇ ಅತ್ಯುನ್ನತ ಹುದ್ದೆಯನ್ನು ಪಡೆಯದವರು. ಅವರೆಲ್ಲರಲ್ಲೂ ಸಾಮಾನ್ಯವಾದ ಒಂದು ಎಳೆ ಇತ್ತು. ಸಾಮ್ರಾಜ್ಯಶಾಹಿಗೆ ಅವರ ವಿರೋಧ ರಾಜಿರಹಿತವಾಗಿತ್ತು.

ʻಕೊನೆಯ ಹೀರೋಗಳುʼ ಭಾರತ ಸ್ವಾತಂತ್ರ್ಯದ ಈ ಕಾಲಾಳುಗಳು ಕೃತಿಯಲ್ಲಿ ತಮ್ಮ ಕಥೆಗಳನ್ನು ಹೇಳುತ್ತಾರೆ. ಈ ಕೃತಿಯಲ್ಲಿ ಇರುವವರು ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗದವರು, ಬ್ರಾಹ್ಮಣರು, ಮುಸ್ಲಿಮರು, ಸಿಖ್ಖರು ಹಾಗೂ ಹಿಂದೂಗಳು. ಅವರು ವಿವಿಧ ಪ್ರದೇಶದಿಂದ ಬಂದವರು. ವಿವಿಧ ರೀತಿಯ ಭಾಷೆಗಳನ್ನು ಮಾತನಾಡುವವರು. ಇವರಲ್ಲಿ ಕೆಲವರು ನಾಸ್ತೀಕರು, ಮತ್ತೆ ಕೆಲವರು ಆಸ್ತೀಕರು, ಎಡಪಂಥೀಯರ, ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳು... ಹೀಗೆ ಎಲ್ಲರೂ ಇದ್ದಾರೆ.

“ಹೊಸತೇ ಸ್ವಾತಂತ್ರ್ಯ ಪಡೆಯುವಲ್ಲಿ ಈ ಕೃತಿ ನಿನ್ನೆಯ ಪಾಠ. ಹಾಗೂ ನಾಳಿನ ಹೋರಾಟಕ್ಕೆ ಕೀಲೆಣ್ಣೆ”, ಎನ್ನುತ್ತಾರೆ, ಈ ಕೃತಿಯನ್ನು ಅನುವಾದಿಸಿರುವ ಜಿ. ಎನ್‌. ಮೋಹನ್‌. ಅವರು ಈ ಕೃತಿಯ ಅನುವಾದದ ಅನಿವಾರ್ಯವನ್ನು ಮನದಟ್ಟು ಮಾಡಿಕೊಡುವುದು ಹೀಗೆ; “ಸ್ವಾತಂತ್ರ್ಯದ ಕುದಿ ಹೇಗಿದ್ದಿರಬಹುದು ಎಂದು ನಮಗೆ ಗೊತ್ತು ಮಾಡಿಕೊಡಲೋ ಎಂಬಂತೆ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಲಾಯಿತು. ದಬ್ಬಾಳಿಕೆ ಎಂದರೆ, ದೌರ್ಜನ್ಯವೆಂದರೆ, ಉಸಿರುಗಟ್ಟಿಸುವಿಕೆ ಎಂದರೆ ಅಂಚಿಗೆ ತಳ್ಳಲ್ಪಡುವುದೆಂದರೆ ಏನು? ಎನ್ನುವುದರ ತುಣುಕು ಅನುಭವವಾಯಿತು. ಅಷ್ಟು ಮಾತ್ರಕ್ಕೆ ನಾವು ಬೆಚ್ಚಿ ಬಿದ್ದಿದ್ದೆವು. ಪ್ರತಿರೋಧದ ಅಲೆ ಎದ್ದಿತ್ತು. ಹಾಗಿದ್ದಲ್ಲಿ ಆ ಸ್ವಾತಂತ್ರ್ಯ ಹೋರಾಟದ ಅನುಭವ ಹೇಗಿದ್ದಿರಬಹುದು ಎನ್ನುವುದನ್ನು ಕಣ್ಣಮುಂದೆ ತಂದುಕೊಳ್ಳಲು ಹಲವು ಬಾರಿ ಯತ್ನಿಸಿದೆ. ಈಗ ಅದಕ್ಕೆ ಉತ್ತರವೇನೋ ಎನ್ನುವಂತೆ ಸಾಯಿನಾಥ್‌ ಅವರು The Last Heroes — Foot Soldiers of Indian Freedom ಬರೆದು ಮುಂದಿಟ್ಟಿದ್ದಾರೆ”.

ಇನ್ನು ಮುಂದಿನ ಐದಾರು ವರ್ಷಗಳಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬರೂ, ಅಂದರೆ ಯಾರೊಬ್ಬರೂ ಬದುಕುಳಿದಿರುವುದಿಲ್ಲ. . ಈ ಕೃತಿಯಲ್ಲಿ ಕಾಣಿಸಿಕೊಂಡಿರುವವರ ಪೈಕಿ ಅತಿ ಕಿರಿಯರೆಂದರೆ 92 ವರ್ಷದವರು. ಹಾಗೂ ಹಿರಿಯರೆಂದರೆ ೧೦೪ ವರ್ಷದವರು. ಭಾರತದ ಹೊಸ ತಲೆಮಾರಿನ ಯುವ ಜನರಿಗೆ ಈ ಸ್ವಾತಂತ್ರ್ಯ ಯೋಧರನ್ನು ಎಂದೂ ಭೇಟಿಯಾಗಲು ಸಾಧ್ಯವಿಲ್ಲ. ನಾವು ಯಾರು, ಯಾವ ಕಾರಣಕ್ಕಾಗಿ ಹೋರಾಟ ಮಾಡಿದೆವು ಎಂದು ಅವರೇ ಖುದ್ದಾಗಿ ಹೇಳಲು ಸಿಗುವುದಿಲ್ಲ. ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ ಈ ಪುಸ್ತಕದ ಒಂದು ಅಧ್ಯಾಯವಾದ ಜನಪರ ಹೋರಾಟಗಳ ಜೀವಾಳವಾಗಿದ್ದ ತಮಿಳು ನಾಡಿನ ಎನ್‌. ಶಂಕರಯ್ಯ ಕಾಲದ ಅಧ್ಯಾಯದಲ್ಲಿ ಸೇರಿಹೋಗಿದ್ದಾರೆ. ಈ ಕೃತಿಯಲ್ಲಿ ಕಾಣುವ ಬರಹಗಳಲ್ಲಿರುವ ಯೋಧರುಗಳಿಗೆ ಹಣವಲ್ಲ. ಮನ್ನಣೆ ಮುಖ್ಯವಾಗಿತ್ತು. ಹಾಗೆಯೇ ಸ್ವಾತಂತ್ರ್ಯ ಮತ್ತು ಬಿಡುಗಡೆಗಾಗಿ ನಡೆದ ಹೋರಾಟದಲ್ಲಿ ಈ ಸಾಮಾನ್ಯರನ್ನು ಗುರುತಿಸುವುದು ಕೂಡ ಅಷ್ಟೇ ಮುಖ್ಯವಾಗಿತ್ತು.

ಅಜಾದಿ ಕ್ ಅಮೃತ್‌ ಮಹೋತ್ಸವ್‌ ಅಬ್ಬರದಲ್ಲಿ ಹೆಸರಾಗದೆ ಹೋದವರು ಎಷ್ಟೋ ಮಂದಿ. ಈ ಕೃತಿಯಲ್ಲಿನ 16 ಚಿತ್ರಣಗಳು ನಾವು ಅಂದುಕೊಂಡಿರುವ ಸ್ವಾತಂತ್ರ್ಯ ಹೋರಾಟಕ್ಕೆ ಬೇರೆಯದೇ ಅನುಭವ ಪ್ರಪಂಚವನ್ನು ಸೇರಿಸುತ್ತದೆ. ಸಾಯಿನಾಥ್‌ ಅವರಿಗಿರುವ ಅಪಾರ ಓದುಗರ ಕಪಾಟಿಗೆ ಇದು ನಿಜಕ್ಕೂ ಮಹತ್ವದ ಸೇರ್ಪಡೆ.

Tags:    

Similar News