ಜೈಲಿನಿಂದ ಹೊರಬಂದು 'KGF'ಗಿಂತ ದೊಡ್ಡ ಚಿತ್ರ ಮಾಡ್ತಾರೆ: ದರ್ಶನ್ ಪರ ಸಂಜನಾ ಬ್ಯಾಟಿಂಗ್
"ಮನುಷ್ಯನ ಕೆಟ್ಟ ಸಮಯದಲ್ಲಿ ಕೆಟ್ಟದಾಗಿ ಮಾತನಾಡಬೇಡಿ. ಅವರ ಒಳ್ಳೆ ಕೆಲಸಗಳ ಬಗ್ಗೆ ಮಾತನಾಡಿ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ 'ಕೆಜಿಎಫ್'ಗಿಂತ ದೊಡ್ಡ ಸಿನಿಮಾ ಮಾಡ್ತಾರೆ ಎಂದು ನಟಿ ಸಂಜನಾ ಗಲ್ರಾಣಿ ಹೇಳಿದ್ದಾರೆ.;
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಕುರಿತು ಇತ್ತೀಚೆಗೆ ಸ್ಯಾಂಡಲ್‌ವುಡ್ ತಾರೆಯರು ದಿನಕ್ಕೊಂದು ಹೇಳಿಕೆ ನೀಡತೊಡಗಿದ್ದಾರೆ.
ಇದೀಗ ನಟಿ ಸಂಜನಾ ಗಲ್ರಾಣಿ ಮಾತನಾಡಿದ್ದು, "ಜೀವನದಲ್ಲಿ ಯಾರಿಗೂ ಜೈಲು ಶಿಕ್ಷೆ ಬೇಡ. ಅದು ಬಹಳ ಕೆಟ್ಟ ಜಾಗ. ಅಲ್ಲಿರುವುದು ಕಷ್ಟ. ಅಲ್ಲಿ ಹಣ ಕೊಟ್ಟರೆ 5 ರೂಪಾಯಿಗೆ ಹನಿ ಕೇಕ್, 10 ರೂಪಾಯಿಗೆ ಚಿಪ್ಸ್ ಪ್ಯಾಕೇಟ್ ಸಿಗುತ್ತದೆ. ಅದು ಬಿಟ್ಟು ಬೇರೆ ಏನು ಸಿಗಲ್ಲ. ಅಲ್ಲಿ ಕೊಡುವ ಊಟ ತಿನ್ನೋಕೆ ಆಗೊಲ್ಲ. ತಿನ್ನೋದು ಕಷ್ಟ. ಚಿಪ್ಸ್ ಇದ್ರೆ ಸ್ವಲ್ಪ ಊಟ ಮಾಡಬಹುದು ಅಷ್ಟೇ" ಎಂದಿದ್ದಾರೆ.
"ದೇವರ ದಯೆಯಿಂದ ದರ್ಶನ್ ಅವರನ್ನು ಇನ್ನು ಆರೋಪಿ ಎನ್ನುತ್ತಿದ್ದಾರೆ. ನಮ್ಮ ಪ್ರಕರಣದಲ್ಲಿ ವಿಚಾರಣೆ ವೇಳೆಯೇ ಅಪರಾಧಿ ಎಂದುಬಿಟ್ಟಿದ್ದರು. ದರ್ಶನ್ ಸರ್ ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಿ ಹೊರ ಬರಬೇಕು. ದರ್ಶನ್ ಅವರ ಬಡ ವ್ಯಕ್ತಿಯ ಮೇಲೆ ಕೈ ಮಾಡುವವರಲ್ಲ. ಅಂತಹ ಚರಿತ್ರೆ ಇಲ್ಲ. ಅಭಿಮಾನಿಗಳೇ ನನ್ನ ಸೆಲೆಬ್ರಿಟೀಸ್ ಎಂದು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಜನರನ್ನು ಬಹಳ ಪ್ರೀತಿಸುತ್ತಾರೆ, ಬಹಳ ತಾಳ್ಮೆ ಇದೆ. ಜನರಿಗೆ ಸಹಾಯ ಮಾಡ್ತಾರೆ" ಎಂದು ಹೇಳಿದ್ದಾರೆ.
"ಮನುಷ್ಯನ ಕೆಟ್ಟ ಸಮಯದಲ್ಲಿ ಕೆಟ್ಟದಾಗಿ ಮಾತನಾಡಬೇಡಿ. ಅವರ ಒಳ್ಳೆ ಕೆಲಸಗಳ ಬಗ್ಗೆ ಮಾತನಾಡಿ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ 'ಕೆಜಿಎಫ್'ಗಿಂತ ದೊಡ್ಡ ಸಿನಿಮಾ ಮಾಡ್ತಾರೆ. ಅವರು ಕೆಲಸವನ್ನು ಪೂಜಿಸ್ತಾರೆ. ಬರೀ ಕರ್ನಾಟಕ, ಸೌತ್ ಇಂಡಿಯಾ ಅಲ್ಲ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್‌ನಲ್ಲಿ ಬಹಳ ದೊಡ್ಡ ಸ್ಟಾರ್ ಆಗ್ತಾರೆ. ಕೆಟ್ಟ ನ್ಯೂಸ್ ಬರೆದವರು ಅಷ್ಟೇ ಒಳ್ಳೆ ನ್ಯೂಸ್ ಬರೀತ್ತೀರಾ ನೋಡಿ, ನಾನೇ ಚಾಲೆಂಜ್ ಮಾಡ್ತೀನಿ" ಎಂದಿದ್ದಾರೆ.
ಸಂಜನಾ ಗಲ್ರಾಣಿ 4 ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಜೈಲಿಗೆ ಹೋಗಿದ್ದರು. 3 ತಿಂಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಂಜನಾ ಗಲ್ರಾಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 24 ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಎಫ್‌ಐಆರ್ ರದ್ದುಗೊಳಿಸಿ ಆದೇಶ ಹೊರಡಿಸಿತ್ತು.