ಇದು ರಾಗಿಣಿಯಿಂದ ಸ್ಫೂರ್ತಿ ಪಡೆದ ಕಥೆಯಾ? ಜುಲೈನಿಂದ ‘ಜಾವ’ ಪ್ರಾರಂಭ

ಇದು 80ರ ದಶಕದಲ್ಲಿ ನಡೆದ ಕಥೆಯಾದರೂ, ರಾಗಿಣಿ ಜೀವನಕ್ಕೆ ಸಾಕಷ್ಟು ಸ್ವಾಮ್ಯತೆ ಇದೆಯಂತೆ. ಅದೇ ಕಾರಣಕ್ಕೆ ನಿರ್ದೇಶಕರು ಕಥೆ ಹೇಳಿದಾಗ, ಇದು ತಮ್ಮ ಜೀವನದಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದು ಕಥೆ ಮಾಡಿದಿರಾ ಎಂದರಂತೆ.;

Update: 2025-05-11 04:12 GMT

ಸಿನಿಮಾ ಕ್ಷೇತ್ರದ ಕುರಿತು ಇದುವರೆಗೂ ಹಲವು ಚಿತ್ರಗಳಾಗಿವೆ. ಈಗ ಚಿತ್ರರಂಗದಲ್ಲೇ ನಡೆದ ಘಟನೆಯೊಂದನ್ನು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ದೇವ ಚಕ್ರವರ್ತಿ (ಚಕ್ರವರ್ತಿ ಚಂದ್ರಚೂಡ್‍). ಆದರೆ, ಈ ಘಟನೆ ಬಗ್ಗೆ ಚಿತ್ರರಂಗದವರಿಗೆ ಹೆಚ್ಚು ಗೊತ್ತಿಲ್ಲವಂತೆ. 80ರ ದಶಕದಲ್ಲಿ ನಡೆದ ಈ ಘಟನೆಯನ್ನು ಹೆಕ್ಕಿ ತೆಗೆದು, ಇದೀಗ ಅವರು ‘ಜಾವ’ ಎಂಬ ಚಿತ್ರ ಮಾಡತ್ತಿದ್ದಾರೆ.

ಈ ಹಿಂದೆ ‘ಬಿಚ್ಚುಗತ್ತಿ’, ‘ಹಿರಣ್ಯ’, ‘ಗಜರಾಮ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಾಜವರ್ಧನ್‍, ಒಂದು ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಬಾರ್ನ್ ಸ್ವಾಲೋ ಕಂಪನಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿರುವ ರಾಜವರ್ಧನ್‍, ಅದರಡಿ ‘ಜಾವಾ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ದೇವ ಚಕ್ರವರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ರಾಜವರ್ಧನ್‍ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಇದ್ದಾರೆ.

ಇದು 80ರ ದಶಕದಲ್ಲಿ ನಡೆದ ಕಥೆಯಾದರೂ, ರಾಗಿಣಿ ಜೀವನಕ್ಕೆ ಸಾಕಷ್ಟು ಸ್ವಾಮ್ಯತೆ ಇದೆಯಂತೆ. ಅದೇ ಕಾರಣಕ್ಕೆ ನಿರ್ದೇಶಕರು ಕಥೆ ಹೇಳಿದಾಗ, ಇದು ತಮ್ಮ ಜೀವನದಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದು ಕಥೆ ಮಾಡಿದಿರಾ ಎಂದರಂತೆ. ‘ಈ ಚಿತ್ರದ ನಾಯಕಿ ಪಾತ್ರಕ್ಕೆ ಯಾರು ಸೂಕ್ತ ಎಂದು ಯೋಚಿಸಿದಾಗ, ನೆನಪಿಗೆ ಬಂದವರು ರಾಗಿಣಿ. ಅವರು ಇಂಥಾ ಪಾತ್ರ ಮಾಡುತ್ತಾರಾ? ಎಂಬ ಗೊಂದಲವಿತ್ತು. ಅವರಿಗೆ ಕಥೆ ಹೇಳಿದಾಗ, ‘ನನ್ನಿಂದ ಸ್ಫೂರ್ತಿ ಪಡೆದು ಕಥೆ ಬರೆದಿದ್ದೀರಾ’ ಎಂದರು. ಚಿತ್ರರಂಗದಲ್ಲಿರುವ Male Chauvinism ಕುರಿತಾದ ಕಥೆ ಇದು. ಚಿತ್ರರಂಗದಲ್ಲಿ ನಡೆಯುವ ಹಳವಂಡದ ಕಥೆ. ಒಬ್ಬ ಸಾಮಾನ್ಯ ಯುವಕನ ದೃಷ್ಟಿಯಲ್ಲಿ ಹೇಳಲಾಗುತ್ತದೆ’ ಎಂದರು.


ಇದು ತಮಗಾದ ಅನುಭವ ಎಂದು ರಾಗಿಣಿ ಹೇಳಿಕೊಳ್ಳುವುದಿಲ್ಲವಾದರೂ, ‘ಕಳೆದ 15 ವರ್ಷಗಳಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದೇನೆ. ಎಲ್ಲಾ ಆಯಾಮಗಳನ್ನು ನೋಡಿದ್ದೇನೆ. ಈ ವರ್ಷ ನನ್ನ ಪಾಲಿಗೆ ವಿಶೇಷ ವರ್ಷ. ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಅದರಲ್ಲಿ ಇದೂ ಸಹ ಒಂದು. ಚಿತ್ರದಲ್ಲೊಂದು ಅದ್ಭುತವಾದ ಪಾತ್ರ ಸಿಕ್ಕಿದೆ’ ಎಂದರು.


ಈ ಕಥೆಯನ್ನು ಚಕ್ರವರ್ತಿ ಎರಡು ವರ್ಷಗಳ ಹಿಂದೆ ರಾಜವರ್ಧನ್‍ಗೆ ಹೇಳಿದ್ದರಂತೆ. ‘ಎರಡು ವರ್ಷಗಳ ಹಿಂದೆ ಚಕ್ರವರ್ತಿ ಈ ಕಾಡುವ ಕಥೆ ಹೇಳಿದ್ದರು. 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಒಂದು ಘಟನೆ ಆಧಾರಿಸಿ ಈ ಚಿತ್ರ ಮಾಡುತ್ತಿದ್ದೇವೆ. ಈ ಘಟನೆ ಬಗ್ಗೆ ಚಿತ್ರರಂಗದಲ್ಲೇ ಎಷ್ಟೋ ಜನರಿಗ ಗೊತ್ತಿಲ್ಲ. ಹೊರಗಿನವರಿಗಂತೂ ತೀರಾ ಹೊಸದು’ ಎಂದರು.

ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಜುಲೈ ತಿಂಗಳನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ರಾಗಿಣಿ ದ್ವಿವೇದಿ ಇದೇ ಮೇ 24ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಂದು ಚಿತ್ರತಂಡದಿಂದ ಏನೋ ವಿಶೇಷವಾದದ್ದು ಬಿಡುಗಡೆ ಆಗಲಿದೆ.

Tags:    

Similar News