ಮುಂದಿನ ಆರು ತಿಂಗಳು ರಾಜಕೀಯ ಪಕ್ಷಗಳಿಗೆ ಮತ್ತೆ ಚುನಾವಣಾ ಜ್ವರ

Update: 2024-05-22 07:00 GMT

ಎರಡು ಹಂತದ ಲೋಕಸಭಾ ಚುನಾವಣೆಯಲ್ಲಿ ಹೆಣಗಾಡಿ ತುಸು ವಿಶ್ರಮಿಸೋಣ ಎಂದು ಕೊಂಡ ಕರ್ನಾಟಕದ ರಾಜಕೀಯ ಪಕ್ಷಗಳು. ಆಡಳಿತರೂಢ ಕಾಂಗ್ರೆಸ್‌ ಸುಧಾರಿಸಿಕೊಳ್ಳಲು ಕಾಲಾವಕಾಶ ನೀಡುವಂತೆ ಕಾಣುತ್ತಿಲ್ಲ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ನೀಡಿರುವ ಸೂಚನೆ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.

ಮೊನ್ನೆಮೊನ್ನೆಯಷ್ಟೇ ಎರಡು ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆದು ನಿಟ್ಟುಸಿರು ಬಿಡುತ್ತಿರುವಾಗಲೇ ಕರ್ನಾಟಕಕ್ಕೆ ಮತ್ತೆ ಚುನಾವಣೆ ಜ್ವರ ಬರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಮಂಗಳವಾರ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಸೂಚನೆ ನೀಡಿದ್ದಾರೆ. “ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ, ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಯಕರು ಈ ಚುನಾವಣೆಯನ್ನು ಎದುರಿಸಲು, ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ” ಎಂದು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಬೃಹದ್‌ ಬೆಂಗಳೂರು ಮಹಾನಗೆರ ಪಾಲಿಕೆ (BBMP) ಗಳಿಗೆ ನಡೆಯಲಿರುವ ಚುನಾವಣೆಯ ಮುನ್ಸೂಚನೆ ನೀಡಿದ್ದಾರೆ.

“ಅಷ್ಟೇ ಅಲ್ಲ. ಇಂದು ರಾಷ್ಟ್ರಮಟ್ಟದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೂ ಸೇರಿದಂತೆ ಬಹುಮಂದಿ ಕಾಂಗ್ರೆಸ್‌ ನಾಯಕರು ಸ್ಥಳೀಯ ಸಂಸ್ಥೆಗಳ ರಾಜಕಾರಣದಲ್ಲಿ ಮಿಂದು, ಗೆದ್ದು ಬಂದು ಇಂದು ದೇಶ ನಡೆಸುವ ಚುಕ್ಕಾಣಿ ಹಿಡಿದಿದ್ದಾರೆ” ಎಂದು ಸ್ಥಳೀಯ ಸಂಸ್ಥೆಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿರುವ ಶಿವಕುಮಾರ್‌ ಅವರು ಪಕ್ಷವನ್ನು ಬೇರು ಮಟ್ಟದಿಂದ ಭದ್ರವಾಗಿಸಲು ಕಾಂಗ್ರೆಸ್ ಪಕ್ಷದ ಹಲವು ಘಟಕಗಳನ್ನು ಪುನರ್‌ ರಚಿಸಲಾಗುವುದು ಎಂಬ ಸೂಚನೆಯನ್ನೂ ನೀಡಿದ್ದಾರೆ.

ನಾಲ್ಕು ಕೋಟಿ ಮತದಾರರು

ಆಡಳಿತರೂಢ ಸರ್ಕಾರಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ವಿಧಾನ ಸಭಾ ಚುನಾವಣೆಯಷ್ಟೇ ಮುಖ್ಯ. ಏಕೆಂದರೆ ರಾಜ್ಯದ 31 ಜಿಲ್ಲೆಗಳ ಮೇಲೆ ಹಿಡಿತ ಸಾಧಿಸಲು ಈ ಚುನಾವಣಾ ಪ್ರಕ್ರಿಯೆ ನೆರವಾಗುತ್ತದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸುವ ಪ್ರಕ್ರಿಯೆ 2021 ರಿಂದ ಬಾಕಿ ಉಳಿದಿದೆ. ಈ ಚುನಾವಣೆಯಲ್ಲಿ ರಾಜ್ಯದ ನಾಲ್ಕು ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ.

ವಿಧಾನ ಪರಿಷತ್‌ ಚುನಾವಣೆ/ ತ್ರಿಕೋನ ಸ್ಪರ್ಧೆ?

ಸದ್ಯಕ್ಕೆ ಆಡಳಿತರೂಢ ಕಾಂಗ್ರೆಸ್‌ ಸೇರಿದಂತೆ ಮೂರು ಪ್ರಮುಖ ರಾಜಕೀಯ ಪಕ್ಷಗಳು ಜೂನ್‌ ೧೩ ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಗತ್ಯವಾದ ತಂತ್ರವನ್ನು ರೂಪಿಸುತ್ತಿದೆ. ಕಾರಣ ಇಷ್ಟೇ; ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಲ್ಲಿ ಕೆಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಇದರಿಂದಾಗಿ ತ್ರಿಕೋನ ಸ್ಪರ್ಧೆ ನಡೆಯು್ ಸಾಧ್ಯತೆಗಳು ದಟ್ಟವಾಗಿದೆ.

ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ 11 ಸದಸ್ಯರ ಸದಸ್ಯತ್ವ ಅವಧಿಯು ಜೂನ್‌17 ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಆ ಸ್ಥಾನಗಳಿಗೆ ಜೂನ್‌ 13ರಂದು ಮತದಾನ ನಡೆಸಲು ಚುನಾವಣಾ ಅಯೋಗ ನಿರ್ಧರಿಸಿ ಸೂಕ್ತ ಆದೇಶವನ್ನು ಹೊರಡಿಸಿದೆ. ಈ 11 ಸ್ಥಾನಗಳಲ್ಲಿ ಬಿಜೆಪಿಯ ಏಳು, ಕಾಂಗ್ರೆಸ್‌ ಪಕ್ಷದ ಮೂರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಈ ಚುನಾವಣೆಯ ಅಧಿಸೂಚನೆಯು ಮೇ 27 ರಂದು ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ

ಈ ನಡುವೆ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ ಚುನಾವಣೆಗೆ ಕಾಲಕೂಡಿ ಬಂದಿರುವಂತೆ ಕಾಣುತ್ತದೆ. ಇದಕ್ಕೆ ಶಿವಕುಮಾರ್‌ ಅವರ ಮಂಗಳವಾರದ ಮಾತುಗಳು ಪುಷ್ಠಿ ಒದಗಿಸುತ್ತವೆ. “ಅಧಿಕಾರರೂಢ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಗಳಿಸುವ ಸ್ಥಾನಗಳ ಮೇಲೆ ಈ ಚುನಾವಣೆ ನಡೆಯುವ ಸಾಧ್ಯತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅನ್ನಿಸುತ್ತಿದೆ” ಎಂಬುದು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವಿಸುತ್ತಿರುವಂತೆ ಲೊಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ 15 ರಿಂದ 20 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದರೆ, ಅದರ ಲಾಭ ಪಡೆದುಕೊಳ್ಳುವುದೇ ಅಲ್ಲದೆ, ವಿಧಾನ ಸಭೆಯಲ್ಲಿರುವ ಬಹುಮತದಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಮೇಲೆ ಹಿಡಿತ ಸ್ಥಾಪಿಸಬಹುದು. ಇದರಿಂದ 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಪಕ್ಷದ್ದು” ಎಂಬುದು ಜೆಡಿಎಸ್‌ನ ಅಸಮಾಧಾನಿತ ಶಾಸಕರ ಅಭಿಪ್ರಾಯ.

ಸೀಮಾ ನಿರ್ಣಯ ಮತ್ತು ಮೀಸಲು ಪ್ರಮಾಣ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲು ಇರುವ ಕಾನೂನಿನ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. ಚುನಾವಣೆ ನಡೆಸುವ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಸೀಮಾ ನಿರ್ಣಯ (Delimitation) ಮತ್ತು ಮೀಸಲು ಪ್ರಮಾಣವನ್ನು ನಿರ್ಧರಿಸಿದರೂ, ವಾರ್ಡ್‌ವಾರು ಮೀಸಲು ನಿಗದಿಗೊಳಿಸುವ ಪ್ರಕ್ರಿಯೆ ಬಾಕಿ ಇದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿ ಆಕ್ಷೇಪವನ್ನು ಆಹ್ವಾನಿಸಬೇಕಿದೆ. ಬರುವ ಆಕ್ಷೇಪ ಪರಿಶೀಲಿಸಿ, ಅಂತಿಮ ಪಟ್ಟಿ ಪ್ರಕಟಿಸುವ ಕ್ರಮ ಬಾಕಿ ಇದೆ. ಈ ಎಲ್ಲ ಕ್ರಮಗಳು ಪೂರ್ಣಗೊಂಡ ನಂತರ ರಾಜ್ಯ ಚುನಾವಣಾ ಆಯೊಗ ಚುನಾವಣೆ ನಡೆಸಬೇಕಾಗುತ್ತದೆ.

ಹೈಕೋರ್ಟ್‌ ಮಧ್ಯ ಪ್ರವೇಶ

ಪಂಚಾಯತಿ ಚುನಾವಣೆಗಳ ಸಂಬಂಧ ಕಳೆದ ಡಿಸೆಂಬರ್‌ ತಿಂಗಳಲ್ಲಿ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಹೈಕೋರ್ಟ್‌ ಹತ್ತು ದಿನಗಳಲ್ಲಿ ಮೀಸಲಾತಿ ಪ್ರಕಟಿಸಿ, ಆಕ್ಷೇಪ ಆಹ್ವಾನಿಸಿ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ನಂತರದ ಎರಡು ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ಸೂಚನೆಯಂತೆ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಒಟ್ಟಾರೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ಮೀಸಲಾತಿ ಮಾತ್ರ ಇದುವರೆಗೆ ಅಂತಿಮಗೊಳಿಸಿಲ್ಲ ಎಂದು ಸರ್ಕಾರದ ಅಧಿಕೃತ ಮೂಲಗಳು ಹೇಳುತ್ತವೆ.

“ಪಂಚಾಯತಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಬದ್ಧ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಚುನಾವಣೆ ನಡೆಸಲು ಇಚ್ಛಾಶಕ್ತಿಯ ಕೊರತೆ ಇದ್ದ ಕಾರಣ ಹಲವಾರು ನೆಪಗಳನ್ನು ಒಡ್ಡಿ ಚುನಾವಣೆಯನ್ನು ಮುಂದೂಡಿಕೊಂಡೇ ಬಂದಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಪಂಚಾಯತಿ ಸೀಮೆಗಳ ಮರುವಿಂಗಡನೆ, ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದಷ್ಟು ಬೇಗ ಮೀಸಲಾತಿಯನ್ನೂ ಪ್ರಕಟಿಸಲಾಗುವುದು” ಕಾಂಗ್ರೆಸ್‌ ಪಕ್ಷದ ವಾಕ್ತಾರರೂ, ರಾಜ್ಯದ ಸಂಪುಟ ಸಚಿವರೂ ಆಗಿರುವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕಳೆದ ನವೆಂಬರ್‌ ತಿಂಗಳಲ್ಲಿ ಸಲ್ಲಿಕೆಯಾದ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗದ ವರದಿನ್ನು ಆಧರಿಸಿದರೆ, ರಾಜ್ಯದಲ್ಲಿ1,101 ಜಿಲ್ಲಾ ಪಂಚಾಯತಿ ಸ್ಥಾನಗಳು ಹಾಗೂ 3621 ತಾಲ್ಲೂಕು ಪಂಚಾಯತಿ ಕ್ಷೇತ್ರಗಳು ನಿಗದಿಯಾಗಿವೆ.

ಬೃಹದ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ಕಳೆದ ನಾಲ್ಕು ವರ್ಷಗಳಿಂದ ನಡೆದಿಲ್ಲ. ಕಾರಣ ಆಗ ಆಡಳಿತದಲ್ಲಿದ್ದ ಬಿಜೆಪಿಯ ಇಚ್ಛಾ ಶಕ್ತಿಯ ಕೊರತೆ ಎಂಬುದು ಜೆಡಿಎಸ್‌ ನಾಯಕರ ಅಳಲು. ಲೋಕಸಭಾ ಚುನಾವಣೆಯ ನಂತರ BBMP ಗೆ ಚುನಾವಣೆ ನಡೆಸುವುದಾಗಿ, ಜನವರಿಯಲ್ಲಿಯೇ ಉಪ ಮುಖ್ಯಮಂತ್ರಿ ಶಿವಕುಮಾರ್‌ ಅವರು ಹೇಳಿದ್ದರು. ಸೆಪ್ಟೆಂಬರ್‌ ೨೦೨೦ರಿಂದ ಚುನಾಯಿತ ಮಂಡಳಿ ಇಲ್ಲದ BBMP ಆಡಳಿತವನ್ನು ಅಧಿಕಾರಿಗಳೇ ನಡೆಸುತ್ತಿದ್ದಾರೆ. ಈ BBMP ಯ 225 ವಾರ್ಡ್ ಗಳಿಗೆ ಲೋಕಸಭಾ ಚುನಾವಣೆಯ ನಂತರ ಚುನಾವಣೆ ನಡೆಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶಿವಕುಮಾರ್‌ ಜನವರಿ ತಿಂಗಳಲ್ಲಿಯೇ ಪ್ರಕಟಿಸಿದ್ದರು. ಕಳೆದ ಸೆಪ್ಟೆಂಬರ್‌ ನಲ್ಲಿ ನಗರಾಭಿವೃದ್ಧಿ ಇಲಾಖೆ ಒಟ್ಟು ಇದ್ದ 243 ವಾರ್ಡ್ ಗಳನ್ನು ಕಡಿತಗೊಳಿಸಿ 225ಕ್ಕೆ ಇಳಿಸಿತ್ತು. ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗದ ವರದಿಯನ್ನು ಆಧರಿಸಿ, ಕಳೆದ ಅಕ್ಟೋಬರ್ ನಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಜಿಲ್ಲಾ ಮತ್ತು ತಾಲ್ಲೂಕ್‌ ಪಂಚಾಯತ್‌ ಮತ್ತು BBMP ಯಲ್ಲಿ ಶೇ 33 ಮೀಸಲಾತಿಯನ್ನು ಪ್ರಕಟಿಸಿತ್ತು. ಆದರೆ ಮೀಸಲಾತಿ ಮಾತ್ರ ಇದುವರೆಗೆ ಅಂತಿಮಗೊಳಿಸಿಲ್ಲ ಎಂದು ಸರ್ಕಾರದ ಅಧಿಕೃತ ಮೂಲಗಳು ಹೇಳುತ್ತವೆ.

ಒಟ್ಟಾರೆಯಾಗಿ ಹೇಳಬಹುದಾದರೆ, ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳಿಗೆ ಮುಂದಿನ ಆರು ತಿಂಗಳು ಚುನಾವಣಾ ಜ್ವರ ಕಾಡುವುದು ಖಚಿತ. ಪ್ರಜಾಪ್ರಭುತ್ವದ, ಅಧಿಕಾರ ವಿಕೇಂದ್ರೀಕರಣದ ಈ ಹಬ್ಭವನ್ನು ಸರ್ಕಾರ ಎಷ್ಟು ನಿಷ್ಠೆಯಿಂದ ಆಚರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Tags:    

Similar News