ಕನ್ನಡದ ನಟರ ಪೈಕಿ ಪಂಚಭಾಷಾ ನಟರಾಗಿ ಗುರುತಿಸಿಕೊಂಡವರು ವಿರಳ. ಕನ್ನಡವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ನಟ ಕಿಶೋರ್ ಅವರು ಇದೀಗ ಅಂತಹ ಅಪರೂಪದ ನಟರ ಸಾಲಿಗೆ ಸೇರಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ‘ಸಿಕಂದರ್’ ಚಿತ್ರದಲ್ಲಿ ಕಿಶೋರ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಪಂಚಭಾಷಾ ನಟ ಎಂಬ ಸ್ಥಾನಕ್ಕೇರಿದ್ದಾರೆ.
ಕಿಶೋರ್ ಅವರಿಗೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಕನ್ನಡ ಚಿತ್ರರಂಗಕ್ಕೆ ‘ಕಂಠಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, ಆ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದುಕೊಂಡರು. ಅದಾದ ಕೆಲವೇ ವರ್ಷಗಳಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿದರು. ‘ದಿ ಫ್ಯಾಮಿಲಿ ಮ್ಯಾನ್’, ‘ಶೀ’ ಮುಂತಾದ ಹಿಂದಿ ವೆಬ್‍ಸೀರೀಸ್‍ಗಳಲ್ಲಿ ಅವರು ನಟಿಸಿದರೂ, ಯಾವುದೇ ಹಿಂದಿ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ‘ಸಿಕಂದರ್’ ಚಿತ್ರದ ಮೂಲಕ ಅದೂ ಸಾಧ್ಯವಾಗಿದೆ.
ಈ ಚಿತ್ರದಲ್ಲಿ ಕಿಶೋರ್, ಪ್ರಕಾಶ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರವಂತೆ. ಚಿಕ್ಕ ಪಾತ್ರವಾದರೂ ಸಲ್ಮಾನ್ ಖಾನ್, ಸತ್ಯರಾಜ್ ಮುಂತಾದವರ ಜೊತೆಗೆ ಕಿಶೋರ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ‘ಸಿಕಂದರ್’ನಲ್ಲಿ ಕಿಶೋರ್ ಮಾತ್ರವಲ್ಲ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಹಿಂದಿ ಚಿತ್ರವೊಂದರಲ್ಲಿ ಕನ್ನಡದ ಇಬ್ಬರು ಜನಪ್ರಿಯ ಕಲಾವಿದರು ನಟಿಸಿರುವುದು ವಿಶೇಷ.
‘ಸಿಕಂದರ್’ ಅಲ್ಲದೆ ನವಾಜುದ್ದೀನ್ ಸಿದ್ದೀಕಿ ಅಭಿನಯದ ಹೊಸ ಚಿತ್ರದಲ್ಲಿ ಮತ್ತು ‘ರೆಡ್ ಕಾಲರ್’ ಎಂಬ ಇನ್ನೊಂದು ಚಿತ್ರದಲ್ಲೂ ಕಿಶೋರ್ ನಟಿಸಿದ್ದಾರೆ.
‘ಸಿಕಂದರ್’ ಚಿತ್ರವನ್ನು ಸಾಜಿದ್ ನಡಿಯಾಡ್ವಾಲ ನಿರ್ಮಾಣ ಮಾಡಿದ್ದು, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಜೊತೆಗೆ ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಷಿ, ಪ್ರತೀಕ್ ಬಬ್ಬರ್ ಮುಂತಾದವರು ನಟಿಸಿದ್ದಾರೆ. ತಮಿಳಿನ ಜನಪ್ರಿಯ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದು, ಚಿತ್ರವು ಮಾರ್ಚ್ 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.