ಡಾ. ರಾಜಕುಮಾರ್-‌ ನಾಡು-ನುಡಿಯ ಅಸ್ಮಿತೆ; ʼಗಂಧದ ಗುಡಿʼ ಯ ಗಂಧರ್ವ ʼರಾಜʼನನ್ನು ಅಕಾಡೆಮಿಕ್‌ ಚೌಕಟ್ಟಿನಲ್ಲಿ ಚಿತ್ರಿಸಿದ ಪರಮಾಪ್ತ ಕಥನ

Update: 2024-05-28 05:17 GMT

ಡಾ. ರಾಜಕುಮಾರ್‌ ಅವರನ್ನು ಕುರಿತು ಇದುವರೆಗೆ ಸುಮಾರು 110ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಈ ನೂರಾಹತ್ತು ಪುಸ್ತಗಳಿಗೆ ಕಿರೀಟವಿಟ್ಟಂತೆ ಪ್ರಕಟವಾಗಿರುವುದು, ಡಾ. ರಾಜಕುಮಾರ್‌-ಸಮಗ್ರ ಚರಿತ್ರೆ-ಜೀವನ ಎಂಬ 1060 ಪುಟಗಳ ಎರಡು ಸಂಪುಟಗಳು. ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಡಾ. ರಾಜಕುಮಾರ್‌-ನಾಡು ನುಡಿಯ ಆಸ್ಮಿತೆ ಬೇರೆಯದೇ ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಈ ಪುಸ್ತಕ ಅಕಾಡೆಮಿಕ್‌ ಬರಹಗಳ ವಿಚಾರ ಮಂಥನದ ಜೊತೆಗೆ ಓದಿನ ಖುಷಿಯನ್ನೂ ನೀಡುವ ಪುಸ್ತಕವಿದು. ಈ ಪುಸ್ತಕದ ನೆವದಲ್ಲಿ, ಡಾ. ರಾಜಕುಮಾರ್‌ ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನವಿದು.


ಕನ್ನಡದ ವರನಟ ಎಂದೇ ಖ್ಯಾತಿವಂತರಾದ ಡಾ. ರಾಜಕುಮಾರ್‌, ಕನ್ನಡ ಚಿತ್ರರಂಗವಷ್ಟೇ ಅಲ್ಲ, ಕನ್ನಡ ಸಾಂಸ್ಕೃತಿಕ ಲೋಕದ ದಂತ ಕಥೆ. ರಾಜಕುಮಾರ್‌ ಅವರು ಕಲೆಯ ಜೊತೆಗೆ ಕನ್ನಡದ ಜನತೆಗೂ ಬದ್ಧರಾಗಿ ಬದುಕಿದವರು. ಅವರು ಅಭಿನಯಿಸಿದ ಕನ್ನಡ ಚಿತ್ರಗಳು ಸಾಂಸ್ಕೃತಿಕ-ಸಾಮಾಜಿಕ ವಿವೇಕದ ರೂಪಕಗಳು. ಮತ್ತೊಂದು ಮರೆಯಲಾರದ ಸಂಗತಿಯೆಂದರೆ, ಸಿನಿಮಾದ ಆಚೆಗೂ ರಾಜಕುಮಾರ್‌ ಅವರ ಸಾಮಾಜಿಕ ಕಾಳಜಿಯ ಚಟುವಟಿಕೆಗಳು ಸದ್ದಿಲ್ಲದೆ ನಡೆದವು. “ಭಾರತದಲ್ಲಿ ನಿಜವಾದ ಸೂಪರ್‌ ಸ್ಟಾರ್‌ ಎಂದರೆ ಒಬ್ಬ ರಾಜಕುಮಾರ್.‌ ಮತ್ತೊಬ್ಬರು ಎಂಜಿಆರ್‌ ರಾಜಕುಮಾರ್‌ ಅವರು ತಾಯಿಯ ಮೇಲಿಟ್ಟಿರುವ ಪ್ರೀತಿ ಎಲ್ಲರಿಗೂ ಅನುಕರಣನೀಯ. ಚಿತ್ರರಂಗದಲ್ಲಿ ಯೋಗ, ಆಧ್ಯಾತ್ಮದಲ್ಲಿ ನಿರತರಾಗಿರುವ ಕಲಾವಿದರು ವಿರಳ. ವಿಲಾಸಿ ಜೀವನದಲ್ಲಿ ಮುಳುಗಿರುವ ನಮ್ಮ ಬಹುತೇಕ ಕಲಾವಿದರಿಗೆ ರಾಜಕುಮಾರ್‌ ಜೀವನ ಮಾದರಿ”, ಹೀಗೆಂದವರು ಇನ್ನಾರೂ ಅಲ್ಲ. ಸ್ವತಃ ತಮಿಳಿನ ಮೇರು ನಟ ಎಂ.ಜಿ. ರಾಮಚಂದ್ರನ್.‌

ರಷ್ಯಾದ ಲೇಖಕ ಪ್ಲಖೋನೋವ್‌ ಅವರು "ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ”. ನಿಜ; ಯಾವುದೇ ಕಲಾಕಾರರು, ಸಾಹಿತಿ, ಕಲಾವಿದ, ಯಾರೇ ಆಗಲಿ ಅವರು ಜನರಿಗೆ ಜವಾಬ್ದಾರರಾಗಬೇಕು. ಆಗ ಅವರಲ್ಲಿ ಸದಭಿರುಚಿ ಮತ್ತು ಸಮಕಾಲೀನ ಸಾಮಾಜಿಕ ನೆಲೆಗಳು ಜಾಗೃತವಾಗಿರುತ್ತವೆ. ಕೆಲವರಲ್ಲಿ ಸೈದ್ಧಾಂತಿಕತೆಯ ರೂಪದಲ್ಲಿ ಈ ಅಂಶಗಳು ಅನಾವರಣಗೊಳ್ಳುತ್ತವೆ. ತಾವು ನಂಬಿದ ಸೈದ್ಧಾಂತಿಕತೆಯೆಂದು ಭಾವಿಸಿ ಜನರಿಗೆ ಜವಾಬ್ದಾರರಾಗಿ ಬದುಕಿದ ಕಲಾವಿದ ಡಾ. ರಾಜಕುಮಾರ್‌, ಎನ್ನುತ್ತಾರೆ ಖ್ಯಾತ ಲೇಖಕ ಬರಗೂರು ರಾಮಚಂದ್ರಪ್ಪ. ಒಟ್ಟಾರೆಯಾಗಿ ಡಾ. ರಾಜಕುಮಾರ್‌ ಅವರು ನಿಜಾರ್ಥದಲ್ಲಿ ಗಂಧದ ಗುಡಿ ಎಂದೇ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಶ್ರೀಗಂಧದ ಮರ. ಡಾ. ರಾಜಕುಮಾರ್‌ ಮೊದಲೇ ಹೇಳಿದಂತೆ ಕನ್ನಡದ ದಂತಕಥೆ. ಅರವತ್ತು ವರ್ಷಗಳ ಕಾಲ ಕನ್ನಡಿಗರ ಚೈತನ್ಯವಾಗಿ ಬದುಕಿದವರು, ಕನ್ನಡವನ್ನು ಉಸಿರಾಗಿಸಿಕೊಂಡು ಕರ್ನಾಟಕದ ನೆಲ, ಜಲ, ಗಾಳಿಯ ಕಣಕಣದಲ್ಲೂ ಬೆರೆತು ಹೋಗಿದ್ದವರು. ಅವರು ಈಗಿಲ್ಲ. ಆದರೆ ಅವರಿಲ್ಲ ಎಂಬ ಭಾವನೆ ಯಾರಿಗೂ ಇಲ್ಲ. ಅಂಥ ಚಿರಂತನ ಸ್ಮೃತಿ ರಾಜಕುಮಾರ್.‌


ಕುವೆಂಪು ಮತ್ತು ರಾಜ್‌

ಕುವೆಂಪು ನಿಸರ್ಗದಲ್ಲಿ ದೇವರನ್ನು ಕಂಡರೆ, ಡಾ. ರಾಜಕುಮಾರ್‌ ಅವರು ತಮ್ಮ ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಹಾಗಾಗಿ ಅವರು ಪ್ರೇಕ್ಷಕರನ್ನು ಕರೆದದ್ದು, “ಅಭಿಮಾನಿ ದೇವರುಗಳೇ” ಎಂದೇ. ಕಾದಂಬರಿ ಸಾರ್ವಭೌಮ ಎಂದೇ ಕರೆಸಿಕೊಂಡ ಕಾದಂಬರಿಕಾರ, ಕನ್ನಡದ ಹೋರಾಟಗಾರ ಅ. ನ.ಕೃಷ್ಣರಾಯರು ರಾಜಕುಮಾರ್‌ ಅವರನ್ನು ಕುರಿತು ಹೇಳಿದ ಮಾತು ಇಂದಿಗೂ ನೆನಪಾಗುತ್ತದೆ. “ರಾಜಕುಮಾರ್‌ ಅವರು ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆ ಎಂದು ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದಲ್ಲಿ, ಕನ್ನಡ ಚಿತ್ರರಂಗವೆಂಬ ಪ್ರತ್ಯೇಕ ಅಸ್ತಿತ್ವಕ್ಕೆ ಅವಕಾಶವೇ ಆಗುತ್ತಿರಲಿಲ್ಲ”… ಈ ಮಾತುಗಳು ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್‌ ಅವರು ಅನಿವಾರ್ಯವಾದ ಆಯಾಮವನ್ನು ತಿಳಿಸುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆಯ ಮಹತ್ವವನ್ನು ಮನವರಿಕೆ ಮಾಡಿಸಿಕೊಡುತ್ತದೆ.

ರಾಜಕುಮಾರ್‌ ಕುರಿತು 110ಕ್ಕೂ ಹೆಚ್ಚು ಗ್ರಂಥಗಳು

ಇಂಥ ಮಹನೀಯ ನಟ, ಕನ್ನಡದ ಸಾಂಸ್ಕೃತಿಕ ಲೋಕದ ಅನಭಿಷಿಕ್ತ ನಾಯಕ ಡಾ ರಾಜಕುಮಾರ್‌ ಅವರನ್ನು ಕುರಿತು ಇದುವರೆಗೆ ಬಂದಿರುವ ಗ್ರಂಥಗಳ ಬಗ್ಗೆ ಸರಿಯಾದ ಲೆಕ್ಕ ಸಿಕ್ಕುತ್ತಿಲ್ಲ. ಆದರೂ ಒಂದು ಬರಗೂರು ರಾಮಚಂದ್ರಪ್ಪ ಅವರ ಬರೆದ ಪುಸ್ತಕವೂ ಸೇರಿದಂತೆ ನೂರಾ ಹತ್ತಕ್ಕೂ ಹೆಚ್ಚು ಪುಸ್ತಕಗಳು ಇಂದು ಕನ್ನಡದ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿದೆ. ಡಾ. ರಾಜಕುಮಾರ್‌ ಅವರನ್ನು ಆರಾಧಿಸುವ ಕನ್ನಡಿಗರ ಸಮುದಾಯ ಇರುವುದರಿಂದಲೇ ಅತ್ಯಂತ ಅಭಿಮಾನದಿಂದ ಅವುಗಳನ್ನು ನಾನಾ ಸಂದರ್ಭಗಳಲ್ಲಿ ಲೇಖಕರು ಬರೆದು ಮುದ್ರಿಸಿದ್ದಾರೆ. ಡಾ. ರಾಜಕುಮಾರ್‌ ಅವರ ಸಾಧನೆಗಳನ್ನು ಆಕರ್ಷಣೀಯ ವ್ಯಕ್ತಿತ್ವವನ್ನು ಎಷ್ಟು ಬರೆದರೂ, ಅದು ಅಪೂರ್ಣವೇ. ಮತ್ತಷ್ಟು ಕೊಸರು ಹಾಗೆಯೇ ಉಳಿದುಬಿಡುತ್ತದೆ. ಮತ್ತೊಬ್ಬ ಲೇಖಕರಿಗೆ ಸರಕಾಗುತ್ತದೆ. ಡಾ. ರಾಜಕುಮಾರ್‌ ಸುಲಭದ ಗ್ರಹಿಕೆಗೆ, ವಿಶ್ಲೇಷಣೆಗೆ, ವ್ಯಾಖ್ಯಾನಕ್ಕೆ ಅಳತೆಗೆ ನಿಲುಕದ ಒಂದು ರೀತಿಯ ಮೇರು ಪರ್ವತ.

ಈ ನೂರಾಹತ್ತು ಪುಸ್ತಗಳಿಗೆ ಕಿರೀಟವಿಟ್ಟಂತೆ ಪ್ರಕಟವಾಗಿರುವುದು, ಡಾ. ರಾಜಕುಮಾರ್‌-ಸಮಗ್ರ ಚರಿತ್ರೆ-ಜೀವನ. ಇದೊಂದು ರೀತಿಯಲ್ಲಿ ತೊಂಭತ್ತರ ಹರೆಯದಲ್ಲಿರುವ ಕನ್ನಡ ಚಿತ್ರರಂಗದ ಅಪರೂಪದ, ಅಮೂಲ್ಯ ಕೃತಿ. ಡಾ. ರಾಜಕುಮಾರ್‌ ಕುರಿತ ಓದುಗರ ವಿಶ್ವಕೋಶ, ಶ್ರೀಸಾಮಾನ್ಯನೊಬ್ಬನ ನೀತಿಕತೆ. ಅಭಿಮಾನಿ ದೇವರುಗಳ ದಂತಕಥೆ ಹಾಗೂ ಭವಿಷ್ಯದ ಜಾನಪದ ಕಥೆ. ಈ ಪುಸ್ತಕದ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ. ಡಾ. ರಾಜಕುಮಾರ್‌-ಸಮಗ್ರ ಚರಿತ್ರೆ-ಜೀವನ- ರುಕ್ಕೋಜಿ ಅವರ ಮಹತ್ವಾಕಾಂಕ್ಷೆ ಅಷ್ಟೇ ಅಲ್ಲ. ಇಪ್ಪತ್ತೈದು ವರ್ಷಗಳ ಸುದೀರ್ಘ ಕನಸು. ಒಂದು ಸಾವಿರದ ಅರವತ್ತು ಪುಟಗಳನ್ನು ಎರಡು ಸಂಪುಟಗಳಾಗಿ ವಿಭಾಗಿಸಿರುವ ಈ ಬೃಹದ್‌ ಗ್ರಂಥ ಕನ್ನಡ ಚಿತ್ರರಂಗದ ಇತಿಹಾಸದ ಒಂದು ದಾಖಲೆ. ಈ ಪುಸ್ತಕದ ವಿಶೇಷತೆಯೆಂದರೆ ಬೆಣ್ಣೆಯಂತೆ ನುಣುಪಾದ ಕಾಗದದ ಮೇಲೆ ಮುದ್ರಣಗೊಂಡಿರುವ ನಾಲ್ಕು ಸಾವಿರದ ಒಂದು ನೂರಾ ತೊಂಭತ್ತು ಚಿತ್ರಗಳು.

ದೊಡ್ಡಹುಲ್ಲೂರು ರುಕ್ಕೋಜಿ ಅವರ ಬಗ್ಗೆ, ಅವರ ಪುಸ್ತಕದ ಬಗ್ಗೆ ಇಲ್ಲಿ ಒಂದೆರಡು ಮಾತು ಬರೆಯಲು ಕಾರಣ, ತಾವೇ ಡಾ. ರಾಜಕುಮಾರ್‌ ಅವರ ಬಗ್ಗೆ ಮಹತ್ವದ ಗ್ರಂಥ ಬರೆದಿದ್ದರೂ, ಮತ್ತೊಬ್ಬ ಲೇಖಕ, ಗೆಳೆಯ ಡಾ. ರಾಜಕುಮಾರ್‌ ಅವರ ಕುರಿತು ಬರೆದ ಮತ್ತೊಂದು ಮಹತ್ವದ ಗ್ರಂಥವನ್ನು ತಮ್ಮ ಪ್ರೀತಿ ಪುಸ್ತಕ ಪ್ರಕಾಶನದ ಮೂಲಕ ಪ್ರಕಟಿಸಿರುವುದು. ಆ ಪುಸ್ತಕ, ಡಾ. ಜಿ.ವಿ. ಆನಂದಮೂರ್ತಿ ಅವರು ಸಂಪಾದಿಸಿರುವ ಡಾ.ರಾಜಕುಮಾರ್‌-ನಾಡು ನುಡಿಯ ಆಸ್ಮಿತೆ.

“ಸುಮಕೆ (ಕೃತಿಗೆ) ಸೌರಭ (ಕಾಲಕೂಡಿ) ಬಂದ ಘಳಿಗೆ ಯಾವುದು?“

ಡಾ. ರಾಜಕುಮಾರ್‌-ನಾಡು-ನುಡಿಯ ಅಸ್ಮಿತೆ ಒಂದರ್ಥದಲ್ಲಿ ಡಾ. ರಾಜಕುಮಾರ್‌ ಅವರನ್ನು ಕುರಿತು, ಅಕಾಡೆಮಿಕ್‌ ಚೌಕಟ್ಟಿನಲ್ಲಿ ಬಂಧಿಯಾಗಿರುವ ಪರಮಾಪ್ತ ಕಥನ. ಈ ಕೃತಿ ರೂಪಗೊಂಡ ರೀತಿಯೇ ಮತ್ತೊಂದು ರೀತಿಯ ಆಪ್ತ ಕಥನ ಎನ್ನಬಹುದು. ಇದುವರೆಗೆ ಅಲ್ಲೊಂದು, ಇಲ್ಲೊಂದರಂತೆ ಡಾ. ರಾಜಕುಮಾರ್‌ ಅವರನ್ನು ಕುರಿತು ಪ್ರಕಟವಾಗಿದ್ದ ಹಲವಾರು ಕೃತಿಗಳು ಹಾಗೂ ಬಿಡಿ ಬರಹಗಳನ್ನು ಹೊರತುಪಡಿಸಿದರೆ, ಅವರನ್ನು ಕುರಿತು ಗಂಭೀರವಾದ ಚರ್ಚೆ, ವಿಚಾರಗೋಷ್ಠಿಗಳು ನಡೆದ ನೆನಪಿಲ್ಲ. ಅದರಲ್ಲೂ, ಕನ್ನಡ ಚಿತ್ರರಂಗವಾಗಲೀ, ಸಾಹಿತ್ಯಿಕ ವಲಯದ ಲೇಖಕರಾಗಲಿ ರಾಜಕುಮಾರ್‌ ಅವರ ಸಿನಿಮಾ ಮತ್ತು ವ್ಯಕ್ತಿತ್ವವನ್ನು ಕುರಿತು ಮನಬಿಚ್ಚಿ ಮಾತನಾಡಿದ್ದು, ಚರ್ಚಿಸಿದ್ದು, ತೀರಾ ಕಡಿಮೆ. ಈ ಕೊರತೆಯನ್ನು ನೀಗಿಸಲೋ ಎಂಬಂತೆ, ಡಾ. ರಾಜಕುಮಾರ್‌ ಸಮಗ್ರ ಚರಿತ್ರೆಯ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ, 2016 ರ ಡಿಸೆಂಬರ್‌ 2 ಮತ್ತು 3 ಮತ್ತು 4 ರಂದು ತಮ್ಮ ಪ್ರೀತಿ ಪ್ರಕಾಶನದ ಅಡಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜಕುಮಾರ್‌ ಅವರನ್ನು ಕುರಿತಾದ ಒಂದು ರಾಷ್ಟ್ರೀಯ ಉತ್ಸವವನ್ನು ನಡೆಸಿದರು. ಇದು ಕನ್ನಡದ ಸಂದರ್ಭಕ್ಕಂತೂ ಒಂದು ಚಾರಿತ್ರಿಕ ದಾಖಲೆ.

ಡಾ. ರಾಜಕುಮಾರ್‌ ರಾಷ್ಟ್ರೀಯ ಉತ್ಸವ

“ನಮ್ಮ ಸಮಾಜದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರೇ ರಾಜಕುಮಾರ್‌ ಅವರ ನಿಜವಾದ ಅಭಿಮಾನಿಗಳು ಎಂದು ಅದುವರೆಗೆ ಭಾವಿಸಲಾಗಿತ್ತು. ಆದರೆ ರಾಜಕುಮಾರ್‌ ಅವರನ್ನು ಕುರಿತಾದ ಸಮಗ್ರ ಸಂಪುಟ, ಆ ನಂಬಿಕೆಯನ್ನು ಸುಳ್ಳುಮಾಡಿತು. ರಾಜಕುಮಾರ್‌ ಅವರನ್ನು ಕುರಿತಾದ ಈ ರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಂಡ ಕನ್ನಡ ಸಾಹಿತ್ಯ ವಲಯದ ಲೇಖಕರು, ವಿಮರ್ಶಕರು, ಸಂಶೋಧಕರು, ರಂಗಭೂಮಿ ಮತ್ತು ಸಿನಿಮಾ ರಂಗದ ಗಣ್ಯರು, ಸಂಗೀತಗಾರರು, ಚಿತ್ರಕಲಾವಿದರು, ಸಿನಿಮಾ ನಿರ್ದೇಶಕರು… ಹೀಗೆ ಎಲ್ಲರೂ ಮೊದಲಬಾರಿಗೆ ರಾಜಕುಮಾರ್‌ ಅವರನ್ನು ಕುರಿತು ಗೌರವಾರ್ಹವಾದ, ಅಪೂರ್ವ ಒಳನೋಟಗಳಿಂದ ನೋಡಿದರು. ಇವರೆಲ್ಲರೂ ಸೇರಿ, ರಾಜಕುಮಾರ್‌ ಅವರ ಬಗ್ಗೆ ಕನ್ನಡ ನಾಡಿನ ವಿಶಾಲವಾದ ಸಾಂಸ್ಕೃತಿಕ ಮತ್ತು ಕಲೆಯ ಹಿನ್ನೆಲೆಯಲ್ಲಿ ನಿರ್ಲಕ್ಷಿಸಲು ಸಾಧ್ಯವಾಗದ ಇನ್ನೊಂದು ಪುರಾಣವನ್ನು, ವೈಚಾರಿಕ ಮತ್ತು ಮಾನವೀಯ ನೆಲೆಯಲ್ಲಿ ಮರುಸೃಷ್ಟಿಸಿದರು. ಈ ಎಲ್ಲ ಚಿಂತಕರ ಮತ್ತು ವಿಮರ್ಶಕರ ಬರಹಗಳು ದಾಖಲೆಯಾದವು. ಒಂದು ಕೃತಿಯ ರೂಪದಲ್ಲಿ ಈ ಬರಹಗಳೆಲ್ಲ ಕನ್ನಡ ಓದುಗರಿಗೆ ಮತ್ತು ಸಂಶೋಧಕರಿಗೆ ಎಂಬ ಆಶಯ ನಮ್ಮದಾಗಿತ್ತು. ಆದರೆ ಕಾರಣಾಂತರದಿಂದ ಇದು ಆಗ ಸಾಧ್ಯವಾಗದೇ, ಆರು ವರ್ಷಗಳ ನಂತರ ಈಗ ಸಾಧ್ಯವಾಗಿದೆ..” ಎನ್ನುತ್ತಾರೆ, ಈ 356 ಪುಟಗಳ ಮೌಲ್ಯಯುತ ಗ್ರಂಥದ ಸಂಪಾದಕ ಡಾ. ಜಿ.ವಿ. ಆನಂದಮೂರ್ತಿ.

ಕಾರ್ನಾಡ್‌ ಕಂಡಂತೆ ಡಾ. ರಾಜ್‌

“ಡಾ. ರಾಜಕುಮಾರ್‌ ಅವರು ನಮ್ಮನ್ನಗಲಿದಾಗ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಖ್ಯಾತಿಯ ನಾಟಕ ರಚನಾಕಾರ, ಚಿತ್ರನಟ, ನಿರ್ದೇಶಕ, ಗಿರೀಶ ಕಾರ್ನಾಡ್‌; ಈ ನಟ (ರಾಜಕುಮಾರ್)‌ ಹೇಗೆ ನಮ್ಮ ಸಂಸ್ಕೃತಿಯ ಭಾಗ ಎಂದು ಅರ್ಥೈಸಿದ್ದರು. ಕನ್ನಡ ಚೆನ್ನಾಗಿ ಮಾತನಾಡಬೇಕೆಂದು ಎಂಥವರಿಗೂ ಅನ್ನಿಸುವಂತೆ ಮಾಡಿದ್ದ, ನಾಡು-ನುಡಿ ಕುರಿತು ಆರಾಧನಾಭಾವ ಇಟ್ಟುಕೊಂಡಿದ್ದ ಜೀವನ ಮೌಲ್ಯಗಳನ್ನು ಗೌರವಿಸುವ ರಾಜಕುಮಾರ್‌ ಹೇಗೆಲ್ಲ ಅಸಂಖ್ಯ ಕನ್ನಡಿಗರನ್ನು ಪ್ರಭಾವಿಸಿದ್ದರು ಎಂಬುದನ್ನು ಕಾರ್ನಾಡ್‌ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅವರು ಹೇಳಿದ ಮಾತಿನ ತಥ್ಯವೆಂದರೆ, ಡಾ.ರಾಜಕುಮಾರ್‌ ನಾಡು-ನುಡಿಯ ಅಸ್ಮಿತೆ. ಅವರು ಹೇಳಿದ್ದನ್ನೇ ಈ ಕೃತಿಯ ಮೂಲದ್ರವ್ಯವನ್ನಾಗಿಸಿಕೊಂಡು, ಅದನ್ನೇ ಪುಸ್ತಕದ ಶೀರ್ಷಿಕೆಯನ್ನಾಗಿಸಿಕೊಂಡಿದ್ದೇವೆ” ಎಂದು ವಿನಯದಿಂದ ಹೇಳುತ್ತಾರೆ ಆನಂದಮೂರ್ತಿ.

ಕೃತಿಯೊಳಗೇನಿದೆ?

ಈ ಸಮ್ಮೇಳನದಲ್ಲಿ ಮಂಡಿತವಾದ ಇಂಗ್ಲಿಷ್‌ ಮತ್ತು ಕನ್ನಡದ ಪ್ರಬಂಧಗಳನ್ನು ಲೇಖನದ ಸ್ವರೂಪಕ್ಕೆ ಇಳಿಸಲಾಗಿದೆ. ಜೊತೆಗೆ ಮುಖ್ಯ ಚಿಂತಕರ ಭಾಷಣಗಳನ್ನು ಈ ಕೃತಿ ಒಳಗೊಂಡಿದೆ. ಈ ಕೃತಿಯನ್ನು ನಾಲ್ಕು ಅಧ್ಯಾಯಗಳಾಗಿ ವಿಭಾಗಿಸಲಾಗಿದೆ. ಮೊದಲ ಅಧ್ಯಾಯದಲ್ಲಿ ರಾಜಕುಮಾರ್‌ ವ್ಯಕ್ತಿತ್ವವನ್ನು ಕರ್ನಾಟಕದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವ ಬರಹಗಳಿವೆ. ಎರಡನೇ ಅಧ್ಯಾಯದಲ್ಲಿ ರಾಜಕುಮಾರ್‌ ಸಮಗ್ರ ಚರಿತ್ರೆಯ ಎರಡು ಸಂಪುಟಗಳನ್ನು ಕುರಿತ ವಿಮರ್ಶಾತ್ಮಕ ಬರಹಗಳಿವೆ. ಮೂರನೇ ಅಧ್ಯಾಯ ಅತಿ ಮುಖ್ಯವಾದದ್ದು. ಇದರಲ್ಲಿ ಕನ್ನಡ-ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಪಾಂಡಿತ್ಯಪೂರ್ಣವಾಗಿ ಯೋಚಿಸಬಲ್ಲ, ಬರೆಯಬಲ್ಲ ವಿದ್ವಾಂಸರಾದ ಮನು ಚಕ್ರವರ್ತಿ, ಸಿ ಎನ್‌ ರಾಮಚಂದ್ರನ್‌, ಚಂದನ್‌ ಗೌಡ, ರಾಜೇಂದ್ರ ಚೆನ್ನಿ, ಎನ್.‌ ವಿದ್ಯಾಶಂಕರ, ಅವರು ಇಂಗ್ಲಿಷ್ ನಲ್ಲಿ ಬರೆದ ಮೌಲಿಕ ಬರಹಗಳಿವೆ. ಕೊನೆಯ ಅಧ್ಯಾಯದಲ್ಲಿ ಎಂಭತ್ತರ ದಶಕದಲ್ಲಿ ನಡೆಸಿದ್ದ ಡಾ. ರಾಜಕುಮಾರ್‌ ಅವರ ಅಪರೂಪದ ಸಂದರ್ಶನವಿದೆ. ಡಾ. ರಾಜಕುಮಾರ್‌ ಎಂದರೆ ʻಕನ್ನಡದ ಅಸ್ಮಿತೆʼ ಎಂದು ಹೇಳಿರುವ ಮಾತುಗಳು, ಈ ಸಂಕಲನದ ಬಹುಪಾಲು ಲೇಖಕರಲ್ಲಿ ಮತ್ತೆ ಮತ್ತೆ ಸಾಂಸ್ಕೃತಿಕ ರೂಪಕವಾಗಿ ಪ್ರಕಟಗೊಂಡಿದೆ. “ I realize that my own analysis of Rajkumar and Kannada identity hinges upon a narrative of modern Karnataka” ಎನ್ನುತ್ತಾರೆ ರಾಜೇಂದ್ರ ಚೆನ್ನಿ. “Rajkumar as a cultural symbol goes far beyond the confines of cinema for he represented the dream desires aspirations and wishes of everybody in society across distinctions of caste class and religion” ಎನ್ನುವುದು ಮನು ಚಕ್ರವರ್ತಿ ಅವರ ತಿಳುವಳಿಕೆ. “The evolution of Dr Rajkumar into cultural icon of enormous followings is a consequence of his conscious choice to pursue a career as an actor in Kannada cinema” ಎನ್ನುತ್ತಾರೆ ಎನ್‌, ವಿದ್ಯಾಶಂಕರ್.‌

ನಾಡು ಕಟ್ಟಿದ ಕಲಾವಿದ

“ನಾಡು ಒಬ್ಬ ನಾಯಕನನ್ನು ಕಟ್ಟುತ್ತೆ. ನಾಯಕ ನಾಡನ್ನು ಕಟ್ಟುತ್ತಾನೆ. ಈ ನಾಡು ಮತ್ತು ನಾಯಕರು ಪರಸ್ಪರ ಕಟ್ಟಿಕೊಳ್ಳುವ ಕೆಲಸ ಇದೆಯಲ್ಲಾ ಅದನ್ನು ನಾವು ರಾಜಕುಮಾರ್‌ ಅವರ ಬದುಕಿನಲ್ಲಿ ಮತ್ತು ಸಾಧನೆಯಲ್ಲಿ ಕೂಡಾ ನೋಡಬಹುದು” ಎನ್ನುವುದು ಎಚ್‌ ಎಸ್‌ ರಾಘವೇಂದ್ರರಾವ್‌ ಅವರ ವ್ಯಾಖ್ಯಾನ. ಈ ಸಂಕಲನದಲ್ಲಿರುವ ಎಲ್ಲ ಚಿಂತಕರ ಬರಹಗಳನ್ನು ಓದಿದರೆ ರಾಜಕುಮಾರ್‌ ಅವರು ಕುವೆಂಪು ಅವರಂತೆ ಯಾವ ಸಂದಿಗ್ಧತೆ ಇಲ್ಲದೆ ದೃಢ ನಿಶ್ಚಯದಿಂದ ಕನ್ನಡದ ಮಾನವೀಯತೆಯ ಪರವಾಗಿದ್ದರು ಎನ್ನುವುದನ್ನು ಇಲ್ಲಿನ ಬರಹಗಳು ಏಕಕಂಠದಿಂದ ಹೇಳುತ್ತವೆ. “ಡಾ. ರಾಜ್‌ ಬಡವರ ಕನಸಿನ ಗಾಂಧೀಜಿಯ ಕನಸಿನ ಸರಳತೆಯ ಸರ್ವೋದಯದ ನಟನೆಯನ್ನು ಆಧ್ಯಾತ್ಮದ ಎತ್ತರದಲ್ಲಿ ಕನ್ನಡಿಗರಿಗೆ ಮುಟ್ಟಿಸಿದರು” ಎನ್ನುತ್ತಾರೆ ಖ್ಯಾತ ಚಿಂತಕ ಮೊಗಳ್ಳಿ ಗಣೇಶ್.‌ “ರಾಜಕುಮಾರ್‌ ಅವರು ಉತ್ತಮ ಗೃಹಸ್ಥರಾಗಿ, ಸಂತರಿಗಿಂತ ಹೆಚ್ಚು ಮೌಲ್ಯಯುತವಾದ ಬದುಕನ್ನು ಬದುಕಿದ್ದಾರೆ. ಆದರ್ಶಗಳನ್ನು ಕೊಟ್ಟಿದ್ದಾರೆ” ಎನ್ನುತ್ತಾರೆ ಷ. ಶೆಟ್ಟರ್.‌ “ರಾಜಕುಮಾರ್‌ ಅವರನ್ನು ಹೊರತುಪಡಿಸಿ, ಕನ್ನಡ ಚಿತ್ರರಂಗವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ” ಎನ್ನುವ ಡಿ.ಎಸ್.‌ ನಾಗಭೂಷಣ ಅವರ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ಕನ್ನಡದ ರಾಜಕುಮಾರ್‌ ಅವರ ವ್ಯಕ್ತಿತ್ವದಲ್ಲಿ ಕೇವಲ ನಟನೆಯಷ್ಟೇ ಸ್ಥಾನ ಪಡೆದಿಲ್ಲ. ಅದಕ್ಕೂ ಮಿಗಿಲಾಗಿ ಎಲ್ಲರನ್ನೂ ಆಳವಾಗಿ ತಾಕುವಂಥ ಗುಣಗಳಾದ ಜಾತ್ಯಾತೀತತೆ ಹಾಗೂ ಪರವಶಗೊಳಿಸುವ ಮಾನವೀಯತೆಯ ಗುಣಗಳು ತುಂಬಿದ್ದವು ಎಂಬುದನ್ನು ಸಾಬೀತುಗೊಳಿಸುತ್ತದೆ. ಹಾಗೆಯೇ ಕನ್ನಡ ಭಾಷೆಯ ಬಗ್ಗೆ ಅವರಿಗಿರುವ ಬದ್ಧತೆ ಎಲ್ಲರನ್ನೂ ಸೆಳೆದುಕೊಂಡಿತ್ತು ಎಂಬುದನ್ನು ಈ ಸಂಕಲನ ಸ್ಪಷ್ಟವಾಗಿ ಹೇಳುವುದರಲ್ಲಿ ಯಶಸ್ವಿಯಾಗಿದೆ.

ಶತಮಾನದ ಅಪಹರಣ ಮತ್ತೆ ಮರೆಯಲಾಗದ ಸಂದರ್ಶನ

ಈ ಪುಸ್ತಕದ ಎರಡು ಅಧ್ಯಾಯಗಳು ಎಲ್ಲರ ಆಸಕ್ತಿಗೆ ಕಾರಣವಾಗುತ್ತವೆ. ಅವೆಂದರೆ ಖ್ಯಾತ ಲೇಖಕ, ಜಾನಪದದ ಜೋಗಿ ಕೃಷ್ಣಮೂರ್ತಿ ಹನೂರು ಅವರ ʼಕನ್ನಡ ಜಾನಪದರ ಜಗತ್ತಿನಲ್ಲಿ ರಾಜಕುಮಾರ್‌ʼ ಹಾಗೂ, ಡಾ ರಾಜ್‌ ಅಪಹರಣ ಕುರಿತು ಉದಯಾದ್ರಿ ಬರೆದ ʼ ಶತಮಾನದ ಅಪಹರಣʼ. ಈ ಸಂಕಲನದ ಅತಿ ಅಮೂಲ್ಯ ಭಾಗವೆಂದರೆ, ರಾಜಕುಮಾರ್‌ ಅವರ ಅಪರೂಪದ ಸಂದರ್ಶನ. ಇದು ಕನ್ನಡದ ಚಲನಚಿತ್ರ ಪತ್ರಿಕೊದ್ಯಮವನ್ನು ರೂಪಿಸಿದ ಪತ್ರಕರ್ತರಾದ ವಿ.ಎನ್.‌ ಸುಬ್ಬರಾವ್‌, ಕೆ. ಎಸ್.‌ ನಾರಾಯಣ ಸ್ವಾಮಿ, ಎಂ.ವಿ. ರಾಮಕೃಷ್ಣಯ್ಯ ಮತ್ತು ಶ್ಯಾಮಸುಂದರ ಕುಲಕರ್ಣಿ ನಡೆಸಿದ ಸಂದರ್ಶನ. ಇದು ಡಾ. ರಾಜಕುಮಾರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪದ್ಮಭೂಷಣ ಎನ್ನುವ ಸಂಚಿಕೆಗಾಗಿ ನಡೆಸಿದ ಸಂದರ್ಶನ. ರಾಜ್ ಅವರಿಗೆ ಸನ್ಮಾನ ಮಾಡುವ ದಿನ ಈ ಸಂಚಿಕೆಯ ಕೇವಲ ನೂರು ಪ್ರತಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಅನಂತರ ಮುದ್ರಣಗೊಂಡ ಪ್ರತಿಗಳು ಅಚ್ಚಿನ ಮನೆಯಲ್ಲಿಯೇ ಉಳಿದು ಹೋದವು. ನಂತರ ಆ ಪ್ರೆಸ್‌ ಕೂಡ ಮುಚ್ಚಿ ಹೋಯಿತು. ಸಂಚಿಕೆಗಳು ಏನಾದವು ತಿಳಿಯದು. ಆ ಅಪರೂಪದ ಸಂದರ್ಶನ ಈ ಪುಸ್ತಕದ ಒಂದು ಭಾಗ ಎನ್ನುವುದು ತೀರಾ ಮುಖ್ಯ. ರಾಜಕುಮಾರ್‌ ಅವರನ್ನು ಸಂದರ್ಶಿಸಿದ ಆ ನಾಲ್ಕು ಮಂದಿ ಮಹನೀಯರಲ್ಲಿ ಇಂದು ನಮ್ಮೊಂದಿಗಿರುವುದು ಶ್ಯಾಮಸುಂದರ ಕುಲಕರ್ಣಿ ಮಾತ್ರ. ಈ ಸಂದರ್ಶನ ಪ್ರಕಟಿಸಲು ಅವರು ಅನುಮತಿ ನೀಡಿರುವುದು ನಿಜಕ್ಕೂ ಓದುಗರ ಭಾಗ್ಯ ಎನ್ನಲೇ ಬೇಕು.

ಕುವೆಂಪು ಹಾಗೂ ರಾಜಕುಮಾರ್‌ ಇಬ್ಬರ ವ್ಯಕ್ತಿತ್ವಗಳನ್ನು ಸಮೀಕರಿಸುವಂಥ ಅಕಾಡೆಮಿಕ್‌ ಬರಹಗಳ ವಿಚಾರ ಮಂಥನದ ಜೊತೆಗೆ ಓದಿನ ಖುಷಿಯನ್ನೂ ನೀಡುವ ಇಂಥ ಪುಸ್ತಕವನ್ನು ಸಂಪಾದಿಸಿರುವ ಡಾ. ಜಿ.ವಿ. ಆನಂದಮೂರ್ತಿ ಅವರ ಶ್ರಮಕ್ಕೆ ಕೇವಲ ಮೆಚ್ಚಿಗೆಯಷ್ಟೇ ವ್ಯಕ್ತಪಡಿಸಿದರೆ ಸಾಲದೆನ್ನಿಸುತ್ತದೆ. ಏಕೆಂದರೆ ಕೃತಿ ಸಂಪಾದನೆ ಅತ್ಯಂತ ತಾಳ್ಮೆ ಬೇಡುವ ಕೆಲಸ. ಅವರ ಉದ್ದೇಶ; ಡಾ. ರಾಜಕುಮಾರ್‌ ಅವರನ್ನು ಕುರಿತು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಅವರನ್ನು ಮೆಚ್ಚುವ, ಪ್ರೀತಿಸುವ, ಅರಾಧಿಸುವ ಎಲ್ಲರಿಗೂ ಅಗತ್ಯವಾದ ಗ್ರಂಥವೊಂದನ್ನು ರೂಪಿಸುವುದು. ಈ ಪ್ರಯತ್ನದಲ್ಲಿ ಆನಂದಮೂರ್ತಿ ಯಶಸ್ವಿಯಾಗಿದ್ದಾರೆಂದರೆ ತಪ್ಪೇನಿಲ್ಲ.

ಡಾ. ರಾಜಕುಮಾರ್‌-ನಾಡು-ನುಡಿಯ ಆಸ್ಮಿತೆ ಒಂದು ಸಂಗ್ರಹಯೋಗ್ಯ ಪುಸ್ತಕ. ಹಾಗೆಂದು ಸಂಗ್ರಹಿಸಿ ಇಟ್ಟುಕೊಳ್ಳದೇ, ಅದರ ಪುಟಪುಟದ ದಂತಕಥೆಯನ್ನು ಓದುವುದೂ ಕೂಡ ಅಷ್ಟೇ ಮುಖ್ಯ ಅಲ್ಲವೇ?

Tags:    

Similar News