ಕಣ್ಣೀರ ಕಡಲಲ್ಲಿ ಅಸ್ಸಾಂ: ತಾಯ್ನಾಡಿಗೆ ಮರಳಿದ ಜುಬೀನ್ ಗರ್ಗ್, ಅಂತಿಮ ದರ್ಶನಕ್ಕೆ ಜನಸಾಗರ
ಸಿಂಗಾಪುರದ ಸಮುದ್ರ ಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಪಘಾತ ಸಂಭವಿಸಿ ನಿಧನರಾಗಿದ್ದ ಗಾಯಕ ಜುಬೀನ್ ಗರ್ಗ್ ಅವರ ಪಾರ್ಥೀವ ಶರೀರವನ್ನು ಗುವಾಹಟಿಗೆ ತರಲಾಗಿದೆ.
ಜುಬೀನ್ ಗಾರ್ಗ್
ಸಿಂಗಾಪುರದ ಸಮುದ್ರ ಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಪಘಾತ ಸಂಭವಿಸಿ ನಿಧನರಾಗಿದ್ದ ಗಾಯಕ ಜುಬೀನ್ ಗರ್ಗ್ ಅವರ ಪಾರ್ಥೀವ ಶರೀರವನ್ನು ಗುವಾಹಟಿಗೆ ತರಲಾಗಿದೆ.
ಗುವಾಹಟಿಯ ಕಹಿಲಿಪಾರದಲ್ಲಿರುವ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತಂದ ಬಳಿಕ ಗಾಯಕನಿಗೆ ಕುಟುಂಬಸ್ಥರು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ. ತರುವಾಯ ಪಾರ್ಥಿವ ಶರೀರವನ್ನು ಗುವಾಹಟಿಯ ಸರುಸಜೈನಲ್ಲಿರುವ ಅರ್ಜುನ್ ಭೋಗೇಶ್ವರ್ ಬರುವಾ ಕ್ರೀಡಾ ಸಂಕೀರ್ಣದಲ್ಲಿ ಸಾರ್ವಜನಿಕರ ದರ್ಶನ ಇಡಲಾಗಿದೆ.
ಜುಬೀನ್ ಅವರ ಪಾರ್ಥಿವ ಶರೀರವು ನಿವಾಸಕ್ಕೆ ಆಗಮಿಸುವ ಮಾರ್ಗದಲ್ಲಿ ಎಲ್ಲಾ ವಯೋಮಾನದ ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ಹೂಗುಚ್ಛಗಳನ್ನು ಎರಚುವ ಮುಖೇನ ಅಂತಿಮ ನಮನ ಸಲ್ಲಿಸಿದರು.
ಅಸ್ಸಾಂನ ಸಾಂಸ್ಕೃತಿಕ ಪ್ರತಿಭೆಗಳಲ್ಲಿ ಪ್ರಮುಖರಾಗಿದ್ದ ಜುಬೀನ್, ಇಡೀ ಈಶಾನ್ಯವನ್ನು ಶ್ರೀಮಂತಗೊಳಿಸಿದರು ಎಂದು ಹೇಳುವ ಮುಖೇನ ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿಗಳು ಸಾಮಾಜಿಕ ಮಾಧ್ಯಮದಲ್ಲಿ ನಮನ ಸಲ್ಲಿಸಿದ್ದಾರೆ.
ಬಿಸಿಲಿನ ಝಳವನ್ನೂ ಲೆಕ್ಕಿಸದೆ ಅಭಿಮಾನಿಗಳು ಕ್ರೀಡಾ ಸಂಕೀರ್ಣದ ಹೊರಗೆ ದುಃಖಿಸುತ್ತಾ, ತಮ್ಮ ನೆಚ್ಚಿನ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಅನೇಕ ಅಭಿಮಾನಿಗಳು ರಾತ್ರಿಯಿಡೀ ಸಂಕೀರ್ಣದ ಹೊರಗೆ ಬೀಡುಬಿಟ್ಟಿದ್ದರು. ಇನ್ನೂ ಕೆಲವರು ಬೆಳಿಗ್ಗೆ ಬಂದು ತಲುಪಿದರು. ರಾತ್ರಿಯಿಡೀ ತಂಗಿದ್ದವರು ಜುಬೀನ್ ಅವರ ಕಟೌಟ್ ಹಿಡಿದು ರಾತ್ರಿಯಿಡೀ ಅವರ ಜನಪ್ರಿಯ ಹಾಡುಗಳನ್ನು ಹಾಡಿದರು. ಆ ಮೂಲಕ ಸ್ಟಾರ್ ಗಾಯಕನ ಮೇಲಿದ್ದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಹವಾಮಾನ ಪರಿಸ್ಥಿತಿ ಕಠಿಣವಾಗಿದ್ದಿದ್ದರಿಂದ ಹಲವರು ತೀವ್ರ ದುಃಖತಪ್ತರಾಗಿ ಮೂರ್ಛೆ ಹೋದರು. ಆದರೆ ಯಾರೊಬ್ಬರೂ ತಾಳ್ಮೆ ಕಳೆದುಕೊಳ್ಳಲಿಲ್ಲ.
ಜುಬೀನ್ ಪಾರ್ಥಿವ ಶರೀರ ಸ್ವೀಕರಿಸಿದ್ದ ಸಿಎಂ
ಜುಬೀನ್ ಅವರ ಪಾರ್ಥಿವ ಶರೀರವನ್ನು ಸ್ವೀಕರಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೆ.20ರಂದು ದೆಹಲಿಗೆ ತೆರಳಿದ್ದರು. ಜುಬೀನ್ ಅವರ ಮೃತದೇಹವನ್ನು ಸ್ವೀಕರಿಸಿದ ನಂತರ ಅವರಿಗೆ ಗೌರವ ಸಲ್ಲಿಸಿದ ಶರ್ಮಾ, ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಗುವಾಹಟಿಗೆ ಕಳುಹಿಸಿಕೊಟ್ಟರು. ಶನಿವಾರ ಮುಂಜಾನೆ 4.30ಕ್ಕೆ ದೆಹಲಿಯಿಂದ ಹೊರಟಿದ್ದ ವಿಮಾನ ಬೆಳಿಗ್ಗೆ 7 ಗಂಟೆಗೆ ಗುವಾಹಟಿ ತಲುಪಿತು. ಜುಬೀನ್ ಅವರ ಕುಟುಂಬಸ್ಥರು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ಜುಬೀನ್ ಪಾರ್ಥಿವ ಶರೀರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗಾಯಕನ ಆಪ್ತ ಸ್ನೇಹಿತೆ, ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಕೂಡ ಹಾಜರಿದ್ದರು.
ವಿಮಾನ ನಿಲ್ದಾಣದಲ್ಲಿ ಬಿಕ್ಕಿಬಿಕ್ಕಿ ಅತ್ತ ಪತ್ನಿ
ಗಾಯಕನ ಪಾರ್ಥಿವ ಶರೀರವನ್ನು ಗುವಾಹಟಿಯಲ್ಲಿ ಇಳಿಸುತ್ತಿದ್ದಂತೆ ಅವರ ಪತ್ನಿ ಗರಿಮಾ ಸೈಕಿಯಾ ಗರ್ಗ್ ಅವರು ಪುಷ್ಪ ನಮನ ಸಲ್ಲಿಸಿ, ಮೇಲೆ ಪ್ರಸಿದ್ಧ ಅಸ್ಸಾಂ 'ಗಮೋಸಾ'ವನ್ನು ಇರಿಸಿ, ಪತಿಯನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತರು. ಈ ಕ್ಷಣ ಎಂಥವರ ಕಣ್ಣಾಲಿಗಳೂ ತುಂಬುವಂತಿತ್ತು.
ಅಂತಿಮ ವಿಧಿ-ವಿಧಾನದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ
ಜುಬೀನ್ ಅವರ ಅಂತ್ಯಕ್ರಿಯೆಯ ವಿವರಗಳು ಇನ್ನೂ ಅಂತಿಮಅಂವಾಗಿಲ್ಲ. ಅಂತ್ಯಕ್ರಿಯೆಯ ಸ್ಥಳವನ್ನು ನಿರ್ಧರಿಸಲು ಅಸ್ಸಾಂ ಸಚಿವ ಸಂಪುಟ ಭಾನುವಾರ ಸಂಜೆ ಸಭೆ ಸೇರಲಿದ್ದು, ಕುಟುಂಬದ ಅಭಿಪ್ರಾಯವನ್ನೇ ಪ್ರಮುಖವಾಗಿ ಪರಿಗಣಿಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಗುವಾಹಟಿ ಮತ್ತು ಸುತ್ತಮುತ್ತ ಸೂಕ್ತ ಸ್ಥಳಕ್ಕಾಗಿ ಅಸ್ಸಾಂ ಸರ್ಕಾರ ಹುಡುಕಾಟ ನಡೆಸುತ್ತಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲು ಅವರ ಕುಟುಂಬದ ಮುಂದೆ ಆಯ್ಕೆಗಳನ್ನು ಇಡಲಿದೆ ಎನ್ನಲಾಗಿದೆ.
ಅಂತ್ಯಕ್ರಿಯೆಗೆ ಸೋನಾಪುರ ಸಂಭಾವ್ಯ ಸ್ಥಳವಾಗಿದೆ. ಆದರೆ ಈ ವಿಚಾರದಲ್ಲಿ ಇತರೆ ಆಯ್ಕೆಗಳೂ ಇವೆ. ಉನ್ನತ ಅಧಿಕಾರಿಗಳು ಇತರ ಸ್ಥಳಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಕ ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದ ಕಾರಣ ಜುಬೀನ್ ಅವರ ಅಂತಿಮ ವಿಶ್ರಾಂತಿ ಸ್ಥಳವು ಅಪ್ಪರ್ ಅಸ್ಸಾಂನ ಜೋರ್ಹತ್‌ನಲ್ಲಿ ಇರಬೇಕೆಂಬ ಬೇಡಿಕೆಯನ್ನೂ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.