ಮಚ್ಚು ಹಿಡಿದಿದ್ದು ತಪ್ಪು: ಬಹಿರಂಗ ಕ್ಷಮೆ ಕೇಳಿದ ವಿನಯ್ ಗೌಡ
ಈ ವಿಷಯ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದಿರುವ ವಿನಯ್, ತನ್ನ ಎಚ್ಚರಿಕೆಯಲ್ಲಿ ತಾನು ಇರಬೇಕಿತ್ತು, ತಾನು ಈ ತರಹ ಮಾಡಬಾರದಿತ್ತು, ಅದಕ್ಕಾಗಿ ಕ್ಷಮೆ ಯಾಚಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.;
ವಿನಯ್ ಗೌಡ
ಮಚ್ಚು ಹಿಡಿದಿದ್ದು ತಪ್ಪು: ಬಹಿರಂಗ ಕ್ಷಮೆ ಕೇಳಿದ ವಿನಯ್ ಗೌಡಕಳೆದ ವಾರ ‘ಬಿಗ್ ಬಾಸ್’ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಅವರದ್ದೇ ಹೆಚ್ಚು ಸುದ್ದಿ. ವೀಡಿಯೋದಲ್ಲಿ ಮಚ್ಚು ಹಿಡಿದು ಜೈಲು ಪಾಲಾಗಿದ್ದ ರಜತ್ ಮತ್ತು ವಿನಯ್ ಅವರು ಪೊಲೀಸರು ಬಂಧಿಸಿದ್ದರು. ಆ ನಂತರ ಅವರಿಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ವಿನಯ್, ತಾನು ಮಚ್ಚು ಹಿಡಿದಿದ್ದು ತಪ್ಪು ಎಂದು ಒಪ್ಪಿಕೊಳ್ಳುವುದರ ಜೊತೆಗೆ ಆ ತಪ್ಪಿಗೆ ಬಹಿರಂಗ ಕ್ಷಮೆ ಕೇಳಿದ್ದಾರೆ.
ಬಿಡುಗಡೆಯ ನಂತರ ವೀಡಿಯೋ ಮಾಡಿ ಕ್ಷಮೆಯಾಚಿಸಿರುವ ವಿನಯ್, ಅದನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ವಿಷಯ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದಿರುವ ವಿನಯ್, ತನ್ನ ಎಚ್ಚರಿಕೆಯಲ್ಲಿ ತಾನು ಇರಬೇಕಿತ್ತು, ತಾನು ಈ ತರಹ ಮಾಡಬಾರದಿತ್ತು, ಅದಕ್ಕಾಗಿ ಕ್ಷಮೆ ಯಾಚಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ವಿನಯ್, ‘ಕೆಲವು ದಿನಗಳ ಹಿಂದೆ ಒಂದು ಘಟನೆ ನಡೆಯಿತು. ಈ ವೀಡಿಯೋ ಮಾಡುವುದಕ್ಕೆ ಮುಖ್ಯ ಕಾರಣ, ಕರ್ನಾಟಕದ ಪ್ರತಿಯೊಬ್ಬರಲ್ಲೂ ನಾನು ಕ್ಷಮೆ ಕೇಳಬೇಕಿತ್ತು. ನನ್ನನ್ನು ಕ್ಷಮಿಸಿ. ಕಳೆದ ಕೆಲವು ದಿನಗಳಿಂದ ಟಿವಿ ಮತ್ತು ಯೂಟ್ಯೂಬ್‍ನಲ್ಲಿ ವೀಡಿಯೋಗಳನ್ನು ನೋಡಿರಬಹುದು. ಒಂದು ಮಚ್ಚಿನ ಕಥೆ ನಡೆಯುತ್ತಿದೆ. ಅದಕ್ಕಾಗಿ ಕ್ಷಮೆ ಕೇಳಬೇಕಿತ್ತು. ಪ್ರತಿಯೊಬ್ಬರಲ್ಲೂ ಕ್ಷಮೆ ಕೇಳಬೇಕೆಂದು ಈ ವೀಡಿಯೋ ಮಾಡುತ್ತಿದ್ದೇನೆ’ ಎಂದಿದ್ದಾರೆ.
ನನ್ನಿಂದ ನನ್ನ ಹೆಂಡತಿಗೆ, ಮಗನಿಗೆ ತೊಂದರೆಯಾಗಿದ್ದು, ಕ್ಷಮಿಸಿ ಎಂದಿರುವ ಅವರು, ‘ದಯವಿಟ್ಟು ಕ್ಷಮಿಸಿಬಿಡಿ. ನನ್ನ ಸ್ನೇಹಿತರಿಗೂ ಸಮಸ್ಯೆಯಾಗಿದ್ದು, ಆದರೂ ಜೊತೆಗೆ ಪೊಲೀಸ್ ಸ್ಟೇಶನ್ ಎದುರು ಕಾದು ನಿಂತಿದ್ದಾರೆ. ನನಗೆ ತುಂಬಾ ಸಹಾಯ ಮಾಡಿದ್ದಾರೆ. ಅಕ್ಕ-ಬಾವ ಈ ಪ್ರಕರಣದಲ್ಲಿ ಓಡಾಡಿದ್ದಾರೆ. ಮಾಧ್ಯಮದವರಿಗೆ ಕ್ಷಮೆ ಕೋರಬೇಕು. ನನ್ನಿಂದ ತಪ್ಪಾಗಿದೆ. ಮಚ್ಚು ಇಟ್ಟುಕೊಂಡು ವೀಡಿಯೋ ಮಾಡಿದ್ದು ಎಲ್ಲರಿಗೂ ನೋವಾಗಿದೆ. ನಾನು ಹೀಗೆ ಮಾಡಬಾರದಾಗಿತ್ತು. ಎಲ್ಲರಿಗೂ ತೊಂದರೆ ಕೊಟ್ಟಿದ್ದೇನೆ. ಈ ವಿಷಯ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ಇದರಲ್ಲಿ ನನ್ನದೂ ತಪ್ಪಿದೆ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು. ನಾನು ಈ ತರಹ ಮಾಡಬಾರದಿತ್ತು. ಪೊಲೀಸ್ ಇಲಾಖೆಯವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಮತ್ತು ಸಾಮಾನ್ಯ ಮನುಷ್ಯ ಎಂದು ವ್ಯತ್ಯಾಸ ತೋರಿಸದೆ, ಕಾನೂನಿನ ಪ್ರಕಾರ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನನ್ನು ಹೇಗೆ ನೋಡಿಕೊಳ್ಳಬೇಕೋ, ಹಾಗೆ ನೋಡಿಕೊಂಡಿದ್ದಾರೆ. ದಯವಿಟ್ಟು ಅವರ ಮೇಲೆ ಯಾವುದೇ ಆರೋಪಗಳನ್ನು ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.
ಕಿರುತೆರೆಯಲ್ಲಿ ಪ್ರಸಾರವಾದ ‘ಹರಹರ ಮಹಾದೇಔ’ ಧಾರಾವಾಹಿಯಲ್ಲಿ ಈಶ್ವರನಾಗಿ ಅಭಿನಯಿಸಿದ್ದ ವಿನಯ್, ‘ಪೊಗರು’, ‘ಶಿವಾಜಿ ಸುರತ್ಕಲ್’ ಮುಂತಾದ ಚಿತ್ರಗಳಲ್ಲೂ ನಟಿಸಿದ್ದಾರೆ. ಸದ್ಯ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.