ರಾಜಕೀಯ ಅಸ್ತಿತ್ವ: ರಾಯಣ್ಣ ಬ್ರಿಗೇಡ್ ಮರುಜೀವಕ್ಕೆ ಈಶ್ವರಪ್ಪ‌ ಸಜ್ಜು

ಈಶ್ವರಪ್ಪನವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಮೊರೆ ಹೋಗಿದ್ದಾರೆ. ಹಾಗಾಗಿ ʼರಾಯಣ್ಣ ಬ್ರಿಗೇಡ್ ʼಗೆ ಅವರು ಮರುಜೀವ ನೀಡಲು ಈಶ್ವರಪ್ಪ ಮತ್ತೆ ಯತ್ನ ಮುಂದುವರಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೋದಿ ಮಂತ್ರ ಪಠಿಸುತ್ತಲೇ ಬಂಡಾಯ ಅಭ್ಯರ್ಥಿಯಾಗಿರುವ ಈಶ್ವರಪ್ಪ ಈಗ ಮತ್ತೆ ʼರಾಯಣ್ಣ ಬ್ರಿಗೇಡ್‌ʼ ಮೂಲಕ ಹಿಂದುಳಿದ ವರ್ಗಗಳ, ಪ್ರಮುಖವಾಗಿ ಕುರುಬರ ನಾಯಕರಾಗಿ ಹೊರಹೊಮ್ಮಲು ದಾರಿ ಕಂಡುಕೊಂಡಿದ್ದಾರೆ.

Update: 2024-04-18 01:20 GMT

ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಕಟ್ಟುವ ಕಾಯಕದಲ್ಲಿ ಬಿ.ಎಸ್‌. ಯಡಿಯೂರಪ್ಪ, ಬಿ.ಬಿ. ಶಿವಪ್ಪ  ಮತ್ತಿತರರ ಜತೆ ಸಮಕಾಲೀನರಾಗಿ ದುಡಿದ; ಯಡಿಯೂರಪ್ಪ ಅವರ ಒಂದು ಕಾಲದ ಆತ್ಮೀಯ ಸಂಗಾತಿಯಾಗಿದ್ದ ಕೆ.ಎಸ್‌. ಈಶ್ವರಪ್ಪ ರಾಜ್ಯದ ಪ್ರಮುಖ ರಾಜಕಾರಣಿ.  ರಾಜ್ಯದಲ್ಲಿ ಬಿಜೆಪಿ ಉತ್ಥಾನಕ್ಕೆ ಕಾರಣರಾದವರಲ್ಲಿ ಈಶ್ವರಪ್ಪ ಅವರೂ ಪ್ರಮುಖರು. ಎರಡು ಬಾರಿ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿಯೂ ಪಕ್ಷದಲ್ಲಿ ತನ್ನದೇ ಛಾಪು ಮೂಡಿಸಿದ ಪ್ರಖರ ಹಿಂದುತ್ವವಾದಿ  ಹಾಗೂ ಕುರುಬ ನಾಯಕ ಈಶ್ವರಪ್ಪ ಉಪಮುಖ್ಯಮಂತ್ರಿಯೂ ಆಗಿದ್ದರು ಮತ್ತು ಮುಖ್ಯಮಂತ್ರಿಯಾಗುವ ಕನಸನ್ನೂ ಕಂಡಿದ್ದರು.

ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿ.ಎಸ್.‌ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಹಿಡಿತದಲ್ಲಿರುವ ರಾಜ್ಯ ಬಿಜೆಪಿಗೆ ಈಶ್ವರಪ್ಪ ಬೇಡವಾಗಿದ್ದಾರೆ. ಮಾತೃ ಪಕ್ಷದಬಗ್ಗೆ ಒಲವು ವ್ಯಕ್ತಪಡಿಸುತ್ತಲೇ ಯಡಿಯೂರಪ್ಪ ವಿರುದ್ಧ ಬಂಡೆದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೋದಿ ಮಂತ್ರ ಪಠಿಸುತ್ತಲೇ ಬಂಡಾಯ ಅಭ್ಯರ್ಥಿಯಾಗಿರುವ ಈಶ್ವರಪ್ಪ ಈಗ ಮತ್ತೆ  ʼರಾಯಣ್ಣ ಬ್ರಿಗೇಡ್‌ʼ ಮೂಲಕ ಹಿಂದುಳಿದ ವರ್ಗಗಳ, ಪ್ರಮುಖವಾಗಿ ಕುರುಬರ ನಾಯಕರಾಗಿ  ಹೊರಹೊಮ್ಮಲು ದಾರಿ ಕಂಡುಕೊಂಡಿದ್ದಾರೆ.

ಹಿಂದೊಮ್ಮೆ ಪಕ್ಷ ರಾಜಕಾರಣದಲ್ಲಿ ಅವರ ಅಸ್ತಿತ್ವ ಅಲುಗಾಡಿದಾಗ, ಬಿಜೆಪಿಗೆ ಹಿಂದುಳಿದ ವರ್ಗಗಳ ನಾಯಕರೊಬ್ಬರ ಅಗತ್ಯ ಉದ್ಭವಿಸಿದಾಗ, ಕಾಂಗ್ರೆಸ್‌ ನ ಹಿಂದುಳಿದ ವರ್ಗಗಳ, ಮುಖ್ಯವಾಗಿ ಕುರುಬ ಸಮುದಾಯದ ಸಿದ್ದರಾಮಯ್ಯನವರಿಗೆ ಪರ್ಯಾಯ ನಾಯಕತ್ವಕ್ಕಾಗಿ  ಈಶ್ವರಪ್ಪ ಕಂಡುಕೊಂಡ ದಾರಿ- ರಾಯಣ್ಣ ಬ್ರಿಗೇಡ್.  ಕಿತ್ತೂರು ರಾಣಿ ಚೆನ್ನಮ್ಮನ ಪರವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕುರುಬ ಸಮುದಾಯದ ಸಂಗೊಳ್ಳಿ ರಾಯಣ್ಣನ ಹೆಸರಿನ ಬ್ರಿಗೇಡ್‌ ಪ್ರಮುಖವಾಗಿ ಯುವಪಡೆಯನ್ನು ಆಕರ್ಶಿಸುವುದಾಗಿತ್ತು.

ಈಗ ಮತ್ತೆ ಈಶ್ವರಪ್ಪನವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿರುವ ಸಂದರ್ಭದಲ್ಲಿ  ಮತ್ತೆ ರಾಯಣ್ಣನ ಮೊರೆ ಹೋಗಿದ್ದಾರೆ.  ಹಾಗಾಗಿ ʼರಾಯಣ್ಣ ಬ್ರಿಗೇಡ್ ʼಗೆ ಅವರು ಮರುಜೀವ ನೀಡಲು ಈಶ್ವರಪ್ಪ ಮತ್ತೆ ಯತ್ನ ಮುಂದುವರಿಸಿದ್ದಾರೆ.

ಈ ಕುರಿತು ʼದ ಫೆಡರಲ್-ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ,ಚುನಾವಣೆಯ ನಂತರ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಸಮಾನ ಮನಸ್ಕರೊಂದಿಗೆ ಚರ್ಚಿಸಿ, ರಾಯಣ್ಣ ಬ್ರಿಗೇಡ್‌  ನಿರ್ಧಾರ ತೆಗೆದುಕೊಳ್ಳುತ್ತೇನೆ”, ಎಂದು ತಿಳಿಸಿದ್ದಾರೆ.

ಆದರೆ ʼರಾಯಣ್ಣ ಬ್ರಿಗೇಡ್‌ʼ ತಮ್ಮ ಅಸ್ತಿತ್ವಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. "“ಆಗಲೂ ನನ್ನ ಅಸ್ತಿತ್ವದ ಪ್ರಶ್ನೆಗಾಗಿ ನಾನು ರಾಯಣ್ಣ ಬ್ರಿಗೇಡ್‌ ನಾಯಕತ್ವ ವಹಿಸಲಿಲ್ಲ. ಈಗಲೂ ಅಂಥ ಉದ್ದೇಶ ನನಗಿಲ್ಲ. ಸದ್ಯಕ್ಕೆ, ಯಡಿಯೂರಪ್ಪ ಮತ್ತು ಮಕ್ಕಳ ಕುಟುಂಬ ರಾಜಕಾರಣವನ್ನು ಪ್ರತಿಭಟಿಸಿ, ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು, ಮೋದಿ ಅವರ ಬೆಂಬಲವಾಗಿ ನಿಲ್ಲುವುದಷ್ಟೇ ನನ್ನ ಉದ್ದೇಶ," ಎಂದು ಹೇಳಿದ್ದಾರೆ.

ಮೋದಿ ಹೆಸರಿನಲ್ಲೇ!

ಯಡಿಯೂರಪ್ಪ ಅವರ ವಿರುದ್ಧ ಮಲೆತು ನಿಂತು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪ, ಮತ ಕೇಳುತ್ತಿರುವುದು ಪ್ರಧಾನಿ ನರೇಂದ್ರ  ಮೋದಿ ಅವರ ಹೆಸರಿನಲ್ಲಿಯೇ. ಪಕ್ಷೇತರರಾಗಿ ಗೆದ್ದು ಬಂದು ಬೆಂಬಲ ನೀಡುವುದು ಮೋದಿ ಅವರಿಗೇ ಎಂದು ಹೇಳಿದ್ದರೂ, ಬಿಜೆಪಿ ಅವರ ಅವರ ನಡವಳಿಕೆಯನ್ನು  ಉಪೇಕ್ಷೆ ಮಾಡಿದಂತೆ ಕಾಣುತ್ತಿದೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್‌ ಅವರು, “ಈ ಈಶ್ವರಪ್ಪ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದು  ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ  ಹೇಳಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದ ಉಪೇಕ್ಷೆಗೆ ಒಳಗಾಗಿರುವ ಅವರು ಪಕ್ಷದ ನಾಯಕರಿಗೆ, ವಿಶೇಷವಾಗಿ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು "ರಾಯಣ್ಣ್ಣ ಬ್ರಿಗೇಡ್‌" ಗೆ ಮರುಜೀವ ನೀಡುವರು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

2016ರ ಸೆಪ್ಟಂಬರ್‌ ನಲ್ಲಿ ಕೆ.ಎಸ್‌. ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ್ದರು. ಇದು ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಗೆ ಸೆಡ್ಡುಹೊಡೆಯಲು ಹುಟ್ಟುಹಾಕಿದ ಸಂಘಟನೆ ಎಂದು ಬಿಂಬಿತವಾಗಿತ್ತು. ಆದರೆ, ಅದು ಆಂತರಿಕವಾಗಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರಾಗಲು ಈಶ್ವರಪ್ಪ ಅವರು ಹುಟ್ಟುಹಾಕಿದ ಸಂಘಟನೆ ಎನ್ನುವುದು ಸ್ಪಷ್ಟವಾಗಿತ್ತು. ಹಾಗಾಗಿಯೇ ಅಂದು ಪಕ್ಷದ ರಾಜ್ಯಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು ರಾಯಣ್ಣ ಬ್ರಿಗೇಡ್‌ ಅನ್ನು ವಿರೋಧಿಸಿದ್ದರು.

ಈಶ್ವರಪ್ಪ ಅವರು ಆಗ ಈ ಸಂಘಟನೆಯಿಂದ ಬಿಜೆಪಿಗೆ ದೊಡ್ಡ ಲಾಭವನ್ನು ತರುತ್ತದೆ. ಈ ಮೂಲಕ ನಾವು ಹಿಂದುಳಿದ ವರ್ಗದ ಮತಗಳನ್ನು ಬಿಜೆಪಿಯತ್ತ ಸೆಳೆಯಬಹುದು ಎಂದು ಪಕ್ಷದ ನಾಯಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ, ಯಡಿಯೂಪ್ಪ ಅವರು, ಈಶ್ವರಪ್ಪ ಅವರ ಸಬೂಬುಗಳನ್ನು ಒಪ್ಪದೇ ಆ ಸಂಘಟನೆಯ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ʻʻಬ್ರಿಗೇಡ್‌ ಹುಟ್ಟು ಹಾಕುವುದರಿಂದ ಪಕ್ಷದ ಸಂಘಟನೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ, ಈ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಪಕ್ಷದಲ್ಲಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಮುಂತಾದ ಮೋರ್ಚಾಗಳಿವೆ, ಅವುಗಳ ಮೂಲಕವೇ ಹಿಂದುಳಿದ ವರ್ಗದವರನ್ನು ಸಂಘಟನೆ ಮಾಡಬೇಕು ಎಂದು ಯಡಿಯೂರಪ್ಪ ಸೂಚನೆ ಹೊರಡಿಸಿದ್ದರು.

ಆದರೆ, ಅಂದು ಯಡಿಯೂರಪ್ಪ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಈಶ್ವರಪ್ಪ ಅವರು ಹಿಂದುಳಿದ ವರ್ಗದ ನಾಯಕರುಗಳನ್ನು ಕಟ್ಟಿಕೊಂಡು ರಾಜ್ಯದ್ಯಾಂತ ಸಮಾವೇಶಗಳನ್ನು ಮಾಡಿದರು. ಆಗ ಈಶ್ವರಪ್ಪ ಅವರಿಗೆ ಸಾಥ್‌ ಕೊಟ್ಟಿದ್ದು, ಮಾಜಿ ಸಂಸದ ವಿರೂಪಾಕ್ಷಪ್ಪ, ಮುಕಡಪ್ಪ, ಬಿಬಿಎಂಪಿ ಮಾಜಿ ಮೇಯರ್‌ ವೆಂಕಟೇಶಮೂರ್ತಿ ಸೇರಿದಂತೆ ಹಲವು ನಾಯಕರು.

ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್‌ ಸಂಘಟನೆ ಮಾಡುತ್ತಾ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಂಡರು. ಈ ಸಂಘಟನೆ ಮೂಲಕವೇ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡಬೇಕು ಎಂದು ಹೋರಾಟಗಳನ್ನು ಮಾಡಿದರು. ರಾಯಣ್ಣ ಬ್ರಿಗೇಡ್‌ ವತಿಯಿಂದ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆಯ ಹೋರಾಟ ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದು ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಬುಟ್ಟಿಯಲ್ಲಿದ್ದ ಕುರುಬ ಸಮುದಾಯದ ಮತಗಳು ಬಿಜೆಪಿಯತ್ತ ವಾಲುವ ಸಾಧ್ಯತೆಗಳನ್ನು ಹುಟ್ಟುಹಾಕಿತ್ತು.

ಇತ್ತ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಲಿಂಗಾಯತ ನಾಯಕರು ಗುರುತಿಸಿಕೊಂಡಿದ್ದರೆ, ಒಬಿಸಿ ನಾಯಕರಾಗಿ ಈಶ್ವರಪ್ಪ ಬಿಂಬಿತ ಆಗುವ ಸಂದರ್ಭದಲ್ಲಿ ರಾಯಣ್ಣ ಬ್ರಿಗೇಡ್‌ಅನ್ನು ಮುಂದುವರೆಸಬಾರದು ಎಂದು ಬಿಜೆಪಿ ಹೈಕಮಾಂಡ್‌ ಮೂಲಕ ಯಡಿಯೂರಪ್ಪ ಅವರು ಸೂಚನೆ ಹೊರಡಿಸಿದರು. ಅಲ್ಲಿಗೆ ಈಶ್ವರಪ್ಪ ಅವರು ಬ್ರಿಗೇಡ್‌ ಸಂಘಟನೆಯನ್ನು ನಿಲ್ಲಿಸಬೇಕಾಯಿತು.

ಮತ್ತೆ ಮುನ್ನೆಲೆಗೆ ಬ್ರಿಗೇಡ್‌!

ಇದೀಗ ಮತ್ತೆ ರಾಯಣ್ಣ ಬ್ರಿಗೇಡ್‌ ಅಸ್ತ್ರ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಈಶ್ವರಪ್ಪನವರ ಆಪ್ತರೊಬ್ಬರು ಹೇಳುವುದು ಹೀಗೆ:  ʻʻಈಶ್ವರಪ್ಪ ಅವರಿಗೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರಿಂದ ಅನ್ಯಾಯ ಆಗುತ್ತಲೇ ಇದೆ. ಈ ಹಿಂದೆಯೂ ರಾಯಣ್ಣ ಬ್ರಿಗೇಡ್‌ ಹುಟ್ಟುಹಾಕಿದಾಗಲೂ ಅದನ್ನು ನಿಲ್ಲಿಸಬೇಕು ಎಂದು ಯಡಿಯೂರಪ್ಪನವರು ಪ್ರಯತ್ನ ಮಾಡಿದ್ದರು. ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್‌ ಆರಂಭಿಸಿದಾಗ ಯಡಿಯೂರಪ್ಪ ಅವರಿಗೆ ಅಭದ್ರತೆ ಕಾಡಿತ್ತು. ಹಾಗಾಗಿ ಅವತ್ತು ಬ್ರಿಗೇಡ್‌ ನಿಲ್ಲಿಸಲು ಕುತಂತ್ರ ಮಾಡಿದರು. ಈಗ ಈಶ್ವರಪ್ಪನವರ ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದರು.

"ಮತ್ತೆ ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಆರಂಭ ಮಾಡುವ ಚಿಂತನೆ ನಡೆದಿದೆ. ಈ ಬಗ್ಗೆ ಈಶ್ವರಪ್ಪ ಅವರ ಜೊತೆ ಮಾತನಾಡಿದ್ದೇವೆ," ಎಂದವರು ತಿಳಿಸಿದ್ದಾರೆ.

Tags:    

Similar News