Nayanthara : ಧನುಷ್ ವಿರುದ್ಧ ಕಾನೂನು ಸಮರದಲ್ಲಿ ನಯನತಾರಾಗೆ ಹಿನ್ನಡೆ
Nayanthara : ನಯನತಾರಾ ಅವರ ಜೀವನ ಕುರಿತ ಡಾಕ್ಯುಮೆಂಟರಿಯಲ್ಲಿ ತಮ್ಮ ನಿರ್ಮಾಣದ ಸಿನಿಮಾದ ದೃಶ್ಯಗಳನ್ನು ಬಳಸಿದ್ದಕ್ಕೆ ಧನುಷ್ ಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೆ ತಡೆ ನೀಡುವಂತೆ ನೆಟ್ಫ್ಲಿಕ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.;
ಧನುಷ್ ವಿರುದ್ಧ ಕಾನೂನು ಹೋರಾಟದಲ್ಲಿ ನಟಿ ನಯನತಾರಾಗೆ (Nayanthara) ಹಿನ್ನೆಡೆ ಉಂಟಾಗಿದೆ. ನಟಿಯ ವಿರುದ್ಧ ಧನುಷ್ ಸಲ್ಲಿಸಿದ್ದ ಕೃತಿಸ್ವಾಮ್ಯ ಹಕ್ಕು ಉಲ್ಲಂಘನೆ ಪ್ರಕರಣ ರದ್ದುಗೊಳಿಸುವಂತೆ ನೆಟ್ಫ್ಲಿಕ್ಸ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಇದು ʼನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಎಂಬ ಸರಣಿಯ ಪ್ರಸಾರಕ್ಕೆ ತೊಡಕಾಗುವ ಸಾಧ್ಯತೆಗಳಿವೆ.
ಈ ಸರಣಿಯು ನಯನತಾರಾ ಅವರ ಚಲನಚಿತ್ರರಂಗ ಪ್ರವೇಶ, ಹೋರಾಟಗಳು, ಹಿಂದಿನ ಸಂಬಂಧಗಳು ಮತ್ತು ಪುರುಷ ಪ್ರಾಬಲ್ಯದ ಉದ್ಯಮಗಳಲ್ಲಿ ಅವರು ಹೇಗೆ ಅಸ್ತಿತ್ವ ಉಳಿಸಿಕೊಂಡಿರುವ ಕುರಿತಾಗಿದೆ. ಸಾಕ್ಷ್ಯಚಿತ್ರವು ಕಳೆದ ವರ್ಷ ನವೆಂಬರ್ 18 ರಂದು ಬಿಡುಗಡೆಗೊಂಡಿತ್ತು. ಅದರಲ್ಲಿ ನಯನತಾರಾ ಅವರು ಧನುಷ್ ನಿರ್ಮಾಣದ ಸಿನಿಮಾವೊಂದರ ದೃಶ್ಯವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದರು ಎಂಬುದು ವಿವಾದಕ್ಕೆ ಮೂಲ ಕಾರಣ.
ನಟ-ನಿರ್ಮಾಪಕ ಧನುಷ್ ಕಳೆದ ವರ್ಷ ನವೆಂಬರ್ನಲ್ಲಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಮತ್ತು ಅವರ ನಿರ್ಮಾಣ ಸಂಸ್ಥೆ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕೃತಿ ಸ್ವಾಮ್ಯದ ಉಲ್ಲಂಘನೆ ಆರೋಪ ಹೊರಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ದೂರು ದಾಖಲು
ಸಾಕ್ಷ್ಯಚಿತ್ರದಲ್ಲಿ ನಯನತಾರಾ ಮತ್ತು ಇತರರು "ನಾನುಮ್ ರೌಡಿ ಧಾನ್" ಚಿತ್ರಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳನ್ನು ಬಳಸಿದ್ದಾರೆ ಎಂದು ಧನುಷ್ ನೀಡಿದ ದೂರಿನಲ್ಲಿ ಆರೋಪಿಸಲಾಗಿತ್ತು .
ಧನುಷ್ ಅವರ ವಂಡರ್ಬರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್, ಅನುಮತಿ ಇಲ್ಲದೇ ದೃಶ್ಯಗಳನ್ನು ಬಳಸಿದೆ ಎಂದು ಮುಂಬೈ ಮೂಲದ ಲಾಸ್ ಗಾಟೋಸ್ ಪ್ರೊಡಕ್ಷನ್ ಸರ್ವೀಸಸ್ ಇಂಡಿಯಾ ಎಲ್ಎಲ್ಪಿ ವಿರುದ್ಧ ತಮಿಳುನಾಡಿನಲ್ಲಿ ಮೊಕದ್ದಮೆ ಹೂಡಲು ಹೈಕೋರ್ಟ್ನಿಂದ ಅನುಮತಿ ಕೋರಿತ್ತು. .
ನಯನತಾರಾ ಸಾಕ್ಷ್ಯಚಿತ್ರದಲ್ಲಿ ಬಳಿಸಿದ ದೃಶ್ಯಗಳನ್ನು 24 ಗಂಟೆಗಳಲ್ಲಿ ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಧನುಷ್ ಎಚ್ಚರಿಕೆ ಕೊಟ್ಟಿದ್ದರು. ತಪ್ಪಿದರೆ ನಯನತಾರಾ ಮತ್ತು ನೆಟ್ಫ್ಲಿಕ್ಸ್ ಇಂಡಿಯಾ ವಿರುದ್ಧ 10 ಕೋಟಿ ರೂ.ಗಳ ಪರಿಹಾರ ಕೋರುವುದಾಗಿ ಧನುಷ್ ವಕೀಲರು ಹೇಳಿದ್ದರು.
ತಿರುಗೇಟು ನೀಡಿದ್ದ ನಯನತಾರಾ
ಕೆಲವು ಸೆಕೆಂಡುಗಳ ಕಾಲ ತುಣುಕನ್ನು ಬಳಸಿದ್ದಕ್ಕಾಗಿ ಧನುಷ್ ತನ್ನಿಂದ 10 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದಕ್ಕೆ ನಯನತಾರಾ ಕೋಪಗೊಂಡಿದ್ದರು. ಇದು ಕನಿಷ್ಠ ಮಟ್ಟದ ಬುದ್ಧಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
"ಇದು ನಿಮ್ಮಿಂದ ತೋರಿಸಬಹುದಾದ ಅತ್ಯಂತ ಕಳಪೆ ಮಟ್ಟದ ನಡವಳಿಕೆ. ಇದು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಮುಗ್ಧ ಅಭಿಮಾನಿಗಳ ಮುಂದೆ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಅರ್ಧದಷ್ಟು ಒಳ್ಳೆಯ ವ್ಯಕ್ತಿ ನೀವಲ್ಲ. ನೀವು ಹೇಳಿದಂತೆ ಮಾಡುವ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.
ಸಾಕ್ಷ್ಯಚಿತ್ರಕ್ಕಾಗಿ ತಮ್ಮ ಚಿತ್ರಗಳ ತುಣುಕನ್ನು ಬಳಸಲು ಅವಕಾಶ ನೀಡಿದ ಶಾರುಖ್ ಖಾನ್, ಚಿರಂಜೀವಿ, ರಾಮ್ ಚರಣ್ ಮತ್ತು ಇತರ ನಿರ್ಮಾಪಕರಿಗೆ ನಯನತಾರಾ ಧನ್ಯವಾದ ಅರ್ಪಿಸಿದ್ದರು.