The Federal Interview | ನನ್ನ 16 ಸಿನಿಮಾಗಳ ಪೈಕಿ, 10 ಸಿನಿಮಾಗಳು ಹಾಳಾಗಿವೆ: ಕಾಸರವಳ್ಳಿ ಬೇಸರ

‘ಸತಿ ಸುಲೋಚನಾ’ದ ನೆಗೆಟಿವ್‍ಗಳು ಹಾಳಾಗಿ ಯಾವುದೋ ಕಾಲವಾಗಿದೆ. ಚಿತ್ರವನ್ನು ಸರಿಯಾಗಿ ಸಂರಕ್ಷಿಸದ ಕಾರಣ, ‘ಸತಿ ಸುಲೋಚನಾ’ದ ಒಂದು ತುಣುಕು ಸಹ ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ಆರ್ಕೈವಿಂಗ್‍ (ಚಿತ್ರದ ನೆಗೆಟಿವ್‍ಗಳನ್ನು ಸಂರಕ್ಷಿಸುವ ವ್ಯವಸ್ಥೆ) ಎಷ್ಟು ಮುಖ್ಯ ಎಂಬುದು ಅರಿವಿಗೆ ಬರುತ್ತದೆ;

Update: 2025-03-05 02:30 GMT

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ತಯಾರಾದ ಬಗ್ಗೆಯನ್ನು ಪಿ. ಶೇಷಾದ್ರಿ ‘ಸತಿ ಸುಲೋಚನಾ – 03-03-34’ ಎಂಬ ಹೊಸ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ. ಈ ಚಿತ್ರದ ಘೋಷಣೆ ಈಗಾಗಲೇ ಅಧಿಕೃತವಾಗಿ ಆಗಿದೆ.

ದುರಂತವೆಂದರೆ, ‘ಸತಿ ಸುಲೋಚನಾ’ದ ನೆಗೆಟಿವ್‍ಗಳು ಹಾಳಾಗಿ ಯಾವುದೋ ಕಾಲವಾಗಿದೆ. ಚಿತ್ರವನ್ನು ಸರಿಯಾಗಿ ಸಂರಕ್ಷಿಸದ ಕಾರಣ, ‘ಸತಿ ಸುಲೋಚನಾ’ದ ಒಂದು ತುಣುಕು ಸಹ ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ಆರ್ಕೈವಿಂಗ್‍ (ಚಿತ್ರದ ನೆಗೆಟಿವ್‍ಗಳನ್ನು ಸಂರಕ್ಷಿಸುವ ವ್ಯವಸ್ಥೆ) ಎಷ್ಟು ಮುಖ್ಯ ಎಂಬುದು ಅರವಿಗೆ ಬರುತ್ತದೆ. ಆರ್ಕೈವಿಂಗ್‍ ಮಾಡಿದ್ದರೆ, ಇಂತಹ ಪರಿಸ್ಥಿತಿ ಬಬರುತ್ತಿರಲಿಲ್ಲ ಎಂದು ಹಿರಿಯ ನಿರ್ದೇಶಕ ಹಾಗೂ ಪದ್ಮಶ್ರೀ ಪುರಸ್ಕೃತ ಗಿರೀಶ್‍ ಕಾಸರವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು  ದ ಫೆಡರಲ್‌ ಕರ್ನಾಟಕದ ಮಾತನಾಡಿರುವ ಅವರು, "ಕನ್ನಡದ ಅಸ್ಮಿತೆಯನ್ನು ಕಂಡುಕೊಳ್ಳುವುದಕ್ಕೆ ಸತಿ ಸುಲೋಚನಾ ಮಾಡಲಾಯ್ತು. ಕನ್ನಡದ ಅಸ್ಮಿತೆ ಎಂದರೇನು? ನಾನು ‘ಘಟಶ್ರಾದ್ಧ’ ಮಾಡುವ ಸಂದರ್ಭದಲ್ಲಿ, ಅಂದರೆ 70ರ ದಶಕದಲ್ಲಿ ಮದರಾಸಿನಲ್ಲಿ ಸ್ಟುಡಿಯೋಗಳು ಸಿಗುತ್ತಿರಲಿಲ್ಲ. ಆ ಚಿತ್ರದ ಮಿಕ್ಸಿಂಗ್‍ ಸುಮಾರು 18 ದಿನಗಳ ಕಾಲ ಮಾಡಿದ್ದೇವೆ. ಪ್ರತಿ ರಾತ್ರಿ 12ಕ್ಕೆ ನಮಗೆ ಸ್ಟುಡಿಯೋ ಸಿಗುತ್ತಿತ್ತು. ಸಿಕ್ಕರೂ ಅರ್ಧ ರೀಲು ಮುಗಿಯುವಷ್ಟರಲ್ಲಿ, ಸುಸ್ತಾಗಿರುತ್ತಿದ್ದರು. ನಾಳೆ ಮಾಡೋಣ ಎನ್ನುತ್ತಿದ್ದರು," ಎಂದು ನೆನಪಿಸಿಕೊಂಡರು.

"70ರ ದಶಕದಲ್ಲಿ ಕನ್ನಡಕ್ಕೆ ಅಷ್ಟೊಂದು ಅವಗಣನೆ ಆದರೆ, 30ರ ದಶಕದಲ್ಲಿ ಏನಾಗಿರಬಹುದು ಹೇಗಿರಬಹುದು. ಬೇರೆ ಭಾಷೆಗಳಲ್ಲಿ ಟಾಕಿ ಚಿತ್ರಗಳು ಶುರುವಾಗಿದ್ದವು. ಕನ್ನಡದಲ್ಲಿ ಮಾತ್ರ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ನಾಗೇಂದ್ರ ರಾಯರಿಗೆ ಕನ್ನಡವನ್ನು ಬೆಳೆಸಬೇಕು ಎಂಬ ಆಸೆ ಇತ್ತು. ಅದನ್ನು ಸುಬ್ಬಯ್ಯ ನಾಯ್ಡು ಅವರ ಜೊತೆಗೆ ಹಂಚಿಕೊಂಡರು. ಹೀಗಿರುವಾಗಲೇ ಕನ್ನಡದಲ್ಲಿ ಚಿತ್ರ ನಿರ್ಮಿಸುವುದಕ್ಕೆ ನಿರ್ಮಾಪಕರು ಸಿಕ್ಕರು. ಆದರೆ, ಅವರು ಕನ್ನಡದವರಲ್ಲ. ಕನ್ನಡ ಚಿತ್ರರಂಗದ ಇತಿಹಾಸ ನೋಡಿದರೆ, ಬೇರೆ ಬೇರೆ ಭಾಷೆಯವರಿಂದ ಕನ್ನಡ ಉಳಿದಿದೆ. ಇವತ್ತಿಗೂ ಅದೇ ನಡೆದುಬಂದಿದೆ. ಹಾಗಿರುವಾಗ ಈ ಕನ್ನಡದ ಅಸ್ಮಿತೆ ಎಂದರೇನು ಎಂದು ನಾವು ಪದೇಪದೇ ಪ್ರಶ್ನೆ ಮಾಡಿಕೊಳ್ಳಬೇಕು. ಆ ಬಗ್ಗೆ ನಾವು ಸರಿಯಾಗಿ ಯೋಚನೆ ಮಾಡುತ್ತಿಲ್ಲ,"ಎನ್ನುತ್ತಾರೆ.

ಭಾರತದಲ್ಲಿ ಆರ್ಕೈವಿಂಗ್‍ ಮತ್ತು ನಾಯರ್ ಅವರ ಮಹತ್ವವನ್ನು ವಿವರಿಸುವ ಅವರು, "National Film Archive of Indiaದ ಪಿ.ಕೆ. ನಾಯರ್ ಅವರು ಇರದಿದ್ದರೆ, ಈಗ ಇರುವಷ್ಟು ಚಿತ್ರದ ನೆಗೆಟಿವ್‍ಗಳು ಸಹ ನಮಗೆ ಸಿಗುತ್ತಿರಲಿಲ್ಲ. ಶಿವರಾಮ ಕಾರಂತ ನಿರ್ದೇಶನ ‘ಭೂತ ರಾಜ್ಯ’ ಮತ್ತು ‘ಡೊಮಿಂಗೊ’ ಚಿತ್ರದ ಒಂದು ಪ್ರಿಂಟ್‍ ಶ್ರೀಲಂಕಾದಲ್ಲಿ ಇದೆ ಎಂದು ನಾಯರ್ ಅವರಿಗೆ ಹೇಳಿದ್ದರಂತೆ. ಅದನ್ನು ತರಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮ ಹಾಕಿದರೂ, ಕೊನೆಗೂ ಸಿಗಲಿಲ್ಲ. ನಮಗೆ ಫಾಲ್ಕೆ ಅವರ ‘ರಾಜ ಹರಿಶ್ಚಂದ್ರ’ ಚಿತ್ರವೇ ಸಿಗುತ್ತಿರಲಿಲ್ಲ. ಕೊನೆಗೆ ನಾಸಿಕ್‍ನಲ್ಲಿ ಒಂದು ಪ್ರಿಂಟ್‍ ಸಿಕ್ಕಿತು. ನಾಯರ್ ಅಲ್ಲಿಗೆ ಹೋಗಿ, ಬಹಳ ಕಷ್ಟಪಟ್ಟು ಚಿತ್ರದ ನೆಗೆಟಿವ್ಗಳನ್ನು ತಂದರು. ಅದರಲ್ಲೂ ಮೂರ್ನಾಲ್ಕು ರೀಲ್ಗಳು ಮಾತ್ರ ಉಳಿದುಕೊಂಡಿವೆ. ಆರ್ಕೈವಿಂಗ್‍ ಎನ್ನುವುದು ಬಹಳ ಮುಖ್ಯ ಕೆಲಸ. ಏಕೆಂದರೆ, ಇತಿಹಾಸ ಎನ್ನುವುದು ದಾಖಲೆಗಳಲ್ಲಿಲ್ಲ. ಅದು ನಮ್ಮಲ್ಲಿ ಒಳಗಿನಿಂದ ಅಸ್ಮಿತೆಯನ್ನು ಹುಟ್ಟುಹಾಕುತ್ತದೆ. ಕನ್ನಡದ ದುರಂತ ಎಂದರೆ ಮೊದಲಿನಿಂದಲೂ ಅಸ್ಮಿತೆ ಇಲ್ಲ. ಅದನ್ನು ನಾವು ಮತ್ತೆಮತ್ತೆ ಪುನರುಜ್ಜೀವನಗೊಳಿಸುತ್ತಲೇ ಹೋಗಬೇಕು. ನನ್ನ ವಿಷಯದಲ್ಲೇ ಹೇಳುವದಾದರೆ, ನಾನು ಮಾಡಿದ 16 ಸಿನಿಮಾಗಳ ಪೈಕಿ, 10 ಸಿನಿಮಾಗಳು ಈಗಾಗಲೇ ಹಾಳಾಗಿವೆ. ‘ದ್ವೀಪ’ದವರೆಗೆ ನನ್ನ ಯಾವ ಚಿತ್ರದ ನೆಗೆಟಿವ್‍ ಸಿಗುವುದಿಲ್ಲ. ಬೇಕಾದರೆ ಡಿವಿಡಿಯಲ್ಲಿ ನೋಡಿಕೊಳ್ಳಬಹುದು. ಆ ತರಹದ್ದೊಂದು ಅನಿವಾರ್ಯತೆ ಬಂದು ಹೋಗಿದೆ," ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಆರ್ಕೈವಿಂಗ್‍ ವಿಷಯದಲ್ಲಿ ಬರೀ ಸರ್ಕಾರವನ್ನು ಮಾತ್ರ ದೂಷಿಸುವದಲ್ಲ, ನಿರ್ಮಾಪಕರಿಗೂ ಅರಿವಿಲ್ಲ ಎನ್ನುವ ಅವರು, ‘ಈ ಹಿಂದೆ ನಾನು ಸಮಿತಿಯೊಂದರಲ್ಲಿ ಇದ್ದೆ. ಕನ್ನಡದ 70 ಜನಪ್ರಿಯ, ಯಶಸ್ವಿ ಮತ್ತು ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಮಾಡಿ, ಅದನ್ನು ಉಳಿಸುವ ಪ್ರಯತ್ನ ಮಾಡಿದ್ದೆವು. ಆದರೆ, ಸರ್ಕಾರ ಬದಲಾಗಿ ಆರ್ಕೈವ್ಸ್ ವಿಭಾಗವನ್ನು NFDCಗೆ ನೀಡಲಾಯಿತು. ನ್ಯಾಷನಲ್‍ ಫಿಲಂ ಆರ್ಕೈವ್ಸ್ ಇದ್ದಾಗಲೂ, ಹಿಂದಿ ಸಿನಿಮಾಗಳ ಆರ್ಕೈವ್‍ ಮಾಡುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತೇ ಹೊರತು, ಕನ್ನಡದ ಚಿತ್ರಗಳ ಆರ್ಕೈವಿಂಗ್‍ ಆಗುತ್ತಿದ್ದುದು ಕಡಿಮೆಯೇ. ನ್ಯಾಷನಲ್‍ ಫಿಲಂ ಆರ್ಕೈವ್‍ನಲ್ಲಿ ಕೇವಲ 70 ಸಿನಿಮಾಗಳು ಮಾತ್ರ ಇದ್ದವು. ಆರ್ಕೈವಿಂಗ್‍ ವಿಷಯದಲ್ಲಿ ಬರೀ ಸರ್ಕಾರವನ್ನು ಮಾತ್ರ ದೂಷಿಸುವದಲ್ಲ, ನಮ್ಮ ನಿರ್ಮಾಪಕರಿಗೂ ಆ ಕುರಿತು ಅರಿವು ಕಡಿಮೆಯೇ. ಅವರಿಗೆ ಪ್ರಾಮುಖ್ಯತೆ ಗೊತ್ತಾಗಿರಲಿಲ್ಲ. ಗೊತ್ತಿದ್ದರೆ ಹಲವು ಸಿನಿಮಾಗಳು ಉಳಿದುಕೊಳ್ಳುತ್ತಿದ್ದವೋ ಏನೋ. ಹಾಗಾಗಿ, ಆರ್ಕೈವಿಂಗ್‍ ಕೆಲಸವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಡಬೇಕಿತ್ತು. ಆದರೆ, ನಾಲ್ಕು ಜನ ವಿದೇಶಿಗರನ್ನು ಕರೆಸಿ ಚಿತ್ರೋತ್ಸವ ಮಾಡುವುದೇ ಕೆಲಸ ಅಂದುಕೊಂಡಿದ್ದಾರೆ," ಎಂದು ಕಾಸರವಳ್ಳಿ ಹೇಳಿದ್ದಾರೆ.

Tags:    

Similar News