ವಿಷ್ಣುವರ್ಧನ್‍ ಇನ್ನೊಂದು ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ ಸುದೀಪ್‌ ; ಸೆ. 18ಕ್ಕೆ ಅಡಿಗಲ್ಲು

ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಂದೇ ವಿಷ್ಣುವರ್ಧನ್‍ ಅವರ ಸ್ಮಾರಕದ ಬ್ಲೂಪ್ರಿಂಟನ್ನು ಸುದೀಪ್‍ ಅನಾವರಣ ಮಾಡಲಿದ್ದಾರೆ. ಆ ನಂತರ ವಿಷ್ಣುವರ್ಧನ್‍ ಅವರ ಹುಟ್ಟುಹಬ್ಬದ ದಿನ, ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು.;

Update: 2025-08-19 04:20 GMT

ಕೆಲವು ದಿನಗಳ ಹಿಂದೆ ಅಭಿಮಾನ್‍ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್‍ ಅವರ ಪುಣ್ಯಭೂಮಿ ನೆಲಸಮವಾಗಿದ್ದರಿಂದ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಒಂದು ಸಿಹಿಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಬೆಂಗಳೂರಿನಲ್ಲಿ ಅವರ ಇನ್ನೊಂದು ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ.

ಹೌದು, ಮೈಸೂರಿನ ನಂತರ ಬೆಂಗಳೂರಿನ ಕೆಂಗೇರಿ ಬಳಿ ವಿಷ್ಣುವರ್ಧನ್‍ ಅವರ ಇನ್ನೊಂದು ಸ್ಮಾರಕ ನಿರ್ಮಾಣವಾಗುತ್ತಿದೆ. ಕಾನೂನು ಹೋರಾಟದ ಬಳಿಕ ಅಭಿಮಾನ್‍ ಸ್ಟುಡಿಯೋದ  ಬಳಿಯ ಸಮಾಧಿ ನೆಲಸಮವಾದಾಗ, ಆ ಭೂಮಿ ಖರೀದಿ ಮಾಡುವುದಕ್ಕೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ತಾನು ಸಿದ್ಧ ಎಂದು ನಟ ಸುದೀಪ್‍ ಹೇಳಿದ್ದರು. ಈಗ ಆ ಜಾಗವನ್ನು ಬಿಟ್ಟು ಕೆಂಗೇರಿ ಹತ್ತಿರ ಅರ್ಧ ಎಕರೆ ಜಾಗವನ್ನು ವಿಷ್ಣುವರ್ಧನ್‍ ಅವರ ಸ್ಮಾರಕಕ್ಕೆ ಖರೀದಿಸಿದ್ದಾರೆ. ಅಲ್ಲಿ 25 ಅಡಿಗಳ ದೊಡ್ಡ ಪ್ರತಿಮೆ ಜೊತೆಗೆ ಗ್ರಂಥಾಲಯ ಸಹ ಇರಲಿದೆಯಂತೆ.

ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಂದೇ ವಿಷ್ಣುವರ್ಧನ್‍ ಅವರ ಸ್ಮಾರಕದ ಬ್ಲೂಪ್ರಿಂಟನ್ನು ಸುದೀಪ್‍ ಅನಾವರಣ ಮಾಡಲಿದ್ದಾರೆ. ಆ ನಂತರ ವಿಷ್ಣುವರ್ಧನ್‍ ಅವರ ಹುಟ್ಟುಹಬ್ಬದ ದಿನ, ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು.

ಈ ಸ್ಮಾರಕವು ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅಥವಾ ಮೈಸೂರಿನಲ್ಲಿರುವ ವಿಷ್ಣುವರ್ಧನ್‍ ಅವರ ಸ್ಮಾರಕಕ್ಕೆ ಪರ್ಯಾಯವೂ ಅಲ್ಲ ಎಂದು ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‍ ಹೇಳಿದ್ದಾರೆ.

ಸೋಮವಾರ ರಾತ್ರಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ವಿಷ್ಣುವರ್ಧನ್‍ ಅವರ ಅಮೃತ ವರ್ಷ ಆಚರಿಸಲು ಮೂರು ವರ್ಷದಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಅದೇ ದಿನದಂದು ಸ್ಮಾರಕ ಕೆಲಸ ನಿರ್ಮಾಣ ಕೆಲಸ ಆರಂಭಿಸುತ್ತಿದ್ದೇವೆ. ಇದು ಪುಣ್ಯಭೂಮಿಗೆ ಸಮ ಅಥವಾ ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪರ್ಯಾಯ ಎಂದು ಹೇಳುವುದಿಲ್ಲ. ಇದು ಸ್ಮಾರಕ ಎನ್ನುವುದಕ್ಕಿಂತ ದರ್ಶನ ಕೇಂದ್ರ ಎನ್ನಬಹುದು. ಅದು ಅರ್ಥಪೂರ್ಣ ಕೆಲಸಕ್ಕೆ ವೇದಿಕೆಯಾಗಲಿದೆ’ ಎಂದರು.

ಇದಕ್ಕೂ ಮೊದಲು ಡಾ. ವಿಷ್ಣುವರ್ಧನ್‍ ಅವರ 75ನೇ ಹುಟ್ಟುಹಬ್ಬವನ್ನು ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಸುವುದಕ್ಕೆ ಡಾ. ವಿಷ್ಣು ಸೇನಾ ಸಮಿತಿ ತೀರ್ಮಾನಿಸಿತ್ತು. ಆ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್‍ ಅವರ ಕುಟುಂಬದವರು ಭಾಗವಹಿಸದ ಕಾರಣ, ಅದನ್ನು ನಂದಿ ಲಿಂಕ್ಸ್ ಗ್ರೌಂಡ್‍ಗೆ ಸ್ಥಳಾಂತರಿಸಲಾಗಿದೆ. ಈ ಅಮೃತ ಮಹೋತ್ಸವದಲ್ಲಿ ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಲಿದ್ದಾರೆ.

Tags:    

Similar News