ಡಾ.ವಿಷ್ಣುವರ್ಧನ್ 75ನೇ ಜನ್ಮ ದಿನೋತ್ಸವ ; ಅಭಿಮಾನ್ ಸ್ಟುಡಿಯೋದಲ್ಲಿ ಇಲ್ಲ ಸಂಭ್ರಮ
ದಿವಂಗತ ನಟ ವಿಷ್ಣುವರ್ಧನ್ ಅವರು ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಅವರ ಜನ್ಮ ದಿನವನ್ನು ಅಭಿಮಾನಿಗಳು ರಕ್ತದಾನ, ಅನ್ನದಾನದ ಮೂಲಕ ವಿಶೇಷವಾಗಿ ಆಚರಿಸುತ್ತಿದ್ದಾರೆ.;
ಡಾ. ವಿಷ್ಣುವರ್ಧನ್ ಅವರ ಜನ್ಮದಿನೋತ್ಸವ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನೋತ್ಸವದ ಅಂಗವಾಗಿ ರಾಜ್ಯದ ಹಲವೆಡೆ ಅಭಿಮಾನಿಗಳು ರಕ್ತದಾನ, ಅನ್ನದಾನ ಹಾಗೂ ಇನ್ನಿತರೆ ಸಾಮಾಜಿಕ ಕೈಂಕರ್ಯಗಳ ಮೂಲಕ ಆಚರಿಸುತ್ತಿದ್ದಾರೆ. ಆದರೆ, ವಿಷ್ಣುವರ್ಧನ್ ಸ್ಮಾರಕವಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ಮಾತ್ರ ಸಂಭ್ರಮ ಕಾಣುತ್ತಿಲ್ಲ.
ಪ್ರತಿ ವರ್ಷ ವಿಷ್ಣುವರ್ಧನ್ ಜನ್ಮದಿನದಂದು ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋಗೆ ಬಂದು ವಿಷ್ಣು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಈ ವರ್ಷ ಬಾಲಣ್ಣ ಅವರ ಕುಟುಂಬದವರು ವಿಷ್ಣು ಸಮಾಧಿ ಧ್ವಂಸಗೊಳಿಸಿದ್ದಲ್ಲದೇ ಅಭಿಮಾನ್ ಸ್ಟುಡಿಯೋನಲ್ಲಿ ಯಾವುದೇ ಹುಟ್ಟುಹಬ್ಬ ಆಚರಿಸದಂತೆ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಸಂಭ್ರಮ ಮರೆಯಾಗಿದೆ.
ಇದರಿಂದ ನಿರಾಸೆಗೊಂಡಿರುವ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.
ಡಾ.ವಿಷ್ಣುವರ್ಧನ್ ಅವರು 1950 ಸೆ.18ರಂದು ಮೈಸೂರಿನಲ್ಲಿ ಜನಿಸಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ವಿಜೃಂಭಿಸಿ ಕನ್ನಡದ ಮೇರು ನಟ ಎನಿಸಿಕೊಂಡಿದ್ದರು.
ವಿಷ್ಣುವರ್ಧನ್ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು (1972) ಸಿನಿಮಾದಲ್ಲಿ ಅವರ ಅದ್ಭುತ ನಟನೆ ಮೂಲಕ ಕನ್ನಡದ ಸ್ಟಾರ್ ನಟರಾಗಿ ಅಭಿಮಾನಿಗಳ ಮನಗೆದ್ದಿದ್ದರು. ಕೌಟುಂಬಿಕ ನಾಟಕಗಳು ಮತ್ತು ಪೌರಾಣಿಕ ಪಾತ್ರಗಳಿಂದ ಹಿಡಿದು ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಚಿತ್ರಗಳವರೆಗೆ ವಿಷ್ಣುವರ್ಧನ್ ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರವೂ ಅಭಿಮಾನಿಗಳನ್ನು ಮೋಡಿ ಮಾಡಿತ್ತು.
ಸಿನಿಮಾ ಮಾತ್ರವಲ್ಲದೆ ಅವರ ನಮ್ರತೆ, ಶಿಸ್ತು, ಕಲೆ, ಲೋಕೋಪಕಾರಿ ಚಟುವಟಿಕೆಗಳು ಹಾಗೂ ಆಧ್ಯಾತ್ಮಿಕತೆಗೆ ಹೆಸರಾಗಿದ್ದರು. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಸಾಹಸ ಸಿಂಹ ಎಂದು ಕರೆಯುತ್ತಿದ್ದರು.