"ಇರುವುದು ಒಂದೇ ಜಾತಿ, ಅದು ಮಾನವೀಯತೆ": ಸತ್ಯಸಾಯಿ ವೇದಿಕೆಯಲ್ಲಿ ಐಶ್ವರ್ಯಾ ರೈ ಭಾವುಕ ನುಡಿ

ನಟಿ ಐಶ್ವರ್ಯಾ ರೈ ಭಾಷಣದಲ್ಲಿ,ಇರುವುದೆಲ್ಲ ಒಂದೇ ಜಾತಿ, ಅದು ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಅದು ಹೃದಯದ ಭಾಷೆ, ಮತ್ತು ಇರುವುದು ಒಂದೇ ದೇವರು, ಅವನು ಸರ್ವವ್ಯಾಪಿ ಎಂದು ಸಾರಿದರು.

Update: 2025-11-19 11:29 GMT

ಐಶ್ವರ್ಯಾ ರೈ ಬಚ್ಚನ್

Click the Play button to listen to article

"ಇರುವುದು ಒಂದೇ ಜಾತಿ, ಅದು ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಅದು ಹೃದಯದ ಭಾಷೆ, ಮತ್ತು ಇರುವುದು ಒಂದೇ ದೇವರು, ಅವನು ಸರ್ವವ್ಯಾಪಿ," ಎಂಬ ಅರ್ಥಪೂರ್ಣ ಮಾತುಗಳೊಂದಿಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಶ್ರೀ ಸತ್ಯಸಾಯಿ ಬಾಬಾ ಅವರ ಬೋಧನೆಗಳನ್ನು ಸ್ಮರಿಸಿದರು.

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಭಿಕರ ಮನಗೆದ್ದರು. ಇದೇ ಸಂದರ್ಭದಲ್ಲಿ, ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಕ್ಷಣವು ಎಲ್ಲರ ಗಮನ ಸೆಳೆಯಿತು.

ಬಾಲ್ಯದ ನೆನಪುಗಳು ಮತ್ತು ಸಾಯಿಬಾಬಾ ಅವರ ಬೋಧನೆ

"ನಾನು ಬಾಲ್ಯದಲ್ಲಿ ಶ್ರೀ ಸತ್ಯಸಾಯಿ ಬಾಬಾ ಟ್ರಸ್ಟ್‌ನಿಂದ ಆರ್ಥಿಕ ನೆರವು ಪಡೆದ ಬಾಲ ವಿಕಾಸ್ ವಿದ್ಯಾರ್ಥಿನಿ," ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಐಶ್ವರ್ಯಾ, "ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಈ ಐತಿಹಾಸಿಕ ಮತ್ತು ಪವಿತ್ರ ಸಂದರ್ಭದಲ್ಲಿ, ನನ್ನ ಹೃದಯವು ಭಕ್ತಿ ಮತ್ತು ಕೃತಜ್ಞತೆಯಿಂದ ತುಂಬಿದೆ. ಅವರ ಜನನವಾಗಿ ಒಂದು ಶತಮಾನ ಕಳೆದರೂ, ಅವರ ಬೋಧನೆಗಳು ಮತ್ತು ಕರುಣೆ ಇಂದಿಗೂ ಲಕ್ಷಾಂತರ ಜನರ ಹೃದಯಗಳಲ್ಲಿ ಪ್ರತಿಧ್ವನಿಸುತ್ತಲೇ ಇವೆ," ಎಂದು ಭಾವುಕರಾದರು.

ಪ್ರಧಾನಿ ಮೋದಿಯವರ ಉಪಸ್ಥಿತಿಯನ್ನು ಶ್ಲಾಘಿಸಿದ ಅವರು, "ನಿಮ್ಮ ಉಪಸ್ಥಿತಿಯು ಈ ಆಚರಣೆಗೆ ಪಾವಿತ್ರ್ಯ ಮತ್ತು ಸ್ಫೂರ್ತಿಯನ್ನು ನೀಡಿದೆ. ನಿಜವಾದ ನಾಯಕತ್ವ ಎಂದರೆ ಸೇವೆ, ಮತ್ತು 'ಮಾನವನಿಗೆ ಸೇವೆಯೇ ದೇವರ ಸೇವೆ' ಎಂಬ ಸ್ವಾಮಿಯ ಸಂದೇಶವನ್ನು ಇದು ನೆನಪಿಸುತ್ತದೆ," ಎಂದರು.

ಗಣ್ಯರ ದಂಡು

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಕೇಂದ್ರ ಸಚಿವರಾದ ರಾಮ್ ಮೋಹನ್ ನಾಯ್ಡು ಮತ್ತು ಜಿ. ಕಿಶನ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ನವೆಂಬರ್ 23, 1926ರಂದು ಜನಿಸಿದ ಶ್ರೀ ಸತ್ಯಸಾಯಿ ಬಾಬಾ ಅವರು ಪ್ರೀತಿ, ನಿಸ್ವಾರ್ಥ ಸೇವೆ ಮತ್ತು ಸಾಮರಸ್ಯದ ಸಂದೇಶಗಳನ್ನು ಜಗತ್ತಿಗೆ ಸಾರಿದರು. 2011ರಲ್ಲಿ ಅವರು ನಿಧನರಾದರೂ, ಅವರ ಬೋಧನೆಗಳು ಮತ್ತು ಮಾನವೀಯ ಕಾರ್ಯಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿವೆ. ಐಶ್ವರ್ಯಾ ರೈ ಅವರು ಕೊನೆಯದಾಗಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್: II' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 

Tags:    

Similar News