ಬಿಲ್ಲ ರಂಗ ಭಾಷ’ಗೂ ಮೊದಲೇ ಬಿಡುಗಡೆ ಆಗಲಿದೆ ‘ಮ್ಯಾಕ್ಸ್ 2’

ಈ ಚಿತ್ರದಲ್ಲಿ ಸುದೀಪ್‍ ಪಾತ್ರ ಮುಂದುವರೆಯಲಿದ್ದು, ಮಿಕ್ಕಂತೆ ಸಾಕಷ್ಟು ಹೊಸ ಪಾತ್ರಗಳು ಇರಲಿವೆ ಎಂದು ಹೇಳಲಾಗುತ್ತಿದೆ.;

Update: 2025-05-11 04:04 GMT

ಕಳೆದ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರ ಸಹ ಒಂದು. ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾದ ಈ ಚಿತ್ರವು ಒಂದು ವಾರದಲ್ಲಿ 32.35 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗಿತ್ತು. ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದರ ಮುಂದುವರೆದ ಭಾಗ ಬಿಡುಗಡೆಯಾಗಲಿದೆ ಎಂಬ ವಿಷಯ ಕೇಳಿ ಬಂದಿತ್ತು.

ಅದೀಗ ನಿಜವಾಗಿದ್ದು, ಸದ್ಯದಲ್ಲೇ ‘ಮ್ಯಾಕ್ಸ್ 2’ ಪ್ರಾರಂಭವಾಗಲಿದ್ದು, ಆ ಚಿತ್ರ ಈಗಾಗಲೇಏ ಪ್ರಾರಂಭವಾಗಿರುವ ‘ಬಿಲ್ಲ ರಂಗ ಭಾಷ’ ಚಿತ್ರಕ್ಕೂ ಮೊದಲೇ ಬಿಡುಗಡೆಯಾಗಲಿದೆಯಂತೆ.

‘ಮ್ಯಾಕ್ಸ್’ ಚಿತ್ರವನ್ನು ವಿಜಯ್‍ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಕಲೈಪುಲಿ ಎಸ್‍. ಧಾನು ಮತ್ತು ಸುದೀಪ್‍ ಜೊತೆಯಾಗಿ ನಿರ್ಮಿಸಿದ್ದರು. ‘ಮ್ಯಾಕ್ಸ್ 2’ ಚಿತ್ರವನ್ನು ವಿಜಯ್‍ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ನಿರ್ಮಾಪಕರು ಯಾರು ಎಂಬ ವಿಷಯ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಈ ಚಿತ್ರದಲ್ಲಿ ಸುದೀಪ್‍ ತಮ್ಮ ಮಹಾಕ್ಷಯ್‍ ಪಾತ್ರವನ್ನು ಮುಂದುವರೆಸಲಿದ್ದಾರೆ.


‘ಮ್ಯಾಕ್ಸ್ 2’ ಚಿತ್ರವು ‘ಮ್ಯಾಕ್ಸ್’ ಚಿತ್ರದ ಮುಂದುವರೆದ ಭಾಗ ಅಲ್ಲ. ಬದಲಿಗೆ ಅದರ ಹಿಂದಿನ ಭಾಗವಂತೆ. ಇದು ‘ಮ್ಯಾಕ್ಸ್’ನ ಪ್ರೀಕ್ವೆಲ್‍ ಆಗಿದ್ದು, ಮೊದಲ ಚಿತ್ರದಲ್ಲಿ ಸುದೀಪ್‍ ಸಸ್ಪೆಂಡ್‍ ಆಗಿ ನಂತರ ಡ್ಯೂಟಿಗೆ ಮರಳಿರುತ್ತಾರೆ. ಅವರೇಕೆ ಸಸ್ಪೆಂಡ್‍ ಆಗಿರುತ್ತಾರೆ ಮತ್ತು ಅದರ ಹಿಂದೆ ಏನೆಲ್ಲಾ ಘಟನೆಗಳು ನಡೆದಿರುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ಈ ಚಿತ್ರದಲ್ಲಿ ಸುದೀಪ್‍ ಪಾತ್ರ ಮುಂದುವರೆಯಲಿದ್ದು, ಮಿಕ್ಕಂತೆ ಸಾಕಷ್ಟು ಹೊಸ ಪಾತ್ರಗಳು ಇರಲಿವೆ ಎಂದು ಹೇಳಲಾಗುತ್ತಿದೆ.

‘ಬಿಲ್ಲ ರಂಗ ಭಾಷ’ ಚಿತ್ರದ ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದ್ದು, ಅದರ ಕಥೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಆ ಚಿತ್ರಕ್ಕೆ ಈಗಾಗಲೇ 10 ದಿನಗಳ ಕಾಲ ಕಂಠೀರವ ಸ್ಟುಡಿಯೋದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದ್ದು, ನೈಸ್‍ ರಸ್ತೆಯ ಬಳಿ ಚಿತ್ರಕ್ಕೆಂದ ದೊಡ್ಡ ಸೆಟ್‍ ನಿರ್ಮಿಸಲಾಗುತ್ತಿದೆಯಂತೆ. ಇದೊಂದು ದೊಡ್ಡ ಚಿತ್ರವಾಗಿರುವುದರಿಂದ ಮುಗಿಯುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ, ಮಧ್ಯೆ ಗ್ಯಾಪ್‍ನಲ್ಲಿ ‘ಮ್ಯಾಕ್ಸ್ 2’ ಚಿತ್ರವನ್ನು ಮುಗಿಸುವುದಕ್ಕೆ ಸುದೀಪ್‍ ಯೋಚಿಸುತ್ತಿದ್ದಾರೆ. ಈ ಎರಡೂ ಚಿತ್ರಗಳಿಗೆ ಒಂದೇ ಗೆಟಪ್‍ ಇರಲಿದೆಯಂತೆ.

‘ಬಿಲ್ಲ ರಂಗ ಭಾಷಾ’ ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲಿ ‘ಹನುಮ್ಯಾನ್’ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್‍ ರೆಡ್ಡಿ ಮತ್ತು ಚೈತನ್ಯ ರೆಡ್ಡಿ, ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್‍ ಭಂಡಾರಿ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುವ ಸಂಭವವಿದೆ.

Similar News