THE FEDERAL INTERVIEW | ʻಮೋದಿ ಅಲೆʼಯ ಭ್ರಮೆ ಕಳಚಿದೆ; 2019ರ ಸಮೂಹಸನ್ನಿ ಕಾಣಿಸುತ್ತಿಲ್ಲ: ಸೌಮ್ಯ ರೆಡ್ಡಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸೌಮ್ಯ ರೆಡ್ಡಿ, ಪ್ರಸಕ್ತ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ. 2018 ರಿಂದ 2023 ರವರೆಗೆ ವಿಧಾನ ಸಭೆಯಲ್ಲಿ ಜಯನಗರ ವಿಧಾನ ಕ್ಷೇತ್ರವನ್ನು ಪ್ರತಿನಿಧಿಸಿದವರು. 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತೀರಾ ಅಲ್ಪ ಮತಗಳ ಅಂತರದಿಂದ ಸೋಲು ಕಂಡವರು.;

Update: 2024-04-23 12:17 GMT

“ಮಾಧ್ಯಮಗಳು ದೇಶದ ಮತದಾರರನ್ನು ಲಘುವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಮೋದಿ ವರ್ಚಸ್ಸಿನಲ್ಲಿ, ಹಿಂದುತ್ವದ ಅಲೆಯಲ್ಲಿ, ಮೋದಿಯ ಹುಸಿ ಭರವಸೆಗಳಿಗೆ ಮತದಾರ ಮರುಳಾಗಿ ಬಿಡುತ್ತಾನೆ, ಒಂದು ರೀತಿಯ ಸಾಮೂಹಿಕ ಸನ್ನಿ ಮತದಾರರನ್ನು ಭ್ರಮಾಲೋಕಕ್ಕೆ ಕೊಂಡೊಯ್ಯುತ್ತಿದೆ, ಎಲ್ಲರೂ ಬಿಜೆಪಿಯತ್ತಲೇ ವಾಲುತ್ತಿದ್ದಾರೆ ಎಂಬ ನಿಮ್ಮ ಭ್ರಮೆ ಇದೆಯಲ್ಲ, ಅದೆಕ್ಕೆಲ್ಲ ಜೂನ್‌ ನಾಲ್ಕರಂದು ಉತ್ತರ ದೊರಕಲಿದೆ”… ಎನ್ನುತ್ತಲೇ, ಮಾಧ್ಯಮಗಳನ್ನು ತಮ್ಮ ಮಾತುಗಳಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಸೌಮ್ಯವಾಗಿಯೇ ತಿವಿಯುತ್ತಾರೆ.

ಸೌಮ್ಯ ರೆಡ್ಡಿ ಅವರು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳು. ಸೌಮ್ಯ ರೆಡ್ಡಿ ಅವರು ಪ್ರಸಕ್ತ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದು, ನ್ಯೂಯಾರ್ಕ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಕಲಿತವರು. 2018 ರಿಂದ 2023 ರವರೆಗೆ ವಿಧಾನ ಸಭೆಯಲ್ಲಿ ಜಯನಗರ ವಿಧಾನ ಕ್ಷೇತ್ರವನ್ನು ಪ್ರತಿನಿಧಿಸಿದವರು. 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತೀರಾ ಅಲ್ಪ ಮತಗಳ ಅಂತರದಿಂದ ಸೋಲನ್ನಪ್ಪಿದವರು.

ಸೌಮ್ಯ ರೆಡ್ಡಿ ಕಳೆದ ವಿಧಾನ ಸಭೆಯಲ್ಲಿ ಕೇವಲ 16 ಮತಗಳ ಅಂತರದಿಂದ ಸೋತಿದ್ದು ತಾಂತ್ರಿಕ ಕಾರಣಗಳಿಂದ ಎಂದೇ ಜನರ ಭಾವನೆ. ʻನಾನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚುಕಡಿಮೆ ಗೆದ್ದೇ ಬಿಟ್ಟಿದ್ದೆ. ಆದರೆ ತಿರಸ್ಕೃತ ಮತಗಳ ಲೆಕ್ಕಾಚಾರದಲ್ಲಿ ಹೆಚ್ಚು ಕಡಿಮೆಯಾಯಿತು. ಆ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದೆ”ಅದರ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ. ಆದರೆ ನಾನು ನ್ಯಾಯಾಲಯದಲ್ಲಿ ಗೆದ್ದರೂ, ನಾನು ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಳ್ಳುತ್ತೇನೆ. ಈ ಕ್ಷೇತ್ರದ ಜನ ಲೋಕಸಭೆಯಲ್ಲಿ ನಾನು ಕರ್ನಾಟಕದ ಸಮಸ್ಯೆಗಳನ್ನು ಎತ್ತಬೇಕು. ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು. ಕೇಂದ್ರದ ಕರ್ನಾಟಕ ವಿರುದ್ಧದ ನಿಲುವನ್ನು ಪ್ರತಿಭಟಿಸಬೇಕೆಂದು ಬಯಸುತ್ತಾರೆ. ಹಾಗಾಗಿ ನನ್ನ ಆಯ್ಕೆ ಲೋಕಸಭೆಯೇ” ಎಂದು ಅವರು ಸ್ಪಷ್ಟವಾಗಿ ಹೇಳುತಾರೆ.

“ನನ್ನನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರ ಆಶೀರ್ವದಿಸಿದರೆ ಎರಡು ರೀತಿಯಲ್ಲಿ ದಾಖಲೆಯಾಗುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲನೇಯದು ಒಂಭತ್ತನೇ ಬಾರಿ ಕ್ಷೇತ್ರದ ಮೇಲಿನ ಬಿಜೆಪಿಯ ಸಾರ್ವಭೌಮತ್ವವನ್ನು ಕೊನೆಗೊಳಿಸುವುದು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ಮೊದಲ ಮಹಿಳಾ ಸಂಸದೆಯಾಗುವುದು. ಕಳೆದ 73 ವರ್ಷಗಳಲ್ಲಿ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಒಬ್ಬೇಒಬ್ಬ ಮಹಿಳಾ ಅಭ್ಯರ್ಥಿ ಕೂಡ ಇದುವರೆಗೆ ಆಯ್ಕೆಯಾಗಿಲ್ಲ. ಈಗೊಂದು ಬದಲಾವಣೆ ಬೇಕಿದೆ. ಅದು ಆಗುತ್ತದೆ. ಜೂನ್‌ 4ರವರೆಗೆ ಕಾಯುವುದು ನಿಮಗೂ ಅನಿವಾರ್ಯ. ನನಗೂ ಕೂಡ” ಎಂದು ಅವರು ಮುಗುಳ್ನಗುತಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಲಕ್ಕಸಂದ್ರದಲ್ಲಿರುವ ಸೌಮ್ಯ ರೆಡ್ಡಿ ಅವರ ಮನೆ ಕಳೆದ ಕೆಲವು ದಿನಗಳಿಂದ ಆಕೆಯ ʼಎಲೆಕ್ಷನ್‌ ವಾರ್‌ ರೂಮ್‌ʼ ಆಗಿ ಪರಿವರ್ತನೆಗೊಂಡಿದೆ. ಹೊರಗಿನ ಕೋಣೆಯಲ್ಲಿ ಸೌಮ್ಯ ತಂದೆ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣೆಯ ತಂತ್ರಗಳನ್ನು ಚರ್ಚಿಸುತ್ತಿದ್ದರೆ, ಮಧ್ಯದ ಹಜಾರ ಪುಟ್ಟ ಸ್ಟೂಡಿಯೋ ಆಗಿ ಪರಿವರ್ತನೆಯಾಗಿದೆ. ಆಕೆಯನ್ನು ಸಂದರ್ಶಿಸುವವರಿಗೆಂದು ಎಲ್ಲ ಆಧುನಿಕ ವ್ಯವಸ್ಥೆಗಳೂ ಅಲ್ಲಿ ಲಭ್ಯ. ಸೋಮವಾರ ಬೆಳಿಗ್ಗೆ ತುಸು ತಡವಾಗಿ ನೇರವಾಗಿ ಲಕ್ಕಸಂದ್ರದ ತಮ್ಮ ನಿವಾಸಕ್ಕೆ ಬಂದ ಸೌಮ್ಯ ತಡವಾದದ್ದಕ್ಕೆ ಕ್ಷಮೆ ಕೋರಿ, ʼದ ಫೆಡರಲ್-ಕರ್ನಾಟಕʼದ ಜತೆಗೆ ಮಾತುಕತೆಗೆ ತೊಡಗಿದಾಗ, ಅವರ ಮುಖದಲ್ಲಿ ಪ್ರಚಾರದ ಆಯಾಸ ಎದ್ದು ಕಾಣುತ್ತಿತ್ತು. ಮಧ್ಯಮಧ್ಯ ಕೆಮ್ಮುತ್ತಾ, ನೀರು ಗುಟುಕರಿಸುತ್ತಾ, ಸಾವರಿಸಿಕೊಂಡು ಆವರು ಆಡಿದ ಮಾತುಗಳಿವು...

ಸಂದರ್ಶನದ ಆಯ್ದ ಭಾಗ

ಬಿಜೆಪಿಯ ಭದ್ರಕೋಟೆ ಎಂದೇ ಭಾವಿಸಲಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ತೆಗೆದುಕೊಳ್ಳಲು ಕಾರಣ?

ರಾಜಕೀಯ ಕ್ಷೇತ್ರದ ಘಟಾನುಘಟಿ ರಾಜಕಾರಣಿಗಳು ಪ್ರತಿನಿಧಿಸಿದ ಕ್ಷೇತ್ರವಿದು. ನಾನು ಪ್ರತಿನಿಧಿಸಿದ ಜಯನಗರ ಕ್ಷೇತ್ರ ಕೂಡ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲೋಕಸಭಾ ಅಭ್ಯರ್ಥಿ ದೆಹಲಿಯಲ್ಲಿ ಕುಳಿತು, ಕ್ಷೇತ್ರವನ್ನು ನಿರ್ಲಕ್ಷಿಸಿದ ಕಾರಣ, ನನ್ನ ಕ್ಷೇತ್ರವೂ ಸೇರಿದಂತೆ ಈ ಲೋಕಸಭಾ ಕ್ಷೇತ್ರದಡಿ ಬರುವ ವಿಧಾನ ಸಭಾ ಕ್ಷೇತ್ರಗಳ ಜನರಿಗೆ ನ್ಯಾಯ ದೊರಕಿಸಲು, ಹಾಗೂ ಅವರ ಕಷ್ಟಕ್ಕೆ ಸ್ಪಂದಿಸಲು ನಾನು ಸ್ಪರ್ಧಿಸುವುದು ಅನಿವಾರ್ಯವಾಯಿತು. ಈಗಿರುವ ಸಂಸದರು ರಾಜ್ಯದ ಕಷ್ಟ ಸುಖಗಳಿಗೆ ಸ್ಪಂದಿಸಿ, ರಾಜ್ಯಕ್ಕಾಗಿ ಧ್ವನಿ ಎತ್ತಿಲ್ಲ. ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತವಾದ ತೆರಿಗೆ ಪಾಲನ್ನು ಕೇಳದೆ, ಇಡೀ ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತಂದರು. ಬೆಂಗಳೂರಿಗೆ ಬಂದಾಗಲೆಲ್ಲ ಅವರು ಮಾಡಿದ್ದು, ಸಮುದಾಯಗಳ ನಡುವೆ ಬಿರುಕು ಉಂಟುಮಾಡುವಂಥ ಕೆಲಸಗಳು ಮಾತ್ರ. ಹಾಗಾಗಿ ಇಡೀ ಕ್ಷೇತ್ರ ಈಗ ನನ್ನತ್ತ ನೋಡುತ್ತಿದೆ.

ಜೊತೆಗೆ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಕಣಕ್ಕೆ ಇಳಿಸಿದೆ. ಈ ಕ್ಷೇತ್ರದ ಐದು ವಿಧಾನ ಸಭಾ ಕ್ಷೇತ್ರಗಳ ಪ್ರತಿನಿಧಿಗಳು ಕಾಂಗ್ರೆಸ್‌ ನವರಾದ್ದರಿಂದ ಅವರು. ʼನೀನು ಹೆದರಬೇಡ, ಇದು ನಿನ್ನೊಬ್ಬಳ ಹೋರಾಟವಲ್ಲ. ನಮ್ಮೆಲ್ಲರ ಹೋರಾಟʼ ಎಂದು ತಾವೇ ಅಭ್ಯರ್ಥಿಗಳೆಂದು ದುಡಿಯುತ್ತಿದ್ದಾರೆ. ಅವರ ನಂಬಿಕೆ ನನಗೆ ಅದೆಷ್ಟು ಬಲತಂದಿದೆಯೆಂದರೆ, ನನ್ನ ಉತ್ಸಾಹ ದುಪ್ಪಟ್ಟಾಗಿದೆ. ನಾನು ಗೆದ್ದು ಕ್ಷೇತ್ರದ ಜನತೆಗೆ, ಕರ್ನಾಟಕದ ಜನತೆಗೆ, ಕನ್ನಡ ನಾಡಿಗೆ ನ್ಯಾಯ ದೊರಕಿಸುತ್ತೇನೆ ಎಂಬ ನಂಬಿಕೆ ನನಗಿದೆ.

ಕಾಂಗ್ರೆಸ್‌ ನ ಗ್ಯಾರಂಟಿ ಯೋಜನೆಗಳು ಈ ಚುನಾವಣೆಯಲ್ಲಿ ನೀವು ನಿರೀಕ್ಷಿಸಿದ ಪರಿಣಾಮ ಬೀರುತ್ತದೆ ಎಂದು ನಿಮಗನ್ನಿಸುತ್ತದೆಯೇ?

ಯಾಕಿಲ್ಲ? ಬೆಂಗಳೂರು ಮತ್ತಿತರ ಪ್ರದೇಶಗಳಲ್ಲಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅವರಿಗೆ ಬರುವ ಸಂಬಳ ಕೇವಲ ಹತ್ತು ಸಾವಿರ ರೂಪಾಯಿ. ಅದರಲ್ಲಿ ಅವರು ಒಂದೂವರೆ ಸಾವಿರ ರೂಪಾಯಿ ಬಸ್‌ ಪಾಸ್‌ ಗೆ ತೆರಬೇಕಿತ್ತು. ಈಗ ಅದನ್ನು ಉಳಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತಿದ್ದಾರೆ. ಒಬ್ಬ ಮಹಿಳೆ ತನ್ನ ಮಗನನ್ನು ಓದಿಸಲು ಈ ಉಳಿಸಿದ ಹಣವನ್ನು ಬಳಸಿದ್ದಾಳೆ ಎಂದರೆ ಲೆಕ್ಕ ಹಾಕಿ. ಹೆಣ್ಣು ಮಕ್ಕಳು ಸ್ವಾವಲಂಬಿಯಾಗಬಾರದೇ? ಆ ಹಣಕ್ಕೂ ಅವರು ಇನ್ನೊಬ್ಬರ ಮುಂದೆ ಕೈ ಚಾಚಬೇಕೆ? ಮಹಿಳೆಯರ ಸಬಲೀಕರಣ ಕೇವಲ ಭಾಷಣದ ವಿಷಯವಾಗದೇ, ಇಂದು ನಿಜಾರ್ಥದಲ್ಲಿ ಜಾರಿಯಾಗಿದೆ. ಒಂದರ್ಥದಲ್ಲಿ ಎಲ್ಲ ಗ್ಯಾರಂಟೀಗಳು ಮಹಿಳೆಯರ ಸಬಲೀಕರಣಕ್ಕೆ ದಾರಿಯಾಗಿದೆ. ಇದು ಬಿಜೆಪಿಗೆ ಬೇಕಿಲ್ಲವೇ? ಅವರು ಎಂದೂ ಸ್ವಾವಲಂಬಿಗಳಾಗದೇ ಪರಾವಲಂಬಿಗಳಾಗಿರಬೇಕೆ. ಈ ಹೆಣ್ಣು ಮಕ್ಕಳ ಆಶೀರ್ವಾದ ಕಾಂಗ್ರೆಸ್‌ ಮೇಲಿದೆ. ಆ ಹೆಣ್ಣು ಮಕ್ಕಳೆಲ್ಲ, ಹೆಣ್ಣಾಗಿ ಅವರ ಪರವಾಗಿ ಸಂಸತ್‌ ನಲ್ಲಿ ಅವರ ಪರವಾಗಿ ವಾದಿಸುವ ವಕೀಲೆಯಾಗಿ ನನ್ನನ್ನು ನೋಡುತ್ತಾರೆ ಎಂಬ ನಂಬಿಕೆ ನನಗಿದೆ. ನಿಮಗೂ ಇರಬಹುದೆಂಬ ನಂಬಿಕೆ ನನ್ನದು.

ನೀವು ಸಂಸದೆಯಾದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರು ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?

ನಾನು ಸಂಸದೆಯಾದರೆ, ನಾನು ಇಡೀ ಬೆಂಗಳೂರು ನಗರ ನನ್ನದೆಂದುಕೊಂಡು ದುಡಿಯುತ್ತೇನೆ. ನಾನು ಪರಿಸರದ ಬಗ್ಗೆ ಕಾಳಜಿ ಇರುವ ಹೆಣ್ಣುಮಗಳು. ನಗರದ ಸಂಚಾರದ ದಟ್ಟಣೆ ಅದರಿಂದ ನಾಗರಿಕರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಮಾತನಾಡುವವರೇ ಇಲ್ಲವಾಗಿದ್ದಾರೆ. ಹಾಗಾಗಿ, ಈ ದಟ್ಟಣೆಯನ್ನು ಕಡಿಮೆ ಮಾಡುವ ಮೆಟ್ರೋ ಸಮೂಹ ಸೇರಿ, ಎಲ್ಲ ಸಾರಿಗೆ ಸಾಧ್ಯತೆಗಳನ್ನು ನಾನು ಪರಿಶೀಲಸಿ, ಜಾರಿಗೆ ತರುವ ಪ್ರಯತ್ನ ಮಾಡುತ್ತೇನೆ. ನಾನು ಸಂಸದೆಯಾಗಿ ಆಯ್ಕೆಯಾದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾವ ಯಾವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬುದರ ಹಸಿರು ನಕಾಶೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ಸಂಸದೆಯಾದರೆ, ಬೆಂಗಳೂರು ಉದ್ಯಾನ ನಗರಿ ಎಂಬುದು ನಿಜವೆಂಬುದನ್ನು ರುಜುವಾತು ಮಾಡುತ್ತೇನೆ. ಹಸಿರು ಬೆಂಗಳೂರು ಕಟ್ಟಲು ಕಟಿಬದ್ಧವಾಗಿದ್ದೇನೆ.

ಮೇಕೆದಾಟು ವಿವಾದವನ್ನು ಕಾನೂನುಗಳಡಿಯಲ್ಲಿ ಸೆಣಸಿ, ಒಕ್ಕೂಟ ವ್ಯವಸ್ಥೆಯ ನ್ಯಾಯದಡಿಯಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ. ಈ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ತುಸುವಾದರೂ ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಇದಕ್ಕೆಲ್ಲ ಕೇಂದ್ರ ಸರ್ಕಾರದ ನೆರವು ಬೇಕೇ ಬೇಕು. ಅದಕ್ಕಾಗಿ ಸಂಸತ್‌ ನಲ್ಲಿ ಪ್ರಶ್ನೆಗಳನ್ನೆತ್ತಿ, ಕರ್ನಾಟಕದ ನ್ಯಾಯಯುತ ಪಾಲನ್ನು ಕೇಳಲು ಯಾವುದೇ ರೀತಿಯಲ್ಲೂ ಹಿಂಜರಿಯುವುದಿಲ್ಲ.

ಸಾಮಾನ್ಯವಾಗಿ ಒಮ್ಮೆ ಆಯ್ಕೆಯಾಗಿ ಸಂಸದರಾದವರಿಗೆ ಆಡಳಿತ ವಿರೋಧಿ ಅಲೆ ಎದುರಾಗುತ್ತದೆ. ಅದು ನಿಮ್ಮ ವಿರೋಧಿ ಅಭ್ಯರ್ಥಿಗೂ ಅನ್ವಯಿಸುತ್ತದೆ ಎಂದು ನಿಮಗನ್ನಿಸುತ್ತದೆಯೇ?

ನಾನು ಸದ್ಯದ ಸಂಸದರಿಗೆ ಆಡಳಿತ ವಿರೋಧಿ ಅಲೆ ಇದೆಯೇ? ಇಲ್ಲವೇ? ಎಂಬ ಚರ್ಚೆಗೆ ಸಿದ್ದಳಿಲ್ಲ. ಆದರೆ. ಕೋವಿಡ್‌ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ, ಅವರು ಬಿಡುಗಡೆ ಮಾಡಿರುವ ರಿಪೋರ್ಟ್‌ ಕಾರ್ಡ್ ನಲ್ಲಿರುವ ಸುಳ್ಳುಗಳ ಬಗ್ಗೆ ಜನರಿಗೆ ತಿಳಿದಿದೆ. ಗುರು ರಾಘವೇಂದ್ರ ಕೋಆಪರೇಟೀವ್‌ ಸೊಸೈಟಿ ವಿಷಯದಲ್ಲಿ, ನಾವು ಪ್ರಶ್ನೆ ಕೇಳಿ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸುವಂತೆ ಕೇಳಿದರೂ, ಆಗ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಮಾಡಲಿಲ್ಲ. ನಮ್ಮ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅದನ್ನು ಸಿಬಿಐಗೆ ವಹಿಸಲಾಯಿತು. ಆದರೆ ಮೂರು ತಿಂಗಳಾದರೂ ಸಿಬಿಐನಿಂದ ಯಾವುದೇ ಕ್ರಮವಿಲ್ಲ. ಕೇಂದ್ರ ಸರ್ಕಾರ ಯಾರನ್ನು ಕಾಪಾಡುತ್ತಿದೆ. ಸಂಸದರು ಯಾರ ಹಿತರಕ್ಷಣೆ ಮಾಡುತ್ತಿದ್ದಾರೆ. ಠೇವಣೀದಾರರಾದವರು ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಕಣ್ವ ಸೌಹಾರ್ದ ಕೋಆಪರೇಟೀವ್‌ ಸೊಸೈಟಿ, ಶ್ರೀ ವಸಿಷ್ಠ ಕ್ರೆಡಿಟ್‌ ಕೋಆಪರೇಟೀವ್‌ ಸೊಸೈಟಿಯ ಠೇವಣೀದಾರರ ಕಥೆಯೂ ಇದೆ. ಯಾವುದೂ ತನಿಖೆ ಇಲ್ಲ. ಎಷ್ಟೋ ಮಂದಿ ಠೇವಣೀದಾರರು ದುಃಖದಲ್ಲಿದ್ದಾರೆ. ಇಂಥವೆಲ್ಲವನ್ನು ಜನರು ಕ್ಷಮಿಸುತ್ತಾರೆಂಬ ನಂಬಿಕೆ ನನಗಿಲ್ಲ.

Tags:    

Similar News