ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ ರಾಹುಲ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಮಂಗಳೂರಿನ ಕುತ್ತಾರ್ ನಲ್ಲಿರುವ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

Update: 2024-07-16 13:36 GMT
ನಟಿ ಕತ್ರಿನಾ ಕೈಫ್
Click the Play button to listen to article

ಬಾಲಿವುಡ್ ನಟಿ ಕತ್ರಿನಾ ಕೈಫ್ ಮಂಗಳೂರಿನ ಕುತ್ತಾರ್ ನಲ್ಲಿರುವ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಜುಲೈ 14ರ ಭಾನುವಾರ ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ , ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ಹರಕೆಯ ಕೋಲ ನಡೆಯುತ್ತಿತ್ತು. ಈ ಕೋಲದಲ್ಲಿ ನಟಿ ಕತ್ರಿನಾ ಕೈಫ್ ಸೇರಿದಂತೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್, ನಟ ಸುನಿಲ್ ಶೆಟ್ಟಿ ಕುಟುಂಬ ಭಾಗಿಯಾಗಿತ್ತು. ನಟಿ ಕತ್ರಿನಾ ಕೈಫ್, ನಟ ಸುನಿಲ್‌ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ .ರಾಹುಲ್, ಮ್ಯಾಟ್ರಿಕ್ಸ್ ಎಂಟರ್ ಟೈನ್ಮೆಂಟ್ ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್ ಹಾಗೂ ವಿ.ಎಮ್ ಕಾಮತ್ ಸೇರಿದಂತೆ ಒಟ್ಟು ಅವರ ಪರಿಚಿತರೇ ಆಗಿರುವ 9 ಮಂದಿ ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು.

ವಿಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದರು. ಕತ್ರಿನಾ, ರೇಷ್ಮಾ ಶೆಟ್ಟಿ, ಆಧ್ಯಾ ಶೆಟ್ಟಿ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಉಳಿದರೆ, ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು.

ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ್ದ ಬಾಲಿವುಡ್ ಕುಟುಂಬ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟೆಯ ಕಚೇರಿ ಅಧಿಕೃತರಲ್ಲಿ ಮನವಿ ಮಾಡಿದ್ದರು. ಅಲ್ಲದೇ ಸ್ಥಳದಲ್ಲಿ ಫೋಟೋ ತೆಗೆಯಲು ಬಿಡದೆ, ತೆಗೆದವರನ್ನು ಅಳಿಸುವಂತೆ ವಿನಂತಿಸಿದ್ದರು ಎನ್ನಲಾಗಿದೆ.

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಎಲ್ ರಾಹುಲ್ ದಂಪತಿ 

ಭಾರತ ತಂಡದ ಬಲಗೈ ಬ್ಯಾಟರ್ ಕೆ.ಎಲ್ ರಾಹುಲ್ ಇಲ್ಲಿನ ಐತಿಹಾಸಿಕ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದರು. ಪತ್ನಿ ಅಥಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.

ತುಳುನಾಡಿನಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮೊದಲು ಕೊರಗಜ್ಜ ದೈವವನ್ನು ನೆನಪಿಸಿಕೊಂಡರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಇಂದು ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು ರಾಜ್ಯ-ಹೊರರಾಜ್ಯದ ಜನರು, ಉದ್ಯಮಿಗಳು ಆಗಮಿಸಿ ಕೊರಗಜ್ಜನ ಆಶೀರ್ವಾದ ಪಡೆಯುತ್ತಿದ್ದಾರೆ. ಈ ಹಿಂದೆಯೂ ಈ ಕ್ಷೇತ್ರಕ್ಕೆ ಹಲವರು ಚಿತ್ರನಟ- ನಟಿಯರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ನಟ ದರ್ಶನ್‌, ನಟಿಯರಾದ ಮಾಲಾಶ್ರೀ, ರಕ್ಷಿತಾ, ರಚಿತಾರಾಮ್, ಭವ್ಯ, ಶ್ರುತಿ ಸೇರಿದಂತೆ ಹಲವರು ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಾಲಿವುಡ್​ನ ಶಿಲ್ಪಾಶೆಟ್ಟಿ ಕೂಡ ಭೇಟಿ ನೀಡಿದ್ದಾರೆ.

Tags:    

Similar News