ಕನ್ನಡ ಚಿತ್ರರಂಗಕ್ಕೆ ಹೊಸನೀರು : ʼಕೋಟಿʼ ಮೂಲಕ ಪರಮ್ ಚಿತ್ರರಂಗಕ್ಕೆ ಎಂಟ್ರಿ
ಕನ್ನಡ ಕಿರುತೆರೆಯಲ್ಲಿ ಹೆಸರಾಗಿದ್ದ ಪರಮ್ ಅವರು ಈ ಚಿತ್ರದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.;
ಡಾಲಿ ಧನಂಜಯ ಅಭಿನಯಿಸಿರುವ, ಪರಮ್ ನಿರ್ದೇಶನದ ಚೊಚ್ಚಲ ಸಿನಿಮಾ ʼಕೋಟಿʼ ಚಿತ್ರೀಕರಣ ಭರದಿಂದ ಸಾಗಿದೆ. ಇದುವರೆಗೆ ಸುದ್ದಿಮಾಡದೇ ಮೌನವಾಗಿ ಸಿದ್ಧವಾಗುತ್ತಿದ್ದ ʼಕೋಟಿʼ ಇದೀಗ ಸಾರ್ವಜನಿಕವಾಗಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಯುವ ನಿರ್ದೇಶಕನೊಬ್ಬನ ಪ್ರವೇಶ ಸಿಕ್ಕಂತಾಗಿದೆ.
ಕನ್ನಡ ಕಿರುತೆರೆಯಲ್ಲಿ ಹೆಸರಾಗಿದ್ದ ಪರಮ್ ಅವರು ಈ ಚಿತ್ರದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಪರಮ್ ಈಗ ಚಿತ್ರ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಿರ್ದೇಶಕರು ʼಕೋಟಿʼ ಯೊಂದಿಗೆ ಕನ್ನಡ ನೆಲದ ಕಥಾವಸ್ತುವೊಂದನ್ನು ಕನ್ನಡಿಗರಿಗೆ ನೀಡಲು ಸಿದ್ಧವಾಗಿದ್ದಾರೆ.
ಪೋಸ್ಟರ್ ಬಿಡುಗಡೆ
ಯುಗಾದಿ ಹಬ್ಬದ ಶುಭ ದಿನದಂದು ಟೈಟಲ್ ಜೊತೆಗೆ ಕುತೂಹಲಕಾರಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಧನಂಜಯ್ ಅವರ ಮುಖವನ್ನು ಭಾಗಶಃ 500 ರೂ. ನೋಟುಗಳಿಂದ ಮುಚ್ಚಿದ್ದು, ಪೋಸ್ಟರ್ ಝಲಕ್ ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ. ಡಾಲಿ ಧನಂಜಯ ಅವರ ಆಕರ್ಷಕ ಕಣ್ಣುಗಳು ಅವರ ಪಾತ್ರದ ತೀವ್ರತೆ ಮತ್ತು ಆಳವನ್ನು ಸೂಚಿಸುತ್ತದೆ.
ಮುಂದಿನ ಸಿನಿಮಾದ ಬಗ್ಗೆ ಸುಳಿವು ನೀಡಿದ್ದ ಧನಂಜಯ್
'ಕೋಟಿ' ಚಿತ್ರವು ಲೆಕ್ಕವಿಲ್ಲದಷ್ಟು ಕನಸುಗಳನ್ನು ಹೊಂದಿರುವ ಸಾಮಾನ್ಯ ವ್ಯಕ್ತಿಯ ಸುತ್ತ ಸುತ್ತುತ್ತದೆ ಎಂದು ಪೋಸ್ಟರ್ ಸೂಚಿಸುತ್ತದೆ. ಹೊಸ ವರ್ಷಕ್ಕೆ, ನಿಮ್ಮನ್ನು ಪ್ರತಿನಿಧಿಸುವ ಹೊಸ ಪಾತ್ರವೊಂದನ್ನು, ಹೊಸ ಸಿನಿಮಾವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಎಂದು ಧನಂಜಯ್ ಈಗಾಗಲೇ ಸುಳಿವು ನೀಡಿದ್ದಾರೆ. ಕಳೆದ ಬಾರಿ ʼಹೊಯ್ಸಳʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಧನಂಜಯ್, ಹಲವು ತಿಂಗಳ ಬಳಿಕ ಪರಮ್ ನಿರ್ದೇಶನದ ʼಕೋಟಿʼ ಸಿನಿಮಾದೊಂದಿಗೆ ಮರಳುತ್ತಿದ್ದಾರೆ.
ಏ.13ರಂದು ಚಿತ್ರದ ಟೀಸರ್ ಬಿಡುಗಡೆ
ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ದೊಡ್ಡ ಪರದೆ ಮೇಲೆ ಕಥೆಗೆ ಜೀವ ತುಂಬುವ ಮಹತ್ವಾಕಾಂಕ್ಷೆಯನ್ನು ಪರಮ್ ಪೂರೈಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಾಸುಕಿ ವೈಭವ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನೋಬಿನ್ ಪಾಲ್ ಅವರ ಹಿನ್ನೆಲೆ ಸಂಗೀತ ಮತ್ತು ಅರುಣ್ ಬ್ರಹ್ಮ ಅವರ ಛಾಯಾಗ್ರಹಣವಿದೆ. ಏ.13ರಂದು ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ.
ನಿರ್ದೇಶನಕ್ಕೆ ಕಾಲಿಟ್ಟ ಪರಮ್ ಹೇಳಿದ್ದೇನು?
ಈಗ ʼ ಪರಮ್ʼ ಎಂದೇ ದೃಶ್ಯಮಾಧ್ಯಮದಲ್ಲಿ ಗುರುತಿಸಿಕೊಂಡಿರುವ ಪರಮೇಶ್ವರ ಗುಂಡ್ಕಲ್ ಅವರ ಚಿತ್ರರಂಗದೊಂದಿಗಿನ ಸಂಬಂಧ ಸುಮಾರು ಇಪ್ಪತ್ನಾಲ್ಕು ವರ್ಷಗಳಷ್ಟು ಹಳೆಯದು. ಕಥೆಗಾರರಾಗಿ, ಸಿನಿಮಾ ಪತ್ರಿಕೋದ್ಯಮದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದ ಪರಮ್ ಗೆ ಚಿತ್ರ ನಿರ್ದೇಶಕರಾಗುವ ಬಯಕೆ ಕೂಡ ಅಷ್ಟೇ ಹಳೆಯದು. ತಾವು ಚಿತ್ರ ನಿರ್ದೇಶನಕ್ಕೆ ಕಾಲಿಟ್ಟ ಬಗ್ಗೆ ಪರಮ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದು ಹೀಗೆ;
ಊರಲ್ಲಿರೋ ನಮ್ಮ ಮನೇಲಿ ಒಂದು ನಾಲ್ಕು ಬ್ಯಾಂಡಿನ ರೇಡಿಯೋ ಇತ್ತು. ಬೆಳಿಗ್ಗೆ ಆನ್ ಆಗುತ್ತಿದ್ದ ರೇಡಿಯೋ ಸುಮ್ಮನೇ ಇದ್ದಿದ್ದು ಕಡಿಮೆ. ಇಡೀ ದಿನ ನಮ್ಮ ಜೊತೆಗೇ ಇರಬೇಕು. ಗದ್ದೆಯಲ್ಲಿ ಕೆಲಸ ಮಾಡುವಾಗ ಬದುವಿನ ಮೇಲೆ ಕುಳಿತು ಅದೂ ಕೆಲಸ ಮಾಡುತ್ತಿತ್ತು. ತೋಟದಲ್ಲಿದ್ದರೆ ತೋಟದಲ್ಲೇ ನಮಗೆ ದೂರದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ತೆಂಡೂಲ್ಕರ್ ಎಷ್ಟು ರನ್ನಿಗೆ ಔಟಾದ ಎನ್ನುವುದನ್ನು ಹೇಳುತ್ತಿತ್ತು. ಮನೆ ಮುಂದಿನ ಅಂಗಳದಲ್ಲಿ ಅಡಿಕೆ ಸುಲಿಯುತ್ತ ಕುಳಿತಾಗ ಪಕ್ಕದಲ್ಲಿ ಹಾಸಿದ ಗೋಣಿ ಚೀಲದ ಮೇಲೆ ಕುಳಿತು ನಮಗೆ ಜಗತ್ತು ತೋರಿಸುತ್ತಿತ್ತು.
ಶುಭಾ ದಾಸ್, ರಂಗರಾವ್ ಓದುತ್ತಿದ್ದ ಕನ್ನಡ ವಾರ್ತೆಗಳು, ಜೋಹಾನ್ಸ್‌ಬರ್ಗ್ ನಿಂದ ಹರ್ಷ ಭೋಗ್ಲೆಯ ಇಂಗ್ಲಿಷ್ ಕಾಮೆಂಟರಿ, ಹರಿ ಸಂಧು ಓದುತ್ತಿದ್ದ ಹಿಂದಿ ವಾರ್ತೆ, ಕಾನ್ಪುರದಿಂದ ಇಫ್ತಿಕಾರ್ ಅಹ್ಮದ್ ಅವರ ಹಿಂದಿ ಕಾಮೆಂಟರಿ, ಪಣಜಿಯಲ್ಲಿ ನಡೆಯುತ್ತಿದ್ದ ರಣಜಿ ಪಂದ್ಯದ ಕನ್ನಡ ಕಾಮೆಂಟರಿ, ಅಲಿಂದೋ ಚಕ್ರವರ್ತಿ ರಾತ್ರಿ ಒಂಬತ್ತು ಗಂಟೆಗೆ ಇಂಗ್ಲಿಷಿನಲ್ಲಿ ಹೇಳುತ್ತಿದ್ದ ಸುದ್ದಿಗಳು, ನಡುವೆ ಚಿತ್ರಗೀತೆಗಳು, ಭೀಮಸೇನ್ ಜೋಶಿಯ ಹಿಂದೂಸ್ತಾನಿ ಹೀಗೆ ಆಲ್ ಇಂಡಿಯಾ ರೇಡಿಯೋಗೆ ನಾನು ಚಿರರುಣಿ. ಟೀವಿ, ಫೋನು ಇಲ್ಲದ, ವಾರಗಟ್ಟಲೇ ಕರೆಂಟಿಲ್ಲದೇ ಇರುತ್ತಿದ್ದ ನಮ್ಮ ಮನೆಯಲ್ಲಿ ಈ ರೇಡಿಯೋ ಒಂದು ಇರದೇ ಇದ್ದರೆ ನಾನು ಎಲ್ಲಿರುತ್ತಿದ್ದೆ ಎಂದು ಒಮ್ಮೊಮ್ಮೆ ಯೋಚನೆಯಾಗುತ್ತದೆ.
ಬರೆಯುವ ಎಲ್ಲಾ ಕತೆಗಳಲ್ಲೂ ಹೇಗೋ ಈ ರೇಡಿಯೊ ಒಂದು ಪಾತ್ರ ಗಿಟ್ಟಿಸಿಕೊಳ್ಳುತ್ತದೆ. ಕೋಟಿ ಸಿನಿಮಾದಲ್ಲೂ ಈ ರೇಡಿಯೋ ಒಂದು ಪಾತ್ರ ಮಾಡಿದೆ! ಹಾರೈಕೆ ಇರಲಿ.