ಈ ‘ಸಿಂಧೂರಿ’ಗೂ ರೋಹಿಣಿ ಸಿಂಧೂರಿಗೂ ಏನಾದರೂ ಸಂಬಂಧವಿದೆಯಾ?
ಈ ಚಿತ್ರದ ಕುರಿತು ಮಾತನಾಡುವ ಅವರು, ’ಶೀರ್ಷಿಕೆ ಕೇಳಿ ಹಲವರು ಇದು ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ ಎಂದು ಕೇಳುತ್ತಿದ್ದಾರೆ. ಇದೊಂದು ಕಾಲ್ಪನಿಕ ಕಥೆ. ರೋಹಿಣಿ ಸಿಂಧೂರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಮರ್ಡರ್ ಮಿಸ್ಟ್ರಿ.;
ಪೊಲೀಸ್ ಅಧಿಕಾರಿ ಡಿ.ಕೆ. ರವಿ ಕೆಲವು ವರ್ಷಗಳ ಹಿಂದೆ ನಿಧನರಾದ ಸಂದರ್ಭದಲ್ಲಿ ಅವರ ಕುರಿತು ಚಿತ್ರ ಮಾಡುವ ಸುದ್ದಿಗಳು ಕೇಳಿಬಂದರೂ, ಯಾವೊಂದು ಚಿತ್ರ ಸಹ ಬಿಡುಗಡೆಯಾಗಲಿಲ್ಲ. ಈಗ ಮತ್ತೆ ಡಿ.ಕೆ. ರವಿ ಮತ್ತು ರೋಹಿಣಿ ಸಿಂಧೂರಿ ಕುರಿತು ಚಿತ್ರ ನಿರ್ಮಾಣವಾಗುತ್ತಿದೆಯಾ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಅದಕ್ಕೆ ಕಾರಣ, ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಅಭಿನಯದ ‘ಸಿಂಧೂರಿ’ ಎಂಬ ಹೊಸ ಚಿತ್ರಕ್ಕೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ‘ಸಿಂಧೂರಿ’ ಎಂಬ ಹೆಸರು ಕೇಳಿದವರೆಲ್ಲಾ, ಇದು IAS ಅಧಿಕಾರಿ ರೋಹಿಣಿ ಸಿಂಧೂರಿ ಕಥೆ ಇರಬಹುದಾ? ಈ ಚಿತ್ರದಲ್ಲಿ ರಾಗಿಣಿ, ರೋಹಿಣಿ ಸಿಂಧೂರಿ ಪಾತ್ರ ಮಾಡುತ್ತಿದ್ದಾರಾ? ಧರ್ಮ ಕೀರ್ತಿರಾಜ್ ಅವರದ್ದು ಡಿ.ಕೆ. ರವಿ ಪಾತ್ರವಾ? ಎಂದು ಕೇಳುತ್ತಿದ್ದಾರಂತೆ.
ಆದರೆ, ಈ ಚಿತ್ರಕ್ಕೂ ರೋಹಿಣಿ ಸಿಂಧೂರಿ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆಯನ್ನು ಸಹ ಅವರೇ ರಚಿಸುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ’ಶೀರ್ಷಿಕೆ ಕೇಳಿ ಹಲವರು ಇದು ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ ಎಂದು ಕೇಳುತ್ತಿದ್ದಾರೆ. ಇದೊಂದು ಕಾಲ್ಪನಿಕ ಕಥೆ. ರೋಹಿಣಿ ಸಿಂಧೂರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಮರ್ಡರ್ ಮಿಸ್ಟ್ರಿ. ಇಲ್ಲಿ ರಾಗಿಣಿ ಮತ್ತು ಧರ್ಮ ಜೋಡಿಯಾಗಿ ನಟಿಸುತ್ತಿಲ್ಲ. ಇಲ್ಲಿ ರಾಗಿಣಿ ಚಿತ್ರದ ನಾಯಕಿ ಅಲ್ಲ. ನಾಯಕಿ ಬೇರೊಬ್ಬರು ಇದ್ದಾರೆ. ರಾಗಿಣಿ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿ ಅಭಿನಯಿಸುತ್ತಿದ್ದಾರೆ’ ಎಂದರು.
ಮಹಿಳಾ ಪ್ರಧಾನ ಚಿತ್ರ ಮಾಡೋದು ಸವಾಲಿನ ಕೆಲಸ ಎನ್ನುವ ರಾಗಿಣಿ, ‘ಜನರನ್ನು ಚಿತ್ರಮಂದಿರಗಳಿಗೆ ಕರೆಸೋದು ಕಷ್ಟದ ಕೆಲಸ. ಇವತ್ತಿನ ಟ್ರೆಂಡ್‍ಗೆ ಚಿತ್ರ ಮಾಡಬೇಕೆಂದರೆ ಮೊದಲು ನಾವು ಬದಲಾಗಬೇಕು. ಈ ಕಥೆ ಅಸಾಧಾರಣವಾಗಿದೆ ಎಂದು ನಾನು ಹೇಳುತ್ತಿಲ್ಲ, ಆದರೆ ಖಂಡಿತಾ ವಿಭಿನ್ನವಾಗಿದೆ’ ಎಂದರು.
ಧರ್ಮ ಕೀರ್ತಿರಾಜ್ ಮಾತನಾಡಿ, ‘ನನ್ನ ಪಾತ್ರದ ಬಗ್ಗೆ ಕೇಳಿ ಬಹಳ ಖುಷಿಯಾಯ್ತು. ಇಲ್ಲಿ ನಾನು ಮತ್ತು ರಾಗಿಣಿ ಜೋಡಿಯಲ್ಲ. ನಮ್ಮಿಬ್ಬರ ನಡುವೆ ಸಾಕಷ್ಟು ಹಗ್ಗಜಗ್ಗಾಟವಿದೆ. ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ’ ಎಂದರು.
‘ಸಿಂಧೂರಿ’ ಚಿತ್ರಕ್ಕೆ ಮೇ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಎಸ್. ರಮೇಶ್ ಬನಶಂಕರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ, ಹಿತೇನ್ ಹಾಸನ್ ಸಂಗೀತವಿದೆ.