ಎದ್ದೇಳು ಮಂಜುನಾಥ 2 | ಲಾಭಾಂಶದ ಅರ್ಧ ʼಮಠʼ ಗುರುಪ್ರಸಾದ್ ಅವರ ʼನಗುʼವಿಗೆ!
ಗುರುಪ್ರಸಾದ್, ‘ಈ ಜಗತ್ತಿಗೆ ನೀನೇನು ಬಿಟ್ಟು ಹೋದೆ ಎಂದು ಯಾರಾದರೂ ಕೇಳಿದರೆ, ನಾನು ನಗು ಬಿಟ್ಟು ಹೋಗಿದ್ದೇನೆ ಎನ್ನುತ್ತೇನೆ. ಅದಕ್ಕಾಗಿ ಮಗಳಿಗೆ ನಗು ಎಂಬ ಹೆಸರಿಟ್ಟಿದ್ದೇನೆ’ ಎಂದಿದ್ದರು.;
ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಇತ್ತು. ಏಕೆಂದರೆ, ಗುರುಪ್ರಸಾದ್ ನಿರ್ದೇಶನದ ಈ ಚಿತ್ರ ಬಹುತೇಕ ಸಂಪೂರ್ಣವಾದರೂ ಬಿಡುಗಡೆಯಾಗಿರಲಿಲ್ಲ. ಹೀಗಿರುವಾಗಲೇ, ಗುರುಪ್ರಸಾದ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆತ್ಮಹತ್ಯೆಗೆ ಶರಣಾದರು. ಅವರು ಶುರು ಮಾಡಿದ ಚಿತ್ರ, ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಯಾಗುತ್ತದಾ? ಇಲ್ಲವಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.
ಅನುಮಾನವೇ ಬೇಡ. ಗುರುಪ್ರಸಾದ್ ನಿರ್ದೇಶನದ ಕೊನೆಯ ಚಿತ್ರ ‘ಎದ್ದೇಳು ಮಂಜುನಾಥ 2’ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದ್ದು, ಚಿತ್ರವು ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ವಿಶೇಷವೆಂದರೆ, ‘ಎದ್ದೇಳು ಮಂಜುನಾಥ 2’ ಚಿತ್ರದಿಂದ ಬರುವ ಲಾಭದ ಶೇ. 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲು ಚಿತ್ರತಂಡದವರು ತೀರ್ಮಾನಿಸಿದ್ದಾರೆ.
ಗುರುಪ್ರಸಾದ್ ಅವರು ಕೆಲವು ವರ್ಷಗಳ ಹಿಂದೆ, ‘ಡೈರೆಕ್ಟರ್ಸ್ ಸ್ಪೆಷಲ್’ ಚಿತ್ರದಲ್ಲಿ ಡಾಲಿ ಧನಂಜಯ್ ತಂಗಿಯ ಪಾತ್ರದಲ್ಲಿ ನಟಿಸಿದ್ದ ಸುಮಿತ್ರಾ ಅವರನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದರು. ಈ ದಂಪತಿಗೆ ನಗು ಶರ್ಮಾ ಎಂಬ ಮೂರು ವರ್ಷದ ಮುದ್ದಾದ ಹೆಣ್ಣು ಮಗುವಿದೆ. ಕಳೆದ ವರ್ಷ ನಡೆದ ‘ರಂಗನಾಯಕ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ, ಮಾತನಾಡಿದ್ದ ಗುರುಪ್ರಸಾದ್, ‘ಈ ಜಗತ್ತಿಗೆ ನೀನೇನು ಬಿಟ್ಟು ಹೋದೆ ಎಂದು ಯಾರಾದರೂ ಕೇಳಿದರೆ, ನಾನು ನಗು ಬಿಟ್ಟು ಹೋಗಿದ್ದೇನೆ ಎನ್ನುತ್ತೇನೆ. ಅದಕ್ಕಾಗಿ ಮಗಳಿಗೆ ನಗು ಎಂಬ ಹೆಸರಿಟ್ಟಿದ್ದೇನೆ’ ಎಂದು ಹಾಸ್ಯಚಟಾಕಿ ಹಾರಿಸಿದ್ದರು.
‘ಎದ್ದೇಳು ಮಂಜುನಾಥ 2’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ವೇದಿಕೆ ತುಂಬಾ ಓಡಾಡಿಕೊಂಡು, ಮುಖ್ಯ ಅತಿಥಿಗಳಾಗಿ ಬಂದಿದ್ದವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿ, ಬೀಳ್ಕೊಟ್ಟಿದ್ದು ಅದೇ ಮೂರು ವರ್ಷದ ನಗು. ಈಗ ಈ ಮಗುವಿನ ಭವಿಷ್ಯದ ಬಗ್ಗೆ ಯೋಚಿಸಿ, ಆಕೆಗೆ ಹಣ ಮೀಸಲಿಡುವ ಚಿತ್ರತಂಡದ ಕೆಲಸ ಸ್ತುತ್ಯಾರ್ಹ ಎನ್ನುತ್ತಾರೆ ಸಿನಿಮಾ ಮಂದಿ.
ಕಿತ್ತೋದ್ ಪ್ರೇಮ
ಅದಕ್ಕೂ ಮೊದಲು, ಚಿತ್ರದ ‘ಕಿತ್ತೋದ್ ಪ್ರೇಮ …’ ಎಂಬ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ನವೀನ್ ಸಜ್ಜು ಧ್ವನಿಯಾಗಿದ್ದಾರೆ.
‘ಎದ್ದೇಳು ಮಂಜುನಾಥ 2’ ಚಿತ್ರವು ರಾಮ್ ಮೂವೀಸ್, ಗುರುಪ್ರಸಾದ್ ಇಂಕ್ ಮತ್ತು ಫ್ರೆಂಡ್ಸ್ ಫೋರಂ ಸಂಸ್ಥೆಗಳು ಜೊತೆಯಾಗಿ ನಿರ್ಮಿಸುತ್ತಿವೆ. ‘ಒಂದು ಸರಳ ಪ್ರೇಮಕಥೆ’ ಚಿತ್ರವನ್ನು ನಿರ್ಮಿಸಿದ್ದ ಮೈಸೂರು ರಮೇಶ್, ಈ ಚಿತ್ರದ ಪ್ರಧಾನ ನಿರ್ಮಾಪಕರು. ಮಿಕ್ಕಂತೆ ಸಾಕಷ್ಟು ಸಹನಿರ್ಮಾಪಕರಿದ್ದಾರೆ. ಕ್ರೌಡ್ ಫಂಡಿಂಗ್ ಮಾದರಿಯಲ್ಲಿ ಈ ಚಿತ್ರಕ್ಕೆ 60 ಜನ ಹಣ ಹೂಡಿಕೆ ಮಾಡಿದ್ದಾರೆ. ಈ ಚಿತ್ರಕ್ಕೆ ಗುರುಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಮೊದಲ ಬಾರಿಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಎದ್ದೇಳು ಮಂಜುನಾಥ 2’ ಚಿತ್ರವನ್ನು ‘ರಂಗನಾಯಕ’ ಚಿತ್ರಕ್ಕೂ ಮೊದಲೇ ಪ್ರಾರಂಭಿಸಿದ್ದರು ಗುರುಪ್ರಸಾದ್. ಅವರ ನಿಧನಕ್ಕೂ ಕೆಲವು ದಿನಗಳ ಮೊದಲು ಡಬ್ಬಿಂಗ್ ಸಹ ಮುಗಿಸಿಕೊಟ್ಟಿದ್ದರು. ‘ಎದ್ದೇಳು ಮಂಜುನಾಥ 2’ ಚಿತ್ರವು 2009ರಲ್ಲಿ ಬಿಡುಗಡೆಯಾದ ‘ಎದ್ದೇಳು ಮಂಜುನಾಥ’ ಚಿತ್ರದ ಮುಂದುವರೆದ ಭಾಗವಲ್ಲ. ಬದಲಿಗೆ ಇನ್ನೊಂದು ವರ್ಷನ್ ಎನ್ನಬಹುದು. ಈ ಚಿತ್ರದಲ್ಲಿ ಗುರುಪ್ರಸಾದ್ ಜೊತೆಗೆ ರಚಿತಾ ಮಹಾಲಕ್ಷ್ಮೀ ನಾಯಕಿಯಾಗಿ ನಟಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿದ ರಚಿತಾ ಮಹಾಲಕ್ಷ್ಮೀ, ‘ನಾನು ‘ರಂಗನಾಯಕ’ ಚಿತ್ರಕ್ಕೂ ಮೊದಲೇ ಈ ಚಿತ್ರದಲ್ಲಿ ನಟಿಸಿದ್ದೆ. 2020ನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಿದ್ದೆವು. ಆ ನಂತರ ‘ರಂಗನಾಯಕ ಪ್ರಾರಂಭವಾಯಿತು. ನಾನು ಮೂಲತಃ ಅವರ ಅಭಿಮಾನಿ. ಅವರ ಜೊತೆಗೆ ಎರಡು ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದರಲ್ಲೂ ಈ ಚಿತ್ರದಲ್ಲಿ ನಾನು ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದೇನೆ. ಇದೊಂದು ವಿಭಿನ್ನವಾದ ಕಥೆ. ಅವರು ನಿಧನರಾಗುವುದಕ್ಕೆ ಕೆಲವು ದಿನಗಳ ಮುನ್ನ ಅವರ ಜೊತೆಗೆ ಡಬ್ಬಿಂಗ್ ಮಾಡಿದ್ದೆ. ಒಬ್ಬರೇ ತಮ್ಮ ಭಾಗದ ಡಬ್ಬಿಂಗ್ ಮಾಡುವುದು ವಾಡಿಕೆ. ಆದರೆ, ನಾವಿಬ್ಬರೂ ಅಂದು ಜೊತೆಗೆ ಡಬ್ಬಿಂಗ್ ಮಾಡಿದ್ದೆವು. ಇದು ಅವರ ಕನಸಿನ ಚಿತ್ರ. ಈ ಚಿತ್ರವನ್ನು ದೊಡ್ಡ ಯಶಸ್ಸು ಮಾಡಿ ತೋರಿಸುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ಅವರು ನಿಧನರಾದ ಮೇಲೆ, ಚಿತ್ರ ಬಿಡುಗಡೆ ಆಗಬಹುದು ಎಂಬ ನಂಬಿಕೆ ಇರಲಿಲ್ಲ. ಆದರೆ, ಚಿತ್ರತಂಡದವರೆಲ್ಲಾ ಸೇರಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ’ ಎಂದು ಖುಷಿಪಟ್ಟರು.
ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ ಸಹ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಾನು ಅವರನ್ನು ಅಭಿಮಾನಿಯಾಗಿ ನೋಡಿದ್ದೆ. ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆ. ಅವರು ಕೆಲಸ ಮಡುವ ಶೈಲಿಯೇ ವಿಭಿನ್ನ. ಸಂಜೆ ಐದು ಗಂಟೆಯವರೆಗೂ ಅವರು ಸೆಟ್‍ಗೆ ಬರುತ್ತಿರಲಿಲ್ಲ. ಬಂದು ಬಹಳ ಬೇಗನೇ ಎರಡು ತಾಸಿನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಇಡೀ ದಿನದ ಕೆಲಸ ಎರಡು ಗಂಟೆಯಲ್ಲಿ ಮಾಡಿ ಮುಗಿಸುತ್ತಿದ್ದರು. ಅವರಿಗೆ ಯಾವುದೇ ಫಿಲ್ಟರ್ ಇರಲಿಲ್ಲ. ಎಲ್ಲವನ್ನೂ ನೇರವಾಗಿ ಹೇಳುತ್ತಿದ್ದರು. ಕೆಲವೊಮ್ಮೆ ತಮ್ಮ ನೇರ ಮಾತುಗಳಿಂದ ನಗೆಪಾಟಿಲಿಗೆ ಈಡಾಗಿದ್ದೂ ಇದೆ’ ಎಂದರು.