Shivarajkumar: ಇಂದು ಶಿವರಾಜಕುಮಾರ್‌ಗೆ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ

Shivarajkumar : ಶಿವರಾಜಕುಮಾರ್‍ ಅವರು ಪಿತ್ತಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇದೆ. ಕೆಲವು ತಿಂಗಳುಗಳ ಹಿಂದೆ ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

Update: 2024-12-24 04:12 GMT
ಶಿವರಾಜ್‌ ಕುಮಾರ್‌

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಶಿವರಾಜಕುಮಾರ್‍ ಅವರಿಗೆ ಇಂದು ಅಮೇರಿಕಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ತಮಿಳು ನಾಡು ಮೂಲದ ವೈದ್ಯ ಡಾ. ಮುರುಗೇಶನ್‍ ಮನೋಹರನ್‍ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ.

ಶಿವರಾಜಕುಮಾರ್‍ ಅವರು ಪಿತ್ತಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇದೆ. ಕೆಲವು ತಿಂಗಳುಗಳ ಹಿಂದೆ ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಲೇ ಒಂದಿಷ್ಟು ಕೆಲಸಗಳನ್ನು ಮುಗಿಸಿದ್ದರು.

ನವೆಂಬರ್ 15ರಂದು ಅವರ ನಿರ್ಮಾಣದ ‘ಭೈರತಿ ರಣಗಲ್‍’ ಚಿತ್ರವು ಬಿಡುಗಡೆಯಾಯಿತು. ಆ ಚಿತ್ರದ ನಂತರ ಪೂರ್ಣಪ್ರಮಾಣದಲ್ಲಿ ಕೆಲಸಗಳನ್ನು ನಿಲ್ಲಿಸಿ, ಅಮೇರಿಕಾಗೆ ಪ್ರಯಾಣ ಮಾಡಿ ಅಲ್ಲಿ ಆಪರೇಷನ್‍ ಮಾಡಿಸಿಕೊಳ್ಳುವುದಾಗಿ ಶಿವರಾಜಕುಮಾರ್‍, ಕಳೆದ ತಿಂಗಳು ಹೇಳಿದ್ದರು. ಅದರಂತೆ ಡಿ. 18ರಂದು ಶಿವರಾಜಕುಮಾರ್‍ ತಮ್ಮ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಜೊತೆಗೆ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದರು.

ಸದ್ಯ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜಕುಮಾರ್ ಅವರಿಗೆ ಇಂದು ಮಿಯಾಮಿಯ Miami Cancer Instituteನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಭಾರತೀಯ ಮೂಲದ ಡಾ. ಮುರುಗೇಶನ್‍ ಮನೋಹರನ್‍ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ವೈದ್ಯರು ಸಹ ಸಾಕಷ್ಟು ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಶಿವರಾಜಕುಮಾರ್‍ ಅವರ ಜೊತೆಗೆ ಅವರ ಪತ್ನಿ ಮತ್ತು ಮಗಳು ಮಾತ್ರ ಇದ್ದು, 28ರಂದು ಅವರ ಸಂಬಂಧಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿವರಾಜಕುಮಾರ್‍ ಅವರನ್‍ನು ನೋಡಲು ಅಮೇರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.

ಶಿವರಾಜಕುಮಾರ್‍ ವಿದೇಶ ಪ್ರವಾಸ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮೊದಲು ಅವರು ಹಲವು ಬಾರಿ ಪ್ರವಾಸ ಮಾಡಿದ್ದು, ಇದೇ ಮೊದಲ ಬಾರಿಗೆ ಅವರು ಇಷ್ಟೊಂದು ದಿನಗಳ ಕಾಲ ದೇಶದಿಂದ ದೂರ ಇರಲಿದ್ದಾರೆ. ಈ ಬಾರಿ ಅವರು 35 ದಿನಗಳ ಕಾಲ ದೇಶದಿಂದ ದೂರ ಇರಲಿದ್ದು, ಜನವರಿ 25ರಂದು ಅಲ್ಲಿಂಧ ಹೊರಟು, 26ಕ್ಕೆ ವಾಪಸಾಗಲಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ತಾನಿರುವುದಿಲ್ಲ ಎಂದು ಅಮೇರಿಕಾಗೆ ಹೋಗುವ ಸಂದರ್ಭದಲ್ಲಿ ಹೇಳಿದ್ದ ಶಿವಣ್ಣ, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಮುಂಗಡವಾಗಿಯೇ ತಿಳಿಸಿದ್ದರು. ಈ ಕುರಿತು ಮಾತನಾಡಿದ್ದ ಅವರು, ‘ಈ ಬಾರಿ ಜನವರಿ ಒಂದರಂದು ನಾನು ಇಲ್ಲಿರುವುದಿಲ್ಲ. ಎಲ್ಲರನ್ನೂ ಬಹಳವಾಗಿ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ. ಡಿ.20ರಂದು ‘UI’ ಬಿಡುಗಡೆಯಾಗುತ್ತಿದೆ. ಡಿ. 25ಕ್ಕೆ ‘ಮ್ಯಾಕ್ಸ್’ ಬಿಡುಗಡೆಯಾಗುತ್ತಿದೆ. ಎರಡೂ ಚಿತ್ರಗಳಿಗೂ ಒಳ್ಳೆಯದಾಗಲಿ. ಮುಂದಿನ ವರ್ಷ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಚೆನ್ನಾಗಿ ಆಗಲಿ’ ಎಂದು ಹೇಳಿದ್ದರು.

Tags:    

Similar News