SIIMA 2025: ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ
‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ. ‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.;
ಉಪೇದ್ರ
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) 2025ರ ವರ್ಣರಂಜಿತ ವೇದಿಕೆಯಲ್ಲಿ ಕನ್ನಡ ಚಿತ್ರರಂಗ ಮತ್ತೊಮ್ಮೆ ತನ್ನ ಕೀರ್ತಿ ಪತಾಕೆ ಹಾರಿಸಿದೆ. ದುಬೈನಲ್ಲಿ ನಡೆದ ಈ ಅದ್ದೂರಿ ಸಮಾರಂಭದಲ್ಲಿ ಕನ್ನಡದ ದಿಗ್ಗಜರು ಪ್ರಶಸ್ತಿಗಳನ್ನು ಬಾಚಿಕೊಂಡು ಸಂಭ್ರಮಿಸಿದ್ದಾರೆ. 2024ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳು ಮತ್ತು ಕಲಾವಿದರಿಗೆ ಈ ಪ್ರತಿಷ್ಠಿತ ಗೌರವ ಸಂದಿದೆ.
2024ರ ಕೊನೆಯಲ್ಲಿ ತೆರೆಕಂಡು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿದ್ದ ‘ಮ್ಯಾಕ್ಸ್’ ಚಿತ್ರದಲ್ಲಿನ ಖಡಕ್ ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಅಮೋಘ ಅಭಿನಯಕ್ಕೆ ಈ ಗೌರವ ಸಂದಿದ್ದು, ಸಿನಿಮಾ ಕೆಲಸಗಳ ಕಾರಣದಿಂದಾಗಿ ಸುದೀಪ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅವರ ಪರವಾಗಿ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇನ್ನು, ಸದಾ ತಮ್ಮ ವಿಶಿಷ್ಟ ಮತ್ತು ಪ್ರಯೋಗಾತ್ಮಕ ನಿರ್ದೇಶನದಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುವ ರಿಯಲ್ ಸ್ಟಾರ್ ಉಪೇಂದ್ರ ಅವರು, ಕುತೂಹಲ ಕೆರಳಿಸಿದ್ದ 'ಯುಐ' ಚಿತ್ರದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
'ಕೃಷ್ಣಂ ಪ್ರಣಯ ಸಖಿ' ಚಿತ್ರವು ಪ್ರೇಕ್ಷಕರ ಮನಗೆದ್ದು, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. '02' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಆಶಿಕಾ ರಂಗನಾಥ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರೆ, 'ಭೀಮ' ಚಿತ್ರದಲ್ಲಿನ ರಗಡ್ ನಟನೆಗಾಗಿ ದುನಿಯಾ ವಿಜಯ್ ಅವರು ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೊಸ ಪ್ರತಿಭೆಗಳಿಗೂ ಸೈಮಾ ವೇದಿಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿದೆ. 'ಗೌರಿ' ಚಿತ್ರದ ಮೂಲಕ ಭರವಸೆ ಮೂಡಿಸಿದ ಸಮರ್ಜಿತ್ ಲಂಕೇಶ್ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಪಡೆದರೆ, ಅದೇ ಚಿತ್ರದ ಮೂಲಕ ಗಮನ ಸೆಳೆದ ಸಾನ್ಯಾ ಅಯ್ಯರ್ ಅವರು ಭರವಸೆಯ ಹೊಸ ಪ್ರತಿಭೆ ಪ್ರಶಸ್ತಿ ಗೆದ್ದಿದ್ದಾರೆ. 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಮೂಲಕ ಹೃದಯ ಗೆದ್ದ ಅಂಕಿತಾ ಅಮರ್ ಅವರು ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದಿದ್ದಾರೆ. 'ಶಾಖಾಹಾರಿ' ಚಿತ್ರಕ್ಕಾಗಿ ಸಂದೀಪ್ ಸುಂಕದ್ ಅವರು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಂಗೀತ ವಿಭಾಗದಲ್ಲಿ, 'ಮ್ಯಾಕ್ಸ್' ಚಿತ್ರದ ಹಿಟ್ ಹಾಡುಗಳಿಗಾಗಿ ಬಿ. ಅಜನೀಶ್ ಲೋಕನಾಥ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಇವರಲ್ಲದೆ, ಜಾಕ್ ಸಿಂಗಂ (ಅತ್ಯುತ್ತಮ ಹಾಸ್ಯನಟ), ಶ್ರೀವತ್ಸನ್ ಸೆಲ್ವರಾಜನ್ (ಛಾಯಾಗ್ರಹಣ), ಐಶ್ವರ್ಯ ರಂಗರಾಜನ್ (ಹಿನ್ನೆಲೆ ಗಾಯಕಿ), ವಿ. ನಾಗೇಂದ್ರ ಪ್ರಸಾದ್ (ಗೀತರಚನೆಕಾರ) ಮತ್ತು ಜಸ್ಕರನ್ (ಹಿನ್ನೆಲೆ ಗಾಯಕ) ಅವರೂ ತಮ್ಮ ತಮ್ಮ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಕನ್ನಡ ಚಿತ್ರರಂಗದ ಯಶಸ್ಸಿನ ಕಥೆಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.