RPC ಲೇಔಟ್‍ನಿಂದ ಮಹಾಲಕ್ಷ್ಮೀ ಲೇಔಟ್‍ವರೆಗೂ; ‘ಪಬ್ಬಾರ್’ ಪ್ರಯಾಣ ಪ್ರಾರಂಭ
ಈ ಚಿತ್ರದಲ್ಲಿ ಧೀರೇನ್ ರಾಮ್‍ಕುಮಾರ್ ನಟಿಸುತ್ತಿದ್ದು ಅವರ ಮಾವ ಶಿವರಾಜಕುಮಾರ್ (ತಾಯಿ ಪೂರ್ಣಿಮಾ ರಾಮ್‍ಕುಮಾರ್ ಅವರ ಅಣ್ಣ) ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಶಿವರಾಜಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ.;
‘ಶಾಖಾಹಾರಿ’ ಬಿಡುಗಡೆಯ ನಂತರ ನಿರ್ದೇಶಕ ಸಂದೀಪ್ ಸುಂಕದ್, ನಟ ಧೀರೇನ್ ರಾಮ್‍ಕುಮಾರ್ ಅವರಿಗೆ ಎರಡು ಕಥೆ ಹೇಳಿದ್ದರಂತೆ. RPC ಲೇಔಟ್‍ನ ಒಂದು ಕಾಫಿ ಶಾಪ್‍ನಲ್ಲಿ ಕುಳಿತು ಕಥೆಯನ್ನು ನಿರೂಪಣೆ ಮಾಡಿದ್ದರಂತೆ. ಆ ಕಥೆ ಈಗ ಮಹಾಲಕ್ಷ್ಮೀ ಲೇಔಟ್‍ನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರವಾಗಿ ಪ್ರಾರಂಭವಾಗಿದೆ. ಅದೇ ‘ಪಬ್ಬಾರ್’.
‘ಪಬ್ಬಾರ್’ ಎನ್ನುವುದು ಹಿಮಾಚಲ ಪ್ರದೇಶದಲ್ಲಿರುವ ಒಂದು ಕಣಿವೆಯ ಹೆಸರು. ಅದನ್ನು ಹಿನ್ನೆಲೆಯಾಗಿಟ್ಟುಕೊಂಡು ಸಂದೀಪ್ ಸುಂಕದ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಧೀರೇನ್ ರಾಮ್‍ಕುಮಾರ್ ನಟಿಸುತ್ತಿದ್ದು ಅವರ ಮಾವ ಶಿವರಾಜಕುಮಾರ್ (ತಾಯಿ ಪೂರ್ಣಿಮಾ ರಾಮ್‍ಕುಮಾರ್ ಅವರ ಅಣ್ಣ) ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಶಿವರಾಜಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಧೀರೇನ್‍ಗೆ ಪ್ರೇಮ್ ಮಗಳು ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದೊಂದು ಅಡ್ವೆಂಚರಸ್ ಕ್ರೈಮ್ ಥ್ರಿಲ್ಲರ್ ಎನ್ನುವ ನಿರ್ದೇಶಕ ಸಂದೀಪ್ ಸುಂಕದ್, ‘ಈ ಚಿತ್ರದಲ್ಲಿ ಧೀರೇನ್ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಎರಡು ತರಹದ ಪ್ರಯಾಣಗಳಿವೆ. ಪ್ರಕರಣವೊಂದಕ್ಕೆ ಸಂಬಂಧಿಸಿದ ಪ್ರಯಾಣ ಒಂದು ಕಡೆಯಾದರೆ, ಇನ್ನೊಂದು ವೈಯಕ್ತಿಕ ಪ್ರಯಾಣವೂ ಇದೆ. ಇಲ್ಲಿ ಪಬ್ಬಾರ್ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದಲ್ಲಿ ಹಲವು ವಿಷಯಗಳಿವೆ. ಅವೆಲ್ಲವನ್ನೂ ಒಂದೇ ಸಾರಿ ಹೇಳುವ ಬದಲು ಹಂತಹಂತವಾಗಿ ತಿಳಿಸುತ್ತೇವೆ’ ಎಂದರು.
ಇದು ತಮಗೆ ಪುನರ್ಜನ್ಮ ಎನ್ನುವ ಧೀರೇನ್, ‘ನಮ್ಮ ಮಾವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಕಥೆ ಕೇಳಿ ಸಿನಿಮಾ ಮಾಡುತ್ತೇನೆ ಎಂದರು. ತುಂಬಾ ಖುಷಿ ಆಯ್ತು. ಇವೆಲ್ಲವೂ ಕನಸು ಎಂಬ ಭಾವನೆ ಬರುತ್ತಿದೆ. ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರವಿದೆ. ಈ ಚಿತ್ರಕ್ಕೆ 10 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದರು.
‘ಶಾಖಾಹಾರಿ’ ವೆಜಿಟೇರಿಯನ್ ಆದರೆ, ಇದು ನಾನ್-ವೆಜಿಟೇರಿಯರನ್ ಎನ್ನುವ ಶಿವರಾಜಕುಮಾರ್, ‘ಈ ಚಿತ್ರದಲ್ಲಿ ಎಲ್ಲಾ ತರಹದ ಅಂಶಗಳು ಇವೆ. ನನಗೆ ಕಥೆ ಬಹಳ ಇಷ್ಟವಾಯ್ತು. ನಾವು ಸಿನಿಮಾ ಮಾಡಬೇಕೆಂದು ಕಥೆ ಕೇಳಲಿಲ್ಲ. ಸುಮ್ಮನೆ ಕಥೆ ಕೇಳಿದೆವು. ಇಷ್ಟವಾದ ಮೇಲೆ ಇದನ್ನು ನಾವೇ ನಿರ್ಮಿಸೋಣ ಎಂದು ತೀರ್ಮಾನಿಸಿದೆವು. ನಮ್ಮಮ್ಮ (ಪಾರ್ವತಮ್ಮ ರಾಜಕುಮಾರ್) ಇದ್ದಿದ್ದರೆ ಖಂಡಿತಾ ಧೀರೇನ್ ಅಭಿನಯದಲ್ಲಿ ಚಿತ್ರ ಮಾಡಿರುತ್ತಿದ್ದರು. ಹಾಗಾಗಿ, ಅವರ ಹುಟ್ಟುಹಬ್ಬದಂದು (ಡಿ. 06) ಚಿತ್ರದ ಘೋಷಣೆ ಮಾಡಿದೆವು. ಈಗ ಚಿತ್ರ ಪ್ರಾರಂಭವಾಗುತ್ತಿದೆ’ ಎಂದರು.
‘ಪಬ್ಬಾರ್’ ಚಿತ್ರಕ್ಕೆ ಸಂದೀಪ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನವನ್ನೂ ಮಾಡುತ್ತಿದ್ದಾರೆ. ‘ಶಾಖಾಹಾರಿ’ ಚಿತ್ರಕ್ಕೆ ಕೆಲಸ ಮಾಡಿದ್ದ ಛಾಯಾಗ್ರಾಹಕ ವಿಶ್ವಜಿತ್ ರಾವ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ಇಲ್ಲೂ ಮುಂದುವರೆದಿದ್ದಾರೆ.