ಬೆಂಗಳೂರಿನಲ್ಲಿ 5,500 ರಸ್ತೆ ಗುಂಡಿ; ಸಾರ್ವಜನಿಕರು, ವಾಹನ ಸವಾರರ ಪರದಾಟ!

ಬೆಂಗಳೂರಿನಲ್ಲಿ ಈಚೆಗೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದ ಸಾವಿರಾರು ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಜೂನ್‌ 4ರ ವರೆಗೆ ಗಡುವು ನೀಡಲಾಗಿದೆ.

By :  Hitesh Y
Update: 2024-05-31 01:00 GMT
ಬೆಂಗಳೂರಿನಲ್ಲಿ ರಸ್ತೆ ಗುಂಡಿ

ಬೆಂಗಳೂರಿನಲ್ಲಿ ಸುರಿದ ಅಲ್ಪ ಪ್ರಮಾಣದ (ಮುಂಗಾರು ಪೂರ್ವ) ಮಳೆಗೆ ರಸ್ತೆಗಳು ಬಾಯ್ತೆರೆದಿದ್ದು, ನಗರದಲ್ಲಿ ಒಟ್ಟು 2017 ರಸ್ತೆಗುಂಡಿಗಳನ್ನು ಗುರುತಿಸಲಾಗಿದ್ದು, ರಸ್ತೆ ಗುಂಡಿಗಳನ್ನು ಜೂನ್ 4ರ ಒಳಗೆ ಮುಚ್ಚುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದ 5,500 ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ. ಅದರಲ್ಲಿ ಈಗಾಗಲೇ 3,483 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ  2017ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. 

ರಸ್ತೆ ಗುಂಡಿ ಮುಚ್ಚುವುದಕ್ಕೆ ಟಾಸ್ಕ್ ಪೋರ್ಸ್

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ, ಮೇಲ್ವಿಚಾರಣೆ ಮಾಡಲು ಹಾಗೂ ಅನುಷ್ಠಾನಕ್ಕಾಗಿ ವಲಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಲಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 12878 ಕಿ.ಮೀ ರಸ್ತೆ ಜಾಲವಿದ್ದು, ಈ ರಸ್ತೆಗಳ ಪೈಕಿ 1344.84 ಕಿ.ಮೀ ಉದ್ದದ ರಸ್ತೆಗಳನ್ನು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ (ಮುಖ್ಯ ಹಾಗೂ ಉಪ ಮುಖ್ಯ) ರಸ್ತೆಗಳೆಂದು ವಿಂಗಡಿಸಲಾಗಿದೆ. ಈ ರಸ್ತೆಗಳನ್ನು ರಸ್ತೆ ಮೂಲಭೂತ ಸೌಕರ್ಯ ಶಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಉಳಿದ 11,533.16 ಕಿ.ಮೀ ರಸ್ತೆಗಳನ್ನು ವಲಯ ಮಟ್ಟದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.

 ಟಾಸ್ಕ್ ಫೋರ್ಸ್ ಸಮಿತಿಯ ವಿವರ

ವಲಯ ಆಯುಕ್ತ – ಅಧ್ಯಕ್ಷ .

 ವಲಯ ಜಂಟಿ ಆಯುಕ್ತ - ಸದಸ್ಯ

ವಲಯ ಮುಖ್ಯ ಎಂಜಿನಿಯರ್ - ಸದಸ್ಯರು.

ವಲಯ ಸಹಾಯಕ ಸಂಚಾರ ಪೊಲೀಸ್ ಆಯುಕ್ತ – ಸದಸ್ಯ

ವಲಯದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ - ಸದಸ್ಯ 

ವಿಭಾಗದ ಕಾರ್ಯಪಾಲಕ ಎಂಜಿನಿಯರ್ - ಸದಸ್ಯ

ಸಹಾಯಕ ಉಪ ನಿಯಂತ್ರಕರು(ಹಣಕಾಸು) – ಸದಸ್ಯ ಕಾರ್ಯದರ್ಶಿ

ಆಯಾ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರನ್ನು ಒಳಗೊಂಡ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ.

ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚು ರಸ್ತೆ ಗುಂಡಿ

ಬೆಂಗಳೂರಿನ ಹಲವು ಪ್ರದೇಶದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಆಯಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿದೆ. ಈಚೆಗೆ ಸುರಿದ ಮಳೆಯಿಂದ ನಗರದಲ್ಲಿ 5,500ಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ ಎಂದು ಬಿಬಿಎಂಪಿ ವರದಿ ತಿಳಿಸಿದೆ. ಮುಖ್ಯವಾಗಿ ದಾಸರಹಳ್ಳಿ ಮತ್ತು ರಾಜರಾಜೇಶ್ವರಿನಗರ ವಲಯದಲ್ಲಿ ಹೆಚ್ಚು ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದು, ಅವುಗಳನ್ನು ಮುಚ್ಚಲಾಗುತ್ತಿದೆ.

ಹಗಲು – ರಾತ್ರಿ ರಸ್ತೆ ಗುಂಡಿ ಮುಚ್ಚಿ!

ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ರಸ್ತೆ ಗುಂಡಿಗಳನ್ನು ಹಗಲು – ರಾತ್ರಿ ಎಂದು ನೋಡದೆ ಮುಚ್ಚಿ ಎಂದು ಮುಖ್ಯ ಆಯುಕ್ತ ತುಷಾರಿ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಆರ್ಟಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಈಗಾಗಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕೆ ಮತ್ತಷ್ಟು ಚುರುಕು ನೀಡಿ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದ್ದಾರೆ. ವಲಯವಾರು ವಾರ್ಡ್ ಎಂಜಿನಿಯರ್‌ಗಳು ರಸ್ತೆ ಗುಂಡಿಗಳನ್ನು ಪತ್ತೆಮಾಡಿ ಕೂಡಲೇ ರಸ್ತೆಗುಂಡಿಗಳನ್ನು ಮುಚ್ಚಬೇಕು. ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ (ರಸ್ತೆ ಗುಂಡಿ ಮುಚ್ಚಲು ಬಳಸುವ ಟಾರ್) ಮೂಲಕ ಹಗಲು - ರಾತ್ರಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದ್ದಾರೆ.

ಯಾವ ವಲಯದಲ್ಲಿ ಎಷ್ಟು ರಸ್ತೆ ಗುಂಡಿ ?

ವಲಯ   ರಸ್ತೆ   ಗುಂಡಿ (ಸಂಖ್ಯೆ)

ಪೂರ್ವ   392

ಪಶ್ಚಿಮ    323

ದಕ್ಷಿಣ      180

ಬೊಮ್ಮನಹಳ್ಳಿ  230

ರಾಜರಾಜೇಶ್ವರಿ ನಗರ  442

ಯಲಹಂಕ       91

ದಾಸರಹಳ್ಳಿ      81

ಮಹದೇವಪುರ 90

ಕೃಷ್ಣರಾಜಪುರ 188

ವಾಹನಗಳ ಮೂಲಕ ತಪಾಸಣೆ: ತುಷಾರ್‌ ಗಿರಿನಾಥ್‌ 

ಬೆಂಗಳೂರಿನ ರಸ್ತೆಗಳಲ್ಲಿ ಸೃಷ್ಟಿಯಾಗುವ ರಸ್ತೆಗುಂಡಿಗಳನ್ನು ಪರಿಶೀಲನೆ ಮಾಡುವ ಉದ್ದೇಶದಿಂದ 5 ಲಕ್ಷ ರೂಪಾಯಿ ಮೊತ್ತದ 15 ಕ್ಯಾಮೆರಾಗಳನ್ನು ಖರೀದಿಸಲಾಗಿದ್ದು, ಎಂಜಿನಿಯರ್‌ಗಳ (ಕಾರ್‌ಗಳ)ವಾಹನದ ಮೇಲೆ ಅಳವಡಿಸಿಕೊಂಡು ರಸ್ತೆ ಗುಣಮಟ್ಟವನ್ನು ಪರಿಶೀಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲಾಗುತ್ತಿದ್ದು, ಜೂನ್ 4ರ ಒಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.  

Tags:    

Similar News