ಶ್ರೀಕೃಷ್ಣ ದೇವರಾಯ ವಿವಿ ಘಟಿಕೋತ್ಸವ| ನಟಿ ಉಮಾಶ್ರೀಗೆ ಗೌರವ ಡಾಕ್ಟರೇಟ್​ ಪ್ರದಾನ

ರಂಗಭೂಮಿ, ಸಿನಿಮಾ ಕ್ಷೇತ್ರದ ಸಾಧನೆಗಾಗಿ ಹಿರಿಯ ನಟಿ ಉಮಾಶ್ರೀ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು.

Update: 2024-09-07 10:53 GMT
ಹಿರಿಯ ನಟಿ ಉಮಾಶ್ರೀ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
Click the Play button to listen to article

ರಂಗಭೂಮಿ, ಸಿನಿಮಾ ಕ್ಷೇತ್ರದ ಸಾಧನೆಗಾಗಿ ಹಿರಿಯ ನಟಿ ಉಮಾಶ್ರೀ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ 2022-23ನೇ ಸಾಲಿನ 12ನೇ ವಾರ್ಷಿಕ ಘಟಿಕೋತ್ಸವ ಶುಕ್ರವಾರ ನಡೆಯಿತು. ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. 

ರಾಜ್ಯಪಾಲರು ಹಾಗೂ ವಿಶ್ವ ವಿದ್ಯಾಲಯದ ಕುಲಾಧಿಪತಿ ಥಾವರ ಚಂದ್ ಗೆಹ್ಲೋಟ್ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಘಟಿಕೋತ್ಸದಲ್ಲಿ ನಟಿ ಉಮಾಶ್ರೀ, ಎಸ್.ಕೆ. ಮೋದಿ, ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ ಮೂರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ನಟಿ ಉಮಾಶ್ರೀ ಅವರಿಗೆ ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ 1957 ಮೇ10ರಂದು ಜನಿಸಿದ ಉಮಾಶ್ರೀ, 100ಕ್ಕೂ ಹೆಚ್ಚು ನಾಟಕ, 6,500 ಪ್ರದರ್ಶನ ಮತ್ತು 460ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಾಂಗ್ರೆಸ್ ಪ್ಷಕದ ಜೊತೆ ಗುರುತಿಸಿಕೊಂಡಿರುವ ಅವರು ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಹಾಲಿ ವಿಧಾನ ಪರಿಷತ್‌ ಸದಸ್ಯರು. 2013 ರಿಂದ 2018 ರವರೆಗೆ ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ನಾಟ್ಯ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, 10ನೇ ಒಷಿಯನ್ಸ್ ಸಿನೆಫ್ಯಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಗುಲಾಬಿ ಟಾಕೀಸ್' ಚಲನಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉಮಾಶ್ರೀ ಪ್ರತಿಷ್ಠಿತ ರಜತ ಕಮಲ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿವಂಗತ ಡಿ. ದೇವರಾಜ ಅರಸು ರಾಷ್ಟ್ರೀಯ ಶ್ರೀರತ್ನ ಪ್ರಶಸ್ತಿ, ಪಂಚರತ್ನ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣದೇವರಾಯ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

Tags:    

Similar News