ಪುರಿ ಜಗನ್ನಾಥ್‍ ನಿರ್ದೇಶನದ ಚಿತ್ರದಲ್ಲಿ ಕಾಲಿವುಡ್‍ ನಟ, ಬಾಲಿವುಡ್ ನಟಿ ಜೊತೆಗೆ ಸ್ಯಾಂಡಲ್‍ವುಡ್ ನಟ

ದುನಿಯಾ ವಿಜಯ್ ಸದ್ಯ ‘ಲ್ಯಾಂಡ್‍ ಲಾರ್ಡ್‍’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಕಳೆದ ವರ್ಷವೇ ಪ್ರಾರಂಭವಾಗಿದ್ದು, ಮುಕ್ತಾಯದ ಹಂತಕ್ಕೆ ಬಂದಿದೆ. ಈ ಮಧ್ಯೆ, ಅವರು ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ;

Update: 2025-04-30 08:32 GMT

ದುನಿಯಾ ವಿಜಯ್ ಸದ್ಯ ‘ಲ್ಯಾಂಡ್‍ ಲಾರ್ಡ್‍’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಕಳೆದ ವರ್ಷವೇ ಪ್ರಾರಂಭವಾಗಿದ್ದು, ಮುಕ್ತಾಯದ ಹಂತಕ್ಕೆ ಬಂದಿದೆ. ಈ ಮಧ್ಯೆ, ಅವರು ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿನಯ್‍ ರಾಜಕುಮಾರ್ ಮತ್ತು ವಿಜಯ್‍ ಮಗಳು ಮೊನೀಷಾ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ವಿಜಯ್‍ ಹೊಸದೊಂದು ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ತಮಿಳಿನ ಜನಪ್ರಿಯ ನಟ ವಿಜಯ್‍ ಸೇತುಪತಿ ಅಭಿನಯದಲ್ಲಿ ಪುರಿ ಜಗನ್ನಾಥ್‍ ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಯುಗಾದ ಹಬ್ಬದ ಸಂದರ್ಭದಲ್ಲಿ ಕೇಳಿ ಬಂದಿತ್ತು. ಆ ನಂತರ ಈ ಚಿತ್ರದಲ್ಲಿ ಬಾಲಿವುಡ್‍ ನಟಿ ಟಬು ನಟಿಸುತ್ತಿರುವ ಸುದ್ದಿ ಬಂದು. ಈಗ ಆ ಚಿತ್ರದಲ್ಲಿ ‘ದುನಿಯಾ’ ವಿಜಯ್‍ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿಗೆ ಟಾಲಿವುಡ್‍ ನಿರ್ದೇಶಕರ ಬಹುಭಾಷಾ ಚಿತ್ರದಲ್ಲಿ ಕಾಲಿವುಡ್‍, ಬಾಲಿವುಡ್‍ ಮತ್ತು ಸ್ಯಾಂಡಲ್‍ವುಡ್‍ನ ಪ್ರಮುಖ ಕಲಾವಿದರು ನಟಿಸುತ್ತಿರುವುದು ವಿಶೇಷವಾಗಿದೆ.

ಇತ್ತೀಚೆಗೆ ನಿರ್ದೇಶಕ ಪುರಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್, ಇಬ್ಬರೂ ವಿಜಯ್‍ ಅವರನ್ನು ಭೇಟಿ ಮಾಡಿ ಚಿತ್ರದ ಕಥೆ ಹೇಳಿ, ಅವರಿಂದ ಒಪ್ಪಿಗೆ ಪಡೆದು ಬಂದಿದ್ದಾರೆ. ‘ದುನಿಯಾ’ ವಿಜಯ್‍ ಇದಕ್ಕೂ ಮೊದಲು ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಹೋಗಿದ್ದರು. ಈಗ ಪುರಿ ಜಗನ್ನಾಥ್‍ ನಿರ್ದೇಶನದ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ಈ ಹೆಸರಿಡದ ಚಿತ್ರವು ಜೂನ್‍ನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಚಿತ್ರವನ್ನು ಪುರಿ ಕನೆಕ್ಟ್ಸ್ ಸಂಸ್ಥೆಯಡಿ ಪುರಿ ಜಗನ್ನಾಥ್‍ ಮತ್ತು ಚಾರ್ಮಿ ಕೌರ್ ಜೊತೆಯಾಗಿ ನಿರ್ಮಿಸಿದರೆ, ಪುರಿ ಜಗನ್ನಾಥ್‍ ನಿರ್ದೇಶನ ಮಾಡುತ್ತಿದ್ದಾರೆ.

ಇದಲ್ಲದೆ, ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್‍ 2’ ಚಿತ್ರದಲ್ಲಿ ವಿಜಯ್‍ ವಿಲನ್‍ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Similar News