ಬದಲಾದ ಜಗತ್ತಿನಲ್ಲಿ ಕಳೆದುಹೋದ ಪ್ರಪಂಚದ ಖ್ಯಾತ ಗೂಢಚಾರಿ ಜೇಮ್ಸ್ ಬಾಂಡ್ 007
ಜಗತ್ತಿನ ನೊಟೋರಿಯಸ್ ಗೂಢಚಾರಿ ಜೇಮ್ಸ್ ಬಾಂಡ್ ಈಗ ಮಹತ್ವದ ತಿರುವಿನಲ್ಲಿ ನಿಂತಿದ್ದಾನೆ. ಕಳೆದ ಏಳು ದಶಕಗಳ ಅವಧಿಯಲ್ಲಿ 007 ಬಾಂಡ್ ಹೇಗೆ ಬದಲಾಗಿದೆ, ಆತ ಭೇಟಿ ಮಾಡಿದ ಮಹಿಳೆಯರು ಹೇಗೆ ಬದಲಾಗುತ್ತ ಸಾಗಿದ್ದಾರೆ ಎಂಬುದರ ಅವಲೋಕನ ಇಲ್ಲಿದೆ...
ಅಕ್ಟೋಬರ್ ಐದರಂದು ಬಾಂಡ್ ದಿನ. ನಿಮಗೆ ಅದು ತಿಳಿದಿಲ್ಲದೇ ಇರಬಹುದು. ಅದೇನೂ ತಪ್ಪಲ್ಲ ಬಿಡಿ. 1962ರಲ್ಲಿ ಅದೇ ದಿನ ‘ಡಾ.ನೋ’ ಎಂಬ ಚಿತ್ರ ವಿಶ್ವದಾದ್ಯಂತ ಮೊದಲು ಪ್ರದರ್ಶನ ಕಂಡಿತು. ಹೊಡಿ-ಬಡಿ-ಕೊಲ್ಲುತ್ತ ರೋಮಾಂಚನಗೊಳಿಸಲು ಪರವಾನಗಿ ಪಡೆದ ಈ ಬ್ರಿಟಿಷ್ ಗೂಢಚಾರ ಬೆಳ್ಳಿ ಪರದೆಯ ಮೇಲೆ ಲಗ್ಗೆಯಿಟ್ಟು ದೊಡ್ಡ ಸದ್ದು ಮಾಡಿದ್ದ.
1962 ಮತ್ತು 1983ರ ನಡುವೆ ಏಳು ಚಿತ್ರಗಳಲ್ಲಿ ಬಾಂಡ್ ಪಾತ್ರ ನಿರ್ವಹಿಸಿದ ಆತನ ಹೆಸರು ಸೀನ್ ಕಾನರಿ. ಆತ ನಮ್ಮೊಳಗೆ ಸ್ಥಾಯಿಯಾಗಿ ಮಾಡಿದ್ದು “ನನ್ನ ಹೆಸರು ಬಾಂಡ್, ಜೇಮ್ಸ್ ಬಾಂಡ್! (My Name is Bond, James Bond)” ಎಂಬ ಅಮರ ಸಂಭಾಷಣೆಯನ್ನು.
ಇಯಾನ್ ಫ್ಲೆಮಂಗ್ ಸೃಷ್ಟಿಸಿದ ಕಾಲ್ಪನಿಕ ಎಂಐ-16 ಏಜೆಂಟ್ ಎಂಬ ಪಾತ್ರವು ಶಕ್ತಿ, ಪುರಷತ್ವ ಹಾಗೂ ರಾಷ್ಟ್ರೀಯ ಕಲ್ಪನೆಯ ಪ್ರತೀಕವಾಗಿತ್ತು. ಈ ಪಾತ್ರದ ಸಿನೆಮಾ ಕಲ್ಪನೆಗೆ ಜೀವ ತುಂಬಿದವನು ಕಾನರಿ. ಆ ಬಳಿಕ ಬಂದ ಆಕರ್ಷಕ ವ್ಯಕ್ತಿತ್ವದ ರೋಜರ್ ಮೂರ್-ನಿಂದು ಹಿಡಿದು ಘನಗಂಭೀರದ ಡೇನಿಯಲ್ ಕ್ರೇಗ್ ಅವರ ತನಕ ಕಾನರಿ ಪರಂಪರೆಯನ್ನು ಎರವಲು ಪಡೆಯಲು, ಕೆಲವೊಮ್ಮೆ ಬದಲಾಯಿಸಲು ಪ್ರಯತ್ನಿಸಿದ್ದಾರೆ.
ಈ ವರ್ಷದ ಬಾಂಡ್ ದಿನವನ್ನು ಅವಲೋಕಿಸಿ ನೋಡಿದಾಗ ಒಂದಷ್ಟು ಮಿಶ್ರ ಫಲಗಳು ಕಾಣಿಸುತ್ತಿವೆ. ಸಿಕಾರಿಯೋ (2015), ಪ್ರಿಸನರ್ಸ್ (2013), ಬ್ಲೇಡ್ ರನ್ನರ್ -2049 (2017) ಮತ್ತು ಎರಡು ಭಾಗಗಳಲ್ಲಿರುವ ಡ್ಯೂನ್ (2021-2024)ನಂತಹ ಚಿತ್ರಗಳಿಂದ ಖ್ಯಾತನಾದ ಕೆನಡಾದ ನಿರ್ದೇಶಕ ಡೆನಿಲ್ ವಿಲೆನ್ಯೂವ್ ಮುಂದಿನ 007 ಚಿತ್ರವನ್ನು ನಿರ್ದೇಶಿಸುವ ನಿರೀಕ್ಷೆಯಿದೆ. ಜನಪ್ರಿಯ ಐತಿಹಾಸಿಕ ಕ್ರೈಮ್ ಡ್ರಾಮಾ ಪೀಕಿ ಬ್ಲೈಂಡರ್ಸ್ ಚಿತ್ರದ ಸೃಷ್ಟಿಕರ್ತ ಸ್ಟೀವನ್ ನೈಟ್ ಮೊದಲ ಬಾಂಡ್ ಚಿತ್ರಕ್ಕೆ ಚಿತ್ರಕಥೆ ಬರೆಯಲು ಒಪ್ಪಿಕೊಂಡಿದ್ದಾರೆ. ಜೆಫ್ ಬೆಜೋಸ್ ಮಾಲೀಕತ್ವದ ಅಮೆಜಾನ್ MGM ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಅಮೆಜಾನ್ ಫ್ರಾಂಚೈಸಿಯ ಸೃಜನಾತ್ಮಕ ಜವಾಬ್ದಾರಿಯನ್ನು ವಹಿಸಿಕೊಂಡಿದೆ. 60 ವರ್ಷಗಳಿಗೂ ಹೆಚ್ಚು ಕಾಲ 007 ಚಿತ್ರಗಳನ್ನು ಚಿತ್ರಮಂದಿರಗಳಿಗೆ ತಂದ ಜೋಡಿ ಮೈಕೇಲ್ ಜಿ.ವಿಲ್ಸನ್ ಮತ್ತು ಬಾರ್ಬರಾ ಬ್ರಕೊಲಿ ಅವರು ಫ್ರಾಂಚೈಸಿಯ ಸಹ-ಮಾಲೀಕರಾಗಿ ಉಳಿದುಕೊಂಡಿದ್ದಾರೆ.
ಕನಿಷ್ಠ ಇನ್ನೆರಡು ವರ್ಷ ಕಾಯಬೇಕು
ಆದರೆ ಮುಂದಿನ ಬಾಂಡ್ ಬಗೆಗಿನ ಗುಟ್ಟು ಇನ್ನೂ ರಟ್ಟಾಗಿಲ್ಲ. ಆಸ್ಟನ್ ಮಾರ್ಟಿನ್ (ಬ್ರಿಟಿಷ್ ಸ್ಪೋರ್ಟ್ಸ್ ಕಾರು)ನ್ನು ಮುನ್ನುಗ್ಗಿಸಲು ಸಿದ್ಧತೆ ನಡೆದಿದೆ. ಆದರೆ ಅದರ ಸಾರಥಿ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕಣದಲ್ಲಿ ಆರನ್ ಟೇಲರ್ ಜಾನ್ಸನ್, ಥಿಯೊ ಜೆಮ್ಸ್ ಮತ್ತು ಜೇಕಬ್ ಎಲೋರ್ಡಿ ಮುಂಚೂಣಿಯಲ್ಲಿದ್ದಾರೆ. ನಿರ್ಮಾಪಕರ ಚಿತ್ತ ಮಾತ್ರ 30 ವರ್ಷ ವಯಸ್ಸಿನೊಳಗಿನ ಬ್ರಿಟಿಷ್ ಯುವಕನ ಹುಡುಕಾಟದಲ್ಲಿದ್ದಾರೆ. ಅದರಲ್ಲಿಯೂ ಕಪ್ಪು ವರ್ಣೀಯ ತರುಣನ ನಿರೀಕ್ಷೆ ಅವರದ್ದು. ಹೆನ್ರಿ ಕೇವಿಲ್ ಮತ್ತು ಇನ್ನೂ ಕೆಲವರ ಹೆಸರು ಪ್ರಸ್ತಾಪವಾಗಿದೆ. ಹಾಗಂತ ಮುಂದಿನ ಬಾಂಡ್ ಸಿನೆಮಾ ಅಷ್ಟು ಬೇಗೆ ತೆರೆಗೆ ಬರುವ ನಿರೀಕ್ಷೆ ಇಟ್ಟುಕೊಳ್ಳಬೇಡಿ. 2027ರ ತನಕವಂತೂ ಅದಕ್ಕೆ ಮುಹೂರ್ತ ನಿಕ್ಕಿಯಾಗಿಲ್ಲ ಎಂಬುದು ಖಚಿತ. ಇದು ಅಭಿಮಾನಿಗಳು ವದಂತಿ ಹರಡಲು, ಚರ್ಚೆ ನಡೆಸಲು ಮತ್ತು ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ರಿಫ್ರೆಶ್ ಮಾಡಲು ವಿಫುಲ ಅವಕಾಶ ನೀಡಿದೆ.
ಫ್ರಾಂಚೈಸಿಗೆ 63 ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಎದುರಾಗಿರುವ ನಿಜವಾದ ಪ್ರಶ್ನೆ ಮುಂದಿನ 007 ಬಾಂಡ್ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದಲ್ಲ. ಬದಲಾಗಿ ಇಷ್ಟೊಂದು ವರ್ಷಗಳ ಬಳಿಕವೂ ಜೇಮ್ಸ್ ಬಾಂಡ್ ಎಂಬ ಮಿಥ್ಯೆಗೆ ಇಂದಿಗೂ ಯಾವುದಾದರೂ ಅರ್ಥ ಉಳಿದಿದೆಯೇ ಎಂಬುದು. ಯಾಕೆಂದರೆ ಶೀತಲ ಸಮರ ಕಾಲದ ಗೂಢಚಾರಿಕೆಯ ಸರಣಿಯಾಗಿ ಶುರುವಾದ ಈ ಕಥೆ ಕಾಲ ಬದಲಾದಂತೆ ಸಶಕ್ತವಾಗಿ ಉಳಿದಿವೆಯೇ? ಪುರುಷತ್ವ, ಲೈಂಗಿಕತೆ ಮತ್ತು ನೈತಿಕತೆಗಳ ಬಗ್ಗೆ ಪ್ರಪಂಚದ ಕಲ್ಪನೆಗಳು ಹೇಗೆ ಬದಲಾಗುತ್ತ ಸಾಗಿವೆ? ಎಂಬುದನ್ನು ನಿಕಶಕ್ಕೊಡ್ಡಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ.
ಡೇನಿಯಲ್ ಕ್ರೇಗ್ ನಂತರ ಕೇವಲ ಗತ್ತು-ದೌಲತ್ತಿನಿಂದಲೇ ಪ್ರಾಂಚೈಸಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಈಗ ಬಾಂಡ್ ಮೇಲಿನ ಭಾರ ಜಾಸ್ತಿಯಾಗಿದೆ. ಆತ ಭಾವನಾತ್ಮಕ, ಐತಿಹಾಸಿಕ ಮತ್ತು ಅಸ್ತಿತ್ವವಾದ ಹೊರೆಯನ್ನೂ ಹೊತ್ತು ಮುಂದೆ ಸಾಗಬೇಕಾಗಿದೆ. ಈ ಫ್ರಾಂಚೈಸಿ ಕೊನೆಯದಾಗಿ ಬಿಕ್ಕಟ್ಟಿನ ಸುಳಿಗೆ ಸಿಕ್ಕಿದ್ದು 1969ರಲ್ಲಿ. ಆಗ ಬಾಂಡ್ ಪಾತ್ರ ನಿರ್ವಹಿಸಿದವನು ಜಾರ್ಜ್ ಲೆಜೆನಬೈ. ಆತ ಪಾತ್ರವೇ ಬಹುತೇಕ ಮರೆತುಹೋಗುವಂತಾಗಿದೆ. ಅದು ‘ಆನ್ ಹರ್ ಮೆಜೆಸ್ಟಿ ಸೀಕ್ರೆಟ್ ಸರ್ವಿಸ್’ ಎಂಬ ಚಿತ್ರ. ಅದರಲ್ಲಿ ಬಾಂಡ್ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿ ನಂತರ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಬಹುಷಃ ಇದು ಒಬ್ಬ ರಹಸ್ಯ ಏಜೆಂಟ್ ಸಿನೆಮಾದಲ್ಲಿ ಹೊತ್ತ ಮೊದಲ ಭಾವನಾತ್ಮಕ ಹೊರೆ ಮತ್ತು ಆಘಾತವೂ.
ಸಿನೆಮಾದ ಫ್ರಾಂಚೈಸಿಯಲ್ಲಿ ಜೇಮ್ಸ್ ಬಾಂಡ್-ನನ್ನು ಅಧಿಕೃತವಾಗಿ ಮದುವೆಯಾದ ಏಕೈಕ ಮಹಿಳೆ ಎಂದರೆ ಟ್ರೇಸಿ ಬಾಂಡ್. (ಆ ಪಾತ್ರ ನಿರ್ವಹಿಸಿದವರು ಡಯಾನಾ ರಿಗ್). ಆಕೆ ಕ್ರೈಮ್ ಲಾರ್ಡ್ ಮಾರ್ಕ್ ಆಂಗೆ ಡ್ರಾಕೊನ ಮಗಳಾಗಿ ಪಾತ್ರ ನಿರ್ವಹಿಸಿದ್ದರು. ಆಕೆ ಸಮಸ್ಯೆಗೆ ಸಿಲುಕಿದ್ದರೂ ಕೂಡ ಅವಳಿಗಿದ್ದ ಇಚ್ಛಾಶಕ್ತಿ ಅವಳನ್ನು ಗೆಲ್ಲಿಸಿತ್ತು.
ಸೀನ್ ಕಾನರಿ (1962-1983)
ಸೀನ್ ಕಾನರಿ ಬಂದಾಗಲೂ ಲೆಜೆನಬೈನಂತೆ ಪ್ರಸಿದ್ಧ ಪಡೆದ ನಟನೇನೂ ಆಗಿರಲಿಲ್ಲ. ಅದಕ್ಕೂ ಮೊದಲು ಆತನದ್ದು ಬಹುಕೃತ ವೇಷ. ಬಾಡಿಬಿಲ್ಡರ್, ಮಾಡೆಲ್, ಹಾಲು ಮಾರುವವ ಮತ್ತು ಕೊನೆಗೆ ಎಡಿನ್-ಬರೋದಲ್ಲಿ ಕೋರಸ್-ಲೈನ್ ಸದಸ್ಯನಾಗಿದ್ದ ಆತ ಅತ್ಯಂತ ಆಕಸ್ಮಿಕವಾಗಿ ಜೇಮ್ಸ್ ಬಾಂಡ್ ಪೋಷಾಕು ತೊಟ್ಟ. ನಿರ್ಮಾಪಕರಾದ ಕಬ್ಬಿ ಬ್ರಕೋಲಿ ಮತ್ತು ಹ್ಯಾರಿ ಸಾಲ್ಟ್-ಮನ್ ಲೆಜೆನಬೈ ಅವರನ್ನು ಶೋಧಿಸಿದಾಗ ಭಯ ಮತ್ತು ಫ್ಯಾಂಟಸಿಯನ್ನು ಬಿಂಬಿಸುವಂತಹ ಹೊಸ ಮುಖದ ಅಗತ್ಯವಿತ್ತು.
ಬಾಂಡ್ ಪಾತ್ರಕ್ಕೆ ಹೊಸ ಲಯ ಕೊಟ್ಟ ಮೂರ್
ಲಿವ್ ಆ್ಯಂಡ್ ಲೆಟ್ ಡೈ ಸಿನೆಮಾದಲ್ಲಿ ರೋಜರ್ ಮೂರ್ (1973-1985)ಪದಾರ್ಪಣೆ ಮಾಡುವ ಹೊತ್ತಿಗೆ ಜಗತ್ತು ತಕ್ಕಮಟ್ಟಿಗೆ ಬದಲಾಗಿತ್ತು. ಶೀತಲ ಸಮರದ ಕಂಪನಗಳಿನ್ನೂ ಮುಂದುವರಿದಿದ್ದರೂ ಸ್ತ್ರೀವಾದವು ತಾರಸ್ಥಾಯಿಯಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಣ್ಣಗೆ ಕೊರೆಯುವ ಕ್ರೂರ ಮನಸ್ಥಿತಿಯ ಬಗೆಗೆ ಜನರ ತೃಷೆ ಕಡಿಮೆಯಾಗಿತ್ತು. ಮೂರ್ ಒಂದರ ಹಿಂದೆ ಒಂದರಂತೆ ಆರು ಚಿತ್ರಗಳಲ್ಲಿ ನಟಿಸಿದರು- ದಿ ಮ್ಯಾನ್ ವಿದ್ ದಿ ಗೋಲ್ಡನ್ ಗನ್ (1974), ದಿ ಸ್ಪೈ ಹೂ ಲವ್ಡ್ ಮೀ (1977), ಮೂನ್ ರೇಕರ್ (1979), ಫಾರ್ ಯೂವರ್ ಐಸ್ ಓನ್ಲಿ (1981), ಆಕ್ಟೋಪಸ್ಸಿ (1983). ಕೊನೆಯ ಬಾರಿಗೆ ಅವರು ಕಾಣಿಸಿಕೊಂಡಿದ್ದು 1985ರಲ್ಲಿ ತೆರೆಕಂಡ ಎ ವಿವ್ ಟು ಎ ಕಿಲ್.
ಮೂರ್ ಅತ್ಯದ್ಭುತ ನಟ, ಟಾಸ್ಕ್ ಮಾಸ್ಟರ್. ಆಕರ್ಷಕ ವ್ಯಕ್ತಿತ್ವ, ವ್ಯಂಗ್ಯಭರಿತ ಮಾತು ಮತ್ತು ಹುಬ್ಬೇರಿಸುವಂತೆ ಮಾಡುವ ಸಾಹಸಗಳು ಅವರ ನಿಜವಾದ ಶಕ್ತಿ. ಎಂತಹ ಕಠಿಣ ಸ್ಥಿತಿಗಳಿಂದಲೂ ಪಾರಾಗುವ ಛಾತಿ ಹೊಂದಿದ್ದ ಮೂರ್ ವಿಲಕ್ಷಣವಾದ ತಾಣಗಳಲ್ಲಿ ಸೈ ಎನಿಸಿಕೊಂಡವರು. ಜಗತ್ತು ಬದಲಾಗುತ್ತಿದೆ ಮತ್ತು ಗೂಢಚಾರಿಯ ಕಲ್ಪನೆ ಖಚಿತತೆ ಕಳೆದುಕೊಳ್ಳುತ್ತಿದೆ, ಅದರಲ್ಲಿ ಮೋಜು ಬಿಟ್ಟರೆ ಇನ್ನೇನೂ ಹೆಚ್ಚುಗಾರಿಕೆ ಇಲ್ಲ ಎಂಬುದನ್ನು ಬಹಳ ಬೇಗ ಅರಿತಿದ್ದರು. ಅದಕ್ಕಾಗಿ ಅವರು ಬಾಂಡ್ ಪಾತ್ರಕ್ಕೆ ವಿಲಕ್ಷಣವಾದ ನಾಟಕೀಯತೆಯನ್ನು ತುಂಬಿದರು. ಅಂತಹುದೊಂದು ಪರಿವರ್ತನೆಯನ್ನು ಜನ ಸ್ವೀಕರಿಸಿದರು. ಯಾಕೆಂದರೆ ಬಾಂಡ್ ಪಾತ್ರದಲ್ಲಿ ತಾವೇ ಒಂದು ತಮಾಷೆಯ ಭಾಗ ಎನ್ನುವಂತೆ ಅಭಿನಯಿಸುತ್ತಿದ್ದರು.
ರೋಜರ್ ಮೂರ್ (1973-1985)
ಮೂರ್ ಅವರ ಲಘು ಹಾಸ್ಯ ಕೆಲಸ ಮಾಡಿತ್ತು. ಗೂಢಚಾರದ ಕಥೆಗಳು ಇನ್ನೇನು ಅತಿರೇಕದ ಚಕ್ರದೊಳಗೆ ಸುಲಭವಾಗಿ ಕಳೆದುಹೋಗುತ್ತಿದ್ದ ದಶಕದಲ್ಲಿ ಮೂರ್ ಅವರ ಲಘು ಹಾಸ್ಯ ಲೇಪನವು ಫ್ರಾಂಚೈಸಿಯನ್ನು ಜೀವಂತವಾಗಿರಿಸಿತು. ಜಗತ್ತಿನ ರಾಜಕೀಯ ಅಸಂಬದ್ಧವಾಗಿ ಮಾರ್ಪಟ್ಟಿದ್ದರೂ ಬಾಂಡ್ ಪಾತ್ರ ನಿರಂತರವಾಗಿ ಮುಂದುವರಿಯುತ್ತದೆ ಎಂಬ ಭ್ರಮೆಯನ್ನು ಹುಟ್ಟಿಸುವಲ್ಲಿ ಮೂರ್ ಯಶಸ್ವಿಯಾಗಿದ್ದರು.
ಮೂರ್ ಅವರ ಚಿತ್ರದಲ್ಲಿ ಮಹಿಳೆಯರಿಗೆ ಹೆಚ್ಚು ದೃಢವಾದ ಪಾತ್ರಗಳಿದ್ದವು. ಜೇನ್ ಸೇಮೌರ್ ಅವರ ಭವಿಷ್ಯ ನುಡಿಯುವ ವೂಡೂ ಸೈಕಿಕ್ ಸಾಲಿಟೇರ್ ನಿಂದ ಆಕ್ಟೋಪಸ್ಸಿ ಚಿತ್ರದಲ್ಲಿನ ಮೌಡ್ ಆಡಮ್ಸ್ ತನಕ ಇದು ಮುಂದುವರಿಯುತ್ತದೆ. ಆದರೆ ಆ ಪಾತ್ರಗಳು ಸ್ವಾಯತ್ತವಾಗಿರಲಿಲ್ಲ.
ಈ ಮಹಿಳಾ ಪಾತ್ರಗಳಲ್ಲಿ ಕೌಶಲ್ಯ ಮತ್ತು ದಿಟ್ಟತನಕ್ಕೇನೂ ಕೊರತೆಯಿರಲಿಲ್ಲ. ಸ್ವಾತಂತ್ರ್ಯದೆಡೆಗೆ ಆಕರ್ಷಿತರಾಗಿದ್ದರು. ಆದರೆ ಕಥಾ ಹಂದರಗಳು ಮಾತ್ರ ಅವರನ್ನು ಹಿಂದಕ್ಕೆ ಜಗ್ಗುತ್ತಿದ್ದವು. ಕಥಾ ನಿರೂಪಣೆಯಂತೂ ಇನ್ನೂ ಬಾಂಡ್ ಸುತ್ತಲೇ ಸುತ್ತುತ್ತಿತ್ತು. ಲಿಂಗ ಸಂಬಂಧಿ ಸೃಜನಶೀಲತೆಯು ಇನ್ನೂ ಅನಾದಿಕಾಲದಲ್ಲಿಯೇ ಗಿರಕಿ ಹೊಡೆಯುತ್ತಿತ್ತು. ಮೂರ್ ಅವರ ಬಾಂಡ್ ಮನರಂಜನೆ ನೀಡುವಲ್ಲಿ ಹಿಂದೆ ಬೀಳದಿದ್ದರೂ ಅದಿನ್ನೂ ಪುರಷ ನಿಯಂತ್ರಣದ ಕಲ್ಪನೆಯಿಂದ ಮುಕ್ತಿಪಡೆದಿರಲಿಲ್ಲ.
ತಿಮೋಥಿ ಡಾಲ್ಟನ್ (1987-1989)
ಗೂಢಚಾರನ ಕಠಿಣ ಚಿತ್ರ ತೆರೆದಿಟ್ಟ ತಿಮೋಥಿ
ಆ ಬಳಿಕ ಬಂದಿದ್ದು ತಿಮೋಥಿ ಡಾಲ್ಟನ್ ಅವರ ಬಾಂಡ್ (1987-1989). ಅದು ಗಾಢವೂ ಗಂಭೀರವೂ ಆಗಿತ್ತು. ಮೂರ್ ಅವರ ನಾಟಕೀಯತೆಗೆ ಒಗ್ಗಿ ಹೋಗಿದ್ದ ಪ್ರೇಕ್ಷಕರಿಗೆ ಘನಘೋರವಾಗಿ ಕಾಣಿಸಿದ್ದರೆ ಅಚ್ಚರಿಯಿಲ್ಲ. ತಿಮೋಥಿ ಬಾಂಡ್ ಆಗಿ ಅಭಿನಯಿಸಿದ ಚೊಚ್ಚಲ ಚಿತ್ರ ದಿ ಲಿವಿಂಗ್ ಡೇಲೈಟ್ಸ್ (1987) ಇದಕ್ಕೆ ಪಕ್ಕಾ ಸಾಕ್ಷಿಯಾಗಿತ್ತು. ಮೂರ್ ಅವರ ಲಘು ಧ್ವನಿ ಮಾಯವಾಗಿ ಕಾಠಿಣ್ಯದ ಮುಖವಾಡ ಹೊತ್ತಿತ್ತು. ಅದು ಪ್ರಸ್ತುತಪಡಿಸಿದ್ದು ಗೂಢಚಾರನ ಕಠಿಣ ಚಿತ್ರವನ್ನು. ತಿಮೋಥಿ ಡಾಲ್ಟನ್ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವ ಗೂಢಚಾರನ ಪಾತ್ರ ನಿರ್ವಹಿಸಿದರು. ಅವರ ಚಿತ್ರದಲ್ಲಿ ಮಹಿಳೆಯರು ಸಖತ್ ಟಫ್ ಆಗಿದ್ದರು. ಆ ಪಾತ್ರಗಳಿಗೆ ಸ್ವಾತಂತ್ರ್ಯವೂ ಇತ್ತು. ಲೈಸೆನ್ಸ್ ಟು ಕಿಲ್ (1989) ಚಿತ್ರದಲ್ಲಿನ ಕೇರಿ ಲೋವೆಲ್ ಅವರ ಮಾಜಿ ಸಿಐಎ ಪೈಲಟ್ ಪಾಮ್ ಬೋವಿಯರ್ ಇದಕ್ಕೆ ಸಾಕ್ಷಿ. ಬೋವಿಯರ್ ಆಧುನಿಕ ಬಾಂಡ್ ಯುವತಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದರು. ಫೈಟಿಂಗ್-ನ್ನು ತಾವೇ ನಿಭಾಯಿಸುವ ಛಾತಿ ಹೊಂದಿದ್ದರು.
ಪೀಯರ್ಸ್ ಬ್ರಾಸ್ನನ್ ಅವರ ಅವಧಿ-1995ರಿಂದ 2002. 90ರ ದಶಕದ ಜಾಗತೀಕರಣದ ಪಾಲಿಶ್-ಗೆ ಆ ಬಾಂಡ್ ಪಾತ್ರ ಒಳಗಾಗಿತ್ತು. ಆಗ ಶೀತಲ ಸಮರ ಮುಗಿದಿತ್ತು, 9/11 ದಾಳಿ ಇನ್ನೂ ನಡೆದಿರಲಿಲ್ಲ. ಅಂತಹ ಕಾಲದಲ್ಲಿ ಫ್ರಾಂಚೈಸಿಗೆ ಹೊಸ ಹೊಳಪು, ಸಾಹಸದ ಅಗತ್ಯವಿತ್ತು. ಮೋಡಿಮಾಡುವ ಕಥಾಹಂದರ ಬೇಕಿತ್ತು. ಬ್ರಾಸ್ನನ್ ಅವರ ಬಾಂಡ್ ಪಾತ್ರವು ಹೆಚ್ಚು ಕಾರ್ಪೊರೇಟ್ ಆಗಿತ್ತು ಎಂಬ ಟೀಕೆ ಇತ್ತಾದರೂ ಅದು ಕಾನೆರಿ ಅವರ ಸೌಮ್ಯತೆ, ಮೂರ್ ಅವರ ಹಾಸ್ಯ ಮತ್ತು ಡಾಲ್ಟನ್ ಅವರ ಗಂಭೀರತೆಯನ್ನು ಒಂದು ಬಂಧಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ ಆಸ್ಟನ್ ಮಾರ್ಟಿನ್ಸ್ ನಿಂದ ಮಾರ್ಟಿನಿಸ್ ವರೆಗೆ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಯಿತು.
ಮಹಿಳಾ ಪಾತ್ರಗಳು ಹೆಚ್ಚು ವೃತ್ತಿಪರವೂ ಜಾಗತಿಕವೂ ಆಗಿದ್ದವು. ಗೋಲ್ಡನ್ ಐ (1995) ಚಿತ್ರದಲ್ಲಿ ರಷ್ಯಾದ ಕಂಪ್ಯೂಟರ್ ಪ್ರೋಗಾಮರ್ ನತಾಲಿಯಾ ಸಿಮೊನೊವಾ ಪಾತ್ರ ನಿರ್ವಹಿಸಿದವರು ಇಝಬೆಲ್ಲ ಸ್ಕೊರುಪ್ಕೊ. ಆಕೆ ಬಾಂಡ್ ಜೊತೆ ಕದನಕ್ಕಿಳಿದು ಖಳನಾಯಕ ಅಲೆಕ್ ಟ್ರೆವೆಲ್ಯಾನ್ ಮತ್ತು ಆತನ ಗೋಲ್ಡನ್ ಐ ಅಸ್ತ್ರದ ಯೋಜನೆಯನ್ನು ತಡೆಯಲು ಸಾಥ್ ನೀಡುತ್ತಾರೆ. ಆ ಬಳಿಕ ಬಂದ ಬಾಂಡ್ ಚಿತ್ರ ದಿ ವರ್ಲ್ಡ್ ಈಸ್ ನಾಟ್ ಇನಫ್ (1999). ಶ್ರೀಮಂತ ತೈಲ ಉದ್ಯಮಿಯ ಕುತಂತ್ರಿ ಮಗಳಾದ ಎಲೆಕ್ಟ್ರಾ ಕಿಂಗ್ ಪಾತ್ರ ನಿರ್ವಹಿಸಿದವರು ಸೋಫಿ ಮಾರ್ಸೊ. ಆಕೆ ಚಿತ್ರದ ನಿಜವಾದ ಖಳನಾಯಕಿ. ಭಯೋತ್ಪಾದಕ ರೆನಾರ್ಡ್ ಜೊತೆಗಿನ ತನ್ನ ನಿಷ್ಠೆಯನ್ನು ಬಯಲು ಮಾಡುವ ಮೊದಲು ಆಕೆ ಜೇಮ್ಸ್ ಬಾಂಡ್ ಪ್ರೇಮಿಯಾಗಿರುತ್ತಾಳೆ.
ಈ ಕಾಲದ ಬಾಂಡ್ ಮಹಿಳೆಯರು ಸಮರ್ಥರಾಗಿದ್ದರು ಮತ್ತು ಕಥೆಯ ಆತ್ಮವಾಗಿದ್ದರು. ಆದರೆ ಇಲ್ಲಿಯೂ ಕಥಾಹಂದರವು ಬಾಂಡ್ ಕೇಂದ್ರೀಕೃತವಾಗಿತ್ತು. ಬ್ರಾಸ್ನನ್ ಯುಗವು ಶೈಲಿಗಿಂತ ಆತ್ಮ ಮುಖ್ಯ ಎಂಬಂತಿತ್ತು. ಆದರೆ ಜೂಡಿ ಡೆಂಚ್ ಅವರ ಸೀಕ್ರೆಟ್ ಇಂಟೆಲಿಜೆನ್ಸ್ ಸರ್ವಿಸ್ ಮುಖ್ಯಸ್ಥೆಯ ಪಾತ್ರವು ಅದಕ್ಕೆ ಅಪವಾದವಾಗಿತ್ತು. ಸೂಕ್ಷ್ಮವಾಗಿತ್ತು. ಆತ್ಮಪ್ರಜ್ಞೆಯಿಂದ ಕೂಡಿತ್ತು.
ಬಾಂಡ್ ಪೌರುಷಕ್ಕೆ ಚಿತ್ ಕೊಟ್ಟ ಡೆಂಚ್
ಜೂಡಿ ಡೆಂಚ್ ಅವರ ಚೊಚ್ಚಲ ಚಿತ್ರ ಗೋಲ್ಡನ್ ಐ. ಆ ಬಳಿಕ ಆಕೆ ಸತತ ಏಳು ಚಿತ್ರಗಳನ್ನು ಪಾತ್ರ ನಿರ್ವಹಿಸಿ ಅಂತಿಮವಾಗಿ ಸ್ಕೈ ಫಾಲ್ (2012) ಚಿತ್ರದಲ್ಲಿ ಕಾಣಿಸಿಕೊಂಡರು. ಆ ಹೊತ್ತಿಗೆ ಅವರ ‘ಎಂ’ ಹೆಸರಿನ ಪಾತ್ರವು ಅಭಿಮಾನಿಗಳಲ್ಲಿ ಅಚ್ಛೊತ್ತಿತ್ತು. ಈ ಹಿಂದೆ ಆ ಪಾತ್ರವನ್ನು ನಿರ್ವಹಿಸಿದ್ದ ನಟರಾದ ಬರ್ನಾರ್ಡ್ ಲೀ ಮತ್ತು ರಾಬರ್ಟ್ ಬ್ರೌನ್ಸ್ ಅವರಿಗೆ ಡೆಂಚ್ ಚಿತ್ ನೀಡಿದ್ದರು. ಗೋಲ್ಡನ್ ಐ ಚಿತ್ರದಲ್ಲಿ ಅವರು ಬಾಂಡ್-ಗೇ ‘ಲಿಂಗಭೇದಿ, ಸ್ತ್ರೀದ್ವೇಷಿ ಡೈನೋಸಾರ್’ ಎಂದು ಕರೆಯುವುದು ಇದಕ್ಕೆ ಸಾಕ್ಷಿ. ಬಹುಷಃ ಮೊದಲ ಬಾರಿಗೆ ಫ್ರಾಂಚೈಸಿ ಇಂತಹುದೊಂದು ಆತ್ಮವಿಮರ್ಶೆ ಮಾಡಿಕೊಂಡಿತ್ತು ಅನಿಸುತ್ತದೆ.
ಡೇನಿಯಲ್ ಕ್ರೇಗ್ ಅವರ ಬಾಂಡ್ ಯುಗ ಆರಂಭವಾಗಿದ್ದು 2006ರಲ್ಲಿ. ಕೊನೆಗೊಂಡಿದ್ದು 2021ರಲ್ಲಿ. ಆ ಚಿತ್ರಗಳು ಹಿಂದೆ ಬಂದಿದ್ದ ಎಲ್ಲ ಸಂಪ್ರದಾಯಗಳನ್ನು ಬ್ರೇಕ್ ಮಾಡಿತ್ತು. ಅಲಂಕಾರಿಕ ಗ್ಯಾಜೆಟ್-ಗಳು ಮತ್ತು ತಿಳಿ ಹಾಸ್ಯಕ್ಕೆ ಪೂರ್ಣವಿರಾಮ ನೀಡಲಾಗಿತ್ತು. ಈ ಬಾಂಡ್ ನಿಜಕ್ಕೂ ಫೈಟರ್ ಆಗಿದ್ದ. ಘಾಸಿಗೊಂಡವನಂತೆ, ರಕ್ತಸಿಕ್ತನಾಗಿ ಕಾಣಿಸಿದ್ದ. ಎಲ್ಲ ನಿಯಂತ್ರಣದ ನಡುವೆಯೇ ಕಳೆದುಹೋದವನಂತೆ ಭಾಸವಾಗಿದ್ದ. ಕ್ಯಾಸಿನೊ ರಾಯಲ್ ಚಿತ್ರದಲ್ಲಿನ ಬಾಂಡ್ ಪಾತ್ರವು ತನ್ನನ್ನು ತಾನು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವ, ಪ್ರೀತಿಯಲ್ಲಿ ಬೀಳುವ ಮತ್ತು ದ್ರೋಹಕ್ಕೆ ಗುರಿಯಾಗುವ ರೂಪವನ್ನು ಪಡೆದಿತ್ತು. ಕ್ರೇಗ್ ಅವರು ಆ ಪಾತ್ರಕ್ಕೊಂದು ಘನತೆಯನ್ನು ತಂದುಕೊಟ್ಟರು. ಅವರ ಮೌನಗಳ ನಡುವೆಯೂ ಅದು ಢಾಳಾಗಿ ಕಾಣುತ್ತಿತ್ತು.
ಕಳಚಿ ಬಿದ್ದ ಅಭೇದ್ಯ ಎಂಬ ಫ್ಯಾಂಟಸಿ
ಕಳೆದ ಇಷ್ಟೂ ವರ್ಷಗಳಲ್ಲಿ ಬಾಂಡ್ ಹೆಚ್ಚು ಮಾನವೀಯವಾಗಿ ಬೆಳೆದಿದೆ. ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುತ್ತಿತ್ತು; ತಾನು ನಿಜಕ್ಕೂ ಯಾರೊಂದಿಗೆ ಹೋರಾಟಕ್ಕೆ ಇಳಿದಿದ್ದೇನೆ ಎಂಬುದನ್ನೇ ಮರೆತು ಬಿಡುತ್ತಿತ್ತು. ಸ್ಕೈಫಾಲ್ ಚಿತ್ರದಲ್ಲಿಯೇ ಈ ಒಡಕುಗಳನ್ನು ನೀವು ಕಾಣಬಹುದು. ಆತನ ಬಳಲಿಕೆ, ಏಕಾಂಗಿತನದ ಜೊತೆಗೆ ತನಗೆ ವಹಿಸಿದ ಕೆಲಸ ಎಲ್ಲೋ ಕಳೆದುಹೋಗಿದೆ ಎಂಬ ಭಾವನೆ. ಆತನ ‘ಮಿಷನ್’ ಸರಾಗವಾಗಿರಲಿಲ್ಲ. ಆತ ಎಡವುತ್ತಿದ್ದ, ಬೀಳುತ್ತಿದ್ದ, ಸಂದೇಹಪಡುತ್ತಿದ್ದ.... ಕೊನೆಗೆ ಎದ್ದು ನಿಲ್ಲುತ್ತಿದ್ದ. ಆ ದೌರ್ಬಲ್ಯವೇ ಕೇಂದ್ರಬಿಂದುವಾಯಿತು. ಬಾಂಡ್ ಅಂದರೆ ಅಬೇಧ್ಯ ಮನುಷ್ಯ ಎಂಬ ಫ್ಯಾಂಟಸಿ ಕಳಚಿಬಿದ್ದಿತ್ತು.
ಬಾಂಡ್ ಸುತ್ತಲಿನ ಮಹಿಳೆಯರೂ ಬದಲಾದರು. ಆತನನ್ನು ನಿಜಕ್ಕೂ ಕದಲಿಸಿದ ಮೊದಲ ಮಹಿಳೆ ಎಂದರೆ ವೆಸ್ಪರ್ ಲಿಂಡ್(ಇವಾ ಗ್ರೀನ್). ಕ್ಯಾಸಿನೊ ರಾಯಲ್ ಚಿತ್ರದಲ್ಲಿ ರೈಲಿನಲ್ಲಿ ಆಗುವ ಮೊದಲ ಭೇಟಿಯಲ್ಲಿಯೇ ನಡೆಯುವ ವಾಕ್ಸಮರವೇ ಇದಕ್ಕೆ ಸಾಕ್ಷಿಯಾಗಿದೆ. ಆ ಕ್ಷಣದಿಂದಲೇ ಆಕೆ ಬಾಂಡ್-ನನ್ನು ಭೇದಿಸಬಲ್ಲಳು ಎಂಬುದನ್ನು ನಿಚ್ಚಳವಾಗಿ ತೋರಿಸುತ್ತದೆ. ಆತ ತನ್ನ ಅಹಂಕಾರ ಮತ್ತು ಅಸುರಕ್ಷತೆ ಹಿಂದೆ ಅಡಗಿಕೊಳ್ಳುವ ಮೊದಲೇ ಆಕೆ ಅದನ್ನು ಪ್ರದರ್ಶಿಸುತ್ತಾಳೆ. ಆಕೆ ಆ ಮಿಥ್ಯೆಯ ಹಿಂದೆ ಅಡಗಿರುವ ಮನುಷ್ಯ, ಅನಾಥ, ಸೈನಿಕ, ಕಾಠಿಣ್ಯತೆಯನ್ನು ದಕ್ಕಿಸಿಕೊಳ್ಳುವ ಏಕಾಂಗಿ ಎಂಬುದನ್ನು ಮೊದಲೇ ಅರ್ಥಮಾಡಿಕೊಂಡಿದ್ದಳು. ಅಂತಿಮವಾಗಿ ಅಪರಾಧ ಪ್ರಜ್ಞೆ ಮತ್ತು ಅಸಾಧ್ಯ ಆಯ್ಕೆಗಳಿಂದ ಪ್ರೇರಿತವಾದ ಆಕೆಯ ದ್ರೋಹವು ಆತನ ಅಹಂಕಾರವನ್ನು ಮುರಿಯುತ್ತದೆ. ಮುಂದೆಲ್ಲ ನಮಗೆ ಕಾಣಸಿಗುವುದು ಶೀತಲ ಸ್ವಭಾವದ, ಹೆಚ್ಚು ಸಂದೇಹಪಡುವ ಬಾಂಡ್.
ತರುವಾಯ ಆತನಿಗೆ ಭಾವನಾತ್ಮಕ ಆಧಾರಸ್ತಂಭವಾಗಿ ಬಂದಿದ್ದು ‘ಎಂ’ ಪಾತ್ರ. ಆತನ ರಕ್ಷಾ ಕವಚದೊಳಗೆ ಇಣುಕಿ ನೋಡಿದವರು ಮೆಡಲಿನ್ ಸ್ವಾನ್. ಆ ಪಾತ್ರಗಳು ನಿಜಕ್ಕೂ ‘ಬಾಂಡ್ ಹುಡುಗಿ’ಯರಾಗಿರಲಿಲ್ಲ. ಅವರು ಆತನಿಗೆ ಸಮಾನರು, ಕನ್ನಡಿಯಂತೆ ಕೆಲಸಮಾಡಿದವರು ಮತ್ತು ಇನ್ನು ಕೆಲವೊಮ್ಮೆ ಆತನ ಪತನಕ್ಕೆ ಕಾರಣರಾವರು. ಕ್ರೇಗ್ ಬಾಂಡ್ ಸರಣಿಯು ಈ ಸರಪಣಿಗೆ ನಿಜಕ್ಕೂ ಕೊನೆಹಾಡುವ ಛಾತಿಯನ್ನು ತೋರಿಸಿತು. ನೋ ಟೈಮ್ ಟು ಡೈ ಚಿತ್ರದಲ್ಲಿ ಆತನ ಕಥೆಯನ್ನೇ ಮುಗಿಸಿದಾಗ ಅದು ನಿಚ್ಚಳವಾಗಿತ್ತು. ಅದು ಮಾನವೀಯವಾಗಿತ್ತು. ಒಂದು ಕಾಲದಲ್ಲಿ ಕೊಲ್ಲಲು ಸಾಧ್ಯವೇ ಇಲ್ಲ ಎಂಬ ಪಾತ್ರಕ್ಕೆ ವಿಚಿತ್ರ ತಿರುವನ್ನು ನೀಡಿತು.
ಈಗ ವಿಲೆನ್ಯೂವ್ ಅವರು ಈ ನೌಕೆಯ ಸಾರಥ್ಯ ವಹಿಸಿಕೊಂಡಿರುವುದರಿಂದ ಎದುರಾಗಿರುವ ಪ್ರಶ್ನೆ ಮುಂದಿನ ಬಾಂಡ್ ಯಾರು ಎಂಬುದು ಮಾತ್ರವಲ್ಲ, ಆತ ಏನನ್ನು ಪ್ರತಿನಿಧಿಸುತ್ತಾನೆ ಎಂಬುದೂ ಮುಖ್ಯವಾಗುತ್ತದೆ. 2025ರಲ್ಲಿಯೂ 007 ಬಾಂಡ್ ಎಂದರೆ ಏನು? ಟಕ್ಸೆಡೋವನ್ನು ಧರಿಸಿದ ಆ ಸಭ್ಯ ಹಂತಕ ಒಂದು ಕಾಲದಲ್ಲಿದ್ದ ಗೂಢಚಾರ ಪ್ರಕಾರವನ್ನು ವ್ಯಾಖ್ಯಾನಿಸುತ್ತಿದ್ದ. ಆದರೆ ಈಗ ಜಗತ್ತು ಬದಲಾಗಿದೆ. ಅದರ ಜೊತೆಗೆ ಗೂಢಚಾರರೂ ಬದಲಾಗಿದ್ದಾರೆ.
ಬಾಂಡ್ ಈಗ ಹಳೆಯ ಆಟಗಳನ್ನು ಆಡಲಾರರು. ಆಡಿದರೂ ಗೆಲ್ಲಲಾರರು. ಆ ತೋಳ್ಬಲ, ಗ್ಯಾಜೆಟ್-ಗಳು, ಆ ಸಾಹಸಗಳು- ಅಂತಹ ತಂತ್ರಗಳನ್ನೆಲ್ಲ ಈಗಾಗಲೇ ಇತರರು ಪೂರ್ಣಗೊಳಿಸಿದ್ದಾರೆ. ಈಗಲೂ ಬಾಂಡ್ ನಮಗೆ ಮುಖ್ಯನಾಗಬೇಕು ಅಂತಿದ್ದರೆ ಆತ ನಮ್ಮ ಕಾಲಕ್ಕೆ ಪ್ರಸ್ತುತನಾಗಬೇಕು. ಹೊಸ ಬಾಂಡ್ ಕೇವಲ ದುರ್ಮಾರ್ಗಕ್ಕೆ ಎಳೆದು ಗುಂಡು ಹಾರಿಸುವುದಲ್ಲ. ಆತ ಮೌನದ ಕವಚದೊಳಗಿದ್ದರೂ ಏನನ್ನಾದರೂ ಧ್ವನಿಸಬೇಕು. ಬಹುಷಃ ವಿಲೆನ್ಯೂವ್ ಕಣ್ಣಿಟ್ಟಿರುವ ಸಂಗತಿಗಳೂ ಇದೇ ಇರಬಹುದು. ಅಂದರೆ ಬಾಂಡ್ ಅನ್ನು ಹೆಚ್ಚು ಆತ್ಮಾವಲೋಕನ ಮಾಡಿಕೊಳ್ಳುವ ಪಾತ್ರವಾಗಿ, ಕಡಿಮೆ ದಿಮಾಕು ಮತ್ತು ಹೆಚ್ಚು ಮೌಲ್ಯಭರಿತ ಪಾತ್ರವಾಗಿ ಮಾಡುವುದು ಅವರ ಯೋಚನೆಯಾಗಿರಬಹುದು.
ಇದು ಹಳೆಯ ನೆನಪುಗಳನ್ನು ರೀಬೂಟ್ ಮಾಡುವ ಕಸರತ್ತಲ್ಲ. ಬದಲಾಗಿ ಹಳೆಯ ಕಾಲದ ಹೀರೊಗಳಲ್ಲಿ ನಂಬಿಕೆಟಿತಿ ಕಳೆದುಕೊಂಡಿರುವ ಈ ಜಮಾನಕ್ಕಾಗಿ ಮಾಡುವ ನವೀನ ಆವಿಷ್ಕಾರ. ಮುಂದೆ ನಾವು ಕಾಣುವ ಬಾಂಡ್ ಜಗತ್ತನ್ನು ಉಳಿಸುವ ಬಗೆಗೆ ಇರದೆ ಜಗತ್ತು ಅರ್ಥಮಾಡಿಕೊಳ್ಳುವ ಬಗೆಗೆ ಇರಬಹುದೇನೋ?