ಕಮಲ್ʼ ಹಾಸನ್ ರನ್ನು ಎದ್ದುಬರಲಾಗದ ಕೆಸರಿಗೆ ತಳ್ಳಿದ ́ತಿಳುವಳಿಕೆಯ ದಾರಿದ್ರ್ಯʼ
ಕಮಲ್ ಹಾಸನ್ ʻಜನಮೆಚ್ಚಿಗೆಗಾಗಿ ಕನ್ನಡದ ಪುರಾತನತೆಯನ್ನು ʼ ಆಡಿರುವ ʻಮಾತೊಂದುʼ ಅವರಿಗೆ ಮಗ್ಗಲ ಮುಳ್ಳಾಗಿ ತಿವಿಯುತ್ತಿದೆ. ಕನ್ನಡಿಗರ ಸ್ವಾಭಿಮಾನವನು ಕೆಣಕಿದಂತಾಗಿದೆ. ಆದರೆ ಕನ್ನಡಿಗರು ಎಂದಿನಂತೆ ತಮ್ಮ ಎಂದಿನ ಸೌಹಾರ್ದತೆಯ ನಿಲುವು ತೆಗೆದುಕೊಂಡಿರುವುದನ್ನು ಇತರರು ಕನ್ನಡಿಗರ ದೌರ್ಬಲ್ಯವೆಂದು ಪರಿಗಣಿಸದಿದ್ದರೆ ಸಾಕು;
ಇಂಗ್ಲಿಷ್ ನಲ್ಲಿ ಒಂದು ಮಾತಿದೆ. Playing to the gallery ಅಂದರೆ Act in an exaggerated way in order to appeal to popular taste ಅಂತ ಅದರ ಅರ್ಥ. ಜನಪ್ರಿಯತೆಯ ರುಚಿಹತ್ತಿಸಿಕೊಂಡವರನ್ನು ಮೆಚ್ಚಿಸುವಂತೆ ನಡೆದುಕೊಳ್ಳುವುದು ಅಥವ ಮಾತನಾಡುವುದು ಎಂದು ಅದರರ್ಥ. ಜನಪ್ರಿಯತೆಯ ಬೆನ್ನು ಹತ್ತಿದವರು, ʼಯಾವುದಾದರೂ ರೀತಿಯಲ್ಲಿ ಜನಪ್ರಿಯರಾಗಲುʼ ಉದ್ದೇಶ ಪೂರ್ವಕವಾಗಿ ನಡೆದುಕೊಳ್ಳುವ ರೀತಿ. ಆದರೆ ಈಗಾಗಲೇ, ಭಾರತೀಯ ಚಿತ್ರರಂಗದಲ್ಲಿ ʻಉಲಗನಾಯಗನ್ʼ (ವಿಶ್ವನಾಯಕ) ಎಂದೇ ಕರೆಸಿಕೊಂಡಿರುವ (ಆದರೆ ಅದೇಕೋ, ಈ ಜನ-ಪ್ರೇಕ್ಷಕರು ಕೊಟ್ಟಿರುವ ʻಬಿರುದು-ಬಾವಲಿ” ಸಾಕಾಗಲಿಲ್ಲವೆಂದೋ, ಅಥವ ತಮ್ಮ ಯೋಗ್ಯತೆಗೇ ಅದು ಸರಿಯಲ್ಲ ಅನ್ನಿಸಿದ್ದರಿಂದಲೋ ಏನೋ ಕಳೆದ ನವೆಂಬರ್ ತಿಂಗಳಲ್ಲಿ ಇನ್ನು ಮುಂದೆ ತಮ್ಮನ್ನು ಹಾಗೆ ಕರೆಯದಂತೆ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ) ಕಮಲ್ ಹಾಸನ್ ಗೆ ಮತ್ತೆ ʻಜನಮೆಚ್ಚಿಗೆಗಾಗಿʼ ಆಡಿರುವ ʻಮಾತೊಂದುʼ ಅವರಿಗೆ ಮಗ್ಗಲ ಮುಳ್ಳಾಗಿ ತಿವಿಯುತ್ತಿದೆ.
ಸ್ಫಟಿಕದ ಶಲಾಕೆಯ ತಿವಿತ
ಪಾರ್ಥಸಾರಥಿ ಶ್ರೀನಿವಾಸನ್, ಚಿತ್ರರಂಗಕ್ಕೆ ಬಂದಾಗ ಕಮಲ್ ಹಾಸನ್ ಆಗಿ ಬದಲಾಗಿದ್ದು ಭಾರತದ ಚಿತ್ರರಂಗದ ಇತಿಹಾಸದಲ್ಲಿ ಈಗಾಗಲೇ ದಾಖಲಾಗಿದೆ. ತಮಿಳು, ಕನ್ನಡ, ತೆಲುಗು, ಮಲೆಯಾಳಂ, ಹಿಂದಿ-ಪಂಚಭಾಷಾ ನಟರಾರಗಿರುವ ಕಮಲ್ ಹಾಸನ್‌ಗೆ ಇದ್ದಕ್ಕಿಂದ್ದಂತೆ “ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!, ನುಡಿದರೆ ಲಿಂಗ ಮೆಚ್ಚ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯ… ಎಂಬ ಕನ್ನಡದ ಸಾಂಸ್ಕೃತಿಕ ಪ್ರತಿನಿಧಿ ಶರಣ ಬಸವಣ್ಣನ ಮಾತುಗಳನ್ನು ನೆನಪಿಸಬೇಕಾಗಿ ಬಂದಿರುವುದು ಕನ್ನಡಿಗರ ದೌರ್ಭಾಗ್ಯ.
ಆಡಿದ ಆ ಒಂದು ಮಾತು
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮಣಿರತ್ನಂ ನಿರ್ದೇಶನದ ʻಥಗ್ ಲೈಫ್ʼ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್.; “ಕನ್ನಡ ತಮಿಳಿನಿಂದ ಹುಟ್ಟಿರುವುದು” ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ. “ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು” ಎಂಬ ಗಾದೆಯಂತಾಗಿದೆ ಕಮಲ್ ಸ್ಥಿತಿ ಗತಿ. ಈ ಮಾತನ್ನು ಹೇಳುವಾಗ ಕನ್ನಡಕ್ಕೆ ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರು ನೀಡಿದ ಕೊಡುಗೆ, ಈಗ ಅವರ ಪುತ್ರ ಶಿವರಾಜ್ ಕುಮಾರ್ ನೀಡಿರುವ, ನೀಡುತ್ತಿರುವ ಕೊಡುಗೆ, ತಮಗೂ ಮತ್ತು ಡಾ. ರಾಜ್ ಕುಮಾರ್ ಕುಟುಂಬದೊಂದಿಗೆ ಇರುವ ಸಂಬಂಧವನ್ನು ನೆನಪಿಸಿಕೊಂಡರು. “ಪ್ರತಿಭೆಯನ್ನು ಪ್ರೋತ್ಸಾಹಿಸುವ ಗುಣವನ್ನು ನಾನು ಅಣ್ಣಾವ್ರಿಂದ ಕಲಿತಿದ್ದೇನೆ. ನನ್ನ ಸಿನಿಮಾಗಳಿಗೆ ಆಣ್ಣವ್ರು ಕ್ಲಾಪ್ ಮಾಡಿದ್ದರು. ನನ್ನ ಅಭಿನಯವನ್ನು ಮೆಚ್ಚಿ ಬೆನ್ನು ತಟ್ಟಿದ್ದರು” ಎಂದಿದ್ದಲ್ಲದೆ ಮುಂದುವರಿದು,. ಸಮಾರಂಭದಲ್ಲಿ ಹಾಜರಿದ್ದ ಶಿವರಾಜ್ ಕುಮಾರ್ ಅವರನ್ನು ಉದ್ದೇಶಿಸಿ “ಇವರು ಸೂಪರ್ ಸ್ಟಾರ್. ಹಾಗೆಯೇ ಸೂಪರ್ ಸ್ಟಾರ್ ಪುತ್ರನೂ ಹೌದು. ಆದರೆ ಇಲ್ಲಿ ನನ್ನ ಅಭಿಮಾನಿಯಾಗಿ ಬಂದಿದ್ದಾರೆ. ಇದಕ್ಕೆ ನಾನು ಚಿರಋಣಿ” ಎಂದರು.
ಕಮಲ್ ಹಾಸನ್ ಹೀಗೆ ಹೇಳಿರುವುದು ಕನ್ನಡ ಪ್ರೇಕ್ಷಕರನ್ನು ʻಥಗ್ ಲೈಫ್ʼ ಚಿತ್ರ ನೋಡುವಂತೆ ಪ್ರೇರೇಪಿಸಲು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿವರಾಜ್ ಕುಮಾರ್ ಕೂಡ ಘನತೆಯಿಂದಲೇ ನಡೆದುಕೊಂಡು, ʻಹಾಡೊಂದು ಹಾಡುವೆʼ ಎಂಬಂತೆ ಕಮಲ್ ಹಾಸನ್ ಅವರಿಗಾಗಿ ಒಂದು ಹಾಡನ್ನು ಹೇಳಿದರು. ಇಷ್ಟಕ್ಕೆ ಕಮಲ್ ಹಾಸನ್ ಸುಮ್ಮನಾಗಿದ್ದರೆ ಅನಾಹುತವೇನೂ ಆಗುತ್ತಿರಲಿಲ್ಲ. ಆದರೆ, ಮುಂದುವರಿದು ʻಅತ್ಯುತ್ಸಾಹದಿಂದʼ ʼನಿಮ್ಮ ಕನ್ನಡ ಭಾಷೆ ಹುಟ್ಟಿದ್ದು ನಮ್ಮ ತಮಿಳಿನಿಂದ” ಎಂದದ್ದು, ಅದು ಕೂಡ ಶಿವರಾಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಎನ್ನುವುದು ಇಲ್ಲಿ ಮಹತ್ವದ ಸಂಗತಿ. ಈ ಹೊತ್ತಿನಲ್ಲಿ ಯಾರಾದೂ, “ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ” ಎಂದು ಕರೆ ನೀಡಬೇಕಿತ್ತು. ಆದರೆ ಅಷ್ಟರಲ್ಲಿ ಕಾರ್ಯಕ್ರಮ ಮುಗಿದುಹೋಯಿತೆಂದು ಕಾಣಿಸುತ್ತದೆ. ಆದರೆ ಕಮಲ್ ಹಾಸನ್ ಆಡಿದ ʻಆ ಒಂದು ಮಾತು ಕನ್ನಡಿಗರ ಅಭಿಮಾನವನ್ನು ಕೆಣಕಿದಂತಾಗಿದೆ.
ಕಮಲ್‌ಗಿರುವ ಕನ್ನಡದ ಸಂಬಂಧ
ಹಾಗೆಂದು ಕಮಲ್ ಹಾಸನ್ ಗೆ ಕನ್ನಡದ ಬಗ್ಗೆ, ಕನ್ನಡ ಸಾಹಿತ್ಯ, ಸಿನಿಮಾದ ಬಗ್ಗೆ ಪ್ರೀತಿ ಇಲ್ಲವೆಂದು ಹೇಳುವುದು ಕಷ್ಟ. ಏಕೆಂದರೆ, ಕಮಲ್ ಹಾಸನ್ ಎಪ್ಪತ್ತು –ಎಂಭತ್ತರ ದಶಕದಲ್ಲಿ ಕಾರಂತರ ನಾಟಕಗಳನ್ನು ನೋಡಲು ರವೀಂದ್ರ ಕಲಾಕ್ಷೇತ್ರಕ್ಕೆ ಬರುತ್ತಿದ್ದುದು ಇನ್ನೂ ನೆನಪಿದೆ. ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳನ್ನು ನೋಡಲು ಅಂದಿನ ಮದ್ರಾಸಿನಿಂದ ಬೆಂಗಳೂರಿಗೆ ಬಂದು ಸಿನಿಮಾ ನೋಡುತ್ತಿದ್ದುದನ್ನು, ಕಮಲ್ ಹಾಸನ್, ಈ ಬರಹಗಾರನೊಂದಿಗೆ ಹಲವಾರು ಬಾರಿ ಹಂಚಿಕೊಂಡಿದ್ದಿದೆ. “ನಾನು ಚೋಮನ ದುಡಿʼ ನೋಡಲು ಬೆಂಗಳೂರಿಗೆ ಬಂದು ನೋಡಿ, ಕಾರಂತರನ್ನು ಭೇಟಿ ಕೂಡ ಮಾಡಿದ್ದೆ” ಎಂದು ಒಮ್ಮೆ ಅವರು ನೆನಪಿಸಿಕೊಂಡಿದ್ದರು. ಕಾರ್ನಾಡರ, ʼಒಂದಾನೊಂದು ಕಾಲದಲ್ಲಿʼ ಚಿತ್ರವನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು. ಹಾಗೆಯೇ, ನಾಗಾಭರಣರ ʻಅನ್ವೇಷಣೆʼ, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳನ್ನು ಅವರು ಬಹುವಾಗಿ ಮೆಚ್ಚಿ ಮಾತನಾಡಿದ್ದರು. ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವುದೇ ಅವರ ಕನ್ನಡ ಪ್ರೀತಿಗೆ ಸಾಕ್ಷಿ…. ಎಂದೆಲ್ಲ ಹೇಳಬಹುದು.
ಆದರೆ ಅವರು ಈಗ ಕನ್ನಡದ ಕುರಿತು ಆಡಿರುವ ಮಾತುಗಳು ಅಕ್ಷಮ್ಯ ಅಪರಾಧ ಎನ್ನಲೇ ಬೇಕು. “ಕನ್ನಡವೆನೆ ಕುಣಿದಾಡುವುದೆನ್ನೆದೆ…” ಎಂದು ಹೇಳಲೇಬೇಕಿರುವ ಇಂದಿನ ಸಂದರ್ಭದಲ್ಲಿ ಅವರು ಆಡಿರುವ ಮಾತುಗಳು ಅರ್ಥಹೀನ ಮತ್ತು ಸಂದರ್ಭೋಚಿತವಲ್ಲದ್ದು. “ಇದು ನಿಮಗೆ ಬೇಕಿತ್ತಾ ಗುರುವೇ…” ಎನ್ನುವಂಥ ಸ್ಥಿತಿಯನ್ನು ಸ್ವತಃ ಕಮಲ್ ಹಾಸನ್ ತಾವೇ ಸೃಷ್ಟಿಸಿಕೊಂಡು, ತಾವೇ ತೋಡಿಕೊಂಡ ಖೆಡ್ಡಾದಲ್ಲಿ ತಾವೇ ಬಿದ್ದಿದ್ದಾರೆ ಎನ್ನಬಹುದು.
ಸ್ವತಂತ್ರ ಭಾಷೆ ಅಂತ ಯಾವುದೂ ಇಲ್ಲ
ಸಾಮಾಜಿಕ ಜಾಲತಾಣದಲ್ಲಿ ಲೇಖಕಿ ಕುಸುಮಾ ಆಯರಹಳ್ಳಿ, ಈ ಸಂದರ್ಭವನ್ನು ನೋಡಿರುವುದು ಹೀಗೆ; “ಕಮಲ್ ಹೇಳಿಕೆ ಗಮನಿಸಿ, ಅವರು ಎಷ್ಟು ಸಹಜವಾಗಿ ಮತ್ತು Confident ಆಗಿ ಹೇಳಿದ್ದಾರೆಂದರೆ, ಇಷ್ಟು ವರ್ಷವೂ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಅವರು ನಂಬಿದ್ದಾರೆ. ಈ ಯೋಚನೆ/ನಂಬಿಕೆ ಕಮಲ್ ಗೆ ಬಂದಿದ್ದು ಹೇಗೆ? ಇವರು ಮಾತ್ರ ಹಾಗೆ ಅಂದುಕೊಂಡಿದ್ದಾರೋ, ತಮಿಳುನಾಡಿನ ಬಹಳ ಮಂದಿಗೆ ಇದೆಯೋ. ಅಪ್ಪಟ ಸ್ವತಂತ್ರ ಭಾಷೆ ಅಂತ ಯಾವುದೂ ಇಲ್ಲ. ಎಲ್ಲಾ ಭಾಷೆಲೂ ಎಲ್ಲೆಲ್ಲಿಂದಲೋ ಹೇಗೋ ಸೇರಿದ ಪದಗಳಿರುತ್ತವೆ. ಗಡಿಗಳಲ್ಲಿ ಎರಡೂ ಭಾಷೆ ಸೇರ ಒಂದು slang ಹುಟ್ಟಿಕೊಂಡಿರುತ್ತದೆ. ಎಷ್ಟು ವರ್ಷಗಳಿಂದ ನಿಮಗೆ ಎಷ್ಟೊಂದು ಪ್ರೀತಿ ಕೊಟ್ಟೆವು ನಾವು ನಿಮಗೆ. ಹೀಗೆ ಹೇಳಬಾರದು ನೀವು. ಅದು ಬಿಡಿ. ಕನ್ನಡ ತಮಿಳಿನಿಂದ ಹುಟ್ಟಿದ್ದು ಅಂತ ನಿಮಗೆ ಹೇಳಿದವರು ಯಾರು? ಯಾವ ಆಧಾರ?” ಎಂದೆಲ್ಲ ಪ್ರಶ್ನಿಸಿರುವ ಈ ಲೇಖಕಿ ಕೊನೆಯದಾಗಿ “ಹೀಗಂತ ಈಗ ಶಿವರಾಜ್ ಕುಮಾರ್ ಅವರೇ ಕೇಳಬೇಕಪ್ಪ. ನಾವು, ನೀವು ಕೇಳೋಕೆ ಆಗುತ್ತಾ? ಎಂದು ಕನ್ನಡಿಗರನ್ನೇ ಆತ್ಮಾವಲೋಕನಕ್ಕೆ ದೂಡಿದ್ದಾರೆ.
ತೀರ್ಮಾನವಾಗದ ಕನ್ನಡದ ಪುರಾತನತೆ
ನಿಜ! ಕುಸುಮಾ ಮಾತಿನಲ್ಲಿ ತಥ್ಯವಿದೆ. ಭಾಷೆಯೊಂದರ ಪುರಾತನತೆ Antiquity ಬಗ್ಗೆ ಇದಮಿತ್ಥಮ್ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಅನಾದಿ ಕಾಲದಿಂದಲೂ, ಈ ಚರ್ಚೆ, ಸಂಶೋಧನೆ ನಡೆದುಕೊಂಡೇ ಬಂದಿದೆ. ಶಂ. ಬಾ . ಜೋಶಿ ಯಂಥ ದಿಗ್ಗಜರೂ ಸೇರಿದಂತೆ ನೂರಾರು ಭಾಷಾ ತಜ್ಞರು ದಕ್ಷಿಣ ರಾಜ್ಯಗಳ ಭಾಷೆಗಳ ಬಗ್ಗೆ ಅಧ್ಯಯನ ಮಾಡಿ ಬರೆಯುತ್ತಿದ್ದಾರೆ. ಇತ್ತೀಚಿನವರೆಗೂ, ಹಲ್ಮಿಡಿ ಶಾಸನವನ್ನು ಆಧರಿಸಿ, ಕನ್ನಡದ ಶಾಸನಗಳನ್ನು ಆಧರಿಸಿ, ಕನ್ನಡದ ಪುರಾತನತೆಯನ್ನು ಗುರುತಿಸುತ್ತಿದ್ದ ಮಂದಿ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ದೊರೆತ ಪ್ರಣವೇಶ್ವರ ದೇವಾಲದಲ್ಲಿ ದೊರೆತ ಶಾಸನದ ಅಧ್ಯಯನದ ಕಾರಣ ಇದುರವರೆಗೆ ನಂಬಲಾಗಿದ್ದ ಕನ್ನಡದ ಪುರಾತನತೆ , ಕ್ರಿಸ್ತಶಕ 450 ರಿಂದ ಕ್ರಿಸ್ತಶಕ 350-370ಕ್ಕೆ ಹಿಂದಕ್ಕೆ ಸರಿದಿದೆ. ಷ. ಷಟ್ಟರ್ ರಂಥ ಭಾಷಾ ತಜ್ಞರು, ಇತಿಹಾಸ, ಮಾನವಶಾಸ್ತ್ರ ತಜ್ಞರು ಸತತವಾಗಿ ನಡೆಸಿದ ಅಧ್ಯಯನದ ಫಲವಿದು. ಹಾಗಾಗಿ ಯಾವ ಭಾಷೆ, ಯಾವಾಗ ಹುಟ್ಟಿತು ಎಂಬುದರ ಕುರಿತು ಮಾತನಾಡುವ ಕಾಲ ಇದಲ್ಲ ಎನ್ನುವುದು ಕಮಲ್ ಹಾಸನ್ ಗೆ ಅರ್ಥವಾಗಬೇಕಿತ್ತು.
ಕಮಲ್ ಗೆ ತಿಳುವಳಿಕೆಯ ದಾರಿದ್ರ್ಯ
“ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದಲ್ಲ. ಎಂದು ತಮಿಳಿನ ಭಾಷಾ ಶಾಸ್ತ್ರಜ್ಞರು ಹೇಳಿದ್ದನ್ನು ಉಲ್ಲೇಖಿಸಿರುವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಕಮಲ್ ಹಾಸನ್ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. “ಎಲ್ಲ ಪ್ರಾಗ್ದ್ರಾವಿಡ ಭಾಷೆಗಳದ್ದು ಸೋದರ ಸಂಬಂಧ, ತಾಯಿ, ಮಕ್ಕಳ ಸಂಬಂಧವಲ್ಲ ಎಂದು ಅವರು ಹೇಳಿರುವುದು ಅರ್ಥಪೂರ್ಣವಾಗಿದೆ. ಏಕೆಂದರೆ ಬಿಳಿಮಲೆ ಕನ್ನಡ ಭಾಷೆಯನ್ನು ದೆಹಲಿಯ ಮಟ್ಟದಲ್ಲಿ ಪ್ರತಿನಿಧಿಸಿ, ಕನ್ನಡ ಪೀಠವನ್ನು ಮುನ್ನಡೆಸಿದವರು. “ಕಮಲ್ ಹಾಸನ್ ಅವರಿಗೆ ತಿಳುವಳಿಕೆಯಕೊರತೆ ಇದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಹೇಳಿರುವುದೇ ಅಲ್ಲದೆ, “ತಮ್ಮ ಭಾಷೆಯ ಮೇಲಿನ ಅಭಿಮಾನದಿಂದ ಹಾಗೂ ಮಾಹಿತಿಯ ಕೊರತೆಯಿಂದ ಕಮಲ್ ಹಾಸನ್ ಈ ರೀತಿ ಹೇಳಿದ್ದಾರೆ” ಎಂದು ಷರಾ ಬರೆದು. ಕಾಟಾಚಾರಕ್ಕೆಂಬಂತೆ “ ಈ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತಿದೆ” ಎಂದಿದ್ದಾರೆ.
ಬತ್ತಲಾರದ ಕನ್ನಡಕ್ಕೆ ಬಂತು ಎಂಥ ಕುತ್ತಿದು ನೋಡು
ಕಮಲ್ ಹಾಸನ್ ಈ ಮಾತುಗಳನ್ನಾಡಿದ ಸಂದರ್ಭವಾದರೂ ಎಂಥದ್ದು? ಅಡಿಗರ ಪದ್ಯ ಇಲ್ಲಿ ನೆನಪಾಗುತ್ತದೆ. “ಬತ್ತಲಾರದ ಗಂಗೆಗೆಂತ ಕುತ್ತಿದು ನೋಡು…” ಎಂಬಂತೆ, ಯಾವ ಅಬ್ಬರವೂ ಇಲ್ಲದೆ, ತನ್ನ ಪಾಡಿಗೆ ತಾನು ಶತಮಾನಗಳಿಂದ ಹರಿಯುತ್ತಿರುವ ತೊರೆಯಂತೆ ಕನ್ನಡ, ಎಲ್ಲ ಎಲ್ಲೆಗಳನ್ನೂ ಮೀರಿ, ಎಲ್ಲರನ್ನೊಳಗೊಳ್ಳುತ್ತಲೇ, ತನ್ನ ಆತ್ಮವನ್ನು ರಕ್ಷಿಸಿಕೊಂಡು ಶಾಂತವಾಗಿ ಹರಿಯುತ್ತಿದ್ದರೂ, ಅದಕ್ಕೀಗ ಕುತ್ತು ಬಂದಿರುವುದಂತೂ ಖಚಿತ. ಕೇಂದ್ರ ಸರ್ಕಾರದ ಬದಲಾದ ಭಾಷಾ ನೀತಿಯಿಂದಾಗಿ, ಹಿಂದಿಯ ಹೇರಿಕೆಯಿಂದಾಗಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದಿರುವ ಈ ಸಂದರ್ಭದಲ್ಲಿ, ಕನ್ನಡ ತನ್ನ ಅಸ್ತಿತ್ವಕ್ಕಾಗಿ ಹೋರಾಡಲೇಬೇಕಾದ ಸಂದರ್ಭ ಬಂದಿದೆ. ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿರುವ ದೇಶದ ಬೇರೆಬೇರೆ ನಾಡಿನ ಭಾಷೆಗಳಲ್ಲಿ ಮಾತನಾಡುವ ಮಂದಿ, ಕನ್ನಡವೆಂದರೆ, ಮೂಗು ಮುರಿಯುತ್ತಲೇ ಇದ್ದಾರೆ. ರಾಷ್ಟ್ರೀಕೃತ ಬ್ಯಾಂಕಿನ ಮುಖ್ಯ ನಿರ್ವಾಹಕರೊಬ್ಬರ ನಡೆ ಇದಕ್ಕೊಂದು ಸಣ್ಣ ನಿದರ್ಶನ. Defence Research and Development Organisation (DRDO)ದ ಸೇವೆಯಲ್ಲಿರುವ ವಿಂಗ್ ಕಮಾಂಡರ್ ಒಬ್ಬರು, ʼಕನ್ನಡ ಮಾತನಾಡಲಾಗದ ಸ್ಥಿತಿʼ ಎಂಬ ಹುಸಿ ಆಯುಧವನ್ನು ಬಳಸಿಕೊಂಡು ನಡೆಸಿದ ದೌರ್ಜನ್ಯ ಮತ್ತೊಂದು ನಿದರ್ಶನ. ಇಷ್ಟೇ ಅಲ್ಲ, ಕೇಂದ್ರದ ಅಡಿಯಲ್ಲಿ ನಾವಿದ್ದೇವೆ ಎಂದು ಘೋಷಿಸಿಕೊಂಡಂತೆ ವರ್ತಿಸುತ್ತಿರುವ Bengaluru Metro Rail Corporation ಕನ್ನಡ ಬಳಕೆಗೆ ಹಿಂದೇಟು ಹಾಕಿ ಪಡುತ್ತಿರುವ ಪಾಡು ಕೂಡ ಈ ಪೈಕಿ ಒಂದು. ಗಡಿಯಲ್ಲಿ ಒಂದೆಡೆ ಮರಾಠಿಯ ಶಿವಸೇನೆಯಿಂದ ಕನ್ನಡಕ್ಕೆ ಕುತ್ತು ಬಂದಿದ್ದರೆ, ಗಡಿಯೋಳಗೆ ಕನ್ನಡವನ್ನು ಕೇಳುವವರೇ ಇಲ್ಲ. ೨೦೧೧ರ Census ಪ್ರಕಾರ ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮಂದಿ ಶೇ. 66.5 ಮತ್ತೊಂದು ಸಮೀಕ್ಷೆ ಪ್ರಕಾರ ಬೆಂಗಳೂರು ಮತ್ತು ಮೈಸೂರಿನಲ್ಲಿ ಕನ್ನಡ ಮಾತನಾಡುವ ಮಂದಿ ಶೇ 41ಕ್ಕಿಂತ ಕಡಿಮೆ. ಇದು ಮತ್ತೊಂದು ಸ್ಥಿತಿ.
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ
ಇನ್ನು ಕನ್ನಡವನ್ನು ಕಾಪಾಡಬೇಕಾದ ಸರ್ಕಾರ, ಕನ್ನಡ ಭಾಷೆಯನ್ನು ಚುನಾವಣಾ ನಾಣ್ಯವಾಗಿ ಬಳಸಿಕೊಳ್ಳುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ ಇಷ್ಟು ವರ್ಷವಾದರೂ, ಅದರ ಲಾಭ ಪಡೆದುಕೊಳ್ಳಲು ಕರ್ನಾಟಕದ ಸಂಸದರು ಕೈಕಟ್ಟಿ ಕುಳಿತಿದ್ದಾರೆ. ಕನ್ನಡ ಶಾಲೆಗಳು ಹೇಳ ಹೆಸರಿಲ್ಲದಂತೆ ಮುಚ್ಚುತ್ತಿವೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ರಾಜಕೀಯಕ್ಕೆ ಇಳಿದ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಕನ್ನಡ ಭಾಷೆ, ನುಡಿಗೆ ಎಷ್ಟು ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. “ಮನೆಯೊಳಗೆ ಮನೆಯೊಡೆಯ ನಿದ್ದಾನೋ ಇಲ್ಲವೋ” ಎಂಬಂಥ ಸ್ಥಿತಿ ಕನ್ನಡದ್ದು.
ಇಂಥ ಒಂದು ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ, ಕನ್ನಡ ನಾಡಿದೆ
ಇಂಥ ಸಂದರ್ಭದಲ್ಲಿ ʻಥಗ್ ಲೈಫ್ʼ ಜೂನ್ ಐದರಂದು ತೆರೆಕಾಣಲಿದೆ. ಈ ಚಿತ್ರ ಬೆಂಗಳೂರಿನ, ಕರ್ನಾಟಕದ ನೂರಾರು ತೆರೆಗಳಲ್ಲಿ ಪ್ರದರ್ಶನ ಕಾಣುವ ಸಂದರ್ಭದಲ್ಲಿ, ಈ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯ ಕಮಲ್ ಹಾಸನ್ ಅವರಿಗೆ ಇತ್ತೆ? ಎಂಬ ಪ್ರಶ್ನೆ ಏಳುತ್ತಿದೆ. ಕಮಲ್ ಹಾಸನ್ ʻಥಗ್ ಲೈಫ್ʼ ಪ್ರಚಾರಕ್ಕಾಗಿ ಮಂಗಳವಾರ ಬೆಂಗಳೂರಿಗೆ ಬಂದಿದ್ದು, ಈ ಸಂದರ್ಭದಲ್ಲಿಯೇ ಸಾಮಾಜಿಕ ಜಾಲ ತಾಣಗಳಲ್ಲಿ, ಈ ವೀಡಿಯೋ ಹರಿದಾಡುತ್ತಿರುವುದರಿಂದ ಕನ್ನಡಿಗರ ಕಣ್ಣು ಸಹಜವಾಗಿಯೇ ಕೆಂಪಾಗಿಸಿದೆ. ಆದರೆ ಹೆಗಡೆ ನಗರದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ಕೆ ಯಾವುದೇ ತೊಂದರೆಯಾಗಿಲ್ಲದಿರುವುದು ನಮ್ಮೆಲ್ಲರ ಅದೃಷ್ಟವೆಂದೇ ಹೇಳಬೇಕು. ಇದು ಕನ್ನಡಿಗರ ಸೌಹಾರ್ದತೆಯ ದೌರ್ಬಲ್ಯವೆಂದು ಕಮಲ್ ಭಾವಿಸಿದರೆ ತಪ್ಪಾದೀತು. ಕಮಲ್ ಅವರ ಮಾತಿಗೆ ಬೆಲೆ ಸಿಕ್ಕಿತೆಂದು ಇಟ್ಟುಕೊಳ್ಳಿ, ಆಗ ಇತರ ಭಾಷಿಕರು ʻಆಡದೇ ಉಳಿದಿಹ ಮಾತುʼಗಳಿಗೆ ಧ್ವನಿ ಸಿಕ್ಕಂತಾಗುತ್ತದೆ.