ʻಕಾನ್‌ʼ ಚಲನಚಿತ್ರೋತ್ಸವ: ಸ್ವಂತ ಖರ್ಚಿನಲ್ಲಿ ತೆರಳಿದ Biffes ತಜ್ಞರ ತಂಡ?

Update: 2024-05-14 12:09 GMT
ʻಕಾನ್‌ʼ ಚಲನಚಿತ್ರೋತ್ಸವ: ಸ್ವಂತ ಖರ್ಚಿನಲ್ಲಿ ತೆರಳಿದ Biffes ತಜ್ಞರ ತಂಡ?

ಜಗತ್ತಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ಕಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೆರೆ ಇಂದು ಮೇಲೆದ್ದಿದೆ. ಇಂದಿನಿಂದ ಮೇ 25 ರವರೆಗೆ ಚಿತ್ರೋತ್ಸವ ನಡೆಯಲಿದೆ. ಇಂಥ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾಸಕ್ತರು ಕಾತುರರಾಗಿರುತ್ತಾರೆ. ಅದರಂತೆಯೇ ವಿಶ್ವದಾದ್ಯಂತ ಮಾನ್ಯತೆ ಪಡೆದ ಚಿತ್ರೋತ್ಸವವನ್ನು ಸಂಘಟಿಸುವವರು, ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡು, ತಮ್ಮ ನಾಡಿನ ಅಂತಾರಾಷ್ಟ್ರೀಯ ಚಿತ್ರೋತ್ಸವದ ಘನತೆ-ಗೌರವವನ್ನು ಹೆಚ್ಚಿಸುವುದು ಹೇಗೆಂದು ಕಲಿಯಲು ಇದೊಂದು ಅವಕಾಶ.

ಕಾನ್‌ ತಿಳಿವು Biffes ಗೆ ಮುಖ್ಯ

ಕಾನ್‌ ಚಿತ್ರೋತ್ಸವ, ತೊಂಭತ್ತು ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗಕ್ಕೆ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Biffes) ವನ್ನು ಸಂಘಟಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಮಹತ್ವದ್ದು. ಇದುವರೆಗೆ 15 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಸಂಘಟಿಸಿ, 16 ನೇ ಆವೃತ್ತಿಗೆ ಸಿದ್ಧವಾಗುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ, ಕರ್ನಾಟಕ ಸರ್ಕಾರಕ್ಕೆ ಕಾನ್‌ನಲ್ಲಿ ನಡೆಯುತ್ತಿರುವ ಚಿತ್ರೋತ್ಸವ ಬಹು ಮುಖ್ಯ.

Biffes ಭಾರತದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾಗಿದ್ದು ಇದು International Federation of Film Producerś Associations (FIAPF) ನಿಂದ ಮಾನ್ಯತೆ ಪಡೆದುಕೊಂಡಿರುವ ದೇಶದ ಐದು ಚಿತ್ರೋತ್ಸವಗಳಲ್ಲಿ ಒಂದು. ಹಾಗಾಗಿ ಮಾನ್ಯತೆಯ ಘನತೆಯನ್ನು ಕಾಪಾಡಲು ಕೆಲವೊಂದು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಅದನ್ನು ಅರ್ಥಮಾಡಿಕೊಳ್ಳುವುದು, ಕಾನ್‌ ನಂಥ ಚಿತ್ರೋತ್ಸವಳಿಗೆ ತೆರಳಿ, ಪ್ರತ್ಯಕ್ಷವಾಗಿ ಗಮನಿಸಿ, ತಿಳುವಳಿಕೆ ಗಳಿಸುವ ಮೂಲಕ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಆದರೆ, ಕಾನ್‌ ಚಿತ್ರೋತ್ಸವ, Biffes ನ ಸಂಘಟನಾ ಸಮಿತಿಗೆ, Biffes ತನ್ನ Flagship ಕಾರ್ಯಕ್ರಮ ಎಂದೇ ಹೇಳಿಕೊಳ್ಳುವ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹಾಗೂ Biffes ನ ಸೂತ್ರ ಹಿಡಿದಿರುವ ಕರ್ನಾಟಕ ಸರ್ಕಾರಕ್ಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಎಷ್ಟ ಅಗತ್ಯ? ಕಾನ್‌ ಚಿತ್ರೋತ್ಸವಕ್ಕೆ ಕರ್ನಾಟಕದಿಂದ ಕಳುಹಿಸುವ ಚಲನಚಿತ್ರ ತಜ್ಞರ, ವ್ಯವಸ್ಥಾಪಕರ ನಿಯೋಗದ ಮಹತ್ವವೇನು? ಎಂಬುದು ಕರ್ನಾಟಕ ಸರ್ಕಾರಕ್ಕೆ ಇನ್ನೂ ಮನವರಿಕೆಯಾದಂತೆ ಕಾಣುವುದಿಲ್ಲ.


ಈ ಬಾರಿ ಕಾನ್‌ ಚಿತ್ರೋತ್ಸವಕ್ಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನು ಮಾತ್ರವೇ ಕಳುಹಿಸುತ್ತಿರುವುದು, ಚಿತ್ರೋತ್ಸವ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವದ ಮಟ್ಟದಲ್ಲಿ ಬೆಳೆಯುತ್ತಿರುವ ಚಿತ್ರರಂಗ, ಮತ್ತು ಚಿತ್ರಗಳ ಗುಣಮಟ್ಟದ ಬಗ್ಗೆ ತಿಳುವಳಿಕೆ ಗಳಿಸಿಕೊಳ್ಳಲು ಇರುವ ಸಂದರ್ಭವನ್ನು ಬಳಸಿಕೊಳ್ಳಲು, ಅಧಿಕಾರಿಗಳನ್ನು ಅದರಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯನ್ನು ಕಳುಹಿಸುವುದರಲ್ಲಿ ಅಂಥ ಅರ್ಥ ಇರುವಂತೆ ಕಾಣುತ್ತಿಲ್ಲ ಎಂಬುದು ಬಹುಮಂದಿಯ ಅಭಿಪ್ರಾಯ.

ಕಾರಣ ಇಷ್ಟೇ. ಮುಂದಿನ Biffes ಸಂದರ್ಭದಲ್ಲಿ, ಈ ಅಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಈ ಸ್ಥಾನದಲ್ಲಿರುವರೆಂಬ ಖಾತರಿ ಯಾರಿಗೂ ಇಲ್ಲ. ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ನೋಡಿದರೆ, ಕಾರ್ಯದರ್ಶಿಗಳು ಚಲನಚಿತ್ರೋತ್ಸವದ ಸಂದರ್ಭದಲ್ಲಿ ಬದಲಾದ ನಿದರ್ಶನಗಳು ಕಣ್ಣು ಮುಂದೆ ಬರುತ್ತವೆ.

ಆದರೆ, ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಕಳುಹಿಸುವುದು ಅಧಿಕೃತ ಸಂಪ್ರದಾಯವೆಂದೇ ಭಾವಿಸುವುದಾದರೆ, ಅವರೊಂದಿಗೆ ಚಿತ್ರೋತ್ಸವವನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರವಹಿಸುವವರನ್ನು ನಿಯೋಗದಲ್ಲಿ ಸೇರಿಸಿ ಕಳುಹಿಸುವುದು ಉತ್ತಮ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹೆಸರು ಬಹಿರಂಗಪಡಿಸಲು ಬಯಸದ ಸದಸ್ಯರೊಬ್ಬರು ಹೇಳುತ್ತಾರೆ.

ಸರ್ಕಾರಕ್ಕೆ ವರದಿ

ಕಾನ್‌ ಚಿತ್ರೋತ್ಸವಕ್ಕೆ ತೆರಳುವ ರಾಜ್ಯದ ನಿಯೋಗ ಕಾನ್‌ ಚಿತ್ರೋತ್ಸವದಲ್ಲಿ ತಾವು ಪಡೆದುಕೊಂಡ ತಿಳುವಳಿಕೆ ಹಾಗೂ Biffes ಗುಣಮಟ್ಟವನ್ನು ಉತ್ತಮಪಡಿಸುವ ಬಗ್ಗೆ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಬೇಕು. ಅದನ್ನು ಆಧರಿಸಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬುದು ಸರ್ಕಾರ ಕಾನ್ ಗೆ ನಿಯೋಗ ಕಳಿಸುವ ಉದ್ದೇಶ. “2019ರಲ್ಲಿ ಇಂಥ ನಿಯೋಗವೊಂದು ಕಾನ್‌ ಗೆ ತೆರಳಿತ್ತು. ಅದು ಅಂಥ ವರದಿಯೊಂದನ್ನು ಕೊಟ್ಟ ನೆನಪು. ಆದರೆ ವರದಿಯನ್ನು ಆಧರಿಸಿದ ಯಾವುದೇ ಪರಿಣಾಮ Biffes ಮೇಲೆ ಆದಂತಿಲ್ಲ ಎನ್ನುವುದು ಚಿತ್ರೋತ್ಸವ ಸಂಘಟಿಸಿದ ರೀತಿಯಲ್ಲಿ” ಎನ್ನುವುದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರೊಬ್ಬರ ವಿಷಾದದ ಧ್ವನಿ. Biffes 15 ನೇ ಅವೃತ್ತಿಯ ತಯಾರಿಗೆ ಸಂಘಟನಾ ಸಮಿತಿಗೆ ದಕ್ಕಿದ್ದು, ಕೇವಲ 50 ದಿನಗಳು ಮಾತ್ರ. ಅಷ್ಟು ಕಡಿಮೆ ಅವಧಿಯಲ್ಲಿ ಚಿತ್ರೋತ್ಸವ ನಡೆಸಿದ ಕೀರ್ತಿ ಚಿತ್ರೋತ್ಸವವನ್ನು ಅಷ್ಟರಮಟ್ಟಿಗೆ ಸಂಘಟಿಸಿದವರಿಗೆ ಸಲ್ಲಬೇಕು.

ಅದೇನೇ ಇರಲಿ, ಈ ಬಾರಿ ಕರ್ನಾಟಕದಿಂದ ಚಲನಚಿತ್ರಾಸಕ್ತರ ದೊಡ್ಡ ತಂಡವೇ ಕಾನ್‌ ಗೆ ತೆರಳಿದೆ. Biffes ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ತಮ್ಮ ಸ್ವಂತ ಆಸಕ್ತಿಯಿಂದ, ಸ್ವಂತ ಖರ್ಚಿನಲ್ಲಿ ಕಾನ್‌ಗೆ ತೆರಳಿರುವುದು ಈ ಬಾರಿಯ ವಿಶೇಷ. “ಚಿತ್ರೋತ್ಸವದಲ್ಲಿ ಭಾಗವಹಿಸಿ ಹಿಂದಿರುಗಿದ ನಂತರ ಸರ್ಕಾರ ಖರ್ಚನ್ನು ಹಿಂದಿರುಗಿಸುವ ಸಾಧ್ಯತೆ ಇದೆ” ಎಂಬ ನಂಬಿಕೆ ಹಾಗೆ ಕಾನ್‌ ಗೆ ತೆರಳುತ್ತಿರುವ ತಜ್ಞರ ನಿಯೋಗದ ಸದಸ್ಯರೊಬ್ಬರದು.

ರಾಜ್ಯ ಸರ್ಕಾರಕ್ಕೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ಪತ್ರ

ವಾರ್ತಾ ಇಲಾಖೆಯ ಮೂಲಗಳ ಪ್ರಕಾರ, ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಕಾರ್ಯದರ್ಶಿ ಸಂಜಯ್‌ ಜಾಜು ಅವರು ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಿತ್ರೋದ್ಯಮದ ನಿಯೋಗವೊಂದನ್ನು ಕಾನ್‌ಗೆ ಕಳುಹಿಸಬೇಕೆಂದು ಏಪ್ರಿಲ್‌ ೪ ರಂದು ಪತ್ರ ಬರೆಯಿತು. ಈ ಹಿನ್ನೆಲೆಯಲ್ಲಿ ಸರ್ಕಾರ ವಾರ್ತಾ ಇಲಾಖೆಯ ಆಯುಕ್ತರಿಗೆ ಪತ್ರವೊಂದನ್ನು ಬರೆದು, ನಿಯೋಗದಲ್ಲಿ ಇರಬೇಕಾದ ಸದಸ್ಯರನ್ನು ಸೂಚಿಸಿತ್ತು. ನಿಯೋಗದಲ್ಲಿ ಇರಬೇಕಾದ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ, ಚಿತ್ರೋತ್ಸವಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವ ಜಂಟಿ ಅಥವ ಸಹ ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್‌ ಸೇರಿದಂತೆ ಕೆಲವು ಹೆಸರುಗಳು ಆ ಪಟ್ಟಿಯಲ್ಲಿತ್ತು. ಆದರೆ, ಆದರೆ ಸಕಾಲದಲ್ಲಿ ಸರ್ಕಾರ ಕ್ರಮಕೈಗೊಳ್ಳದ ಕಾರಣ, ಸರ್ಕಾರ ವಾರ್ತಾ ಇಲಾಖೆಯ ಕಾರ್ಯದರ್ಶಿ ಮತ್ತು, ಅಕಾಡೆಮಿಯ ಅಧ್ಯಕ್ಷರ ಹೆಸರನ್ನು ಮಾತ್ರ ಅಂತಿಮಗೊಳಿಸಿದ ಕಾರಣ, ನಿಯೋಗದಲ್ಲಿ ಪ್ರಮುಖವಾಗಿ ಇರಬೇಕಾಗಿದ್ದ ಕಲಾತ್ಮಕ ನಿರ್ದೇಶಕರ ಹೆಸರು ಕೈಬಿಡಲಾಯಿತು.

ಆದರೆ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಲಯದಲ್ಲಿ ಹೆಸರುಗಳಿಸಿರುವ ಹಾಗೂ Biffes ನ ಹಲವು ಅವೃತ್ತಿಗಳಿಗೆ ಕಲಾತ್ಮಕ ನಿರ್ದೇಶಕರಾಗಿ ದುಡಿದಿರುವ ಎನ್‌. ವಿದ್ಯಾಶಂಕರ್‌ ಅವರು, ಪ್ರತಿವರ್ಷದಂತೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಕಾನ್‌ ಗೆ ತೆರಳಿದ್ದಾರೆ. International Federation of Film Producerś Associations (FIAPF) ಹಮ್ಮಿಕೊಂಡಿರುವ ಒಂದು ಕಾರ್ಯಾಗಾರಕ್ಕೆ ಅವರಿಗೆ ಆಹ್ವಾನವಿದೆ. ಅವರು ಅದರಲ್ಲಿ Biffes ನ್ನು ಪ್ರತಿನಿಧಿಸುತ್ತಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೂಲಗಳು ತಿಳಿಸಿವೆ.

ಒಂದರ್ಥದಲ್ಲಿ ಅದು ಸರಿ. “ಕೆಲವು ದಶಕಗಳಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜಗತ್ತಿನಲ್ಲಿ ತಮಗೊಂದು ಸ್ಥಾನ ಕಲ್ಪಿಸಿಕೊಂಡಿರುವ ವಿದ್ಯಾಶಂಕರ್‌ ಅವರು ಕಾನ್‌ ಸೇರಿದಂತೆ ಎಲ್ಲ ಚಿತ್ರೋತ್ಸವಗಳ ಅತಿಥಿ. ಹಾಗಾಗಿ ಅವರು ಇಷ್ಟು ವರ್ಷದ ಅನುಭವವನ್ನು Biffes ಸಂಘಟಿಸಲು ಧಾರೆ ಎರೆದಿದ್ದಾರೆ”, ಎನ್ನುವುದು Biffes ಸಂಘಟನಾ ಸಮಿತಿಯ ಸದಸ್ಯರ ಅಭಿಪ್ರಾಯ.

ಆದರೆ, ಈ ಕುರಿತು Biffes ನ ೧೫ ನೇ ಆವೃತ್ತಿಯ ಜಂಟಿ ಕಲಾತ್ಮಕ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯವೇ ಬೇರೆ.

“ಕಾನ್‌ ಗೆ ಕರ್ನಾಟಕ ಸರ್ಕಾರದ ನಿಯೋಗ ತೆರಳುವುದರ ಉದ್ದೇಶ, ಚಲನಚಿತ್ರೋತ್ಸವ ಸಂಘಟಿಸುವ ಬಗ್ಗೆ ಸ್ಪಷ್ಟ ತಿಳುವಳಿಕೆ ಪಡೆದುಕೊಳ್ಳುವುದರೊಂದಿಗೆ, ಅಲ್ಲಿ ಪ್ರದರ್ಶನಗೊಳ್ಳುವ ಜಗತ್ತಿನ ಅತ್ಯುತ್ತಮ ಗುಣಮಟ್ಟದ ಚಿತ್ರವನ್ನು Biffes ಗೆ ಬರುವ ಸದಭಿರುಚಿಯ ಚಿತ್ರಪ್ರೇಮಿಗಳಿಗೆ ತಲುಪುವಂತೆ ಮಾಡುವುದು. ಅದರರ್ಥ 16ನೇ ಅವೃತ್ತಿಗೆ ಅತ್ಯುತ್ತಮ ಚಿತ್ರಗಳನ್ನು curate ಮಾಡುವುದು” ಎನ್ನುತ್ತಾರೆ ಶೇಷಾದ್ರಿ.

ಚಿತ್ರೋತ್ಸವ ನಿರ್ದೇಶನಾಲಯದ ತುರ್ತು ಅಗತ್ಯ

ಹಾಗಾದರೆ, ವ್ಯವಸ್ಥೆಯ ಈ ಲೋಪವನ್ನು ಸರಿಪಡಿಸುವುದು ಹೇಗೆ? ಎಂದು ಶೇಷಾದ್ರಿ ಅವರನ್ನು ಪ್ರಶ್ನಿಸಿದರೆ, “ಭಾರತ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (International Film Festival of India- Iffi ) ಇರುವಂತೆ Biffes ನ ಚಿತ್ರೋತ್ಸವ ನಿರ್ದೇಶನಾಲಯವನ್ನು ರೂಪಿಸುವುದು, ಅದಕ್ಕಾಗಿ ಕಲಾತ್ಮಕ ನಿರ್ದೇಶಕರನ್ನು ಚಿತ್ರೋತ್ಸವ ಋತುವಿನ ಆರಂಭದಲ್ಲಿಯೇ ನೇಮಿಸಿ ಅವರನ್ನು ವಿಶ್ವದ ಎಲ್ಲ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕಳುಹಿಸಿ, Biffes ನಲ್ಲಿ ಸಹೃದಯ ಚಿತ್ರ ಪ್ರೇಮಿಗಳಿಗೆ, ಸಿನಿಮಾ ಲೋಕದಲ್ಲಿ ಬದುಕತ್ತಿರುವವರಿಗೆ ಉತ್ತಮ ಚಿತ್ರಗಳು ತಲುಪುವಂತೆ ಮಾಡುವುದು, ಸರ್ಕಾರದ ಸಿನಿಮಾ ಸಂಸ್ಕೃತಿಯ ಭಾಗವಾಗಬೇಕು” ಎಂದು ಅವರು ಸ್ಪಷ್ಟವಾಗಿ ಹೇಳಿ, “ಜಂಟಿ ಕಲಾತ್ಮಕ ನಿರ್ದೇಶಕನಾಗಿ ನನ್ನ ಜವಾಬ್ದಾರಿ Biffes ಮುಗಿಯುತ್ತಿದ್ದಂತೆ ಮುಕ್ತಾಯವಾಗಿದೆ”, ಎಂದು ಮೌನವಾಗುತ್ತಾರೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸೂಕ್ಷ ಪದರಗಳನ್ನು ಅದರ ಎಲ್ಲ ವಿವರಗಳೊಂದಿಗೆ ಅರ್ಥಮಾಡಿಕೊಳ್ಳುವ ವ್ಯವಸ್ಥೆಯ ಅಗತ್ಯವನ್ನು ಸರ್ಕಾರ ರೂಪಿಸಬೇಕೆಂಬುದು ಅವರ ಮಾತಿನ ಉದ್ದೇಶದಂತೆ, ಈ ಧ್ವನಿ ಕೇಳಿಸುತ್ತದೆ.

Tags:    

Similar News