ರಾಜಕೀಯದಲ್ಲಿ ಇದೆಯೇ ಮಹಿಳೆಯರಿಗೆ ಸ್ಥಾನಮಾನ, ಪ್ರಾತಿನಿಧ್ಯತೆ?

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

Update: 2024-03-22 12:47 GMT
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗಬೇಕಾಗಿದೆ.
Click the Play button to listen to article

ರಾಜ್ಯ ಸರ್ಕಾರದ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯತೆ  ಇಲ್ಲ ಎಂಬ ಹೇಳಿಕೆಯೊಂದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚಿಗಿನ ಕಾರ್ಯಕ್ರಮವೊಂದರಲ್ಲಿ  ಹೇಳಿ ಬೇಸರ ವ್ಯಕ್ತಪಡಿಸಿದ್ದ ಘಟನೆ ನಡೆದಿತ್ತು.

ಈಗಾಗಲೇ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಆದರೆ ಅದರ ಅನುಷ್ಠಾನ ಆಗಲು ಇನ್ನೂ ವರ್ಷಗಳೇ ಬೇಕಾಗಿವೆ. ಇದೀಗ ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆ  ಚರ್ಚೆಗೆ ಗ್ರಾಸವಾಗಿದೆ.

ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ಗಮನಿಸುತ್ತಾ ಹೋದರೆ ಪುರುಷರಿಗಿಂದ ಮಹಿಳೆಯರಿಗೆ ಸ್ಥಾನಮಾನಗಳು ಸಿಗುವುದು ಬಹಳಷ್ಟು ವಿರಳವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಮಹಿಳೆಗೆ ವಿವಾಹ, ಕುಟುಂಬ ನಿರ್ವಹಣೆ ಎಂಬಿತ್ಯಾದಿ ಪಟ್ಟಕಟ್ಟಿ ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರಬೇಕಾಗಿತ್ತು. ಆದರೆ ಇಂದು ಮಹಿಳೆ ಆ ಚೌಕಟ್ಟುಗಳನ್ನೆಲ್ಲ ಮೀರಿ ಹೊರಗೆ ಬಂದಿದ್ದಾಳೆ. ಆದರೆ ರಾಜಕೀಯದಲ್ಲಿ ಮಾತ್ರ ಆಕೆಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬುದರ ಬಗ್ಗೆ  ಮಹಿಳಾ ವೇದಿಕೆಗಳಲ್ಲಿ ಚರ್ಚೆಗಳೂ ನಡೆಯುತ್ತಿವೆ. 

ಇಂದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲೂ ಇದ್ದಾರೆ. ಆದರೆ ಅವರಿಗೆ ಸೂಕ್ತ ಮನ್ನಣೆ , ಸ್ಥಾನಮಾನ ಸಿಗುತ್ತಿಲ್ಲವೇ ಎಂಬ "ದ ಫೆಡರಲ್‌ ಕರ್ನಾಟಕʼದ ಪ್ರಶ್ನೆಗೆ ಉತ್ತರ ಪಡೆಯುವ ಯತ್ನ ಇಲ್ಲಿದೆ.


ಮಹಿಳೆ ಯಾವ ಕ್ಷೇತ್ರದಲ್ಲೂ ಕೆಲಸ ಮಾಡಬಲ್ಲಳು!

ರಾಜಕೀಯದಲ್ಲಿ ಮಹಿಳಾ ಸ್ಥಾನಮಾನದ ಕುರಿತು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ, ಮಾಜಿ ಸಚಿವೆ ಹಾಗೂ ಹಿರಿಯ ನಟಿ  ಜಯಮಾಲ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು. 

-ಮಹಿಳೆಯರು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಆದರೆ ಆಕೆಗೆ ಸೂಕ್ತ ಸ್ಥಾನಮಾನ ಸಿಗಬೇಕು. ರಾಜಕೀಯದಲ್ಲಿ ಗೆದ್ದು ಬರುವ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು.  ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರೂ ಅದು ಇನ್ನೂ ಜಾರಿಗೆ ಬರಲಿಲ್ಲ. ರೈತರು ಮಳೆಗೆ ಆಕಾಶ ನೋಡುವ ಹಾಗೆ ಮಹಿಳೆಯರು ಮೀಸಲಾತಿ ಯಾವಾಗ ಸಿಗುತ್ತದೆ ಎಂದು ಆಕಾಶ ನೋಡಬೇಕಾಗಿದೆ. ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರೆ ಆಕೆಗೆ ರಾಜಕೀಯದಲ್ಲಿ ಉತ್ತಮ ಪ್ರಾತಿನಿದ್ಯತೆ ಸಿಗಬಹುದೇನೋ ನೋಡೋಣ!.

-ಚುನಾವಣೆಯಲ್ಲಿ ಗೆದ್ದು ಬಂದ ಮಹಿಳೆಗೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ಷೇತ್ರಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಆದರೆ ಮಹಿಳೆ ಅದನ್ನು ಮೀರಿಯೂ ಬೇರೆ ಯಾವ ಕ್ಷೇತ್ರವನ್ನು ಕೊಟ್ಟರೂ ಕೆಲಸ ಮಾಡಬಲ್ಲಳು. ಆಕೆಗೆ ಕೆಲಸ ಮಾಡಬೇಕು ಎನ್ನುವ ಒಳ್ಳೆಯ ಮನಸ್ಸಿರಬೇಕು ಮತ್ತು ಕೆಲಸ ಮಾಡುವ ಹುರುಪು ಇರಬೇಕು. ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಮಹಿಳೆಯರೇ. ಬಿಸಿಲು, ಮಳೆ, ಸೆಕೆಗೆ ಎನ್ನದೆ ಬೆಳ್ಳಂಬೆಳಗೆ ಪಕ್ಷದ ಪ್ರಚಾರಕ್ಕಾಗಿ ಬರುತ್ತಾರೆ. ಮಹಿಳೆ ಯಾವತ್ತೂ ಕಠಿಣ ಪರಿಶ್ರಮ ಮಾಡುತ್ತಾಳೆ. ಅವಳಿಗೆ ಏನೇ ಕೆಲಸ ಕೊಟ್ಟರೂ ಮಾಡಬಲ್ಲಳು. ಆಕೆಯನ್ನು ನಂಬಿ ಅವಕಾಶಗಳನ್ನು ಕೊಡುವ ಕೆಲಸ ಆಗಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಉತ್ತಮ ಅವಕಾಶಗಳು ಸಿಗುವಂತಾಗಬೇಕು.  ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹಿಳಾ ಮೀಸಲಾತಿ ಕಾಯಿದೆಯಡಿ ಅವಕಾಶಗಳು ಸಿಗುತ್ತವೆ ಎಂಬ ಭರವಸೆಯಲ್ಲಿ ಇರೋಣ!

ಸಚಿವ ಸಂಪುಟಗಳಲ್ಲಿ ಮಹಿಳೆಯರಿಗೆ ಸ್ಥಾನಮಾನ ತೀರಾ ವಿರಳ

ಇನ್ನು ಈ ಬಗ್ಗೆ ದ.ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ನಟಿ ಹಾಗೂ ಬಿಜೆಪಿ ವಿಧಾನ ಪರಿಷತ್ತು ಸದಸ್ಯೆಯಾಗಿರುವ ತಾರಾ ಅನುರಾಧ, ರಾಜ್ಯದಲ್ಲಿ ಸಚಿವ ಸಂಪುಟಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಥಾನಮಾನ ಇರುವುದು ಬಹಳ ಕಡಿಮೆ. ರಾಜ್ಯಸಭೆ, ಎಮ್ಎಲ್‌ಸಿ, ಎಮ್‌ಪಿ ಸ್ಥಾನಗಳಿಗೆ ಮಹಿಳೆಯರಿಗೆ ಟಿಕೆಟ್ ಸಿಗುವುದು ಬಹಳಷ್ಟು ವಿರಳವಾಗಿದೆ. ಆಕಸ್ಮಾತ್ ಮಹಿಳೆರಿಗೆ ಟಿಕೆಟ್ ಸಿಕ್ಕಿ ಚುನಾವಣೆ ಗೆದ್ದು ಬಂದರೂ ಅವರಿಗೆ ಸರಿಯಾದ ಸ್ಥಾನಮಾನಗಳು ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಜಾರಿಗೊಳ್ಳಲಿರುವ ಮಹಿಳಾ ಮೀಸಲಾತಿ ಕಾಯಿದೆಡಿ ಮಹಿಳೆಯರಿಗೆ ಮೀಸಲಿರುವ 33% ಮೀಸಲಾತಿ ಜಾರಿಗೆ ಬಂದರೆ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಸಿಗಬಹುದು ಎನ್ನುವ ಭರವಸೆ ಇದೆ. ಮಹಿಳೆಯರಿಗೆ ಹೆಚ್ಚು ಸ್ಥಾನಮಾನ ಕೊಡುವ ಅನಿವಾರ್ಯತೆ ಎಲ್ಲಾ ಪಕ್ಷಗಳಿಗೂ ಇದೆ. ನೋಡೋಣ! ಎಂಬ ಭರವಸೆಯನ್ನು ತಾರಾ ನೀಡಿದರು. 

ರಾಜಕೀಯ ಪಕ್ಷಗಳು ಮತ್ತು ಶಾಸಕಾಂಗಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣ, ಮಹಿಳಾ ನ್ಯಾಯ ಮತ್ತು ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳಲು ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರ ರಾಜಕೀಯ ನಾಯಕತ್ವವು ಬಹಳಷ್ಟು ಮಹತ್ವದಾಗಿದೆ ಎಂದರು/

ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಮಹಿಳೆಯರ ಸಂಖ್ಯೆ ತೀರಾ ಕಡಿಮೆ

ಇನ್ನು ಕರ್ನಾಟಕವು ಕೇಂದ್ರ ಸಂಪುಟದಲ್ಲಿ ಮಾರ್ಗರೇಟ್ ಆಳ್ವ, ಬಸವರಾಜೇಶ್ವರಿ ಮತ್ತು ತಾರಾದೇವಿ ಸಿದ್ಧಾರ್ಥ್ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ನಫೀಸ್ ಫಜಲ್, ಮನೋರಮಾ ಮಧ್ವರಾಜ್, ರಾಣಿ ಸತೀಶ್ ಮುಂತಾದ ಮಹಿಳಾ ಮಂತ್ರಿಗಳು ಸ್ಥಾನವನ್ನು ಪಡೆದಿದ್ದಾರೆ. ದಿವಂಗತ ಕೆ.ಎಸ್.ನಾಗರತ್ನಮ್ಮ ಅವರು ಸಭಾಧ್ಯಕ್ಷ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾದ ಏಕೈಕ ಮಹಿಳಾ ಶಾಸಕರಾಗಿದ್ದರೆ, ಪರಿಷತ್ತಿನ ವಿರೋಧ ಪಕ್ಷದ ಏಕೈಕ ಮಹಿಳಾ ನಾಯಕಿಯಾಗಿದ್ದು ಮೋಟಮ್ಮ. ಶೋಭಾ ಕರಂದ್ಲಾಜೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ರಮ್ಯಾ ಕಾಂಗ್ರೆಸ್‌ನ ಡಿಜಿಟಲ್ ತಂಡದ ರಾಷ್ಟ್ರೀಯ ಮುಖ್ಯಸ್ಥೆ ಆಗಿದ್ದರೂ ಸಂಸತ್ತಿಗೆ ಅಥವಾ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಒಟ್ಟು ಮಹಿಳೆಯರ ಸಂಖ್ಯೆ ತೀರಾ ಕಡಿಮೆ.

1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸುವ ಶಾಸನದ ಅಂಗೀಕಾರಗೊಳ್ಳುವ ಮೊದಲೇ ಕರ್ನಾಟಕವು ಪಂಚಾಯತ್ಗಳಲ್ಲಿ ಮಹಿಳೆಯರಿಗೆ 25% ಸ್ಥಾನಗಳನ್ನು ಮೀಸಲಿಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ಶ್ಲಾಘನೀಯ, ಏಕೆಂದರೆ ಆ ಸಮಯದಲ್ಲಿ ಕರ್ನಾಟಕದಲ್ಲಿ ಈ ಕ್ರಮಕ್ಕೆ ಒತ್ತಾಯಿಸಲು ಯಾವುದೇ ಪ್ರಬಲ ಮಹಿಳೆಯರು ಇರಲಿಲ್ಲ.

ಪಂಚಾಯತ್ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮಹಿಳೆಯರು

ಇಂದು ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಟ್ಟಿದೆ. ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳೆಯರು ಸವಾಲುಗಳು ಮತ್ತು ಅಡೆತಡೆಗಳ ಹೊರತಾಗಿಯೂ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸಿ ಸಾಮಾಜಿಕ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ರಾಜ್ಯ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಮತ್ತು ಪ್ರಾತಿನಿಧ್ಯ ಇಂದಿಗೂ ನೀಡಲಾಗಿಲ್ಲ.


Tags:    

Similar News