ಎರಡು ಭಾಗ ಒಳಗೊಂಡ 'ಬಾಹುಬಲಿ: ದಿ ಎಪಿಕ್” ಅ.31ಕ್ಕೆ ತೆರೆಗೆ
ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೊಸ ದಿಕ್ಕಿಗೆ ಕೊಂಡೊಯ್ದಿದ್ದ ಬಾಹುಬಲಿ ಸಿನಿಮಾದ 2 ಭಾಗಗಳ ಸಿನಿಮಾ ಈಗ ಒಂದೇ ಭಾಗವಾಗಿ ಮತ್ತೊಮ್ಮೆ ಅಭಿಮಾನಿಗಳನ್ನು ಮನರಂಜಿಸಲು ಸಜ್ಜಾಗಿದೆ.;
ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೊಸ ವ್ಯಾಖ್ಯಾನ ಬರೆದಿದ್ದ ಬಾಹುಬಲಿ ಸಿನಿಮಾದ 2 ಭಾಗಗಳನ್ನು ಒಳಗೊಂಡ ʼಬಾಹುಬಲಿ: ದಿ ಎಪಿಕ್ʼ ಮತ್ತೊಮ್ಮೆ ತೆರೆಯ ಮೇಲೆ ರಾರಾಜಿಸಲು ಸಜ್ಜಾಗಿದೆ.
ಬಾಹುಬಲಿ: ದಿ ಎಪಿಕ್ ಸಿನಿಮಾವು ಅ.31ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಟೀಸರ್ ಅನಾವರಣಗೊಳಿಸಲಾಗಿದೆ. ಈ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ನಿರ್ದೇಶಕ ಎಸ್.ಎಸ್. ರಾಜಮೌಳಿ ಸಾರಥ್ಯದ 2 ಭಾಗಗಳ ಸಿನಿಮಾಗಳಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಮತ್ತು ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಬಾಹುಬಲಿ ಚಿತ್ರ 10 ವರ್ಷಗಳನ್ನು ಪೂರೈಸಿದೆ.
1.17 ನಿಮಿಷಗಳ ಟೀಸರ್ ಎರಡೂ ಭಾಗಗಳ ದೃಶ್ಯಗಳನ್ನು ತೋರಿಸಿದೆ. ಬಾಹುಬಲಿ..ಬಾಹುಬಲಿ ಎಂಬ ಘೋಷಣೆಗಳೊಂದಿಗೆ ಪ್ರಾರಂಭವಾದ ಟೀಸರ್ನಲ್ಲಿ ರಾಣಾ-ಪ್ರಭಾಸ್ ಅವರ ಯುದ್ಧದ ದೃಶ್ಯಗಳು, ಬಾಹುಬಲಿ ಸಾಹಸ ಸನ್ನಿವೇಶಗಳು ಮತ್ತು ಅನುಷ್ಕಾ ಅವರ ಲುಕ್‌ಗಳನ್ನು ಹೈಲೈಟ್ ಮಾಡಲಾಗಿದೆ.
ಈ ಚಿತ್ರವನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಮರು ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕರು ಹೇಳಿದ್ದು, ನಿರೀಕ್ಷೆ ಹೆಚ್ಚಿಸಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ಕೂಡಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಚಿತ್ರದ ಮರು ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಿದೆ. ಪ್ರಭಾಸ್, ಅನುಷ್ಕಾ, ರಾಣಾ ದಗ್ಗುಬಾಟಿ, ತಮನ್ನಾ ಮತ್ತು ಇತರೆ ನಟರು, ನಿರ್ದೇಶಕ ರಾಜಮೌಳಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
'ಬಾಹುಬಲಿ: ದಿ ಬಿಗಿನಿಂಗ್' 2015ರಲ್ಲಿ ಬಿಡುಗಡೆಯಾದರೆ, ಎರಡು ವರ್ಷಗಳ ನಂತರ, 2017ರಲ್ಲಿ 'ಬಾಹುಬಲಿ 2' ಚಿತ್ರ "ಕನ್ಕ್ಲೂಷನ್" ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿತ್ತು.