‘ನನ್ನ ಭವಿಷ್ಯ ನಾನೇ ಬರೆದುಕೊಳ್ಳಲು ‘ಯುದ್ಧಕಾಂಡ’ ಸಿನಿಮಾ ಮಾಡಿದೆ’- ಅಜಯ್‌ರಾವ್‌

ನಟ ಅಜಯ್‍ ರಾವ್‌ ತಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಬೇಕೆಂದು ತಾವೇ ವೇದಿಕೆ ಸೃಷ್ಟಿಸಿಕೊಂಡಿದ್ದಾರೆ. ಅಜಯ್‍ ಅವರು ಇದೀಗ ‘ಯುದ್ಧಕಾಂಡ’ ಎಂಬ ಚಿತ್ರ ನಿರ್ಮಿಸಿ, ನಟಿಸಿದೆ. ಈ ಚಿತ್ರವು ಏ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.;

Update: 2025-04-09 06:40 GMT

ಅಜೇಯ್‍ ರಾವ್

‘ಕೃಷ್ಣ ಲೀಲ’ ಚಿತ್ರದ ನಂತರ ಅಜಯ್‌ ರಾವ್‌, ಒಂದು ಯಶಸ್ಸನ್ನೂ ನೋಡಿಲ್ಲ. ಈ ಮಧ್ಯೆ, ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರಾದರೂ, ಅದ್ಯಾವ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿಲ್ಲ. ಗೆದ್ದಿಲ್ಲ ಎನ್ನುವುದರ ಜೊತೆಗೆ ಅವರಿಗೆ ತಮ್ಮನ್ನು ಸರಿಯಾಗಿ ಬಳಸಿಕೊಂಡಿಲ್ಲ, ತಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ, ವೇದಿಕೆ ಎರಡೂ ಸಿಕ್ಕಿಲ್ಲ ಎಂದು ಎರಡು ವರ್ಷಗಳ ಹಿಂದೆ ಹೇಳಿಕೊಂಡಿದ್ದರು.

ಈಗ ಅಜಯ್‌ , ತಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಬೇಕೆಂದು ತಾವೇ ವೇದಿಕೆ ಸೃಷ್ಟಿಸಿಕೊಂಡಿದ್ದಾರೆ. ಅಜಯ್‌, ಇದೀಗ ‘ಯುದ್ಧಕಾಂಡ’ ಎಂಬ ಚಿತ್ರ ನಿರ್ಮಿಸುವುದರ ಜೊತೆಗೆ ನಟಿಸಿದ್ದು, ಈ ಚಿತ್ರವು ಏಪ್ರಿಲ್‍ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು KVN ಪ್ರೊಡಕ್ಷನ್ಸ್ ಸಂಸ್ಥೆ ವಿತರಿಸುತ್ತಿದೆ.

ಕಲಾವಿದನಾಗಿ ಬೆಳೆಯಬೇಕು ಎಂಬುದೇ ನನ್ನ ಉದ್ದೇಶ 

ಅಜಯ್‌ ಈ ಚಿತ್ರಕ್ಕೆ ಸಾಕಷ್ಟು ಸಾಲ ಮಾಡಿಕೊಂಡಿದ್ದಾರಂತೆ. ಈ ಕುರಿತು ಮಾತನಾಡಿರುವ ಅವರು, ‘ನಾನು ಸಿನಿಮಾ ಬಿಟ್ಟರೆ ಬೇರೆ ಏನನ್ನೂ ಪ್ರೀತಿಸಿಲ್ಲ. ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಒಂದು ಒಳ್ಳೆಯ ಪ್ರಯತ್ನಕ್ಕೆ ದುಡ್ಡು ಹಾಕಿದ್ದೇನೆ. ಕನ್ನಡ ಸಿನಿಮಾ ಬೆಳೆಯಲಿ ಎನ್ನುವುದರ ಜೊತೆಗೆ, ನಾನು ಸಹ ಕಲಾವಿದನಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಚಿತ್ರ ಮಾಡಿದ್ದೇನೆ. ದುಡ್ಡು ಬರುತ್ತದೆ, ಹೋಗುತ್ತದೆ. ಅದನ್ನು ಮತ್ತೆ ಸಂಪಾದನೆ ಮಾಡಬಹುದು. ಈ ಚಿತ್ರಕ್ಕಾಗಿ ತುಂಬಾ ಸಾಲ ಮಾಡಿದ್ದೀನಿ. ಇದೆಲ್ಲದರ ನಡುವೆಯೂ ಗೆದ್ದು ಬರುತ್ತೇನೆ ಎಂದು ಪಣ ತೊಟ್ಟಿದ್ದೇನೆ’ ಎನ್ನುತ್ತಾರೆ ಅಜಯ್‌.

ಸಿನಿಮಾ ಮಾಡುವ ಧೈರ್ಯ ಎಷ್ಟು ಜನರಿಗೆ ಬರುತ್ತದೆ?

ತಮ್ಮ ಈ ಪ್ರಯತ್ನದಲ್ಲಿ ದೇವರು ಕೈಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎನ್ನುವ ಅವರು, ‘ದುಡ್ಡು ಸಂಪಾದಿಸುವುದು ದೊಡ್ಡ ವಿಷಯವಲ್ಲ. ಸಿನಿಮಾ ಮಾಡುವ ಧೈರ್ಯ ಎಷ್ಟು ಜನರಿಗೆ ಬರುತ್ತದೆ ಹೇಳಿ? ಅಜಯ್‍ ರಾವ್‍ ಆಗಿ ಸಿನಿಮಾದಲ್ಲಿ ಗುರುತಿಸಿಕೊಳ್ಳುವ ಅವಕಾಶ ಎಷ್ಟು ಜನರಿಗೆ ಸಿಗುತ್ತದೆ ಹೇಳಿ?, ದೇವರು ಒಂದು ವೇದಿಕೆ ಕೊಟ್ಟಿರುವಾಗ, ನಾವು ಏನಾದರೂ ಹೋರಾಟ ಮಾಡಿ, ರಿಸ್ಕ್ ತೆಗೆದುಕೊಂಡು, ಇನ್ನಷ್ಟು ಎತ್ತರಕ್ಕೆ ಬೆಳೆಯುವುದರ ಬಗ್ಗೆ ಯೋಚಿಸಬೇಕು’ ಎಂಬುದು ಅಜಯ್‌ ಅಭಿಪ್ರಾಯ.

ಫ್ರಂಟ್‍ಲೈನ್‍ ಹೀರೋಗಳ ಪೈಕಿ ಬಂದು ನಿಲ್ಲಬೇಕು ಎಂಬ ಸ್ವಾರ್ಥ ಇದೆ

ಈ ಚಿತ್ರದ ಮೂಲಕ ಒಬ್ಬ ಕಲಾವಿದನಾಗಿ ಫ್ರಂಟ್‍ಲೈನ್‍ ಹೀರೋಗಳ ಪೈಕಿ ಬಂದು ನಿಲ್ಲಬೇಕು ಎಂಬ ಸ್ವಾರ್ಥ ಇದೆ ಎನ್ನುವ ಅಜಯ್‍, ‘ನನಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂಬ ಬೇಸರ, ಕೊರಗು ಇದೆ. ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ಯಾರೂ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ಯಾರೂ ಬಳಸಿಕೊಳ್ಳದಿದ್ದಾಗ, ನಾವೇ ಆ ಪ್ರಯತ್ನ ಮಾಡಬೇಕು ಎಂದು ನಂಬಿರುವವನು ನಾನು. ನನ್ನನ್ನು ನಾನೇ ಸೃಷ್ಟಿ ಮಾಡಿಕೊಳ್ಳಬೇಕು, ನನ್ನ ಭವಿಷ್ಯವನ್ನು ನಾನೇ ಬರೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿ, ಈ ಚಿತ್ರಕ್ಕೆ ಕೈ ಹಾಕಿದೆ. ನಾನು ಬೆಳೆಯಬೇಕು ಎಂಬ ಸ್ವಾರ್ಥದಿಂದ ಈ ಚಿತ್ರ ಮಾಡಿದೆ’ ಎನ್ನುತ್ತಾರೆ ಅವರು.

ಕೋಟಿ ಕೋಟಿ ಸಂಭಾವನೆ ಪಡೆದು ಮೆರೆಯಬೇಕು ಎಂಬ ಆಸೆ ಇಲ್ಲ

ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡಬೇಕು ಎನ್ನುವ ಅಜಯ್‌, ‘ಬರೀ ನಟನೆ ಮಾಡಿಕೊಂಡಿರುತ್ತೇನೆ, ಬಂದ ದುಡ್ಡಲ್ಲಿ ಮನೆ ನೋಡಿಕೊಂಡಿದ್ದರೆ ಸಾಕು ಎಂದರೆ ಆರಾಮಾಗಿ ಇರಬಹುದು. ನನಗೆ ನಿರ್ಮಾಣ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ನಾನಗೂ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡಬೇಕು ಎಂಬ ಆಸೆ. ಈಗಾಗಲೇ ಯಶ್‍, ರಕ್ಷಿತ್‍ ಶೆಟ್ಟಿ, ರಿಷಭ್‍ ಶೆಟ್ಟಿ ಮುಂತಾದವರು ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರೆಲ್ಲರೂ ನಾನು ಬಂದ ನಂತರ ಬಂದವರು. ಈ ಕಾರಣಕ್ಕೆ ನಾನು ಮುಂಚೂಣಿಗೆ ಬರಬೇಕು ಎಂಬ ಆಸೆ ಇದೆಯೇ ಹೊರತು, ಕೋಟಿ ಕೋಟಿ ಸಂಭಾವನೆ ಪಡೆದು ಮೆರೆಯಬೇಕು ಎಂಬ ಆಸೆ ಇಲ್ಲ’ ಎನ್ನುತ್ತಾರೆ ಅಜಯ್‍.

ಸೋತಿರುವ ಚಿತ್ರಗಳಲ್ಲೂ ನಾನು ಅದೇ ಪ್ರಯತ್ನ ಹಾಕಿದ್ದೇನೆ

ಒಬ್ಬ ನಟನಾಗಿ ಸಾಕಷ್ಟು ಪ್ರೂವ್‍ ಮಾಡಿದ್ದೇನೆ ಎನ್ನುವ ಅವರು, ‘ನನ್ನ ಚಿತ್ರಗಳ ಸೋಲು-ಗೆಲುವು ಏನೇ ಇರಬಹುದು. ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿರುವುದೇ ಆ ಚಿತ್ರಗಳು. ಸಿನಿಮಾ ನಿರ್ಮಾಣ ಮಾಡುವುದಕ್ಕೆ ಸಾಮರ್ಥ್ಯ ನೀಡಿದ್ದೇ ಆ ಚಿತ್ರಗಳು. ಮುಂಚೂಣಿಗೆ ಬಂದರೆ ನನಗೆ ಶಕ್ತಿ ಜಾಸ್ತಿ ಬರುತ್ತದೆ. ಒಬ್ಬ ನಟನಾಗಿ ನಾನು ಪ್ರೂವ್‍ ಮಾಡಿದ್ದೇನೆ. ಸೋತಿರುವ ಚಿತ್ರಗಳಲ್ಲೂ ನಾನು ಅದೇ ಪ್ರಯತ್ನ ಹಾಕಿದ್ದೇನೆ. ಮುಂಚೂಣಿಗೆ ಬರಬೇಕೆಂದರೆ, ಇಡೀ ಚಿತ್ರ ಗೆಲ್ಲಬೇಕು. ಇಡೀ ಸಿನಿಮಾ ವ್ಯಾಪಾರ ದೃಷ್ಟಿಯಲ್ಲಿ ಗೆದ್ದರೆ, ಮುಂದಿನ ಚಿತ್ರಕ್ಕೆ ಭರವಸೆ ಮೂಡಿಸುತ್ತದೆ. ಆ ಭರವಸೆಯನ್ನು ಕೆಡಿಸಿಕೊಳ್ಳದೆ ಮುಂದಿನ ಸಿನಿಮಾ ಮಾಸಡಬೇಕು’ ಎನ್ನುತ್ತಾರೆ.

Tags:    

Similar News