`ಬಘೀರ' ಸಿನಿಮಾದ "ಪರಿಚಯವಾದೆ.." ಎರಡನೇ ಹಾಡು ಬಿಡುಗಡೆ
ಮೆಲೋಡಿಯ ಗುಂಗು ಹಿಡಿಸುವ `ಪರಿಚಯವಾದೆ..' ಹಾಡು ಕಿವಿಗಿಂಪು ನೀಡುವುದಷ್ಟೇ ಅಲ್ಲದೆ, ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ ವರ್ಕೌಟ್ ಆಗಿದೆ.;
ರುಧಿರ ಧಾರಾ ಹಾಡಿನ ಬಳಿಕ ಬಘೀರ ಸಿನಿಮಾದಿಂದ ಇದೀಗ ಎರಡನೇ ಹಾಡು ರಿಲೀಸ್ ಆಗಿದೆ. ಮೆಲೋಡಿಯ ಗುಂಗು ಹಿಡಿಸುವ `ಪರಿಚಯವಾದೆ..' ಹಾಡು ಕಿವಿಗಿಂಪು ನೀಡುವುದಷ್ಟೇ ಅಲ್ಲದೆ, ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ ವರ್ಕೌಟ್ ಆಗಿದೆ.
ಇದೇ ಅಕ್ಟೋಬರ್ 31ರಂದು ತೆರೆಗೆ ಬರಲಿರುವ ಬಘೀರ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಹಾಡಿನಲ್ಲಿ ನಾಯಕ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ನಾಯಕಿ ರುಕ್ಮಿಣಿ ವಸಂತ್ ಇಬ್ಬರೂ ಅಷ್ಟೇ ಮುದ್ದಾಗಿ ಕಂಡಿದ್ದಾರೆ. ಖಡಕ್ ಪೊಲೀಸ್ ಪಾತ್ರದಲ್ಲಿ ಶ್ರೀಮುರಳಿ ಎದುರಾದರೆ, ವೈದ್ಯೆಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಪರಿಚಯವಾದೆ.. ಹಾಡಿಗೆ ಪ್ರಮೋದ್ ಮರವಂತೆ ಅವರ ಹೃದಯಸ್ಪರ್ಶಿ ಸಾಹಿತ್ಯವಿದೆ. ರಿತೇಷ್ ಜಿ ರಾವ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಹೊಂಬಾಳೆ ಫಿಲಂಸ್‌ನ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಈ ಬಘೀರ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ಈ ಸಿನಿಮಾಕ್ಕೆ ನಿರ್ದೇಶನದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಎ ಜೆ ಶೆಟ್ಟಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ.