ಶಿವರಾಜ್ ಕುಮಾರ್ ಮುಂದಿನ ಚಿತ್ರದಲ್ಲಿ ತಮಿಳು ನಟ-ನಿರ್ದೇಶಕ ಎಸ್‌ಜೆ ಸೂರ್ಯ
ತಮಿಳು ಚಿತ್ರದ ನಿರ್ದೇಶಕ ಕಾರ್ತಿಕ್ ಅದ್ವೈತ್ ನಟ ಶಿವರಾಜ್‌ಕುಮಾರ್ ಅವರ ಚಿತ್ರ ನಿರ್ದೇಶನದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.;
ಪಾಯುಮ್ ಒಲಿ ನೀ ಎನಕ್ಕು (2023) ತಮಿಳು ಚಿತ್ರದ ನಿರ್ದೇಶಕ ಕಾರ್ತಿಕ್ ಅದ್ವೈತ್ ನಟ ಶಿವರಾಜ್‌ಕುಮಾರ್ ಅವರ ಚಿತ್ರ ನಿರ್ದೇಶನದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಬಹು ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರವು ಇದೀಗ ಪ್ರೀ ಪ್ರೊಡಕ್ಷನ್ಸ್ ಹಂತದಲ್ಲಿದೆ. ಶಿವಣ್ಣ, ಸದ್ಯ ನರ್ತನ್ ಅವರ ಭೈರತಿ ರಣಗಲ್ ಮತ್ತು ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಜುಲೈನಲ್ಲಿ ಈ ಯೋಜನೆಯ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಜುಲೈ 12ರಂದು ನಟನ ಹುಟ್ಟುಹಬ್ಬದಂದು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಯೋಜನೆ ರೂಪಿಸಿದೆ.
ಈ ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಎಸ್‌ಜೆ ಸೂರ್ಯ, ಹೆಸರಾಂತ ನಿರ್ದೇಶಕ-ನಟನಾಗಿದ್ದು, ಕಮಲ್ ಹಾಸನ್ ಜೊತೆಗೆ ಇಂಡಿಯನ್ 2ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರತಂಡ ಸದ್ಯ ನಟನೊಂದಿಗೆ ಮಾತುಕತೆ ನಡೆಸುತ್ತಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ, ಶಿವಣ್ಣ ಮತ್ತು ಸೂರ್ಯ ಬೆಳ್ಳಿತೆರೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಎಸ್‌ಜೆ ಸೂರ್ಯ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ಹಲವಾರು ನಿರ್ದೇಶಕರು ಈಗಾಗಲೇ ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ತಿಕ್ ಅದ್ವೈತ್ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಎಸ್‌ಸಿಎಫ್‌ಸಿ ಬ್ಯಾನರ್ ಅಡಿಯಲ್ಲಿ ಸುಧೀರ್ ಚಂದ್ರ ಪಾಡಿರಿ ಅವರು ಮೊದಲ ಬಾರಿಗೆ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕಾರ್ತಿಕ್ ಅದ್ವೈತ್ ಅವರು ಕೊಟಗಿರಿ ವೆಂಕಟೇಶ್ವರ ರಾವ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗುವ ಮುನ್ನ ಅರೆಕಾಲಿಕ ಸಂಪಾದಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಕ್ರಮ್ ಪ್ರಭು ಮತ್ತು ಧನಂಜಯ್ ನಟನೆಯ ಪಾಯುಮ್ ಒಲಿ ನೀ ಎನಕ್ಕು ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು.