ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ತಾರತಮ್ಯ: ಸಿಡಿದೆದ್ದ ‘ನಾ ನಿನ್ನ ಬಿಡಲಾರೆ’ ನಾಯಕಿ

ಯಾವಾಗ ಭಾರತಿ ಅಂಬಾಲಿ ಮತ್ತು ‘ನಾ ನಿನ್ನ ಬಿಡಲಾರೆ’ ಚಿತ್ರತಂಡದವರು ಹೋಗಿ ಬೆಂಗಳೂರು ಮತ್ತು ಮೈಸೂರಿನ ಎರಡು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿಭಟನೆ ನಡೆಸಿದರೋ, ಆಗ ಮಲ್ಟಿಪ್ಲೆಕ್ಸ್‌ನವರು ಕ್ಷಮೆ ಕೇಳುವುದರ ಜೊತೆಗೆ, ತಮ್ಮ ಅರಿವಿಗೆ ಬರದೆ, ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ;

Update: 2024-12-01 14:55 GMT

ಭಾರತಿ ಅಂಬಾಲಿ ಅಭಿನಯದ ‘ನಾ ನಿನ್ನ ಬಿಡಲಾರೆ’ ಚಿತ್ರವು ಮೊನ್ನೆ ಶುಕ್ರವಾರ (ನ.29) ರಾಜ್ಯಾದ್ಯಂತ ಬಿಡುಗಡೆಯಾಗಿ, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯ ಮತ್ತು ತಾರತಮ್ಯದ ವಿರುದ್ದ ಚಿತ್ರದ ನಾಯಕಿ ಮತ್ತು ಕಾರ್ಯಕಾರಿ ನಿರ್ಮಾಪಕಿ ಭಾರತಿ ಅಂಬಾಲಿ ಸಿಡಿದೆದ್ದಿದ್ದಾರೆ.

ಶನಿವಾರ ಚಿತ್ರತಂಡದವರು ಮೈಸೂರಿನ ನೆಕ್ಸಸ್‍ ಮಾಲ್‍ ಮತ್ತು ಬೆಂಗಳೂರಿನ ಒರಾಯನ್‍ ಮಾಲ್‍ಗೆ ಭೇಟಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರಕ್ಕೆಂದು ಕಳಿಸಿಕೊಟ್ಟ ಸ್ಟಾಂಡಿಗಳನ್ನು ಚಿತ್ರಮಂದಿರದವರು ಒಳಗಿಟ್ಟು, ಪರಭಾಷಾ ಚಿತ್ರಗಳ, ಅದರಲ್ಲೂ ಮುಂದಿನ ವಾರ ಬಿಡುಗಡೆಯಾಗುತ್ತಿರುವ ತೆಲುಗು ಚಿತ್ರ ‘ಪುಷ್ಪ 2’ದ ಸ್ಟಾಂಡಿಗಳನ್ನು ಮುಂದಿಟ್ಟು ಪ್ರಚಾರ ಮಾಡುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇದರ ವಿರುದ್ಧ ‘ನಾ ನಿನ್ನ ಬಿಡಲಾರೆ’ ಚಿತ್ರತಂಡದವರು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ಚಿತ್ರತಂಡದವರ ಪ್ರತಿಭಟನೆಗೆ ಮಣಿದು, ಮಲ್ಟಿಪ್ಲೆಕ್ಸ್‌ಗಳವರು ಒಳಗಿಟ್ಟಿದ್ದ ಸ್ಟಾಂಡಿಗಳನ್ನು ತಂದು ಮುಂದಿಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಭಾರತಿ ಅಂಬಾಲಿ, ‘ಮೈಸೂರಿನಲ್ಲಿ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗುತ್ತಿದೆ ಎಂದು ನೋಡಲು ಹೋಗಿದ್ದೆವು. ಚಿತ್ರಪ್ರದರ್ಶನದ ಸಮಯಕ್ಕಿಂತ ಅರ್ಧ ತಾಸು ಮೊದಲೇ ಹೋಗಿದ್ದೆವು. ಚಿತ್ರದ ಪ್ರಚಾರಕ್ಕೆಂದು ನಾವು ಸಾಕಷ್ಟು ಸ್ಟಾಂಡಿಗಳನ್ನು ಮಾಡಿಸಿ ಕಳಿಸಿದ್ದೆವು. ಅದನ್ನು ನೋಡಿ ಕನ್ನಡ ಚಿತ್ರಗಳಿಗೆ ಬರಲಿ ಎಂಬ ಉದ್ದೇಶಕ್ಕೆ ಕಳಿಸಿದ್ದೆವು. ಆದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಆ ಸ್ಟಾಂಡಿಗಳನ್ನು ಪ್ರದರ್ಶನಕ್ಕಿಡುತ್ತಿಲ್ಲ. ಇದರಿಂದ ಚಿತ್ರ ನೋಡಲು ಬರುವವರಿಗೆ ಚಿತ್ರವಿರುವ ವಿಷಯವೇ ಗೊತ್ತಾಗುತ್ತಿಲ್ಲ. ಈ ಕುರಿತು ವಿಚಾರಿಸಿದರೆ, ಕೆಲವು ನಿಮಿಷಗಳ ಹಿಂದಷ್ಟೇ ಸ್ಟಾಂಡಿಗಳನ್ನು ಒಳಗಿಟ್ಟಿದ್ದೇವೆ ಎಂಬ ಉತ್ತರಮಲ್ಟಿಪ್ಲೆಕ್ಸ್‌ನವರಿಂದ ಬರುತ್ತದೆ. ಮುಂದಿನ ವಾರ ಬಿಡುಗಡೆಯಾಗುವ ಚಿತ್ರಗಳ ಪೋಸ್ಟರ್ ಮತ್ತು ಸ್ಟಾಂಡಿಗಳನ್ನು ಚಿತ್ರಮಂದಿರದವರು ಪ್ರದರ್ಶನಕ್ಕಿಡುತ್ತಿದ್ದಾರೆ. ಹೀಗಾದರೆ, ಹೊಸಬರು ಬೆಳೆಯುವುದು ಹೇಗೆ? ಹೊಸ ಚಿತ್ರಗಳಿಗೆ ಪ್ರೋತ್ಸಾಹ ಸಿಗುವುದು ಹೇಗೆ?’ ಎಂದು ಪ್ರಶ‍್ನಿಸುತ್ತಾರೆ.

ನಮ್ಮದು ಹೊಸ ತಂಡ. ಕಳೆದ ಎರಡು ವರ್ಷಗಳಿಂದ ಸಾಕಷ್ಟು ಶ್ರಮ ಹಾಕಿ ಚಿತ್ರ ಮಾಡಿದ್ದೇವೆ. ಚಿತ್ರ ಮಾಡುವುದು ಒಂದು ಯುದ್ಧವಾದರೆ, ಚಿತ್ರವನ್ನು ಜನರಿಗೆ ತಲುಪಿಸುವುದು ಇನ್ನೊಂದು ಯುದ್ಧ. ನಮ್ಮ ಕಡೆಯಿಂದ ಎಷ್ಟು ಸಾಧ್ಯವೋ, ಅಷ್ಟು ಪ್ರಚಾರ ಮಾಡುತ್ತಿದ್ದೇವೆ. ಜನರೂ ಬರುತ್ತಿದೆ, ಪ್ರತಿಕ್ರಿಯೆಯೂ ಸಿಗುತತಿದೆ. ಆದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರಚಾರ ಮಾಡುವುದಕ್ಕೆ ಬಿಡುತ್ತಿಲ್ಲ. ಈಗಿರುವ ಚಿತ್ರಗಳನ್ನು ಪ್ರಚಾರ ಮಾಡುವುದು ಬಿಟ್ಟು, ಮುಂಬರುವ ಚಿತ್ರಗಳ ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಕ್ಷಮೆ ಕೇಳುತ್ತಾರೆ. ಆದರೆ, ಅವರ ಕ್ಷಮೆ ಇಟ್ಟುಕೊಂಡು ಏನು ಮಾಡುವುದು? ಇದರಿಂದ ನಮಗೆ ಪ್ರೇಕ್ಷಕರು ಕೈತಪ್ಪುತ್ತಿದ್ದಾರೆ. ಚಿತ್ರಮಂದಿರದ ಬಳಿ ಸುಮಾರು ಒಂದು ತಾಸು ನಿಂತಿದ್ದೇವೆ. ಎಷ್ಟೋ ಜನ ಚಿತ್ರ ನೋಡುವುದಕ್ಕೆ ಬಂದರು. ಆದರೆ, ಅವರಿಗೆ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿರುವ ಅರಿವೇ ಇಲ್ಲ. ಕೆಲವರು ಹೊರಟು ಹೋದರೆ, ಕೆಲವರು ಬೇರೆ ಭಾಷೆಯ ಚಿತ್ರಗಳನ್ನು ನೋಡಲು ಹೋದರು. ಈ ಬಗ್ಗೆ ಕೇಳಿದರೆ, ಸೂಕ್ತ ಉತ್ತರವಿಲ್ಲ. ನಾವು ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ಅದು ಪ್ರೇಕ್ಷಕರಿಗೆ ತಲುಪಲಿಲ್ಲ ಎಂದರೆ ಯಾಕೆ ಚಿತ್ರ ಮಾಡಬೇಕು’ ಎಂದು ಕೇಳುತ್ತಾರೆ.

ಯಾವಾಗ ಭಾರತಿ ಅಂಬಾಲಿ ಮತ್ತು ‘ನಾ ನಿನ್ನ ಬಿಡಲಾರೆ’ ಚಿತ್ರತಂಡದವರು ಹೋಗಿ ಬೆಂಗಳೂರು ಮತ್ತು ಮೈಸೂರಿನ ಎರಡು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿಭಟನೆ ನಡೆಸಿದರೋ, ಆಗ ಮಲ್ಟಿಪ್ಲೆಕ್ಸ್‌ನವರು ಕ್ಷಮೆ ಕೇಳುವುದರ ಜೊತೆಗೆ, ತಮ್ಮ ಅರಿವಿಗೆ ಬರದೆ, ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಒಳಗಿಟ್ಟಿದ್ದ ಸ್ಟಾಂಡಿಗಳನ್ನು ತಂದು ಮತ್ತೆ ಮುಂದೆ ಪ್ರದರ್ಶನಕ್ಕೆ ಇಟ್ಟಿದ್ದಾರೆ.

‘ನಾ ನಿನ್ನ ಬಿಡಲಾರೆ’ ಒಂದು ಹಾರರ್ ಚಿತ್ರವಾಗಿದ್ದು, ಚಿತ್ರಕ್ಕೆ ನವೀನ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಭಾರತಿ ಅಂಬಾಲಿ, ಪಂಚಾಕ್ಷರಿ (ಪಂಚಿ), ‘ಸಿದ್ಲಿಂಗು’ ಶ್ರೀಧರ್‍, ಮಹಾಂತೇಶ್‍, ಸೀರುಂಡೆ ರಘು ಮುಂತಾದವರು ನಟಿಸಿದ್ದಾರೆ.

Tags:    

Similar News