ಲೀಲಾವತಿ ʼಅಮ್ಮʼನಿಗಾಗಿ ದೇವಳ ನಿರ್ಮಿಸಿದ ವಿನೋದ್‌ ರಾಜ್‌

ಲೀಲಾವತಿ ಅವರ ಸ್ಮಾರಕವನ್ನು ವಿನೋದ್ ರಾಜ್‍, ತಮ್ಮ ಸ್ವಂತ ಖರ್ಚಿನಲ್ಲಿ ಮತ್ತು ಜಾಗದಲ್ಲಿ ಕಟ್ಟಿಸಿದ್ದಾರೆ. ಆ ಸ್ಮಾರಕಕ್ಕೆ, ‘ವರನಟಿ ಡಾ. ಎಂ ಲೀಲಾವತಿ ದೇಗುಲ’ ಎಂದು ಹೆಸರಿಟ್ಟಿದ್ದಾರೆ.

Update: 2024-12-09 11:38 GMT

ಕನ್ನಡದ ಹಿರಿಯ ನಟಿ ಮತ್ತು ನಿರ್ಮಾಪಕಿ ಲೀಲಾವತಿ ನಿಧನರಾಗಿ ಒಂದು ವರ್ಷವಾಗಿದೆ. ಕಳೆದ ವರ್ಷ ಡಿಸೆಂಬರ್ 08ರಂದು ಅವರು ವಯೋಸಹಜ ಖಾಯಿಲೆಗಳಿಂದ ನಿಧನರಾರು. ಅವರು ನಿಧನರಾಗಿ ಭಾನುವಾರ ಒಂದು ವರ್ಷವಾಗಿದ್ದು, ಅವರ ನೆನಪಲ್ಲಿ ಅವರ ಮಗ ಹಾಗೂ ನಟ ವಿನೋದ್‍ ರಾಜ್‍, ತಮ್ಮ ತೋಟದ ಮನೆಯಲ್ಲಿ ಸ್ಮಾರಕವೊಂದನ್ನು ಕಟ್ಟಿಸಿದ್ದಾರೆ.

ಸಾಮಾನ್ಯವಾಗಿ ಕಲಾವಿದರು ನಿಧನರಾದಾಗ, ಅವರ ಸ್ಮಾರಕಗಳಿಗೆ ಸರ್ಕಾರ ಹಣ ಮತ್ತು ಜಾಗ ಕೊಡುವುದು ಸಹಜ. ಆದರೆ, ಲೀಲಾವತಿ ಅವರ ಸ್ಮಾರಕವನ್ನು ವಿನೋದ್ ರಾಜ್‍, ತಮ್ಮ ಸ್ವಂತ ಖರ್ಚಿನಲ್ಲಿ ಮತ್ತು ಜಾಗದಲ್ಲಿ ಕಟ್ಟಿಸಿದ್ದಾರೆ. ಆ ಸ್ಮಾರಕಕ್ಕೆ, ‘ವರನಟಿ ಡಾ. ಎಂ ಲೀಲಾವತಿ ದೇಗುಲ’ ಎಂದು ಹೆಸರಿಟ್ಟಿದ್ದಾರೆ.


ಈ ಸ್ಮಾರಕವನ್ನು ಸಂಪೂರ್ಣವಾಗಿ ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಕಲ್ಲಿನ ಕಂಬಗಳಿಂದ ಮಂಟಪ ನಿರ್ಮಾಣ ಮಾಡಲಾಗಿದ್ದು, ಲೀಲಾವತಿ ಅವರ 70ಕ್ಕೂ ಹೆಚ್ಚು ಅಪರೂಪದ ಫೋಟೋಗಳು ಸ್ಮಾರಕದಲ್ಲಿ ಅಳವಡಿಸಲಾಗಿದೆ. ಈ ಸ್ಮಾರಕಕ್ಕಾಗಿ ವಿನೋದ್ ರಾಜ್‍ ಸುಮಾರು ಒಂದು ಕೋಟಿ ರೂ.ಗಳಷ್ಟು ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾತನಾಡಿರುವ ವಿನೋದ್‍ ರಾಜ್‍, ‘ಅಮ್ಮನನ್ನು ಬಹಳ ಮಿಸ್‍ ಮಾಡಿಕೊಳ್ಳುತ್ತೇವೆ. ಅವರು ಮಿಸ್‍ ಆಗಬಾರದು ಎಂಬ ಕಾರಣಕ್ಕೆ ಈ ಸ್ಮಾರಕ ಕಟ್ಟಿಸಿದ್ದೇನೆ. ಅಮ್ಮ ಕಲಾವಿದೆಯಾಗಿ, ರೈತ ಮಹಿಳೆಯಾಗಿ ಜೀವನ ಸಾಗಿಸಿದ್ದಾರೆ. ಅವರು ಸಮಾಜಮುಖಿಯಾಗಿದ್ದರು. ಅವರ ಸ್ಮಾರಕವನ್ನು ನಿರ್ಮಿಸುತ್ತವ ಆಸೆ ಇತ್ತು. ಈ ಸ್ಮಾರಕವನ್ನು ಸವಾಲಾಗಿ ಸ್ವೀಕರಿಸಿ ಒಂದು ವರ್ಷದಲ್ಲಿ ಮಾಡಿ ಮುಗಿಸಿದ್ದೇವೆ. ಅವರು ನಮಗೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡೋಕೆ ಹೇಳಿದರು. ಅವರು ಇದ್ದಾಗಲೇ ಮಾಡಿದೆ. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದು ಉದ್ಘಾಟನೆ ಮಾಡಿದರು. ಆ ನಂತರ ಪಶುವೈದ್ಯಕೀಯ ಆಸ್ಪತ್ರೆ ಮಾಡೋಕೆ ಹೇಳಿದರು. ಅಷ್ಟರಲ್ಲಿ ಅವರ ಆರೋಗ್ಯ ಕ್ಷೀಣಿಸಿತ್ತು. ಆ ಆಸ್ಪತ್ರೆಯೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ’ ಎನ್ನುತ್ತಾರೆ.


ಈ ಸ್ಮಾರಕ ಕಟ್ಟಿಸುವುದಕ್ಕೆ ಸರ್ಕಾರದಿಂದ ಯಾವುದೇ ಹಣ ಪಡೆಯಲಿಲ್ಲ, ಸ್ವಂತ ದುಡ್ಡಿನಲ್ಲಿ ಕಟ್ಟಿಸಿದ್ದೇನೆ ಎಂದಿರುವ ವಿನೋದ್‍ ರಾಜ್‍, ‘ಸರ್ಕಾರದಿಂದ ಹಣ ಕೇಳಿಲ್ಲ. ನಾವು ಜನಸಾಮಾನ್ಯರಿಗೆ ಹೊರೆಯಾಗಬಾರದು. ನಮಗೆ ಅದರ ಅವಶ್ಯಕತೆ ಇಲ್ಲ. ಸರ್ಕಾರದಿಂದ ಅಪೇಕ್ಷಿಸುವುದು ದೊಡ್ಡ ತಪ್ಪು. ನನ್ನ ಕೈಯಲ್ಲಿ ಎಷ್ಟು ಶಕ್ತಿ ಇತ್ತೋ, ಅಷ್ಟರಲ್ಲಿ ಕಟ್ಟಿದ್ದೇನೆ. ನಾವು ಗಳಿಸಿದ್ದರಲ್ಲಿ ಒಂದಿಷ್ಟು ಕೂಡಿಡಬೇಕು. ನಮ್ಮ ತಾಯಿ ಕೂಡಿಟ್ಟು, ಕೂಡಿಟ್ಟು ಇಷ್ಟು ದೊಡ್ಡ ತೋಟ ಮಾಡಿದರು. ಹಾಗಂತ ಯಾವತ್ತೂ ತೆರಿಗೆ ಕಟ್ಟುವುದನ್ನು ಅವರು ನಿಲ್ಲಿಸಲಿಲ್ಲ. ನಮಗೆ ಏನು ಗಳಿಕೆ ಇದೆಯೋ ಅದರಲ್ಲಿ ತಿಂದರೆ ಸಾಕು’ ಎಂದು ಹೇಳಿದ್ದಾರೆ.

ಈ ಸ್ಮಾರಕವನ್ನು ಇತ್ತೀಚೆಗೆ ಸಚಿವ ಕೆ.ಹೆಚ್.ಮುನಿಯಪ್ಪ, ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಮತ್ತು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಎಂ.ಎನ್‍. ಲಕ್ಷೀದೇವಿ, ಶೈಲಜಾ ಸುದರ್ಶನ್, ಗಿರಿಜಾ ಲೋಕೇಶ್, ಎಂ.ಎಸ್.ಉಮೇಶ್, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್‌ ಕೃಷ್ಣ, ಅಭಿಜಿತ್, ಪದ್ಮವಾಸಂತಿ, ಬ್ಯಾಂಕ್‌ ಜನಾರ್ಧನ್, ಕೀರ್ತಿರಾಜ್ ಸೇರಿದಂತೆ ಹಲವು ಹಿರಿಯ ಕಲಾವಿದರು ಹಾಜರಿದ್ದರು.

Tags:    

Similar News