ರಾಜ್ಯದ ಪ್ರಮುಖ ಚಲನಚಿತ್ರ ಇನ್‌ಸ್ಟಿಟೂಟ್ ತೆರೆಮರೆಗೆ
ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರ ಸಂಸ್ಥೆಯಾಗಿದ್ದ, ರಾಜ್ಯದ ಹೆಮ್ಮೆಯ (ಜಿಎಫ್ ಟಿಐ) ರಾಜ್ಯ ಸರ್ಕಾರದ ಸತತ ನಿರ್ಲಕ್ಷ್ಯದಿಂದಾಗಿ ತನ್ನ ವೈಭವವನ್ನು ಕಳೆದುಕೊಂಡು, ಮುಚ್ಚುವ ಹಂತ ತಲುಪಿದೆ.;
ಬೆಂಗಳೂರಿನ ʼಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆʼಯಲ್ಲಿ ಸಿನಿಮಾಟೋಗ್ರಫಿ ಓದುತ್ತಿರುವ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ಶಶಾಂಕ್ ಕೆ (ಹೆಸರು ಬದಲಿಸಲಾಗಿದೆ) ಖಿನ್ನರಾಗಿದ್ದಾರೆ. ಗಿರೀಶ್ ಕಾಸರವಳ್ಳಿಯವರ ತಂಡ ಸೇರಬೇಕೆಂಬ ಅವರ ಕನಸು ನುಚ್ಚುನೂರಾಗಿದೆ. ಅವರನ್ನು ಫೆಡರಲ್ ಭೇಟಿಯಾದಾಗ, ಭರವಸೆ ಕಳೆದುಕೊಂಡಿದ್ದ ಅವರು ಕೋರ್ಸ್ ತ್ಯಜಿಸಲು ನಿರ್ಧರಿಸಿದ್ದರು. ಚಲನಚಿತ್ರ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ವೈಫಲ್ಯ ಇದಕ್ಕೆ ಕಾರಣ.
ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್‌ನ ಎರಡು ವರ್ಷಗಳ ಕೋರ್ಸ್ ನಲ್ಲಿ ಕಲಿಯುತ್ತಿರುವ 54ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ; ಅಗತ್ಯ ಮೂಲಸೌಕರ್ಯ ಮತ್ತು ಅಧ್ಯಾಪಕರ ಅನುಪಸ್ಥಿತಿಯಿಂದ ಗುಣಮಟ್ಟದ ಚಲನಚಿತ್ರ ಶಿಕ್ಷಣವನ್ನು ನೀಡುವಲ್ಲಿ ಸಂಸ್ಥೆ ವಿಫಲವಾಗಿದೆ. ವಿದ್ಯಾರ್ಥಿಗಳ ಪ್ರಕಾರ, ʻಜಿಎಫ್‌ಟಿಐ ದೇಶದ ಪ್ರಥಮ ಚಲನಚಿತ್ರ ಸಂಸ್ಥೆಗಳಲ್ಲಿ ಒಂದು. ಗೋವಿಂದ್ ನಿಹಲಾನಿ ಮತ್ತು ಆರ್ ಪ್ರಸಾದ್ ಅವರಂಥ ದಿಗ್ಗಜರನ್ನು ನೀಡಿದ್ದು, ಮುಚ್ಚುವ ಅಂಚಿನಲ್ಲಿದೆ. ಇದಕ್ಕೆ ಸರ್ಕಾರಗಳು ಜವಾಬ್ದಾರರುʼ.
ಅಧ್ಯಾಪಕರ ಕೊರತೆ: ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಮುಂದಾಗಿಲ್ಲ. ಇದರಿಂದ ಪ್ರಾಚಾರ್ಯ ಟಿ.ಜಿ. ರವಿಕಿರಣ್ ಮತ್ತು ಇನ್ನೊಬ್ಬ ಉಪ ಸಿಬ್ಬಂದಿ ಮಾತ್ರ ಇದ್ದಾರೆ. ʻನಾಲ್ವರು ಅತಿಥಿ ಉಪನ್ಯಾಸಕರ ಪೈಕಿ ಇಬ್ಬರು ಅಗತ್ಯವಿದ್ದಾಗ ಬರುತ್ತಾರೆʼ ಎಂದು ವಿದ್ಯಾರ್ಥಿನಿ ಭೂಮಿ ಹೇಳಿದರು. ʻರೆಕಾರ್ಡಿಂಗ್‌ಗಳನ್ನು ಸಂಪಾದಿಸಲು ಕಂಪ್ಯೂಟರ್ ಇಲ್ಲ; ಆಡಿಯೊ ಇಂಟರ್ಫೇಸ್ ಕಾರ್ಯನಿರ್ವಹಿಸುತ್ತಿಲ್ಲ. ಮಿಕ್ಸಿಂಗ್ ಸ್ಟುಡಿಯೋ ಕೂಡ ಇಲ್ಲ. ಹೆಚ್ಚಿನ ಫಿಲ್ಮ್ ಇನ್ಸ್ಟಿಟ್ಯೂಟ್ ಗಳು ಡಿಜಿಟಲ್‌ಗೆ ಬದಲಾಗಿರುವಾಗ, ಜಿಎಫ್‌ಟಿಐನಲ್ಲಿರುವುದು ಹಳೆಯ ಸ್ಟೂಡರ್ 24 ಚಾನೆಲ್ ಅನಲಾಗ್ ಮಿಕ್ಸರ್. ಮಲ್ಟಿ ಟ್ರ್ಯಾಕ್ ಆಡಿಯೊ ರೆಕಾರ್ಡರ್ ಬ್ಯಾಟರಿ ಇಲ್ಲʼ ಎಂದು ಹೇಳುತ್ತಾರೆ.
ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರ ಸಂಸ್ಥೆ:
ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ (ಎಸ್‌ಜೆಪಿ) ನ ಅಂಗವಾದ ಸಂಸ್ಥೆಯನ್ನು ಮೈಸೂರಿನ ದಿವಾನರಾದ ಸರ್ ಎಂ. ವಿಶ್ವೇಶ್ವರಯ್ಯ ಅವರ ನಿಧಿಯಿಂದ ಅಭಿವೃದ್ಧಿಪಡಿಸಲಾಗಿದೆ. 1943 ರಲ್ಲಿ ಪ್ರಾರಂಭ ಎಸ್‌ಜೆಪಿ, ದೇಶದ ಚಲನಚಿತ್ರ ಶಿಕ್ಷಣದ ಪ್ರವರ್ತಕ ಸಂಸ್ಥೆ ಮತ್ತು ಸಿನಿಮಾಟೋಗ್ರಫಿ ಹಾಗೂ ಸೌಂಡ್ ಇಂಜಿನಿಯರಿಂಗ್ ಶಿಕ್ಷಣ ನೀಡುತ್ತಿರುವ ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರ ಸಂಸ್ಥೆ. ಸೆಪ್ಟೆಂಬರ್ 1996 ರಲ್ಲಿ ಈ ಕೋರ್ಸ್‌ಗಳನ್ನು ಎಸ್ಜೆಪಿಯಿಂದ ಬೇರ್ಪಡಿಸಿ ಹೆಸರಘಟ್ಟದಲ್ಲಿ 25 ಎಕರೆ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿ.ಕೆ. ಮೂರ್ತಿ, ಗೋವಿಂದ್ ನಿಹಲಾನಿ, ಲಕ್ಷ್ಮೀನಾರಾಯಣ, ಆರ್.ಎನ್. ಕೆ. ಪ್ರಸಾದ್, ಎನ್.ವಿ. ಶ್ರೀನಿವಾಸ್, ಬಿ.ಎಸ್. ಬಸವರಾಜ್, ಎಸ್ ಕೃಷ್ಣ, ಸತ್ಯ ಹೆಗಡೆ ಮತ್ತು ಸಂತೋಷ್ ಕುಮಾರ್ ಪಾತಾಜೆ ಇದರ ಸೃಷ್ಟಿಗಳು. ಜಿಎಫ್ಟಿಐ ವಿದ್ಯಾರ್ಥಿ ಆರ್. ಪ್ರಸಾದ್, ವಿಶ್ವಸಂಸ್ಥೆಯಲ್ಲಿ ಸೌಂಡ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಖಾಸಗಿ ಚಲನಚಿತ್ರ ಸಂಸ್ಥೆಗಳಲ್ಲಿ ಓದಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಎಸ್ಜೆಪಿ ಮತ್ತು ಜಿಎಫ್ಟಿಐ ಆಸರೆಯಾಗಿದ್ದವು.
ಬದಲಾದ ಚಿತ್ರಣ:
ʻಒಂದು ಕಾಲದಲ್ಲಿ ರಾಜ್ಯದ ಹೆಮ್ಮೆಯಾಗಿದ್ದ ಜಿಎಫ್ಟಿಐ, ಅಧಿಕಾರಶಾಹಿ ಹಸ್ತಕ್ಷೇಪದಿಂದ ತನ್ನ ಸೊಗಸನ್ನು ಕಳೆದುಕೊಂಡಿದೆ. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ (ಡಿಟಿಇ)ವು ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆಯ ಮಾನದಂಡಗಳನ್ನು ಕಡಿಮೆ ಮಾಡಿದ್ದರಿಂದ, ಚಲನಚಿತ್ರ ಕ್ಷೇತ್ರದಲ್ಲಿ ಗುರುತನ್ನು ಕಳೆದುಕೊಂಡಿದೆ; ಜೊತೆಗೆ, ಪಠ್ಯಕ್ರಮವನ್ನು ಬದಲಿಸಲಾಗಿದೆʼ ಎಂದು ಖ್ಯಾತ ಸಿನಿಮಾಟೋಗ್ರಾಫರ್ ಬಿ.ಎಸ್. ಬಸವರಾಜ್ ವಿಷಾದಿಸಿದರು. ಪಠ್ಯಕ್ರಮ ಕರಡು ರಚನಾ ಸಮಿತಿಯು ಪಠ್ಯಕ್ರಮವನ್ನು ಬದಲಿಸಿದೆ; ಚಲನಚಿತ್ರ ವಿಮರ್ಶೆ, ಧ್ವನಿ ಮುದ್ರಣದ ಪರಿಚಯ, ದೃಶ್ಯ ವಿನ್ಯಾಸ ಮತ್ತು ಸಂಯೋಜನೆಯಂತಹ ಪ್ರಮುಖ ವಿಷಯಗಳನ್ನು ಕೈಬಿಟ್ಟಿದ್ದು, ಅವುಗಳನ್ನು ಎಂಜಿನಿಯರಿಂಗ್ ವಿಷಯಗಳಿಂದ ಬದಲಿಸಿದೆ.
ವಿದ್ಯಾರ್ಥಿಗಳಿಂದ ಪ್ರತಿಭಟನೆ: ಸಲಕರಣೆಗಳ ಕೊರತೆ ಹಾಗೂ ಆಡಳಿತಶಾಹಿಯಿಂದ ಬೇಸತ್ತ ವಿದ್ಯಾರ್ಥಿಗಳು ಏಪ್ರಿಲ್ 2016 ರಲ್ಲಿ ಪ್ರತಿಭಟನೆ ನಡೆಸಿದರು. ಪಠ್ಯಕ್ರಮವನ್ನು ಪರಿಷ್ಕರಿಸಲು ಒತ್ತಾಯಿಸಿದರು. ನ್ಯಾಯ ಕೋರಿ ಹೈಕೋರ್ಟ್ ಕದ ತಟ್ಟಿದರು. ಬೇಡಿಕೆಗಳನ್ನು ಈಡೇರಿಸುವಂತೆ ಡಿಟಿಇಗೆ ನ್ಯಾಯಾಲಯ ಸೂಚಿಸಿತು. ʻಆದರೆ, ಡಿಟಿಇ ಏನನ್ನೂ ಮಾಡಿಲ್ಲ; ಬದಲಾಗಿ ಇಂಥ ಪ್ರಮುಖ ಚಲನಚಿತ್ರ ಸಂಸ್ಥೆಯನ್ನು ಪಾಲಿಟೆಕ್ನಿಕ್ ಮಟ್ಟಕ್ಕೆ ಇಳಿಸಿದೆʼ ಎಂದು ಸೌಂಡ್ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಹೇಳಿದರು.
ಗಿರೀಶ್ ಕಾಸರವಳ್ಳಿ ಜಿಎಫ್‌ಟಿಐಯನ್ನು ಟೀಕಿಸಿದ್ದಲ್ಲದೆ, ʻಪಠ್ಯಕ್ರಮ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿಲ್ಲʼ ಎಂದಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಚಿತ್ರರಂಗದ ಗಣ್ಯರು ಮುಷ್ಕರಕ್ಕೆ ಬೆಂಬಲ ನೀಡಿದರು. ಸರ್ಕಾರ ಐದು ತಿಂಗಳ ಪ್ರತಿಭಟನೆ ನಂತರವೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಏತನ್ಮಧ್ಯೆ, ಕರ್ನಾಟಕ ಮತ್ತು ಕೇರಳ ಚಲನಚಿತ್ರೋದ್ಯಮ ಮತ್ತು ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ನೀಡಿದರು. ಮಲಯಾಳಂ ಚಿತ್ರರಂಗದ ಅಜಿತ್ ಕುಮಾರ್ ಮತ್ತು ಕೆ ವಿ ಸುಬ್ರಮಣಿಯನ್, ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ಟಿಐಐ) ಹಳೆಯ ವಿದ್ಯಾರ್ಥಿಗಳಾದ ರಾಜೀವ್ ರವಿ, ಗಿರೀಶ್ ಕಾಸರವಳ್ಳಿ, ಖ್ಯಾತ ಸಿನಿಮಾಟೋಗ್ರಾಫರ್ ಜಿ.ಎಸ್. ಭಾಸ್ಕರ್ ಅವರು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿದರು.
ಆನಂತರ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನೇತೃತ್ವದ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಜಿಎಫ್ಟಿಐ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಯಿತು. ಆದರೆ, ತಾಂತ್ರಿಕ ಶಿಕ್ಷಣ ಇಲಾಖೆ (ಡಿಟಿಇ) ಜಿಎಫ್‌ಟಿಐ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಬಯಸದೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿಯಮಗಳನ್ವಯ ವಿದ್ಯಾರ್ಥಿಗಳ ಅರ್ಹತೆಯನ್ನು ಕಡಿಮೆಗೊಳಿಸಿದ್ದಾಗಿ ಸಮರ್ಥಿಸಿಕೊಂಡಿತು. ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ ನಂತರ ಉಳಿದ ಸೀಟುಗಳನ್ನು ದೇಶದ ಇತರ ಭಾಗಗಳ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿತು. ಇದು ಸಂಸ್ಥೆಯ ಗುಣಮಟ್ಟದ ಮತ್ತಷ್ಟು ಅವನತಿಗೆ ಕಾರಣವಾಯಿತು. ಗಿರೀಶ್ ಕಾಸರವಳ್ಳಿ ಸೇರಿದಂತೆ ಚಿತ್ರರಂಗದ ಗಣ್ಯರು ಕೇಳುವ ಪ್ರಶ್ನೆ ಸರಳವಾಗಿದೆ: ʻ ತರಬೇತಿ ನೀಡಲು ಪೂರ್ಣ ಪ್ರಮಾಣದ ಚಲನಚಿತ್ರ ಸಂಸ್ಥೆ ಇಲ್ಲದಿರುವಾಗ, ಕನ್ನಡ ಚಿತ್ರರಂಗದ ಗುಣಮಟ್ಟವನ್ನು ಸುಧಾರಿಸಲು ಹೇಗೆ ಸಾಧ್ಯ?ʼ. ಇದಕ್ಕೆ ಸಂಬಂಧಪಟ್ಟವರಿಂದ ಉತ್ತರವಿಲ್ಲ.
ʻನನ್ನ ಮಗನ ಪ್ರಾಜೆಕ್ಟ್ ಗೆ ಆಡಿಯೊ ಮತ್ತು ವಿಡಿಯೋ ಉಪಕರಣಗಳನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ. ವಿದ್ಯಾರ್ಥಿಗಳು ಚಲನಚಿತ್ರ ನಿರ್ಮಾಣ ಕಂಪನಿಗಳಲ್ಲಿ ಮೂರು ತಿಂಗಳ ಇಂಟರ್ನ್‌ಶಿಪ್ ಮಾಡಲು ಅವಕಾಶವಿದೆ. ಆದರೆ, ಪ್ರಾಂಶುಪಾಲರು ಇದಕ್ಕೆ ವಿರುದ್ಧವಾಗಿದ್ದಾರೆ. ವೆಚ್ಚವನ್ನು ಪೂರೈಸಲಾಗದ ವಿದ್ಯಾರ್ಥಿಗಳು ಮಧ್ಯದಲ್ಲೇ ಬಿಟ್ಟು ಹೋಗುತ್ತಿದ್ದಾರೆʼ ಎಂದು ಪೋಷಕರೊಬ್ಬರು ತಿಳಿಸಿದರು. ʻನಾವು ಕ್ಯಾಂಪಸ್‌ಗೆ ಹೋಗಲು ಹೆಸರಘಟ್ಟ ಮುಖ್ಯ ರಸ್ತೆಯಿಂದ ಐದು ಕಿಮೀ ನಡೆಯಬೇಕು. ವಿದ್ಯಾರ್ಥಿಗಳ ಸಂಚಾರಕ್ಕೆಂದು ಸರಕಾರ ಎರಡು ಮಿನಿ ಬಸ್ ಒದಗಿಸಿದೆ. ಅವು ಸಂಸ್ಥೆಯ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆʼ ಎಂದು ವಿದ್ಯಾರ್ಥಿಯೊಬ್ಬ ದೂರಿದರು.
ಡಿಟಿಇ ಮೂಲಗಳ ಪ್ರಕಾರ, ʻಜಿಎಫ್ಟಿಐ ಅನ್ನು ಮೇಲ್ದರ್ಜೆಗೇರಿಸಲು ನೇಮಿಸಿದ ಸಮಿತಿ ಸಲ್ಲಿಸಿದ ವರದಿಯನ್ನು ಸರಕಾರಕ್ಕೆ ರವಾನಿಸಲಾಗಿದೆ. ಸರ್ಕಾರದಿಂದ ನೆರವು ಬಂದ ನಂತರ ಅಗತ್ಯ ಉಪಕರಣಗಳನ್ನು ಖರೀದಿಸಲಾಗುತ್ತದೆʼ.