ಸ್ಟಾಕ್ ಕ್ಲಿಯರೆನ್ಸ್ | ಕೋವಿಡ್ ಮುಂಚಿನ ಚಿತ್ರಗಳಿಗೆ ಈ ವರ್ಷ ಮುಕ್ತಿ!
ಕೆಲವು ತಿಂಗಳುಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಎಂಬ ಚಿತ್ರವು ಬಿಡುಗಡೆಯಾಗಿದ್ದು ನೆನಪಿರಬಹುದು. ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಆ ಚಿತ್ರ ಒಂದು ವಾರಕ್ಕೆಲ್ಲಾ ಮಾಯವಾಯಿತು.;
2024ರಲ್ಲಿ 220ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ವರ್ಷವೂ ಹೆಚ್ಚೂಕಡಿಮೆ ಇಷ್ಟೇ ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ವರ್ಷ ಸಹ ಇಷ್ಟೇ ಸಂಖ್ಯೆಯ ಅಥವಾ ಇನ್ನೂ ಹೆಚ್ಚಿನ ಸಂಖ್ಯೆಯ ಚಿತ್ರಗಳು ಬಿಡುಗಡೆಯಾದರೆ ಆಶ್ಚರ್ಯವಿಲ್ಲ. ಹಾಗೆ ನೋಡಿದರೆ, ಈ ವರ್ಷ ಸೆಟ್ಟೇರಿದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ, ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಮಾತ್ರ ಯಾಕೆ ಜಾಸ್ತಿಯಾಗುತ್ತಿದೆ ಎಂದರೆ, ಉತ್ತರ ಸ್ಟಾಕ್ ಕ್ಲಿಯರೆನ್ಸ್ ಸೇಲ್!
ಧರ್ಮ ಕೀರ್ತಿರಾಜ್ ಅಭಿನಯದ ‘ತಲ್ವಾರ್’ ಚಿತ್ರ 2025ರ ಜನವರಿ ಕೊನೆ ಅಥವಾ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಾಗೆಯೇ, ಚಿತ್ರದ ಮೇಕಿಂಗ್ ವೀಡಿಯೋ ಸಹ ಬಿಡುಗಡೆಯಾಯಿತು. ಚಿತ್ರದ ಮುಹೂರ್ತಕ್ಕೆ ದರ್ಶನ್ ಬಂದಿದ್ದರು. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಹೋದರು. ಆ ವೀಡಿಯೋದಲ್ಲಿದ್ದ ದರ್ಶನ್‍ಗೂ, ಈಗಿನ ದರ್ಶನ್‍ಗೂ ಅಜಗಜಾಂತರ ವ್ಯತ್ಯಾಸ. ಇಷ್ಟಕ್ಕೂ ಈ ಮುಹೂರ್ತ ಆಗಿದ್ದು ಯಾವಾಗ? ಎಂದು ಹುಡುಕಿದಾಗ ನಿಜಕ್ಕೂ ಆಶ್ಚರ್ಯ ಕಾದಿತ್ತು. ಚಿತ್ರವು 2019ರಲ್ಲಿ ಸೆಟ್ಟೇರಿತ್ತು. ಅದಾದ ಮೇಲೆ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದೆ.
2018ರ ‘ರಾಜು ಜೇಮ್ಸ್ ಬಾಂಡ್’ 2025ರಲ್ಲಿ
ಅದೇ ರೀತಿ ಡಿ. 27ರಂದು ‘ರಾಜು ಜೇಮ್ಸ್ ಬಾಂಡ್’ ಎಂಬ ಗುರುನಂದನ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಬೇಕಿತ್ತು. ಆದರೆ, ‘ಮ್ಯಾಕ್ಸ್’ ಬಿಡುಗಡೆಯಾದ ಕಾರಣ, ಚಿತ್ರವು ಮುಂದಿನ ವರ್ಷಷಕ್ಕೆ ಹೋಯಿತು. ಈ ಚಿತ್ರ ಸಹ 2018ರಲ್ಲಿ ಪ್ರಾರಂಭವಾದ ಚಿತ್ರ. ಇಷ್ಟು ವರ್ಷ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರವು ಸಂಪೂರ್ಣವಾಗಿದ್ದು, ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.
ಮರೆತೇ ಹೋಗಿದ್ದ ‘ಬೈರಾದೇವಿ’ ಎದ್ದು ಬಂದಾಗ
ಕೆಲವು ತಿಂಗಳುಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಬೈರಾದೇವಿ’ ಎಂಬ ಚಿತ್ರವು ಬಿಡುಗಡೆಯಾಗಿದ್ದು ನೆನಪಿರಬಹುದು. ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಆ ಚಿತ್ರ ಒಂದು ವಾರಕ್ಕೆಲ್ಲಾ ಮಾಯವಾಯಿತು. ಚಿತ್ರವು ಚಿತ್ರಮಂದಿರಗಳಲ್ಲಿ ಹೆಚ್ಚು ಕಾಲ ಇಲ್ಲದಿರಬಹುದು. ಆದರೆ, ಚಿತ್ರೀಕರಣ ಮಾತ್ರ ಸಾಕಷ್ಟು ಸಮಯ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಚಿತ್ರ ಪ್ರಾರಂಭವಾಗಿದ್ದು 2018ರಲ್ಲಿ. ಚಿತ್ರೀಕರಣವೇನೋ ಪ್ರಾರಂಭವಾಗಿದ್ದು ಸುದ್ದಿಯಾಗಿತ್ತು. ಆದರೆ, ಆ ನಂತರ ಏನಾಯಿತು ಎಂದು ಗೊತ್ತಾಗಲಿಲ್ಲ. ಈ ಮಧ್ಯೆ, ಎರಡು ವರ್ಷಗಳ ಹಿಂದೆ, ‘ಬೈರಾದೇವಿ’ಯನ್ನು ಪಕ್ಕಕ್ಕಿಟ್ಟು, ‘ಅಜಾಗ್ರತಾ’ ಎಂಬ ಇನ್ನೊಂದು ಚಿತ್ರವನ್ನು ಪ್ರಾರಂಭಿಸಿದರು ರಾಧಿಕಾ ಕುಮಾರಸ್ವಾಮಿ.
ಚಿತ್ರೀಕರಣವಾದಷ್ಟು ದಿನವಾದರೂ ಪ್ರದರ್ಶನವಾಗಿದ್ದರೆ
ಇನ್ನು, ‘ಬೈರಾದೇವಿ’ ಬಿಡುಗಡೆಯಾಗುವುದು ಸಂಶಯ ಎನ್ನುವಾಗಲೇ ಕೆಲವು ತಿಂಗಳುಗಳ ಹಿಂದೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ರಾಧಿಕಾ ಘೋಷಣೆ ಮಾಡಿದರು. ಅದರಂತೆ ಚಿತ್ರವನ್ನೂ ಬಿಡುಗಡೆ ಮಾಡಿದರು. ಚಿತ್ರಕ್ಕೆ ಎಷ್ಟು ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತೋ, ಅದರರ್ಧಷ್ಟಾದರೂ ಚಿತ್ರ ಪ್ರದರ್ಶನವಾಗಿದ್ದರೆ, ಚಿತ್ರತಂಡದವರು ಶ್ರಮ ಸಾರ್ಥಕವಾಗುತ್ತಿತ್ತೇನೋ? ಆದರೆ, ಚಿತ್ರ ಗೆಲ್ಲಲಿಲ್ಲ.
ಚಿತ್ರಗಳು ನಿಂತಿದ್ದಿಕ್ಕೆ ಕಾರಣವೇನು ಗೊತ್ತಾ?
ಬರೀ ‘ಬೈರಾದೇವಿ’ಯಷ್ಟೇ ಅಲ್ಲ, ಈ ವರ್ಷ ಹಳೆಯ ಸ್ಟಾಕ್ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಯಾಗಿವೆ. ಅದರಲ್ಲಿ ಕೆಲವು ಚಿತ್ರಗಳು ಕಳೆದ ದಶಕದ ಕೊನೆಯಲ್ಲಿ ಪ್ರಾರಂಭವಾಗಿದ್ದವು. ಇನ್ನೇನು ಚಿತ್ರವು ಒಂದು ಹಂತಕ್ಕೆ ಬಂತು ಎನ್ನುವಷ್ಟರಲ್ಲಿ 2020ರಲ್ಲಿ ಕೋವಿಡ್ ಪ್ರಾರಂಭವಾಯಿತು. ವರ್ಷದ ಕೊನೆಗೆ ಎಲ್ಲವೂ ಸರಿ ಹೋಯಿತು ಎನ್ನುವಷ್ಟರಲ್ಲಿ 2021ರಲ್ಲಿ ಎರಡನೆಯ ಅಲೆಯಿಂದಾಗಿ ಮತ್ತೊಮ್ಮೆ ಚಿತ್ರೀಕರಣ ಚಟುವಟಿಕೆಗಳು ನಿಂತವು. ಹಾಗಾಗಿ, ಆ ವರ್ಷವೂ ಸರಿಯಾಗಿ ಚಿತ್ರಗಳು ಬಿಡುಗಡೆಯಾಗಲಿಲ್ಲ. 2022ರಲ್ಲಿ ‘ಕೆಜಿಎಫ್ 2’, ‘RRR’ ಮುಂತಾದ ದೊಡ್ಡ ಬಜೆಟ್‍ನ ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಗೆ ನಿಂತವು. ಇದರಿಂದ 2022ರಲ್ಲಿ ಹಲವು ಚಿತ್ರಗಳು ಬಿಡುಗಡೆ ಆಗಲಿಲ್ಲ. 2023ರಿಂದ ಒಂದೊಂದೇ ಹಳೆಯ ಚಿತ್ರಗಳು ಬಿಡುಗಡೆಯಾದವು. ಅದೇ ಕಾರಣಕ್ಕೆ ಕಳೆದ ವರ್ಷ 220ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದವು. ಈ ವರ್ಷವೂ ಅಷ್ಟೇ ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ವರ್ಷ ಸಹ 200ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ.
ಈ ವರ್ಷ ಹಲವು ಹಳೆಯ ಚಿತ್ರಗಳ ಬಿಡುಗಡೆ
ಈ ವರ್ಷವನ್ನೇ ತೆಗೆದುಕೊಂಡರೆ ಹಲವು ಹಳೆಯ ಚಿತ್ರಗಳು ಬಿಡುಗಡೆ ಆಗಿವೆ. ರಿಷಿ ಅಭಿನಯದ ‘ರಾಮನ ಅವತಾರ’, ಪ್ರದೀಪ್ ರಾಜ್ ನಿರ್ದೇಶನದ ‘ಕಿರಾತಕ 2’, ದಿಗಂತ್ ಅಭಿನಯದ ‘ಮಾರಿಗೋಲ್ಡ್’, ಅಭಿಮನ್ಯು ಕಾಶೀನಾಥ್ ಅಭಿನಯದ ‘ಎಲ್ಲಿಗೆ ಪಯಣ ಯಾವುದೋ ದಾರಿ’, ‘ಮಿಸ್ಟರ್ ನಟ್ವರ್ ಲಾಲ್’, ‘ರಮೇಶ ಸುರೇಶ’, ‘ಅವತಾರ್ ಪುರುಷ 2’ ಮುಂತಾದ ಕೋವಿಡ್‍ಗೂ ಮುನ್ನ ಪ್ರಾರಂಭವಾದ ಕೆಲವು ಹಳೆಯ ಚಿತ್ರಗಳು ಬಿಡುಗಡೆಯಾಗಿವೆ. ಇದಲ್ಲದೆ ಕೋವಿಡ್ ನಂತರದ ದಿನಗಳಲ್ಲಿ ಪ್ರಾರಂಭವಾದ ‘ಅಬ್ಬಬ್ಬ’, ‘5ಡಿ’, ‘ಧೀರ ಸಾಮ್ರಾಟ್’, ‘ಮ್ಯಾಟ್ನಿ’, ‘ಓ2’, ‘ಉಸಿರೇ ಉಸಿರೇ’, ‘ಬಘೀರ’, ‘ಉಪಾಧ್ಯಕ್ಷ’, ‘ಪ್ರಣಯಂ’, ‘ರಂಗನಾಯಕ’, ‘ಮೆಹಬೂಬ’, ‘ಗ್ರೇ ಗೇಮ್ಸ್’ ಮುಂತಾದ ಹಲವು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ.
ಬಜೆಟ್ ಜಾಸ್ತಿಯಾದ್ದರಿಂದ ನಿಂತ ಹಲವು ಚಿತ್ರಗಳು
‘ಮಿಸ್ಟರ್ ನಟ್ವರ್ ಲಾಲ್’ ತಡವಾದ್ದರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ವಿವರಿಸಿದ್ದ ಚಿತ್ರದ ನಿರ್ಮಾಪಕ ತನುಷ್ ಶಿವಣ್ಣ, ‘ನಾಲ್ಕು ವರ್ಷಗಳ ಹಿಂದೆ ಚಿತ್ರ ಶುರುವಾಯ್ತು. ಬಜೆಟ್ ಡಬ್ಬಲ್ ಆಯ್ತು. ರಾಜಿ ಮಾಡಿಕೊಳ್ಳಬಾರದು, ಚಿತ್ರಕ್ಕೆ ಏನು ಬೇಕೋ ಕೊಡಬೇಕು ಅಂತಿತ್ತು. ಆದರೂ ನನ್ನ ಕೈಮೀರಿದ್ದರಿಂದ ಚಿತ್ರ ನಿಲ್ಲಸಬೇಕಾಯಿತು. ಆ ನಂತರ ಪರಿಸ್ಥಿತಿ ಸುಧಾರಿಸಿದ್ದರಿಂದ ಚಿತ್ರ ಮುಂದುವರೆಸಿ, ಬಿಡುಗಡೆಯ ಹಂತದವರೆಗೂ ಬಂದಿದೆ’ ಎಂದು ಹೇಳಿಕೊಂಡಿದ್ದರು.
ಇದು ಹಲವು ನಿರ್ಮಾಪಕರ ಸಮಸ್ಯೆ
ಇದು ಬರೀ ತನುಷ್ ಒಬ್ಬರ ಕಥೆಯಲ್ಲ. ಹಲವು ನಿರ್ಮಾಪಕರು ಇದೇ ತರಹದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದೇ ಕಾರಣಕ್ಕೆ ಅವರ ಚಿತ್ರಗಳು ವಿಳಂಬವಾಗಿವೆ. ಬಹುಶಃ ಕೋವಿಡ್‍ಗೂ ಮುನ್ನ ಶುರುವಾದ ಚಿತ್ರಗಳು ಕೋವಿಡ್ ಮುಗಿದ ನಂತರ ಬಿಡುಗಡೆಯಾಗುತ್ತಿದ್ದವೇನೋ? ಆದರೆ, ವ್ಯಾಪಾರ-ವಹಿವಾಟು ನಿಂತಿದ್ದರಿಂದ ಬಹಳಷ್ಟು ಜನ ಹಣಕಾಸಿನ ಸಮಸ್ಯೆ ಎದುರಿಸಬೇಕಾಯಿತು. ಜೊತೆಗೆ ದೊಡ್ಡ ಚಿತ್ರಗಳ ಪೈಪೋಟಿ ಬೇರೆ. ಇದೆಲ್ಲದರಿಂದ ಹಲವು ಚಿತ್ರಗಳ ಬಿಡುಗಡೆ ವಿಳಂಬವಾಯಿತು. ಆಗ ಬಿಡುಗಡೆಯಾಗದ ಚಿತ್ರಗಳೆಲ್ಲವೂ ಈಗ ಬಿಡುಗಡೆಯಾಗುತ್ತಿವೆ.
ಹಾಗಂತ ಎಲ್ಲವೂ ಮುಗಿದಿದೆ ಎಂದಲ್ಲ. ಕಳೆದೆರಡು ವರ್ಷಗಳಲ್ಲಿ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ವರ್ಷವೂ ಒಂದಿಷ್ಟು ಹಳೆಯ ಚಿತ್ರಗಳು ಬಾಕಿ ಇವೆ. ಮುಂದಿನ ವರ್ಷ ಯಾವೆಲ್ಲಾ ಹಳೆಯ ಚಿತ್ರಗಳು ಹೊಸ ರೂಪದಲ್ಲಿ ಬರುತ್ತವೋ ನೋಡಬೇಕು.