MeToo Drive in Malayalam Cinema| ಲೈಂಗಿಕ ಕಿರುಕುಳ ಆರೋಪ ಹೊರಿಸಿದ ನಟಿ

ನ್ಯಾ. ಹೇಮಾ ಸಮಿತಿ ವರದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ತಳಮಳ ಆರಂಭವಾಗಿದೆ.ನಟಿ ಮಿನು ಮುನೀರ್ ಅವರು ಎಂ. ಮುಖೇಶ್, ಜಯಸೂರ್ಯ ಸೇರಿದಂತೆ ನಾಲ್ವರು ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.

Update: 2024-08-26 10:33 GMT

ನ್ಯಾ. ಹೇಮಾ ಸಮಿತಿ ವರದಿಯು ಆಘಾತಕಾರಿ ವಿಷಯಗಳನ್ನು ಬಹಿರಂಗಗೊಳಿಸಿದ ನಂತರ, ಮಲಯಾಳಂ ಚಿತ್ರರಂಗದ ನಟಿಯರು ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಹೇಳಲು ಮುಂದೆ ಬರುತ್ತಿದ್ದಾರೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ನಟಿ ಮಿನು ಮುನೀರ್,  ಎಂ.ಮುಖೇಶ್ ಮತ್ತು ಜಯಸೂರ್ಯ ಸೇರಿದಂತೆ ನಾಲ್ವರು ನಟರ ವಿರುದ್ಧ ಫೇಸ್‌ಬುಕ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 

ಚಲನಚಿತ್ರ ನಿರ್ಮಾಪಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನ ಮತ್ತು ನಟ ಸಿದ್ದಿಕ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ)ದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾರನೇ ದಿನ ಮಿನು ಮುನೀರ್‌ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. 

ಆರೋಪವೇನು?: ನಟರಾದ ಮುಖೇಶ್, ಮಣಿಯನಪಿಳ್ಳ ರಾಜಿ, ಇಡವೆಲ ಬಾಬು ಮತ್ತು ಜಯಸೂರ್ಯ, ವಕೀಲ ಚಂದ್ರಶೇಖರನ್ ಮತ್ತು ನಿರ್ಮಾಣ ನಿಯಂತ್ರಕರಿಂದ ತನಗೆ ನಿರಂತರ ಮೌಖಿಕ ಮತ್ತು ದೈಹಿಕ ನಿಂದನೆ ನಡೆದಿದೆ ಎಂದು ಮುನೀರ್ ಬರೆದಿದ್ದಾರೆ. 

ʻ2013 ರಲ್ಲಿ ನಾನು ಪ್ರಾಜೆಕ್ಟ್‌ ಒಂದರಲ್ಲಿ ಕೆಲಸ ಮಾಡುವಾಗ ಇವರಿಂದ ಕಿರುಕುಳ ಅನುಭವಿಸಿದೆ. ಸಹಕರಿಸಿ, ಕೆಲಸವನ್ನು ಮುಂದುವರಿಸಲು ಪ್ರಯತ್ನಿಸಿದೆ. ಆದರೆ, ನಿಂದನೆಯನ್ನು ಸಹಿಸಲು ಆಗಲಿಲ್ಲ. ಪರಿಣಾಮವಾಗಿ ನಾನು ಮಲಯಾಳಂ ಚಲನಚಿತ್ರೋದ್ಯಮವನ್ನು ತೊರೆದು ಚೆನ್ನೈಗೆ ಸ್ಥಳಾಂತರಗೊಳ್ಳಬೇಕಾಯಿತು,ʼ ಎಂದು ಹೇಳಿದ್ದಾರೆ.

ಪತ್ರಿಕೆಯ ಲೇಖನವವೊಂದರಲ್ಲಿ ಈ ಕುರಿತು ಮಾತನಾಡಿದ್ದೇನೆ ಮತ್ತು ಈಗ ಅನುಭವಿಸಿದ ಆಘಾತಕ್ಕೆ ನ್ಯಾಯ ಮತ್ತು ಉತ್ತರದಾಯಿತ್ವವನ್ನು ಕೇಳುತ್ತಿದ್ದೇನೆ. ಅವರ ಹೇಯ ಕೃತ್ಯಗಳಿಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಾನು ನಿಮ್ಮ ಸಹಾಯ ಕೋರುತ್ತೇನೆ. ನಿಂದನೆ ಬಗ್ಗೆ ಮಾತನಾಡಿದಾಗ, ʻಹೊಂದಾಣಿಕೆʼ ಮಾಡಿಕೊಳ್ಳಲಿಲ್ಲ ಎಂಬ ಆರೋಪ ಹೊರಿಸಲಾಯಿತು ಎಂದು ಬರೆದಿದ್ದಾರೆ.

ʻಟಾಯ್ಲೆಟ್‌ನಿಂದ ಹೊರಬರುತ್ತಿದ್ದಾಗ ಜಯಸೂರ್ಯ ತನ್ನ ಒಪ್ಪಿಗೆಯಿಲ್ಲದೆ ಹಿಂದಿನಿಂದ ತಬ್ಬಿಕೊಂಡು ಚುಂಬಿಸಿದ್ದಾನೆ. ಆಘಾತಕ್ಕೊಳಗಾದ ನಾನು ಅಲ್ಲಿಂದ ಓಡಿಹೋದೆ. ತನ್ನೊಂದಿಗೆ ಇರುವುದಾದರೆ, ಹೆಚ್ಚು ಕೆಲಸ ಕೊಡಿಸುವುದಾಗಿ ಆತ ಹೇಳಿದ,ʼ ಎಂದಿದ್ದಾರೆ.

ದೈಹಿಕ ಹಲ್ಲೆ: ನಟ ಹಾಗೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ದ ಕಾರ್ಯದರ್ಶಿ ಇಡವೇಲ ಬಾಬು, ತಮ್ಮನ್ನು ಸದಸ್ಯತ್ವ ಅರ್ಜಿಗೆ ಸಂಪರ್ಕಿಸಿದ್ದರು. ಆದರೆ, ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವ ನೆಪದಲ್ಲಿ ಆಕೆಯನ್ನು ಫ್ಲಾಟ್‌ಗೆ ಕರೆಸಿಕೊಂಡು ದೈಹಿಕ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ತನಿಖೆಗೆ ಒತ್ತಾಯ: ಮುನೀರ್ ಆರೋಪ ಹೊರಿಸಿರುವವರಲ್ಲಿ ಒಬ್ಬರಾದ ಮಣಿಯನಪಿಳ್ಳ ರಾಜಿ, ಆರೋಪ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ ಮತ್ತು ಕೆಲವರು ಪರಿಸ್ಥಿತಿಯಿಂದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆರೋಪ ಹೊತ್ತವರಲ್ಲಿ ಅಮಾಯಕರು ಮತ್ತು ತಪ್ಪಿತಸ್ಥರು ಇರುತ್ತಾರೆ. ಆದ್ದರಿಂದ ಸಮಗ್ರ ತನಿಖೆ ಅಗತ್ಯ ಎಂದು ಹೇಳಿದರು. 

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ದೌರ್ಜನ್ಯದ ತನಿಖೆಗೆ ಏಳು ಸದಸ್ಯರ ವಿಶೇಷ ತಂಡ ರಚಿಸುವುದಾಗಿ ಹೇಳಿದರು. ನ್ಯಾ. ಹೇಮಾ ಸಮಿತಿಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆ ಕುರಿತು ವರದಿ ಬಹಿರಂಗಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

Tags:    

Similar News