‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಿಂದ ಸೋನು ನಿಗಮ್ ಹಾಡಿಗೆ ಕೊಕ್
ಸೋನು ನಿಗಮ್ ಇತ್ತೀಚೆಗೆ ಆಡಿರುವ ಕೆಲವು ಮಾತುಗಳು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎನ್ನುವ ನಿರ್ದೇಶಕ ರಾಮ್‍ನಾರಾಯಣ್, ‘ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಸೋನು ದೊಡ್ಡ ಅವಮಾನ ಮಾಡಿದ್ದಾರೆ.;
ಸೋನು ನಿಗಮ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಸೋನು ನಿಗಮ್, ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ …’ ಎಂಬ ಹಾಡು ಹಾಡಿದ್ದರು. ಈ ಹಾಡಿನ ಲಿರಿಕಲ್ ವೀಡಿಯೋ ಇತ್ತೀಚೆಗೆ ಬಿಡುಗಡೆ ಆಗಿ, ಹಾಡು ಜನಪ್ರಿಯವಾಗಿತ್ತು. ಇದೀಗ ಸೋನು ನಿಗಮ್ ವರ್ತನೆಯನ್ನು ಖಂಡಿಸಿ, ಚಿತ್ರತಂಡವು ನಿರ್ಧಾಕ್ಷಿಣ್ಯವಾಗಿ ಹಾಡು ಕೈಬಿಟ್ಟಿದೆ. ಸೋನು ಬದಲು ಚೇತನ್ ಸೋಸ್ಕಾರಿಂದ ಹಾಡಿಸಿ, ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರು ಮತ್ತು ಕರ್ನಾಟಕದ ಬಗ್ಗೆ ಬಾಲಿವುಡ್ ಗಾಯಕ ಸೋನು ನಿಗಮ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಕುರಿತು ರಾಜ್ಯದಲ್ಲಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಅವರ ಮೇಲೆ ಕೇಸ್ ದಾಖಲಾಗುವುದರ ಜೊತೆಗೆ, ಅವರಿಂದ ಹಾಡಿಸಬಾರದು ಎಂಬ ತೀರ್ಮಾನವನ್ನು ಚಿತ್ರರಂಗ ಕೈಗೊಂಡಿತ್ತು.
ಹೀಗಿರುವಾಗಲೇ, ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡವು ಚಿತ್ರಕ್ಕಾಗಿ ಸೋನು ನಿಗಮ್ ಹಾಡಿದ್ದ ಹಾಡನ್ನು ಕಿತ್ತುಹಾಕಲು ತೀರ್ಮಾನಿಸಿದೆ. ಈಗಾಗಲೇ ಚೇತನ್ ಸೋಸ್ಕಾ ಅವರಿಂದ ಅದೇ ಹಾಡನ್ನು ಹಾಡಿಸಲಾಗಿದೆ. ಮಾಸ್ಟರಿಂಗ್ ಆದ ನಂತರ ಆ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ಸಂತೋಷ್ ಯಾಕೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ‘ನನಗೆ ಸೋನು ನಿಗಮ್ ಅವರು ಕ್ಷಮೆ ಕೇಳಿದ ರೀತಿ ಸರಿ ಹೋಗಲಿಲ್ಲ. ಅವರ ನಡವಳಿಕೆ ಸರಿ ಇಲ್ಲ. ಕನ್ನಡಿಗರಾಗಿ ಅವರ ನಡವಳಿಕೆ ಸಾಕಷ್ಟು ನೋವು ತಂದಿದೆ. ಹಾಗಾಗಿ, ಅವರು ಹಾಡಿದ ಹಾಡನ್ನು ಕಿತ್ತು ಹಾಕುವುದಕ್ಕೆ ತೀರ್ಮಾನ ಮಾಡಿದ್ದೇವೆ. ಬರೀ ಈ ಚಿತ್ರಕ್ಕಷ್ಟೇ ಅಲ್ಲ, ಇನ್ನು ಮುಂದೆ ಅವರಿಂದ ನನ್ನ ನಿರ್ಮಾಣದ ಯಾವುದೇ ಚಿತ್ರಕ್ಕೂ ಹಾಡಿಸುವುದಿಲ್ಲ’ ಎಂದರು.
ಸೋನು ನಿಗಮ್ ಇತ್ತೀಚೆಗೆ ಆಡಿರುವ ಕೆಲವು ಮಾತುಗಳು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎನ್ನುವ ನಿರ್ದೇಶಕ ರಾಮ್‍ನಾರಾಯಣ್, ‘ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಸೋನು ದೊಡ್ಡ ಅವಮಾನ ಮಾಡಿದ್ದಾರೆ. ಅದನ್ನು ಧಿಕ್ಕರಿಸುತ್ತಾ, ಅವರು ಹಾಡಿರುವ ಹಾಡನ್ನು ಬದಲಾಯಿಸುವುದಕ್ಕೆ ತೀರ್ಮಾನಿಸಿದ್ದೇವೆ. ಈ ರೀತಿ ತಪ್ಪುಗಳನ್ನು ಸೋನು ಪದೇಪದೇ ಮಾಡುತ್ತಿದ್ದಾರೆ. ನಮ್ಮ ನಿಲುವು ಗೊತ್ತಾಗಲಿ ಎಂಬ ಕಾರಣಕ್ಕೇ ಈ ಹಾಡನ್ನು ಕಿತ್ತು ಹಾಕಿದ್ದೇವೆ. ಈ ವಿಷಯವನ್ನು ಯೋಗರಾಜ್ ಭಟ್ ಮತ್ತು ಮನೋಮೂರ್ತಿ ಅವರಿಗೂ ಹೇಳಿದ್ದೇವೆ. ಅವರು ಸಹ ತಮ್ಮ ಸಹಮತ ಸೂಚಿಸಿದ್ದಾರೆ’ ಎಂದರು.
ಇನ್ನು, ಈ ಹಾಡಿಗೆ ಸೋನು ಎಷ್ಟು ಸಂಭಾವನೆ ಪಡೆದಿದ್ದರು? ಇದರಿಂದ ನಷ್ಟವಾಗುವುದಿಲ್ಲವಾ? ಎಂಬ ಪ್ರಶ್ನೆಗೆ, ‘ಈ ಹಾಡನ್ನು ಸೋನು, ಮೂರು ತಿಂಗಳ ಹಿಂದೆ ಹಾಡಿದ್ದರು. ಸುಮಾರು ಒಂದೂವರೆ ತಿಂಗಳ ಕಾಲ ಸೋನು ಸಾಕಷ್ಟು ಆಟ ಆಡಿಸಿ, ಈ ಹಾಡನ್ನು ಹಾಡಿದ್ದರು. ಹಾಡಿಗೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು. ಈ ಹಾಡಿಗೆ ಅವರು ಎಷ್ಟು ಸಂಭಾವನೆ ಪಡೆದಿದ್ದರು ಗೊತ್ತಿಲ್ಲ. ಸಂಪೂರ್ಣ ಜವಾಬ್ದಾರಿಯನ್ನು ಮನೋಮೂರ್ತಿ ತೆಗೆದುಕೊಂಡಿದ್ದರು. ಇಲ್ಲಿ ನಷ್ಟಕ್ಕಿಂತ ಹೆಚ್ಚಾಗಿ ಅವರು ಮಾಡಿದ್ದು ದೊಡ್ಡ ತಪ್ಪು. ಅದನ್ನು ಈ ರೀತಿ ಖಂಡಿಸುತ್ತಿದ್ದೇವೆ’ ಎಂದರು.
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಮೇ 23ರಂದು ಬಿಡುಗಡೆ ಆಗುತ್ತಿದ್ದು, ಚಿತ್ರದಲ್ಲಿ ಮಡೆನೂರು ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.