ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾದ ಚೊಚ್ಚಲ ಗೀತೆ ರಿಲೀಸ್
'ಕೋಟಿ' ಸಿನಿಮಾದ ಚೊಚ್ಚಲ ಗೀತೆ 'ಮಾತು ಸೋತು' ರಿಲೀಸ್ ಆಗಿದೆ.
ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ 'ಕೋಟಿ' ಸಿನಿಮಾದ ಚೊಚ್ಚಲ ಗೀತೆ 'ಮಾತು ಸೋತು' ರಿಲೀಸ್ ಆಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯವಿರುವ ಹಾಡಿಗೆ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಹಾಡಿದ್ದಾರೆ.
ಹಾಡು ಬಿಡುಗಡೆಗೆ ಮುನ್ನ ಮಾತನಾಡಿದ್ದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್,"ವಾಸುಕಿ ವೈಭವ್ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಇಬ್ಬರ ಕಾಂಬಿನೇಶನ್ನಿನ ಹಾಡನ್ನು ಅರ್ಮಾನ್ ಮಲಿಕ್ ಚೆನ್ನಾಗಿ ಹಾಡಿದ್ದಾರೆ. ಇದು ಕನ್ನಡಿಗರ ಕಿವಿ, ಮನಸ್ಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.
ಸಂಗೀತ ಸಂಯೋಜಕ ವಾಸುಕಿ ವೈಭವ್ ಮಾತನಾಡಿ, "ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಶನ್ನ ಮೊದಲ ಹಾಡು. ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಖುಷಿ ಕೊಡುವ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತವಾಗಿಯೂ ಹಾಡು ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ" ಎಂದರು.
ಇನ್ನು ಈ ಚಿತ್ರದಲ್ಲಿ ಡಾಲಿ ಧನಂಜಯ್ಗೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮೊದಲಾದವರಿದ್ದಾರೆ. 'ಕೋಟಿ'ಯನ್ನು ಜಿಯೋ ಸ್ಟುಡಿಯೋಸ್ ನಿರ್ಮಿಸಿದೆ. ಕಲರ್ಸ್ ಕನ್ನಡ ವಾಹಿನಿಯವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಚಿತ್ರಕಥೆ ಬರೆದು, ನಿರ್ದೇಶಿಸಿದ್ದಾರೆ. ಈ ಸಿನಿಮಾ ಜೂನ್ 14ರಂದು ಚಿತ್ರಮಂದಿರ ಪ್ರವೇಶಿಸಲಿದೆ.