'ಕಾಂತಾರ ಚಾಪ್ಟರ್ 1' ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಹಾಡು 'ಬ್ರಹ್ಮಕಲಶ' ಇಂದು ರಾತ್ರಿ ಬಿಡುಗಡೆ
ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ನಲ್ಲಿ ಅಜನೀಶ್ ಅವರ ಹಿನ್ನೆಲೆ ಸಂಗೀತಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ ಚಾಪ್ಟರ್ 1' ಚಿತ್ರತಂಡವು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಚಿತ್ರದ ಮೊದಲ ಹಾಡು "ಬ್ರಹ್ಮಕಲಶ" ಇಂದು (ಸೆಪ್ಟೆಂಬರ್ 27) ರಾತ್ರಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, "ಈಶ್ವರನಿಗೆ ಒಂದು ಓಡ್ (ಗೌರವ)" ಎಂದು ಬರೆದುಕೊಂಡಿದ್ದು, "ಬ್ರಹ್ಮಕಲಶ" ಹಾಡಿನ ಆಡಿಯೋವನ್ನು ಇಂದು ರಾತ್ರಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ನಲ್ಲಿ ಅಜನೀಶ್ ಅವರ ಹಿನ್ನೆಲೆ ಸಂಗೀತಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, 'ಬ್ರಹ್ಮಕಲಶ' ಹಾಡಿನ ಬಗ್ಗೆಯೂ ನಿರೀಕ್ಷೆಗಳು ಗರಿಗೆದರಿವೆ.
ಅಕ್ಟೋಬರ್ 2ರಂದು ಚಿತ್ರ ತೆರೆಗೆ
'ಕಾಂತಾರ: ಚಾಪ್ಟರ್ 1' ಚಿತ್ರವು 2022ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್ ಆಗಿದೆ. ಈ ಚಿತ್ರ ಅಕ್ಟೋಬರ್ 2, 2025ರಂದು ಗಾಂಧಿ ಜಯಂತಿಯ ಪ್ರಯುಕ್ತ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ಮತ್ತು ಖ್ಯಾತ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್, ದೃಶ್ಯ ವೈಭವ, ಅದ್ಧೂರಿತನ ಮತ್ತು ನಿಗೂಢ ಕಥಾಹಂದರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.