ಏನಿದು 'ಜಂಗಲ್ ಮಂಗಲ್'? ನೈಜ ಪಾತ್ರಗಳನ್ನು ಆಧರಿಸಿದ ಕಾಲ್ಪನಿಕ ಕಥೆ!

ಖ್ಯಾತ ನಿರ್ದೇಶಕರಿಂದ ಮೆಚ್ಚುಗೆ ಗಳಿಸಿರುವ `ಜಂಗಲ್ ಮಂಗಲ್' ಚಿತ್ರ ಇದೇ ಜುಲೈ 4 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಲೈಟ್ ಹಾರ್ಟೆಡ್ ಥ್ರಿಲ್ಲರ್ ಶೈಲಿಯಲ್ಲಿ ನಿರ್ದೇಶಕ ರಕ್ಷಿತ್ ಕುಮಾರ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.;

Update: 2025-07-02 06:25 GMT

ಜಂಗಲ್‌ ಮಂಗಲ್‌ ಸಿನಿಮಾ ಜುಲೈ 4 ರಂದು ಬಿಡುಗಡೆಯಾಗಲಿದೆ. 

ಖ್ಯಾತ ನಿರ್ದೇಶಕರಿಂದ ಮೆಚ್ಚುಗೆ ಗಳಿಸಿರುವ 'ಜಂಗಲ್ ಮಂಗಲ್' ಚಿತ್ರ ಇದೇ ಜುಲೈ 4 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಂಟೆಂಟ್‌ಗಳಿಗೆ ಸದಾ ಬೆಂಬಲ ಸಿಗುತ್ತದೆ ಎಂಬುದಕ್ಕೆ ಇದೊಂದು ಮತ್ತೊಂದು ಉದಾಹರಣೆಯಾಗಿದೆ. ನಿರ್ದೇಶಕ ರಕ್ಷಿತ್ ಕುಮಾರ್ ಅವರು ಈ ಸಿನಿಮಾವನ್ನು ಲೈಟ್ ಹಾರ್ಟೆಡ್ ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

'ಜಂಗಲ್ ಮಂಗಲ್' ಒಂದು ಯುವ ಜೋಡಿಯ ಸುತ್ತ ಒಂದು ದಿನದ ಅವಧಿಯಲ್ಲಿ ನಡೆಯುವ ಲೈಟ್ ಹಾರ್ಟೆಡ್ ಥ್ರಿಲ್ಲರ್ ಚಿತ್ರವಾಗಿದೆ. ಯಾವುದೋ ಒಂದು ಕಾರಣಕ್ಕೆ ಕಾಡಿಗೆ ಹೋಗುವ ಜೋಡಿಗೆ ಎದುರಾಗುವ ಸಮಸ್ಯೆಗಳೇ ಈ ಚಿತ್ರದ ಹೈಲೈಟ್. ನಿರ್ದೇಶಕ ರಕ್ಷಿತ್ ಕುಮಾರ್ ಅವರೇ ಹೇಳುವಂತೆ, ಇದು ನೈಜ ಪಾತ್ರಗಳನ್ನು ಆಧರಿಸಿ ಜೋಡಿಸಿದ ಕಾಲ್ಪನಿಕ ಕಥೆ.

ನಿರ್ದೇಶಕರ ಪ್ರಕಾರ, ದುಷ್ಟಶಕ್ತಿಯೊಂದನ್ನು ನಾಶ ಮಾಡುವ ಶಕ್ತಿ ಪ್ರಕೃತಿಗಿದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. "ಇದರಲ್ಲಿ ಬರುವ ಪಾತ್ರಗಳು ಮತ್ತು ಘಟನೆಗಳು ನೈಜ. ಅದನ್ನೆಲ್ಲ ಒಂದೆಡೆ ಸೇರಿಸಿ ಮಾಡಿದ ಕಥೆ ಕಾಲ್ಪನಿಕ. ತೆರೆ ಮೇಲೆ ಕಾಣುವ ಪಾತ್ರಗಳು ಕರಾವಳಿ ಭಾಗಕ್ಕೆ ಹತ್ತಿರವಾದವು. ಎಷ್ಟೋ ಯುವ ಜೋಡಿಗಳು ಕಾಡಿನಲ್ಲಿ ಹಳ್ಳಿಗರ ಕೈಗೆ ಸಿಕ್ಕಿಬಿದ್ದ ಉದಾಹರಣೆಗಳಿವೆ. ಉತ್ತರ ಭಾರತದ ಕಡೆಗೆ ಹೀಗೆ ಸಿಕ್ಕವರನ್ನು "ಜಂಗಲ್ ಮೇ ಮಂಗಲ್" ಎಂದು ಕರೆಯುತ್ತಾರೆ" ಎಂದು ರಕ್ಷಿತ್ ಕುಮಾರ್ ವಿವರಿಸಿದ್ದಾರೆ.

ಎಂಟು ವರ್ಷಗಳ ಬಣ್ಣದ ಲೋಕದ ಅನುಭವದ ನಂತರ ಚೊಚ್ಚಲ ನಿರ್ದೇಶನ!

ನಿರ್ದೇಶಕ ರಕ್ಷಿತ್ ಕುಮಾರ್ ಅವರು ಸಿನಿಮಾದಲ್ಲಿ ನಿರ್ದೇಶಕನಾಗಬೇಕು ಎಂಬ ಉದ್ದೇಶದಿಂದ ಸುಚಿತ್ರಾ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆ ಕಲಿತು, ರಂಗಭೂಮಿಯಲ್ಲಿ ನಟನಾಗಿ ಹಾಗೂ ಸೆಟ್‌ ಪ್ರಾಪರ್ಟಿಯಲ್ಲಿ ಕೆಲಸ ಮಾಡಿದ್ದಾರೆ. ನಂತರ ಸೀರಿಯಲ್‌ಗೆ ಬಂದು, ಅಲ್ಲಿಂದ ಸಿನಿಮಾಕ್ಕೆ ಬಂದು ಎಂಟು ವರ್ಷಗಳಾಗಿವೆ. ಈ ಅವಧಿಯಲ್ಲಿ ಕೆಲವು ತುಳು ಮತ್ತು ಕನ್ನಡ ಸಿನಿಮಾಗಳಿಗೆ ಅಸಿಸ್ಟಂಟ್‌ ನಿರ್ದೇಶಕರಾಗಿ ಹಾಗೂ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. 'ಜಂಗಲ್ ಮಂಗಲ್' ಅವರ ಮೊದಲ ಸ್ವತಂತ್ರ ನಿರ್ದೇಶನದ ಸಿನಿಮಾ ಆಗಿದೆ.

ಕಥೆಗೆ ತಕ್ಕ ಕಲಾವಿದರ ಆಯ್ಕೆ: ಯಶ್ ಶೆಟ್ಟಿ, ಉಗ್ರಂ ಮಂಜು ಪ್ರಮುಖ ಪಾತ್ರಗಳಲ್ಲಿ

ನಿರ್ದೇಶಕ ರಕ್ಷಿತ್ ಕುಮಾರ್ ಅವರು ಕಥೆ ಬರೆದ ನಂತರವೇ ಕಲಾವಿದರನ್ನು ಆಯ್ಕೆ ಮಾಡಿದ್ದಾರೆ. "ಕರಾವಳಿ ಸುತ್ತಮುತ್ತಲಿನ ಕಲಾವಿದರನ್ನೇ ನಾವಿಲ್ಲಿ ಬಳಸಿಕೊಂಡಿದ್ದೇವೆ. ನನ್ನ ತಲೆಯಲ್ಲಿ ನಾನೇ ನೋಡಿದ ಒಂದಷ್ಟು ವ್ಯಕ್ತಿಗಳು, ವ್ಯಕ್ತಿತ್ವಗಳಿವೆ. ಅಂಥ ಪಾತ್ರಗಳನ್ನೇ ಈ ಸಿನಿಮಾದಲ್ಲಿ ಬಳಸಿಕೊಂಡಿದ್ದೇನೆ. ಯಶ್‌ ಶೆಟ್ಟಿ ನನಗೆ 10 ವರ್ಷಗಳಿಂದ ಗೊತ್ತು. ನಾಯಕನ ಪಾತ್ರಕ್ಕೆ ಅವರೇ ನನ್ನ ಮೊದಲ ಆಯ್ಕೆ ಆಗಿದ್ದರು. ಬಾಬು ಪಾತ್ರಕ್ಕೆ ಉಗ್ರಂ ಮಂಜು ಅವರೇ ಸೂಕ್ತ ಅನಿಸಿತು. ನಾಯಕಿ ಪಾತ್ರಕ್ಕೆ ಬೆಂಗಳೂರು ಮೂಲದ ನಟಿಯನ್ನು ಆಯ್ಕೆ ಮಾಡಿ ಅವರಿಂದ ನಟನೆ ತೆಗೆಸಿದ್ದೇವೆ" ಎಂದು ರಕ್ಷಿತ್‌ ಹೇಳಿದ್ದಾರೆ.

 ಸುಳ್ಯದ ಮಡಪ್ಪಾಡಿ ಗ್ರಾಮದಲ್ಲಿ ಚಿತ್ರೀಕರಣ: ಹಳ್ಳಿಗರಿಂದ ಸಂಪೂರ್ಣ ಸಹಕಾರ!

ಚಿತ್ರದ ಇಡೀ ಕಥೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ನಡೆಯುತ್ತದೆ. ಇದು ತುಂಬ ರಿಮೋಟ್‌ ಏರಿಯಾ ಆಗಿದ್ದು, ಬೈಕ್ ಬಿಟ್ಟರೆ ಜೀಪ್ ಮಾತ್ರವೇ ಹೋಗುವಂತಹ ಪ್ರದೇಶ. ಅಲ್ಲಿ ಕೇವಲ 40 ಮನೆಗಳಿದ್ದು, ಹಳ್ಳಿಯಲ್ಲಿ ಸಿನಿಮಾದ ಶೂಟಿಂಗ್ ಆಗುತ್ತಿದೆ ಎಂಬ ಕಾರಣಕ್ಕೆ ಅಲ್ಲಿನ ಜೀಪ್ ಡ್ರೈವರ್‌ಗಳು ತಮ್ಮ ಉಚಿತ ಸಮಯದಲ್ಲಿ ತಂಡಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ.

ಸಿಂಪಲ್ ಸುನಿ ಅವರ ಸಹಕಾರ ದೊಡ್ಡದು: ಸುನಿ ಬ್ಯಾನರ್‌ನಲ್ಲಿ ಸಿನಿಮಾ!

'ಜಂಗಲ್ ಮಂಗಲ್' ಚಿತ್ರಕ್ಕೆ ಸಿಂಪಲ್ ಸುನಿ ಅವರ ಸಹಕಾರ ದೊಡ್ಡದಾಗಿದೆ. ಅವರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಲ್ಲದೆ, "ನಮ್ಮ ಕಡೆಯಿಂದ ಏನಾಗಬೇಕು" ಎಂದು ಕೇಳಿದ್ದಾರೆ. "ಅವರು ಪರಿಚಯಿಸಿದವರೆಲ್ಲ, ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ನಮ್ಮ ತಂಡವನ್ನೂ ಅವರೇ ಪ್ರಸೆಂಟ್‌ ಮಾಡಲಿ ಎನ್ನುತ್ತ, ನಿಮ್ಮ ಬ್ಯಾನರ್‌ನಲ್ಲಿಯೇ ನಮ್ಮ ಸಿನಿಮಾ ಬರಬೇಕೆಂದು ಕೇಳಿಕೊಂಡೆವು. ಅದಕ್ಕೆ ಅಷ್ಟೇ ಖುಷಿಯಿಂದ ಒಪ್ಪಿದ್ದಾರೆ" ಎಂದು ರಕ್ಷಿತ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

'ಜಂಗಲ್ ಮಂಗಲ್' ಜುಲೈ 4 ರಂದು ತೆರೆ ಕಾಣಲಿದ್ದು, ಭಿನ್ನ ಕಥಾವಸ್ತು ಮತ್ತು ಲೈಟ್ ಹಾರ್ಟೆಡ್ ಥ್ರಿಲ್ಲರ್ ಅನುಭವಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Tags:    

Similar News